ಪೌಷ್ಟಿಕತೆ ತುಂಬಿದ ಮಲ್ಟಿಗ್ರೇನ್ ಆಟಾದಲ್ಲಿ ತುಂಬಿದೆ, ಸ್ವಾದ ಭರಿತ ಸ್ವಾಸ್ಥ್ಯದ ಖಜಾನೆ! ರುಚಿಕರವಾದ ಆಹಾರ ಸೇವನೆ ಯಾರಿಗಿಷ್ಟವಿಲ್ಲ ಹೇಳಿ? ಅದರಲ್ಲೂ ಸುವಾಸನೆಭರಿತ, ಗರಿಮುರಿ ವ್ಯಂಜನಗಳು ಎದುರಿಗಿದ್ದರೆ, ಎಷ್ಟು ತಿಂದರೂ ಸಾಲದೆನಿಸುತ್ತದೆ. ಆದರೆ ಯಾವುದನ್ನೇ ಆಗಲಿ, ಬುದ್ಧಿವಂತಿಕೆಯಿಂದ ವಿವೇಚಿಸಿ ಸೇವಿಸಿದರೆ ಮಾತ್ರ ಒಳ್ಳೆಯದು. ಇದಕ್ಕಾಗಿ ಒಂದು ನಿಶ್ಚಿತ ರೂಪದ ಮಾನದಂಡವೇನೂ ಇಲ್ಲ. ನೀವು ನಿಮ್ಮ ಆಹಾರ ಕ್ರಮದ ಬಗ್ಗೆ ಆದಷ್ಟೂ ಎಚ್ಚರವಹಿಸಿ, ಯಾವುದನ್ನು ಯಾವಾಗ ಎಷ್ಟು ಸೇವಿಸಬೇಕೆಂದು ನಿಗಾ ವಹಿಸಬೇಕಷ್ಟೆ.
ಈ ಕುರಿತಾಗಿ ಮುಂಬೈನ ಶ್ವೇತಾ ಮಸೀನ್ (ಡಯೆಟಿಷಿಯನ್‌ನ್ಯೂಟ್ರಿಷನ್ ಕನ್ಸಲ್ಟೆಂಟ್) ಹೇಳುತ್ತಾರೆ, “ದಿನನಿತ್ಯದ ಕೆಲಸ ಕಾರ್ಯಗಳ ಜಂಜಾಟದಿಂದ ಮನುಷ್ಯರ ಮೆದುಳು ಸಾಕಷ್ಟು ಎನರ್ಜಿ ಕಳೆದುಕೊಳ್ಳುತ್ತದೆ. ಎನರ್ಜಿ ಮತ್ತೆ ಗಳಿಸಲು ಇರುವ ಏಕಮಾತ್ರ ಸಾಧನ ಗ್ಲೂಕೋಸ್. ನಾವು ಸೇವಿಸುವ ಆಹಾರದಿಂದಲೇ ಇದು ದೇಹಕ್ಕೆ ದಕ್ಕುತ್ತದೆ ಅಥವಾ ನಮ್ಮ ದೇಹದಲ್ಲಿ ಸಂಗ್ರಹಗೊಂಡಿರುವ ಗ್ಲೈಕೋಜನ್ ಹಾಗೂ ನಮ್ಮ ಮಸಲ್ಸ್ ನಲ್ಲಿ ತುಂಬಿರುವ ಪ್ರೋಟೀನ್‌ನಿಂದ ಸಿಗುತ್ತದೆ.”
ತೃಪ್ತಿಕರ ಸೇವನೆ
ಯಾವಾಗ ಆಹಾರ ಸೇವಿಸಿದರೂ, ಗಮನವಿರಿಸಿ ಅಗತ್ಯವಿರುವಷ್ಟು ಮಾತ್ರ ಆಹಾರ ಸೇವಿಸಬೇಕೆಂಬುದನ್ನು ನೆನಪಿಡಿ, ಆಗ ಮಾತ್ರ ನೀವು ನಿಮ್ಮ ಹಸಿವು ಮತ್ತು ತೃಪ್ತಿಯನ್ನು ಅರ್ಥೈಸಿಕೊಳ್ಳಬಹುದು. ಟಿ.ವಿ. ನೋಡುತ್ತಾ ತುಂಬಿದ ಭಾರಿ ಪ್ಲೇಟನ್ನು ಯಾವಾಗ ಖಾಲಿ ಮಾಡಿದಿರೋ ಗೊತ್ತೇ ಆಗುವುದಿಲ್ಲ (ಹೆಚ್ಚು ತಿನ್ನುತ್ತಾ ಇದ್ದುಬಿಡುವುದು) ಅಥವಾ ತಿನ್ನುವ ಸಮಯದಲ್ಲಿ ನೀವು ಆಹಾರದ ರುಚಿ ಅಥವಾ ನಿಮ್ಮ ಮನಃತೃಪ್ತಿಯ ಕಡೆ ಗಮನವನ್ನೇ ಹರಿಸಿರುವುದಿಲ್ಲ. ಆದ್ದರಿಂದ ಮನಸ್ಸಿಟ್ಟು, ಏಕಾಗ್ರತೆಯಿಂದ ನಿಮ್ಮ ಆಹಾರವನ್ನು ಆನಂದವಾಗಿ ಸೇವಿಸಿ. ಇದನ್ನೇ `ಮೈಂಡ್ ಪಲಿ ಈಟಿಂಗ್’ ಎನ್ನುತ್ತಾರೆ ಆಹಾರತಜ್ಞರು.
ಇದರಡಿ ಗಮನಿಸಬೇಕಾದ ಕೆಲವು ಮುಖ್ಯ ಅಂಶಗಳು :
ನಿಮ್ಮ ಹಸಿವು ಹಾಗೂ ಹೊಟ್ಟೆ ತುಂಬಿದ ಕ್ರಿಯೆಯನ್ನು ಅರಿಯುವುದು.
ಆಹಾರ ಸೇವಿಸುವಾಗ ಅದರ ಆಕಾರ, ಸುವಾಸನೆ, ರುಚಿ ಕಡೆ ಗಮನ ನೀಡಿ.
ಇನ್ನೂ ಸೇವಿಸುತ್ತಲೇ ಇರಬೇಕೆಂಬ ಭಾವನೆ ಪ್ರೇರಣೆಯಾಗುವುದರ ಕಡೆ ಖಂಡಿತಾ ನಿಗಾ ಇಡಬೇಕು.
ಸೇವಿಸುತ್ತಿರುವ ಆಹಾರ ಪದಾರ್ಥಗಳ ಕುರಿತು ಮಾಹಿತಿ ಇರಲೇಬೇಕು. ಅದರಿಂದ ದೇಹಕ್ಕೆ ಎಷ್ಟು ಎನರ್ಜಿ ಹಾಗೂ ನ್ಯೂಟ್ರಿಷನ್ ಸಿಗುತ್ತದೆ, ನೋಡಿಕೊಳ್ಳಬೇಕು.
ನಿಧಾನವಾಗಿ ಅಗಿಯುತ್ತಾ ಆಹಾರ ಸೇವಿಸಬೇಕು. ಏಕೆಂದರೆ ಅದರ ರುಚಿ, ಆನಂದ ಹಾಗೂ ಹೊಟ್ಟೆ ತುಂಬಿದುದರ ಫೀಲಿಂಗ್‌ಗಾಗಿ ದೇಹಕ್ಕೆ 20 ನಿಮಿಷ ತಗುಲುತ್ತದೆ.
ಬಹಳ ಹೊತ್ತು ಹಸಿವಿನಿಂದ ಚಡಪಡಿಸುವ ಸ್ಥಿತಿ ಬರುವವರೆಗೂ ಕಾಯಬೇಡಿ. ಇದರಿಂದ ಆಟೊಮೆಟಿಕಲಿ ಹೆಚ್ಚು ಸೇವಿಸುವ ಹಾಗಾಗುತ್ತದೆ. ಸಾಮಾನ್ಯವಾಗಿ ಮಹಿಳೆಯರು ದಿನವಿಡೀ ಉಪವಾಸವಿದ್ದಾಗ ಹೀಗೆ ಮಾಡುತ್ತಾರೆ.
ಸಾವಧಾನವಾಗಿ ಕುಳಿತು ಆಹಾರ ಸೇವಿಸಿ. ಓಡಾಡುತ್ತಾ ಏನೋ ಒಂದಷ್ಟು ಬಾಯಿಗೆ ತುರುಕಿಕೊಳ್ಳುವುದರಿಂದ, ಆಹಾರ ಪ್ರಮಾಣದ ಅರಿವು ಆಗದು, ಅದರ ರುಚಿಪಚಿಯೂ ತಿಳಿಯುವುದಿಲ್ಲ. ಉದಾ: ಮದುವೆ, ಶುಭ ಸಮಾರಂಭದ ಪಾರ್ಟಿಗಳಲ್ಲಿ ಹರಟೆ ಹೊಡೆಯುತ್ತಾ, ಬೇಕಾದಷ್ಟು `ಗುಳುಂ’ ಮಾಡಿಬಿಡುತ್ತೇವೆ. ಆಗ ನಮಗೆ ಅದರ ವಿಶೇಷ ರುಚಿ ಏನೂ ಗೊತ್ತಾಗುವುದಿಲ್ಲ, ಅಂದರೆ ರುಚಿಯನ್ನೂ ನೋಡದೆ ಕ್ಯಾಲೋರಿಗಟ್ಟಲೆ ತಿಂದುಬಿಡುವುದು ಎಂದರ್ಥ.
ಮಲ್ಟಿಗ್ರೇನ್ ಆಟಾ
ನಿಮ್ಮ ಆಹಾರದಲ್ಲಿ ಸದಾ ಹಸಿರು ತರಕಾರಿ, ಹಾಲು, ಹಣ್ಣು ಇತ್ಯಾದಿಗಳನ್ನು ನಿಯಮಿತವಾಗಿ ಬೆರೆಸಿಕೊಳ್ಳಿ. ಯಾವ ಆಹಾರ ದೇಹಕ್ಕೆ ಅತ್ಯಗತ್ಯ ಪೋಷಣೆ ನೀಡುತ್ತದೋ ಅದನ್ನು ಮಾತ್ರ ಸೇವಿಸಬೇಕು. ಉದಾ : ನೀವು ಮಾಮೂಲಿ ಗೋದಿಹಿಟ್ಟಿನ ಬದಲು ಮಲ್ಟಿಗ್ರೇನ್ ಆಟಾ (ಬಹುಧಾನ್ಯಗಳ ಹಿಟ್ಟಿನ ಮಿಶ್ರಣ) ದಿಂದ ತಯಾರಿಸಲಾದ ಚಪಾತಿ ಇತ್ಯಾದಿ ಸೇವಿಸಿದರೆ, ಅದು ದೇಹಕ್ಕೆ ಹೆಚ್ಚಿನ ಶಕ್ತಿ ಒದಗಿಸುತ್ತದೆ. ಮಲ್ಟಿಗ್ರೇನ್ ಆಟಾದಲ್ಲಿ ಹಲವು ಬಗೆಯ ಪೋಷಕಾಂಶಗಳು ಸಹಜವಾಗಿ ಬೆರೆತಿರುತ್ತವೆ, ಇದು ದೇಹದ ಪುಷ್ಟಿಗೆ ಹೆಚ್ಚು ಅಗತ್ಯ ಕೂಡ.
ಮಲ್ಟಿಗ್ರೇನ್ ಆಟಾ ಎಂಬುದು ದೇಹಕ್ಕೆ ಅತ್ಯಗತ್ಯ ಟಾನಿಕ್ ತರಹ. ಇದು ದಿನನಿತ್ಯದ ಕೆಲಸಕಾರ್ಯಗಳಿಗೆ ಬೇಕಾದ ಪ್ರೋಟೀನ್ ಮತ್ತು ಎನರ್ಜಿಯನ್ನು ಧಾರಾಳವಾಗಿ ತುಂಬುತ್ತದೆ. ಪ್ರೋಟೀನ್ ನಮ್ಮ ದೇಹದಲ್ಲಿ ಆ್ಯಂಟಿ ಬಾಡೀಸ್ ಹೆಚ್ಚಿಸುತ್ತದೆ, ಇದರಿಂದ ರೋಗನಿರೋಧಕ ಶಕ್ತಿ ಹೆಚ್ಚುತ್ತದೆ. ಹೀಗಾಗಿ ನೀವು ಬೇಗ ಬೇಗ ಕಾಯಿಲೆಗೆ ತುತ್ತಾಗುವುದಿಲ್ಲ. ಇಷ್ಟು ಮಾತ್ರವಲ್ಲದೆ ಮಲ್ಟಿಗ್ರೇನ್ ಆಟಾದಲ್ಲಿ ಫೈಬರ್ ಮತ್ತು ಮೆಗ್ನೀಶಿಯಂ ತುಂಬಿರುತ್ತದೆ, ಇದು ನಿಮ್ಮ ಜೀರ್ಣಶಕ್ತಿ ಹಾಗೂ ಮೂಳೆಗಳ ಆರೋಗ್ಯ ಕಾಪಾಡುತ್ತದೆ. ಹಾಗಿರುವಾಗ ಆಹಾರ ಯಾವ ಬಗೆಯದೇ ಆಗಿರಲಿ, ಅದು ಸಾಧ್ಯವಾದಷ್ಟೂ ಮಲ್ಟಿಗ್ರೇನ್ ಆಟಾದಿಂದಲೇ ತಯಾರಾಗಿರಬೇಕು.
ಕೆಲವು ವಿಶಿಷ್ಟ ಸಲಹೆಗಳು
ನಿಂತು, ಓಡಾಡುತ್ತಾ ಎಂದೂ ಆಹಾರ ಸೇವಿಸಬೇಡಿ.
ಒಂದು ದಿನಕ್ಕೆ 3 ಸಲ ಹೆಚ್ಚು ಆಹಾರ ಸೇವಿಸುವ ಬದಲು, ದಿನವಿಡೀ ನಿಗದಿತ ಸಮಯದ ಅಂತರವಿಟ್ಟು ಹಲವಾರು ಸಲ ಸ್ವಲ್ಪ ಸ್ವಲ್ಪವೇ ಆಹಾರ ಸೇವಿಸುವುದರಿಂದ, ನಿಮ್ಮ ಜೀರ್ಣಶಕ್ತಿ ಸಲೀಸಾಗುತ್ತದೆ.
ಹಗಲು ಹೊತ್ತಿನಲ್ಲಿ ತುಸು ಹೆಚ್ಚು ಹಾಗೂ ರಾತ್ರಿ ಹೊತ್ತು ಆದಷ್ಟೂ ಕಡಿಮೆ ಸೇವಿಸಿ. ಏಕೆಂದರೆ ಹಗಲಿನಲ್ಲಿ ಜೀರ್ಣಶಕ್ತಿ ಹೆಚ್ಚಾಗಿರುತ್ತದೆ ಹಾಗೂ ನಿದ್ದೆ ಕಾರಣ ರಾತ್ರಿಯಲ್ಲಿ ಅದು ಪೂರ್ತಿ ಕಡಿಮೆಯಾಗುತ್ತದೆ.
ಫ್ಯಾಟ್ಫ್ರೀ ಆಹಾರ ಆರೋಗ್ಯಕ್ಕೆ ಪುಷ್ಟಿದಾಯಕ ಎಂಬುದರಲ್ಲಿ ಅರ್ಥವಿಲ್ಲ. ಓವರ್ ಡಯೆಟಿಂಗ್ನಿಂದ ಕೊಬ್ಬು ಇನ್ನಷ್ಟು ಕೂಡುತ್ತದೆಯೇ ಹೊರತು ಕರಗುವುದಿಲ್ಲ.
ಹಸಿ ಇಲ್ಲದಿರುವಾಗ, ಇತರರ ಒತ್ತಾಯಕ್ಕೆ ಮಣಿದು ಸಿಕ್ಕಿದ್ದನ್ನು ತಿನ್ನಲು ಹೋಗಬೇಡಿ.
ಆಹಾರದ ಒಂದೊಂದು ತುತ್ತನ್ನೂ, ತುಂಬು ಮನಸ್ಸಿನಿಂದ, ಇಷ್ಟಪಟ್ಟು ಸೇವಿಸಿ. ಇದರಿಂದ ಸಂತಸ ಹಾಗೂ ಸಂತೃಪ್ತಿ ಎರಡೂ ಸಿಗುತ್ತದೆ. ಉದಾ : ಮೊಸರನ್ನು ಸೇವಿಸುವಾಗ, ಅದರ 1 ಚಮಚದಷ್ಟು ರುಚಿ ನೋಡಿ. ಅದು ಹುಳಿ, ಸಿಹಿ, ಸಪ್ಪೆ ಎಂಬುದನ್ನು ಕಂಡುಕೊಳ್ಳಿ, ನಂತರ ನಿಮ್ಮ ಆಯ್ಕೆಯಂತೆ ಮುಂದುವರಿಯಿರಿ.
ಊಟ ತಿಂಡಿ ಸೇವಿಸುವಾಗ ಮನಶ್ಶಾಂತಿ ಇರಲಿ, ಯಾವುದೇ ಟೆನ್ಶನ್ ಇರಬಾರದು. ಅಂದರೆ ಮನಸ್ಸಿಗೆ ಅಹಿತಕರ ಎನಿಸುವಂಥ ಟಿ.ವಿ. ಕಾರ್ಯಕ್ರಮ ನೋಡುತ್ತಾ ತಿನ್ನಲೇಬೇಡಿ. ಬಹಳ ಬಿಝಿ ಇರುವಾಗ, ವಾದವಿವಾದಗಳ ಮಧ್ಯೆ, ಡ್ರೈವಿಂಗ್ ಮಾಡುತ್ತಾ, ಟಿ.ವಿ.ಯಲ್ಲಿ ಕ್ರೈಂ ಕಿಲ್ಲರ್ ಚಿತ್ರ ನೋಡುತ್ತಾ, ಹೃದಯವಿದ್ರಾವಕ ವಿಷಯ ಕೇಳುತ್ತಾ ಆಹಾರ ಸೇವಿಸಲೇಬಾರದು. ಇದರಿಂದ ಅಜೀರ್ಣ, ಪಿತ್ತದ ಸಮಸ್ಯೆಗಳು ಹೆಚ್ಚುತ್ತವೆ. ಮಧುರ ಸಂಗೀತ ಕೇಳುತ್ತಾ, ಹಿತಕರವಾಗಿ ಮಾತನಾಡುತ್ತಾ, ಮನೆಯವರೆಲ್ಲರೂ ಒಟ್ಟಾಗಿ ಸಂತೋಷವಾಗಿ ಆಹಾರ ಸೇವಿಸಿ.
– ಎಂ. ಪ್ರೇಮಾ ಶರ್ಮ