ಮಕ್ಕಳಲ್ಲಿ ವಿಭಿನ್ನ ಪ್ರಕಾರದ ಅಲರ್ಜಿ ಉಂಟಾಗುವ ಸಾಧ್ಯತೆ ಇರುತ್ತದೆ. ಈ ಅಲರ್ಜಿ ಉಂಟಾಗಲು ಅನೇಕ ಬಗೆಯ ಕಾರಣಗಳಿರುತ್ತವೆ. ಉದಾಹರಣೆಗೆ ಧೂಳಿನ ಕಣಗಳು, ಸಾಕುಪ್ರಾಣಿಗಳ ಕೂದಲಿನ ಹೊಟ್ಟು ಮತ್ತು ಕೆಲವು ಬಗೆಯ ಆಹಾರ ಪದಾರ್ಥಗಳು ಕಾರಣವಾಗುತ್ತವೆ. ಕೆಲವು ಪ್ರಕಾರದ ಸೌಂದರ್ಯ ಪ್ರಸಾಧನಗಳು ಹಾಗೂ ಮನೆಯಲ್ಲಿ ಬಟ್ಟೆ ಒಗೆಯಲು ಬಳಸುವ ಬಟ್ಟೆ ಸೋಪ್‌, ಕ್ಲೀನರ್‌ ಸೋಪ್‌ ಗಳಿಂದಲೂ ಅಲರ್ಜಿ ಉಂಟಾಗಬಹುದು. ಅಲರ್ಜಿ ಸಾಮಾನ್ಯವಾಗಿ ಆನುವಂಶಿಕ ಕಾರಣಗಳಿಂದಲೂ ಆಗಬಹುದು. ಚಿಕಿತ್ಸೆಗೂ ಮುನ್ನವೇ ಅದರ ಲಕ್ಷಣಗಳನ್ನು ಕಂಡುಕೊಳ್ಳಬೇಕು. ಆಗಲೇ ಅದನ್ನು ತಡೆಯಲು ಸಾಧ್ಯವಾಗುತ್ತದೆ.

ಅಲರ್ಜಿಯ ಲಕ್ಷಣಗಳು

ನಿರಂತರ ಸೀನು ಬರುವಿಕೆ, ಮೂಗು ಸೋರುವಿಕೆ, ಮೂಗಿನಲ್ಲಿ ತುರಿಕೆ, ಕಫದೊಂದಿಗೆ ಕೆಮ್ಮು ಇರುವಿಕೆ, ಉಸಿರು ತೆಗೆದುಕೊಳ್ಳಲು ಕಷ್ಟವಾಗುವುದು, ಕಣ್ಣುಗಳಲ್ಲಿ ಉಂಟಾಗುವ ಕಂಜೆಕ್ಟಿವೈಟಿಸ್‌… ಇವು ಅಲರ್ಜಿಯ ಲಕ್ಷಣಗಳು. ಒಂದು ವೇಳೆ ಉಸಿರು ತೆಗೆದುಕೊಳ್ಳಲು ಬಹಳ ಕಷ್ಟವಾಗುತ್ತಿದ್ದರೆ ಅದು ಶ್ವಾಸರೋಗಕ್ಕೆ ತುತ್ತಾಗಬಹುದು.

ಅಲರ್ಜಿಗೆ ಚಿಕಿತ್ಸೆ

ಒಂದು ವೇಳೆ ಮಗುವಿಗೆ ಒಂದು ವಾರಕ್ಕಿಂತ ಹೆಚ್ಚಿನ ಸಮಯ ಈ ಲಕ್ಷಣಗಳು ಕಂಡು ಬಂದರೆ ಅಥವಾ ವರ್ಷದ ಒಂದು ನಿಶ್ಚಿತ ಅವಧಿಯಲ್ಲಿ ಈ ಲಕ್ಷಣಗಳು ಕಂಡುಬಂದರೆ ವೈದ್ಯರ ಸಲಹೆ ಪಡೆಯಿರಿ. ಲಕ್ಷಣಗಳನ್ನು ಆಧರಿಸಿ ವೈದ್ಯರು ಮಗುವಿಗೆ ಔಷಧಿ ಕೊಡುವರು. ಅವಶ್ಯಕತೆ ಉಂಟಾದರೆ ಅಲರ್ಜಿ ತಜ್ಞರ ಸಲಹೆ ಪಡೆಯಲು ಶಿಫಾರಸು ಮಾಡಬಹುದು.

ಅಲರ್ಜಿಯ ತೊಂದರೆಗೆ ವಾಸ್ತವದಲ್ಲಿ ಯಾವುದೇ ಚಿಕಿತ್ಸೆ ಇಲ್ಲ. ಆದರೆ ಅದರ ಲಕ್ಷಣಗಳನ್ನು ಕಡಿಮೆಗೊಳಿಸಿ ನಿರಾಳತೆ ಪಡೆದುಕೊಳ್ಳಬಹುದು. ತಂದೆತಾಯಿಯರು ತಮ್ಮ ಮಗುವಿಗೆ ಅಲರ್ಜಿಯೊಂದಿಗೆ ಹೋರಾಡಲು ತರಬೇತಿ ಕೊಡಬೇಕು. ಅವರ ಶಿಕ್ಷಕರಿಗೆ, ಕುಟುಂಬದ ಸದಸ್ಯರಿಗೆ, ಅಣ್ಣತಂಗಿ ತಮ್ಮ, ಸ್ನೇಹಿತರಿಗೆ ಆ ಲಕ್ಷಣಗಳ ಬಗ್ಗೆ ಮನವರಿಕೆ ಮಾಡಿಕೊಟ್ಟು. ಅದರ ನಿರ್ವಹಣೆಯ ಅನಿವಾರ್ಯತೆಯ ಮಾಹಿತಿ ಕೊಡಬೇಕಾಗುತ್ತದೆ.

ಅಲರ್ಜಿಯಿಂದ ರಕ್ಷಣೆ ಹೇಗೆ?

ನಿಮ್ಮ ಮಗುವಿನ ಕೋಣೆಗೆ ಸಾಕುಪ್ರಾಣಿಗಳು ಹೋಗದಂತೆ ಎಚ್ಚರವಹಿಸಿ. ಜೊತೆಗೆ ಯಾವ ಔಷಧಿಗಳಿಂದ ಅಲರ್ಜಿ ಉಂಟಾಗುವ ಸಾಧ್ಯತೆ ಇರುತ್ತದೋ, ಅಂತಹ ಔಷಧಿಗಳಿಂದ ಮಗುನ್ನು ದೂರ ಇರಿಸಿ. ಹೆಚ್ಚು ಪರದೆಗಳನ್ನು ನೇತು ಹಾಕಬೇಡಿ. ಅವುಗಳಲ್ಲಿ ಧೂಳು ಜಮೆಗೊಳ್ಳುವ ಸಾಧ್ಯತೆ ಇರುತ್ತದೆ. ಪರಾಗ ಕಣಗಳು ಹಾರಿ ಬರುವ ಋತುವಿನಲ್ಲಿ ಕಿಟಕಿಗಳನ್ನು ಮುಚ್ಚಿಡಿ. ಬಾಥ್‌ ರೂಮ್ ನ್ನು ಸ್ವಚ್ಛವಾಗಿಡಿ. ಅಲರ್ಜಿಯ ಸಾಧ್ಯತೆ ಹೆಚ್ಚಿಸುವ ಆಹಾರ ಪದಾರ್ಥಗಳಿಂದ ಮಗುವನ್ನು ದೂರ ಇರಿಸಿ.

ಪ್ರತಿನಿಧಿ

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ