ಇಗೋ ಮತ್ತೆ ಬಂದಿದೆ ಬೇಸಿಗೆ! ನಮ್ಮಲ್ಲಿ ಕೆಲವರಿಗೆ ಇದು ಕಷ್ಟ ಅನಿಸದಿರಬಹುದು. ಅವರು ತಂಪಾಗಿ ಮನೆಯಲ್ಲಿ ಅಥವಾ ಎ.ಸಿ. ಆಫೀಸುಗಳಲ್ಲಿ ಹಾಯಾಗಿರುತ್ತಾರೆ. ಆದರೆ ಬಹುತೇಕರಿಗೆ ಹೊರಗಿನ ಓಡಾಟದಿಂದಾಗಿ ಬಿಸಿಲಿನ ಝಳ ಬೆವರಿಳಿಸಿಬಿಡುತ್ತದೆ, ಹೈರಾಣುಗೊಳಿಸುತ್ತದೆ. ಹೀಗಾಗಿ ಅಂಥವರು ಈ ಬಿರುಬಿಸಿಲನ್ನು ಎದುರಿಸಿ ಕೂಲಾಗಿ ಇರುವುದು ಹೇಗೆ ಎಂದು ತಿಳಿಯೋಣವೇ?

ಸಾಧ್ಯವಿದ್ದಷ್ಟೂ ಪ್ರಯಾಣ ಬೇಡ : ಬೇಸಿಗೆಯಲ್ಲಿ ಪ್ರವಾಸ ಅಥವಾ ದೂರದ ಊರಿಗೆ ಅನಿವಾರ್ಯ ಪ್ರಯಾಣ ಎಂದಾದರೆ ನಿಮ್ಮ ಬಿ.ಪಿ. ಹೆಚ್ಚುವುದರಲ್ಲಿ ಅನುಮಾನವೇ ಇಲ್ಲ. ಆದುದರಿಂದ ಇಂಥ ಸಂದರ್ಭದಲ್ಲಿ ಇಂಪಾದ ಸಂಗೀತ ಕೇಳಿ, ಒಳ್ಳೆಯ ಪುಸ್ತಕ ಓದಿ ಅಥವಾ ಆಡಿಯೋ ಬುಕ್ಸ್ ಕೇಳಿ. ಇದು ನಿಮ್ಮ ಶುಷ್ಕ ಪ್ರಯಾಣದ ಹೊರೆ ತಪ್ಪಿಸಿ ನಿಮ್ಮನ್ನು ಕೂಲ್ ‌ಆಗಿರಿಸುತ್ತದೆ.

ಉಪಾಹಾರ ಮರೆಯಲೇಬೇಡಿ : ಮನೆಯಿಂದ ಹೊರಡುವಾಗ ಹಾಯಾಗಿ ತಿಂಡಿ ತಿನ್ನುವಷ್ಟು ಸಮಯ ಇಲ್ಲ ಎನಿಸಿದರೆ, ಇದನ್ನು ಟ್ರೈ ಮಾಡಿ ನೋಡಿ. ಒಂದು ಡಬ್ಬಿಗೆ ಸಕ್ಕರೆ ಬೆರೆಸಿದ ಮೊಸರಿಗೆ, ಒಂದಿಷ್ಟು ಮಿಶ್ರಹಣ್ಣಿನ ಹೋಳುಗಳನ್ನು ಹಾಕಿಕೊಳ್ಳಿ. ಜೊತೆಗೆ ಜ್ಯಾಂ ಅಥವಾ ಟೊಮೇಟೊ ಗೊಜ್ಜು ಸವರಿದ 1-2 ಚಪಾತಿ ರೋಲ್ಸ್ ಇರಲಿ. ಇನ್ನೊಂದು ಪುಟ್ಟ ಡಬ್ಬಿಯಲ್ಲಿ ಬಾದಾಮಿ, ಅಖ್ರೋಟ್‌ಸ ವಾಲ್ ‌ನಟ್ಸ್ ಇರಲಿ. ಸಮೃದ್ಧ ಆ್ಯಂಟಿ ಆಕ್ಸಿಡೆಂಟ್ಸ್ ಹೊಂದಿದ ಇವು ನಿಮ್ಮ ನೆನಪಿನ ಶಕ್ತಿ ಹೆಚ್ಚಿಸುತ್ತವೆ. ಆಫೀಸ್‌ ಅಥವಾ ಅವಸರದ ಕೆಲಸವಾಗಿ ಹೊರಗೆ ಹೊರಟಾಗ ನಡುವೆ ಈ ರೀತಿ ತಿಂಡಿ ತಿನ್ನಿ.

ಆಳವಾಗಿ ಉಸಿರೆಳೆದುಕೊಳ್ಳಿ : ಸಾಧ್ಯವಾದಾಗೆಲ್ಲ ರಿಲ್ಯಾಕ್ಸ್ ಮಾಡಿಕೊಳ್ಳಿ. ಕಂಗಳನ್ನು ಮುಚ್ಚಿ, ಆಳವಾಗಿ ಉಸಿರೆಳೆದುಕೊಳ್ಳಿ. ಇದು ನಿಮಗೆ ತತ್ಕಾಲಕ್ಕೆ ವಿಶ್ರಾಂತಿ ನೀಡಿ, ನಿಮ್ಮ ಮಾನಸಿಕ ಶಕ್ತಿ ಹೆಚ್ಚಿಸಿ, ಹೃದಯಕ್ಕೂ ಪೂರಕವಾಗಿರುತ್ತದೆ.

ಊಟದ ವೇಳೆಯಲ್ಲಿ ಲಘು ವ್ಯಾಯಾಮ : ಊಟ ಆರಂಭಿಸುವ 5 ನಿಮಿಷಕ್ಕೆ ಮೊದಲು, ತುಸು ರೆಸ್ಟ್ ಪಡೆದು, ಎದ್ದು ನೇರ ನಿಂತುಕೊಳ್ಳಿ. ನಂತರ ಲಘು ವ್ಯಾಯಾಮ ಮಾಡಿ, ದೇಹವನ್ನು ಫ್ರೀಯಾಗಿ ಬಿಡಿ. ಇದು ನಿಮ್ಮ ಇಡೀ ದಿನದ ಕೆಲಸಗಳಿಗೆ ನೆರವಾಗುತ್ತದೆ.

ಪೌಷ್ಟಿಕ ಆಹಾರ ಸೇವಿಸಿ : ಯಾವಾಗಲೂ ರುಚಿಕರ ಪೌಷ್ಟಿಕ ಊಟ ಮಾಡಿ. ಹೆಚ್ಚು ಉಪ್ಪು, ಖಾರ ಇರುವ ಹುರಿದ ಕರಿದ ಪದಾರ್ಥ ಬೇಡ. ಹೆಚ್ಚು ಮೊಳಕೆಕಾಳು, ಫ್ರೆಶ್‌ ಸಲಾಡ್ಸ್ ಇರಲಿ. ಇದು ನಿಮ್ಮ ಮೂಡ್‌ ಮತ್ತು ಗಟ್ಟಿ ನಿರ್ಧಾರ ಕೈಗೊಳ್ಳುವ ಗುಣಕ್ಕೆ ಇದು ಪೂರಕ.

ಇಮೇಲ್ಸ್ ನಿಂದ ಬ್ರೇಕ್ಪಡೆಯಿರಿ : ಒಂದೇ ಸಮನೆ ಇಮೇಲ್ಸ್ ನೋಡುವುದರ ಬದಲು, 2 ತಾಸಿಗೊಮ್ಮೆ ತುಸು ಬ್ರೇಕ್‌ ಪಡೆಯಿರಿ. ಇದು ನಿಮ್ಮ ಏಕಾಗ್ರತೆಯನ್ನು ಹೆಚ್ಚಿಸುತ್ತದಲ್ಲದೆ, ರಿಲ್ಯಾಕ್ಸ್ ಆಗಲಿಕ್ಕೂ ಪೂರಕ.

ಅನುಕೂಲಕರ ಭಾವಭಂಗಿ ಇರಲಿ : ನೀವು ಕುಳಿತು ಕೆಲಸ ಮಾಡುವಾಗ, ಪ್ರತಿ ಗಂಟೆಗೊಮ್ಮೆ  ನಿಮ್ಮ ತಲೆಯನ್ನು ಅತ್ತಿಂದಿತ್ತ ತಿರುಗಿಸಿ, ಕುತ್ತಿಗೆಗೂ ಲಘು ವ್ಯಾಯಾಮ ನೀಡಿ. ತಲೆಯನ್ನು ಪೂರ್ತಿ ಹಿಂದಕ್ಕೆ ಬಾಗಿಸಿ, ಕುತ್ತಿಗೆ ಸ್ಟ್ರೆಚ್‌ ಮಾಡಿ. ನಿಮ್ಮ ಭುಜಗಳನ್ನು ಪೂರ್ತಿ ಹಿಂದಕ್ಕೆಳೆದುಕೊಳ್ಳುತ್ತಾ, ಎದೆಯನ್ನು ಉಬ್ಬಿಸಿ.

ಎಡಗೈ ಎಡಬದಿಗೆ, ಬಲಗೈ ಬಲಬದಿಗೆ ಚಾಚಬೇಕು. ಕೈಗಳನ್ನು ಮೇಲೆ, ಕೆಳಗೆ ಇಳಿಸಿ. ನಡುನಡುವೆ ಕುರ್ಚಿಯಿಂದ ಏಳುತ್ತಾ, ದೂರದಲ್ಲಿರುವ ಸಹೋದ್ಯೋಗಿಯನ್ನು ಹೋಗಿ ಮಾತನಾಡಿಸಿ. ಹೀಗೆ ಮಾಡಿ ಬೆನ್ನು, ಸೊಂಟ, ಕೆಳಬಾಗಕ್ಕೆ ಲಘು ವ್ಯಾಯಾಮ ನೀಡಿ. ಸದಾ ಬೆನ್ನು ನೇರ ಮಾಡಿ ಕೂರಿ, ತೊಪಕ್ಕನೆ ಕುಸಿಯಬೇಡಿ.

ಕಾಫಿ ಟೈಂನಲ್ಲಿ ಓಡಾಡಿ : ಕಾಫಿ, ಟೀ ಬ್ರೇಕ್‌ನಲ್ಲಿ ಒಂದೆಡೆ ಕುಳಿತು ಹರಟೆ ಹೊಡೆಯುವ ಬದಲು, 5-6 ನಿಮಿಷ ಹತ್ತಿರದ ಅಂಗಡಿಗೆ ಹೋಗಿ ಕಾಫಿ, ಟೀ ಸೇವಿಸಿ ಬನ್ನಿ. ಜೊತೆಗೆ ಹೆವಿ ಅಥವಾ ಕರಿದ ಸ್ನ್ಯಾಕ್ಸ್ ಬದಲು ಲೈಟ್‌ ಆದುದನ್ನೇ ಜೊತೆಗೆ ಸೇವಿಸಿ. ಆದಷ್ಟೂ ಸಿಹಿ, ಚಾಕಲೇಟ್‌ ಇತ್ಯಾದಿಗಳನ್ನು ದೂರವಿಡಿ.

ಸಹೋದ್ಯೋಗಿಗಳ ಜೊತೆ ಉತ್ತಮ ಬಾಂಧವ್ಯ : ಇಡೀ ದಿನ ಬೆವರು ಒರೆಸುತ್ತಾ, ಧಗೆ ಬಿಸಿಲು ಎಂದು ನಿಡುಸುಯ್ಯದೆ ನಿಮ್ಮ  ಸಹೋದ್ಯೋಗಿಗಳೊಂದಿಗೆ ಉತ್ತಮ ಬಾಂಧವ್ಯ ಹೊಂದಿದ್ದು, ಆ ಮೂಲಕ ನಿಮ್ಮ ಕೆಲಸದಲ್ಲಿ ಹೆಚ್ಚಿನ ಶ್ರದ್ಧೆ ಬೆಳೆಸಿಕೊಳ್ಳಿ. ಹೀಗೆ ಮಾಡಿ ಸರಾಗವಾಗಿ ದಿನ ಕಳೆಯುವಂತೆ ಮಾಡಿ. ಇಂಥ ಆತ್ಮೀಯ ಒಡನಾಟ, ದೀರ್ಘಕಾಲ ಮುನ್ನಡೆದು ಒಳ್ಳೆಯ ಬಾಂಧವ್ಯ ಮೂಡಿಸುತ್ತದೆ.

ಮಧ್ಯಾಹ್ನ ಕಷ್ಟ ಹೆಚ್ಚಿದಂತೆ : ಬೆಳಗ್ಗೆ ಹೇಗೋ ಕಳೆದುಹೋಗುತ್ತದೆ, ಮಧ್ಯಾಹ್ನ 2 ಗಂಟೆ ಹೊತ್ತಿಗೆ ಧಗೆ ಹೆಚ್ಚಿ ಹಿಂಸೆ ಎನಿಸುತ್ತದೆ. 3-4 ಗಂಟೆ ಹೊತ್ತಿಗೆ ಬಿಸಿ ಕಾಫಿ, ಟೀ ಬದಲು ನೀರುಮಜ್ಜಿಗೆ, ಎಳನೀರು, ಕಲ್ಲಂಗಡಿ, ಕಿತ್ತಳೆಹಣ್ಣಿನ ಜೂಸ್‌ ಇತ್ಯಾದಿಗಳನ್ನು ರೂಢಿಸಿಕೊಳ್ಳಿ. ಬಿಸಿನೀರಿಗೆ ತುಸು ಜೀರಿಗೆ, ಚಕ್ಕೆ, ಫೆನೆಲ್ ‌ಸೀಡ್ಸ್ ಇತ್ಯಾದಿಗಳನ್ನು ಬೆರೆಸಿ ಕುದಿಸಿ. ಚೆನ್ನಾಗಿ ಆರಿದ ನಂತರ ಈ ಕಷಾಯವನ್ನು ಸೋಸಿಕೊಂಡು, ಮತ್ತಷ್ಟು ತಣ್ಣೀರು ಬೆರೆಸಿ ಸೇವಿಸಿ. ಇಡೀ ದಿನ 10-12 ಗ್ಲಾಸ್‌ ನೀರು ಕುಡಿಯುತ್ತಿರಿ.

ನಿದ್ದೆಗೆ ಜಾರುವ ಮುನ್ನ : ರಾತ್ರಿ ಮಲಗಿದ ಮೇಲೆ ಚೆನ್ನಾಗಿ ವಿಶ್ರಾಂತಿ ಪಡೆಯಬೇಕು. ಹೀಗಾಗಿ ಮಲಗುವ ಮೊದಲು ನಿಮ್ಮ ಟ್ಯಾಬ್ಲೆಟ್‌, ಬ್ಲ್ಯಾಕ್‌ಬೆರಿ ಫೋನುಗಳನ್ನು ನೋಡುತ್ತಾ ಆಟವಾಡುವ ಬದಲು ಅದನ್ನು ದೂರವಿರಿಸಿ, ನೆಮ್ಮದಿಯಾಗಿ ಕಣ್ತುಂಬಾ ನಿದ್ದೆ ಮಾಡಿ.

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ