ನೀವು ಚುರುಕಿನಿಂದಿರಲು ಬಯಸಿದರೆ. ಕೆಲವು ಉಪಾಯಗಳನ್ನು ಅನುಸರಿಸಬೇಕಾಗುತ್ತದೆ. ನೀವು ತೂಕ ಕಡಿಮೆ ಮಾಡಿಕೊಳ್ಳಲು ವ್ಯಾಯಾಮ ಮಾಡುತ್ತೀರಿ ಹಾಗೂ ಡಯೆಟ್‌ನ್ನು ಕೂಡ ನಿಯಂತ್ರಿಸಿಕೊಳ್ಳುತ್ತೀರಿ. ಆರಂಭದಲ್ಲಿ ಇದೆಲ್ಲ ಬಹಳ ಉತ್ಸಾಹದಿಂದಲೇ ನಡೆಯುತ್ತದೆ. ಆದರೆ ಕೆಲವು ದಿನಗಳ ಬಳಿಕ ಈ ಉತ್ಸಾಹ ಕುಗ್ಗುತ್ತ ಹೋಗುತ್ತದೆ. ಇದರ ಜೊತೆಗೆ ನೀವು ಫಾಸ್ಟ್ ಫುಡ್ ಸೇವನೆ ಮಾಡಲು ಆರಂಭಿಸುತ್ತೀರಿ. ಹಾಗೆ ಮಾಡುವವರು ನೀವೋಬ್ಬರೇ ಅಲ್ಲ, ಪ್ರತಿಯೊಬ್ಬ ಮಹಿಳೆ ಕೂಡ ಅದನ್ನೇ ಮಾಡುತ್ತಾಳೆ.
ಫಿಟ್ ಆಗಿರಲು ಗುರಿ ನಿರ್ಧರಿಸಿ : ನೀವು ಎಂತಹ ಫಿಟ್‌ನೆಸ್ ಬಯಸುತ್ತೀರಿ ಎನ್ನುವುದಕ್ಕೆ ಮೊದಲು ನಿಮ್ಮದೇ ಆದ ಗುರಿ ನಿರ್ಧರಿಸಿ. ಅದಕ್ಕಾಗಿ ನೀವು ಬಹು ದೊಡ್ಡ ಗುರಿ ಅಲ್ಲ, ಚಿಕ್ಕದಾದ ಗುರಿ ನಿರ್ಧರಿಸಿ. ಶಿಲ್ಪಾ ಶೆಟ್ಟಿ ಪ್ರಕಾರ, ಸ್ಮಾರ್ಟ್ ಗುರಿ ನಿರ್ಧರಿಸಿ. ಸ್ಮಾರ್ಟ್ ಗುರಿ ಅಂದರೆ ಅದನ್ನು ನೀವು ಸುಲಭವಾಗಿ ಮಾಡಲು ಸಾಧ್ಯವಾಗಿರಬೇಕು ಹಾಗೂ ಅದರ ಫಲಿತಾಂಶ ಕೂಡ ಬಹುಬೇಗ ದೊರಕಬೇಕು. ಬಹಳ ದೂರ ಓಡಲು ಎಲ್ಲಕ್ಕೂ ಮುಂಚೆ ನೀವು ಸ್ವಲ್ಪ ಸ್ವಲ್ಪ ದೂರ ಓಡುವ ಗುರಿ ಹಾಕಿಕೊಳ್ಳಿ. ಆದರೆ 15-20 ನಿಮಿಷಗಳಲ್ಲಿ ಪೂರೈಸಲು ಸಾಧ್ಯವಾಗಿರಬೇಕು.
ನಿಮ್ಮ ಆಹಾರ ತಯಾರಿಕೆ ಯೋಜನಾಬದ್ಧವಾಗಿರಲಿ : ಕೆಲಸದ ಧಾವಂತ ಆಗಿರಬಹುದು ಅಥವಾ ಯಾವುದೇ ಮಹತ್ವದ ಕಾರ್ಯಕ್ರಮ ಇರಲಿ, ಅಂತಹ ಸಂದರ್ಭದಲ್ಲಿ ಆಹಾರವನ್ನು ತಿನ್ನದೇ ಇರುವುದು ಅಥವಾ ತಿನ್ನುವುದನ್ನು ಮುಂದೂಡುವ ಪ್ರವೃತ್ತಿ ಸರಿಯಲ್ಲ. ಕೈಗೆ ಸಿಕ್ಕಿರುವುದನ್ನು ತಿನ್ನುವುದು ಕೂಡ ಸರಿಯಲ್ಲ. ನೀವು ಯೋಜನಾಬದ್ಧವಾಗಿ ಒಂದು ವಾರದಲ್ಲಿ ಯಾವ ದಿನ ಏನನ್ನು ತಿನ್ನಬೇಕು ಎನ್ನುವುದನ್ನು ಮೊದಲೇ ನಿರ್ಧರಿಸಿ ಪೋಷಕಾಂಶವುಳ್ಳ ಆಹಾರ ತಯಾರಿಸಿಕೊಳ್ಳುವುದು ಒಳ್ಳೆಯದು. ನೀವು ಹೊರಗೆ ಹೊರಟಾಗ ಆಹಾರದ ಜೊತೆಗೆ ನೀರನ್ನು ತೆಗೆದುಕೊಂಡು ಹೋಗಿ.
ಜೊತೆಗೆ ಯಾರಾದರೂ ಇರಲಿ : ಫಿಟ್ ಆಗಿರಲು ನೀವೊಬ್ಬ ಒಳ್ಳೆಯ ಸಂಗಾತಿ ಜೊತೆಗೆ ಇರುವಂತೆ ನೋಡಿಕೊಳ್ಳಿ. ಇದರಿಂದ ನಿಮ್ಮೊಳಗೆ ಉತ್ಸಾಹ ಕಾಯ್ದುಕೊಂಡು ಹೋಗುವಂತೆ ನೋಡಿಕೊಳ್ಳಿ. ಇಬ್ಬರೂ ಪರಸ್ಪರರಿಗೆ ಪ್ರೇರಣೆ ನೀಡುವಿರಿ. ಇದರಿಂದ ದೈನಂದಿನ ದಿನಚರಿಯಲ್ಲಿ ಸಡಿಲಿಕೆ ಉಂಟಾಗದು. ಸಾಧ್ಯವಾದರೆ ವ್ಯಾಯಾಮ ಕಲಿಸುವ ಯಾರಾದರೂ ಇನ್‌ಸ್ಟ್ರಕ್ಟರ್ ಸಲಹೆ ಪಡೆದುಕೊಳ್ಳಿ.
ಮನಸ್ಸನ್ನು ಹತೋಟಿಯಲ್ಲಿಡಿ : ಒಂದು ವೇಳೆ ಬರ್ಗರ್, ಪಿಜ್ಜಾ, ಚಾಟ್ ನಿಮ್ಮ ದೌರ್ಬಲ್ಯವಾಗಿದ್ದರೆ, ಅವನ್ನು ನೋಡಿ ನಿಮ್ಮ ಮನಸ್ಸು ಚಂಚಲಗೊಳ್ಳುತ್ತಿದ್ದರೆ, ನಿಮ್ಮ ದಾರಿಯನ್ನು ಬದಲಿಸಿಕೊಳ್ಳಿ. ಮನಸ್ಸನ್ನು ಚಂಚಲಗೊಳಿಸುವ, ಸುಮ್ಮನೇ ಇರಲಾಗದ ಫೀಲಿಂಗ್ ಬಗ್ಗೆ ನಿಯಂತ್ರಣ ನಿಮ್ಮ ಕೈನಲ್ಲೇ ಇದೆ.
ವ್ಯಾಯಾಮದ ಆನಂದ ಪಡೆಯಿರಿ : ಕೇವಲ ಕ್ಯಾಲೋರಿ ದಹನ ಮಾಡುವುದಿದೆ ಎಂಬ ಯೋಚನೆಯಿಂದ ವ್ಯಾಯಾಮ ಮಾಡಬೇಡಿ. ನೀವು ಯಾವ ಕೆಲಸ ಮಾಡುವುದರಲ್ಲಿ ಆನಂದ ಪಡೆದುಕೊಳ್ಳುತ್ತೀರೋ, ಅಂದರೆ ಮನೆಗೆಲಸ, ತೋಟಗಾರಿಕೆ, ನೃತ್ಯ ಇವನ್ನು ಮನಸಾರೆ ಮಾಡಿ. ಎಂಜಾಯ್ ಮಾಡುತ್ತಲೇ ಬ್ಯಾಡ್ಮಿಂಟನ್, ಹಗ್ಗದಾಟ ಹಾಗೂ ಟೆನಿಸ್ ಮುಂತಾದ ಆಟಗಳನ್ನು ಆಡಿ. ಇವು ಫಿಟ್‌ನೆಸ್ ಕಾಯ್ದುಕೊಂಡು ಹೋಗುವ ಸುಲಭ ವಿಧಾನಗಳಾಗಿವೆ.