ಐವಿಎಫ್‌ ಎಂತಹ ಒಂದು ಪ್ರಕ್ರಿಯೆಯೆಂದರೆ, ಅದರಲ್ಲಿ ಅಂಡಾಣುಗಳನ್ನು ವೀರ್ಯಾಣುವಿನ ಜೊತೆಗೆ ಫರ್ಟಿಲೈಸ್ ಮಾಡಲಾಗುತ್ತದೆ. ಕೆಲವು ವರ್ಷಗಳ ಹಿಂದಿನತನಕ ಎಗ್‌ಫ್ರೀಝಿಂಗ್‌ ಪ್ರಕ್ರಿಯೆ ಉನ್ನತ ವರ್ಗದ ಮಹಿಳೆಯರಿಗಷ್ಟೇ ಸೀಮಿತವಾಗಿತ್ತು. ಏಕೆಂದರೆ ಆಧುನಿಕ ಸಮಾಜದೊಂದಿಗೆ ಬದಲಾಗುವ ಆದ್ಯತೆಗಳು ಈಗ ಸಮಾಜದ ಪ್ರತಿಯೊಂದು ವರ್ಗದ ಮಹಿಳೆಯರಿಗೆ ಅದರ ಲಾಭ ಪಡೆದುಕೊಳ್ಳಲು ಪ್ರೇರೇಪಿಸುತ್ತಿವೆ.

ಹೀಗಿದೆ ಪ್ರಕ್ರಿಯೆ

ಎಗ್‌ ಫ್ರೀಝಿಂಗ್‌ ಅಂದರೆ ಅಂಡಾಣುವನ್ನು ಬಹಳ ದಿನಗಳ ಕಾಲ ವ್ಯವಸ್ಥಿತವಾಗಿ ಸಂಗ್ರಹಿಸಿಡುವ ಪದ್ಧತಿ. ಆರೋಗ್ಯವಂತ ಮಹಿಳೆಯೊಬ್ಬಳ ಅಂಡಾಣುಗಳನ್ನು ಭವಿಷ್ಯದಲ್ಲಿ ಉಪಯೋಗ ಮಾಡಿಕೊಳ್ಳಲೆಂದು ಸಂಗ್ರಹಿಸಿಡಲಾಗುತ್ತದೆ. ಸಂಗ್ರಹಿಸಲ್ಪಟ್ಟ ಈ ಅಂಡಾಣುಗಳ ಸಹಾಯದಿಂದ ಮಹಿಳೆ ಹಲವು ವರ್ಷಗಳ ಬಳಿಕ ಗರ್ಭಧಾರಣೆ ಮಾಡಬಹುದಾಗಿದೆ.

ಈ ಪ್ರಕ್ರಿಯೆಯನ್ವಯ ಮಹಿಳೆಗೆ 2 ವಾರದ ಮಟ್ಟಿಗೆ ಭಾರಿ ಪ್ರಮಾಣದ ಹಾರ್ಮೋನುಗಳನ್ನು ಕೊಡಲಾಗುತ್ತದೆ. ಏಕೆಂದರೆ ಆಕೆಯ ಅಂಡಾಶಯದಲ್ಲಿ ಮಲ್ಟಿಪಲ್ ಫಾಲಿಕ್‌ ಬೆಳವಣಿಗೆ ಆಗಬೇಕು ಎನ್ನುವುದಾಗಿರುತ್ತದೆ. ಆ ಬಳಿಕ ಅಂಡಾಣುಗಳನ್ನು ಸಂಗ್ರಹಿಸಿಕೊಳ್ಳಲು ಮಹಿಳೆಯನ್ನು ಎರಡು ಗಂಟೆಗಳ ಕಾಲ ಆಸ್ಪತ್ರೆಯಲ್ಲಿ ಇರಲು ಹೇಳಲಾಗುತ್ತದೆ.

ನಂತರ ವಿಶೇಷ ಸೂಜಿಯ ಸಹಾಯದಿಂದ ಅಂಡಾಣುಗಳನ್ನು ಸಂಗ್ರಹಿಸಲಾಗುತ್ತದೆ. ಬಳಿಕ ಸಂಗ್ರಹಿಸಿದ ಅಂಡಾಣುಗಳನ್ನು ಟೆಸ್ಟ್ ಟ್ಯೂಬ್‌ನಲ್ಲಿ ಲೇಬಲ್ ಹಾಕಿ ಫ್ರೀಝ್ ಮಾಡಲಾಗುತ್ತದೆ.

ಏಕೆ ಹೆಚ್ಚಾಯ್ತು ಒಲವು?

ಎಗ್‌ಫ್ರೀಝಿಂಗ್‌ ಕುರಿತಾದ ಜನರ ಹೆಚ್ಚುತ್ತಿರುವ ಒಲವಿಗೆ ಕಾರಣ ಕೆರಿಯರ್‌ ಮತ್ತು ಕುಟುಂಬದ ಜವಾಬ್ದಾರಿಗಳ ನಡುವೆ ಹೊಂದಾಣಿಕೆಯನ್ನುಂಟು ಮಾಡುವುದಾಗಿದೆ.

10-15 ವರ್ಷಗಳ ಹಿಂದಿನ ದಿನಗಳಿಗೂ ಈಗಿನ ದಿನಗಳಿಗೂ ಹೋಲಿಸಿದಲ್ಲಿ ಈಗ ಮದುವೆಯ ವಯಸ್ಸು ತುಂಬಾ ಮುಂದಕ್ಕೆ ಹೋಗಿದೆ. ಮದುವೆಯ ಬಳಿಕ ಅದೆಷ್ಟೊ ಮಹಿಳೆಯರು ತಮ್ಮ ಕೆರಿಯರ್‌ ಹಾಗೂ ಫೈನಾನ್ಸ್ ಮ್ಯಾನೇಜ್‌ಮೆಂಟ್‌ ಹಾಗೂ ಕೌಟುಂಬಿಕ ಕಾರಣಗಳಿಂದಾಗಿ ಕೆಲವು ವರ್ಷಗಳ ತನಕ ಮಗುವಿನ ಬಗ್ಗೆ ಯೋಚಿಸುವುದಿಲ್ಲ. ಆದರೆ ವಾಸ್ತವ ಸಂಗತಿ ಏನೆಂದರೆ, ವಯಸ್ಸಿನ ಒಂದು ಹಂತದ ಬಳಿಕ ಗರ್ಭಧಾರಣೆ ಮಾಡಲು ಅನೇಕ ತೊಂದರೆಗಳನ್ನು ಎದುರಿಸಬೇಕಾಗುತ್ತದೆ.

ಇತ್ತೀಚಿನ ದಿನಗಳಲ್ಲಿ ಕೆಲವು ಮಹಿಳೆಯರು 35 ವರ್ಷಗಳ ಬಳಿಕ ತಮ್ಮ ಮೊದಲ ಮಗುವಿನ ಬಗ್ಗೆ ಯೋಚಿಸುತ್ತಾರೆ. ಆದರೆ  ವಯಸ್ಸಾದಂತೆ ಮಹಿಳೆಯ ಗರ್ಭಧಾರಣೆಯ ಸಾಮರ್ಥ್ಯ ಭಾರಿ ವೇಗದಲ್ಲಿ ಕುಸಿಯುತ್ತದೆ. ಮಹಿಳೆಯೊಬ್ಬಳು 40ನೇ ವಯಸ್ಸಿಗೆ ಕಾಲಿಟ್ಟಾಗ ಆಕೆಗೆ ಪುನಃ ಗರ್ಭ ಧರಿಸುವುದು ಕಷ್ಟಕರವಾಗುತ್ತದೆ. ಈ ವಯಸ್ಸಿನಲ್ಲಿ ಮಹಿಳೆಗೆ ಅತ್ಯಂತ ಕಡಿಮೆ ಪ್ರಮಾಣದಲ್ಲಿ ಅಂಡಾಣುಗಳು ಉತ್ಪತ್ತಿಯಾಗುತ್ತವೆ. ಉತ್ಪತ್ತಿಯಾದ ಅಂಡಾಣುಗಳಲ್ಲಿ ಗುಣಮಟ್ಟದ ಅಂಡಾಣುಗಳು ಅತ್ಯಂತ ಕಡಿಮೆ ಪ್ರಮಾಣದಲ್ಲಿ ಇರುತ್ತವೆ. ಒಂದುವೇಳೆ ಮಹಿಳೆ ಗರ್ಭ ಧರಿಸಿದರೂ ಆಕೆಗೆ ಗರ್ಭಪಾತವಾಗುವ ಸಾಧ್ಯತೆ ಹೆಚ್ಚುತ್ತದೆ. ಈ ಪರಿಸ್ಥಿತಿಯಿಂದ ಪಾರಾಗಲು `ಎಗ್‌ ಫ್ರೀಝಿಂಗ್‌ ಪದ್ಧತಿ’ ಬಹಳ ಅನುಕೂಲಕರಾಗಿ ಪರಿಣಮಿಸುತ್ತದೆ.

ಕ್ಯಾನ್ಸರ್‌ ಅಥವಾ ಬೇರೆ ಯಾವುದೇ ಗಂಭೀರ ಕಾಯಿಲೆಯಿಂದ ಯೌವನದಲ್ಲಿ ಗರ್ಭ ಧರಿಸಲು ಸಾಧ್ಯವಾಗದೇ ಇರುವವರಿಗೆ ಈ ಪ್ರಕ್ರಿಯೆಯನ್ನು ಅನುಸರಿಸಲಾಗುತ್ತದೆ. ಸಾಮಾನ್ಯವಾಗಿ ಇಂತಹ ರೋಗಗಳ ಸಂದರ್ಭದಲ್ಲಿ ಮಹಿಳೆಯರ ಅಂಡಕೋಶಕ್ಕೆ ತೊಂದರೆಯಾಗುವ ಸಾಧ್ಯತೆ ಇರುತ್ತದೆ. ಇಂತಹ `ಓವೇರಿಯನ್‌ ಫೇಲ್ಯೂರ್‌’ ಸ್ಥಿತಿಯಿಂದ ಪಾರಾಗಲು ಸಕಾಲಕ್ಕೆ ಫ್ರೀಝಿಂಗ್ ತಂತ್ರಜ್ಞಾನದ ನೆರವು ಪಡೆಯಲಾಗುತ್ತದೆ.

ವಯಸ್ಸು ಹೆಚ್ಚುತ್ತ ಹೋದಂತೆ ಆರೋಗ್ಯವಂತ ಮಗುವಿಗೆ ಜನ್ಮ ನೀಡುವುದು ಕಠಿಣವಾಗಿ ಪರಿಣಮಿಸುತ್ತದೆ. ಆದರೆ ಪ್ರೀ ಇಂಪ್ಲಾಂಟೇಶನ್‌ ತಪಾಸಣೆಯೊಂದಿಗೆ ಎಗ್‌ ಫ್ರೀಝಿಂಗ್‌ ಆನುವಂಶಿಕ ಅಸಾಮಾನ್ಯತೆಗಳನ್ನು ಕಡಿಮೆಗೊಳಿಸುತ್ತದೆ. ಇದೇ ಕಾರಣದಿಂದ ಎಗ್‌ ಫ್ರೀಝಿಂಗ್‌ ಕಾರಣದಿಂದ ನವಜಾತ ಶಿಶುವಿನಲ್ಲಿ ಆನುವಂಶಿಕ ಹಾಗೂ ಕ್ರೋಮೊಸೋಮ್ ಅಸಾಮಾನ್ಯತೆಗಳ ಅಪಾಯ ಕೂಡ ಕಡಿಮೆಯಾಗುತ್ತದೆ.

ಯಾವ ಮಹಿಳೆಯರು ಬಂಜೆತನದ ಕಾರಣದಿಂದ ಗರ್ಭ ಧರಿಸಲು ಆಗುವುದಿಲ್ಲ ಅವರಲ್ಲೂ ಕೂಡ ಎಗ್‌ ಫ್ರೀಝಿಂಗ್‌ನ ನೆರವಿನಿಂದ ಗರ್ಭಧಾರಣೆಯ ಸಾಧ್ಯತೆ ಹೆಚ್ಚುತ್ತದೆ. ಯಾವ ದಂಪತಿಗಳು ಒಂದೇ ಮಗುವಿನ ಹೊಣೆ ಹೊರಲು ನಿರ್ಧರಿಸುತ್ತಾರೊ ಅವರು ಎಗ್‌ ಫ್ರೀಝಿಂಗ್‌ನ ನೆರವು ತೆಗೆದುಕೊಳ್ಳಬಹುದು.

ನಿರ್ಧರಿಸುವ ಸೂಕ್ತ ವಯಸ್ಸು

ಹೆಚ್ಚಿನ ಮಹಿಳೆಯರು 30 ವರ್ಷಗಳ ಬಳಿಕ ಎಗ್‌ ಫ್ರೀಝಿಂಗ್‌ ಮಾಡುವ ನಿರ್ಧಾರಕ್ಕೆ ಬರುತ್ತಾರೆ. ಆದರೆ ವಯಸ್ಸಿನ ಈ ಹಂತದಲ್ಲಿ ಅವರ ಅಂಡಾಣುಗಳ ಗುಣಮಟ್ಟ ಕುಸಿಯುತ್ತಿರುತ್ತದೆ. ತಜ್ಞರ ಪ್ರಕಾರ, 30 ವರ್ಷಗಳ ವಯಸ್ಸಿನಲ್ಲಿ ಎಗ್‌ ಫ್ರೀಝಿಂಗ್ ಮಾಡಿದ ಅಂಡಾಣುಗಳು ಬೆಳವಣಿಗೆಯಾಗುವ ಸಾಧ್ಯತೆ ಶೇ.30 ರಿಂದ 40 ರಷ್ಟು ಮಾತ್ರ ಇರುತ್ತದೆ. 30 ವಯಸ್ಸಿನ ಬಳಿಕ ಇದರ ಸಾಧ್ಯತೆ ಕೇವಲ 25% ಮಾತ್ರ ಉಳಿಯುತ್ತದೆ. ಹೀಗಾಗಿ ತಡವಾಗಿ ಮದುವೆಯಾಗಲು ಇಚ್ಛಿಸುವ ಮಹಿಳೆಯರು 20 ರಿಂದ 30 ವಯಸ್ಸಿನೊಳಗೆ ಮುಂದೆ ತಮಗೇನೂ ಸಮಸ್ಯೆಯಾಗಬಾರದು ಎಂಬುದರ ಬಗ್ಗೆ ನಿರ್ಧರಿಸಬೇಕು.

ಡಾ. ಆರ್‌.ಕೆ. ಶರ್ಮ

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ