ಪ್ರತಿದಿನ ನೀವು ಸ್ನಾನ ಮಾಡಿ, ಮನೆಯಲ್ಲಿ ಕಸ ಗುಡಿಸುವುದು, ಪಾತ್ರೆ ತೊಳೆಯುವುದು, ಬಟ್ಟೆ ಒಗೆಯುವುದರಿಂದಲೇ ಮನೆ ರೋಗಾಣುರಹಿತವಾಗುತ್ತದೆ ಎಂದುಕೊಂಡಿದ್ದರೆ, ಅದು ನಿಮ್ಮ ತಪ್ಪು ಕಲ್ಪನೆ. ಇಷ್ಟೆಲ್ಲಾ ಮಾಡಿದರೂ ಮನೆಯ ಸದಸ್ಯರು ಪದೇ ಪದೇ ಏಕೆ ಕಾಯಿಲೆ ಬೀಳುತ್ತಾರೆ? ಉದಾಹರಣೆಗೆ ಸ್ನಾನದ ವಿಷಯ ಹೇಳುವುದಾದರೆ, ನೀವು ಸ್ನಾನಕ್ಕೆ ಉಪಯೋಗಿಸುವ ಬಕೆಟ್‌, ಮಗ್‌, ಶವರ್‌ ಇತ್ಯಾದಿಗಳನ್ನು ಪ್ರತಿದಿನ ಆ್ಯಂಟಿಸೆಪ್ಟಿಕ್‌ ಲೋಶನ್‌ನಿಂದ ತೊಳೆಯುತ್ತಿದ್ದೀರಾ? ಅಲ್ಲೂ ಸಹ ಬ್ಯಾಕ್ಟೀರಿಯಾ ಉತ್ಪನ್ನವಾಗುತ್ತವೆ.

ಹೆಚ್ಚುತ್ತಿರುವ ಪರಿಸರ ಮಾಲಿನ್ಯ ಮತ್ತು ಬದಲಾಗುತ್ತಿರುವ ಲೈಫ್‌ ಸ್ಟೈಲ್‌‌ನಲ್ಲಿ ಮನೆಯನ್ನು ಜರ್ಮ್ ಫ್ರೀ ಆಗಿಡುವುದು ದೊಡ್ಡ ಸವಾಲಾಗಿದೆ. ವಾತಾವರಣವನ್ನು ಸಂಪೂರ್ಣವಾಗಿ ಬದಲಿಸಲಾಗುವುದಿಲ್ಲ. ಆದರೆ ಮನೆಯವರು ಕೊಂಚ ತಿಳಿವಳಿಕೆ ಉಪಯೋಗಿಸಿ, ಕೊಂಚ ಸಮಯ ಮೀಸಲಿಟ್ಟು ಆರೋಗ್ಯ ಕಾಪಾಡಿಕೊಳ್ಳಬಹುದು. ಮನೆಯನ್ನು ರೋಗಾಣುರಹಿತವಾಗಿ ಮಾಡಬೇಕಾದರೆ ಶಾರೀರಿಕ ಹೈಜೀನ್‌, ಪರ್ಸನಲ್ ಹೈಜೀನ್‌ ಮತ್ತು ಮನೆಯ ಹೈಜೀನ್‌ ಬಗ್ಗೆ ತಿಳಿದುಕೊಳ್ಳಬೇಕು.

ಮನೆಯನ್ನು ಜರ್ಮ್ಫ್ರೀ ಮಾಡಿ

ಮನೆಯ ಬಗ್ಗೆ ಮಾತಾಡುವುದಾದರೆ ಲಿವಿಂಗ್‌ ರೂಮ್ ಅಥವಾ ಡ್ರಾಯಿಂಗ್‌ ರೂಮ್, ಬೆಡ್‌ ರೂಮ್, ಕಿಚನ್‌ ಮತ್ತು ಬಾಥ್ ರೂಮಿನ ಉಲ್ಲೇಖ ಅನಿವಾರ್ಯ. ಅಲ್ಲಿ ಬ್ಯಾಕ್ಟೀರಿಯಾ ಉತ್ಪನ್ನವಾಗುತ್ತವೆ ಮತ್ತು ಅವುಗಳ ಸಂಪರ್ಕದಿಂದ ನಮಗೆ ಕಾಯಿಲೆ ಬರುತ್ತದೆ.

ಲಿವಿಂಗ್‌ ರೂಮ್ / ಡ್ರಾಯಿಂಗ್‌ ರೂಮ್

ಮನೆಯ ಸದಸ್ಯರೆಲ್ಲರೂ ಹೆಚ್ಚಾಗಿ ಉಪಯೋಗಿಸುವ ಜಾಗ ಇದು. ಇಲ್ಲಿ ಕಿಟಿಕಿಗಳನ್ನು ಹಾಗೂ ಬಾಗಿಲನ್ನು ಧೂಳು ಒಳಗೆ ಬರದಿರಲೆಂದು ಆಗಾಗ್ಗೆ ಮುಚ್ಚಿಡಲಾಗುತ್ತದೆ. ಆದರೂ ಕುಶನ್‌ ಕವರ್‌, ಸೋಫಾದ ದಿಂಬುಗಳು, ಸೆಂಟರ್‌ ಟೇಬಲ್, ಡೈನಿಂಗ್ ಟೇಬಲ್ ಕವರ್‌ ಮೇಲೆ ಧೂಳು ಜಮೆಯಾಗುತ್ತದೆ. ಅದು ನಮ್ಮ ಕಣ್ಣಿಗೆ ಕಾಣುವುದಿಲ್ಲ. ರತ್ನಗಂಬಳಿ ಅತ್ಯಂತ ಹೆಚ್ಚು ಧೂಳನ್ನು ಹಿಡಿದುಕೊಳ್ಳುತ್ತದೆ. ಹಾಗೆಯೇ ಪರದೆಗಳ ಮೇಲೂ ಧೂಳು ಸೇರಿಕೊಳ್ಳುತ್ತದೆ. ನೀವೆಷ್ಟೇ ಒದರಿದರೂ ಧೂಳು ಮತ್ತೆ ಬಂದು ಕೂರುತ್ತದೆ. ಅದರಲ್ಲಿ ಬ್ಯಾಕ್ಟೀರಿಯಾ ಉತ್ಪನ್ನವಾಗುತ್ತದೆ. ಫ್ಯಾನುಗಳು, ಸ್ವಿಚ್‌ ಬೋರ್ಡ್‌ ಮೇಲೂ ಧೂಳಿನ ಪದರಗಳನ್ನು ಸ್ಪಷ್ವವಾಗಿ ಕಾಣಬಹುದು.

ತಡೆಯುವುದು

ಎಲ್ಲಕ್ಕಿಂತ ಮುಖ್ಯವಾಗಿ ಡ್ರಾಯಿಂಗ್‌ ರೂಮಿನ ಕಿಟಕಿಗಳನ್ನು ಸ್ವಲ್ಪ ಹೊತ್ತು ತೆರೆದಿಡಬೇಕು. ಅದರಿಂದ ತಾಜಾ ಗಾಳಿಯ ಸಂಚಾರ ಚೆನ್ನಾಗಿರುತ್ತದೆ.

ಕೋಣೆಯಲ್ಲಿ ಇನ್‌ ಡೋರ್‌ ಪ್ಲಾಂಟ್ಸ್ ಇಡಿ. ಅವು ಗಾಳಿಯ ಕ್ವಾಲಿಟಿಯನ್ನು ಹೆಚ್ಚಿಸುತ್ತವೆ ಮತ್ತು ಟಾಕ್ಸಿನ್‌ಗಳನ್ನು ಹೀರಿಕೊಳ್ಳುತ್ತವೆ. ಇನ್‌ ಡೋರ್‌ ಪ್ಲಾಂಟ್‌ಗಳಲ್ಲಿ ಮನಿಪ್ಲಾಂಟ್‌ ಅತ್ಯಂತ ಉಪಯುಕ್ತ.

ಕಾರ್ಪೆಟ್‌ ಹಾಸಿದ್ದರೆ ಅದನ್ನು ವಾರದಲ್ಲೊಮ್ಮೆ ಅಗತ್ಯವಾಗಿ ವ್ಯಾಕ್ಯೂಮ್ ಕ್ಲೀನರ್‌ನಿಂದ ಸ್ವಚ್ಛಗೊಳಿಸಿ. ಒಂದು ಅಥವಾ 2 ತಿಂಗಳ ನಂತರ ಡ್ರೈಕ್ಲೀನ್‌ ಮಾಡಿಸಿ ಅಥವಾ 1 ತಿಂಗಳ ನಂತರ ಬಿಸಿಲಿನಲ್ಲಿ ಒಣಗಿಸಿ.

ಕುಶನ್‌ ಕವರ್‌, ಟೇಬಲ್ ಕವರ್‌ ಇತ್ಯಾದಿಗಳನ್ನು 10 ದಿನಗಳಿಗೊಮ್ಮೆ ಅಗತ್ಯವಾಗಿ ಒಗೆಯಿರಿ.

ಪರದೆಗಳನ್ನು ಪ್ರತಿ ತಿಂಗಳೂ ಒಗೆಯಿರಿ. ಹತ್ತಿಯ ಪರದೆಗಳನ್ನು ಬಳಸಿದರೆ ಉತ್ತಮ.

ವುಡನ್‌ ಫರ್ನೀಚರ್‌ಗಳನ್ನು ದಿನ ಮೊದಲು ಒದ್ದೆ ಬಟ್ಟೆಯಿಂದ, ನಂತರ ಒಣಗಿದ ಬಟ್ಟೆಯಿಂದ ಒರೆಸಿ. 4 ತಿಂಗಳಿಗೊಮ್ಮೆ ವಾರ್ನಿಶ್‌ ಮಾಡಿಸಿ.

ಅಲಂಕರಣ ಸಾಧನಗಳನ್ನು ದಿನ ಆ್ಯಂಟಿ ಸೆಪ್ಟಿಕ್‌ ಲೋಷನ್‌ ಹಾಕಿ ಬಟ್ಟೆಯಿಂದ ಒರೆಸಿ.

ಏರ್‌ ಕಂಡೀಶನ್‌ನ ಜಾಲರವನ್ನು ವಾರಕ್ಕೊಮ್ಮೆ ಅಗತ್ಯವಾಗಿ ತೊಳೆಯರಿ. ಫ್ಯಾನುಗಳ ಸ್ವಚ್ಛತೆಯನ್ನು ವಾರಕ್ಕೊಮ್ಮೆ ಅಗತ್ಯವಾಗಿ ಮಾಡಿ.

ಫುಟ್‌ ರಗ್‌ಗಳನ್ನು ದಿನ ಸ್ವಚ್ಛಗೊಳಿಸಿ. ನೀರಿನಲ್ಲಿ ಕೊಂಚ ಡಿಸ್‌ ಇನ್‌ಫೆಕ್ಟೆಂಟ್‌ ಕ್ಲೀನರ್‌ ಅಗತ್ಯವಾಗಿ ಹಾಕಿಕೊಳ್ಳಿ.

ಮೇನ್‌ ಡೋರ್‌ನಲ್ಲಿ ಧೂಳು ಹೀರಿಕೊಳ್ಳುವ ಡೋರ್‌ ಮ್ಯಾಟ್‌ ಹಾಕಿ. ಆಗ ಹೊರಗಿನಿಂದ ಬರುವ ಧೂಳಿನಿಂದ ಪಾರಾಗಬಹುದು.

ವಾರದಲ್ಲಿ ಕನಿಷ್ಠ 2 ಬಾರಿ ಮನೆಯ ಕಿಟಕಿಗಳನ್ನು ಚೆನ್ನಾಗಿ ಸ್ವಚ್ಛಗೊಳಿಸಿ ಒಳಗಿನ ಭಾಗಗಳನ್ನು ಉದ್ದುದ್ದುವಾಗಿ ಮತ್ತು ಹೊರಗಿನ ಭಾಗಗಳನ್ನು ಅಡ್ಡಡ್ಡವಾಗಿ ಒರೆಸಿ. ಹೀಗೆ ಮಾಡಿದಾಗ ಒಂದು ವೇಳೆ ಕೊಳೆ ಉಳಿದಿದ್ದರೂ, ತಿಳಿಯುತ್ತದೆ.

ಸ್ವಿಚ್‌ ಬೋರ್ಡ್‌, ಕಿಟಕಿಗಳ ಹ್ಯಾಂಡ್‌ ಇತ್ಯಾದಿಗಳನ್ನು ಡಿಸ್‌ ಇನ್‌ಫೆಕ್ಟೆಂಟ್‌ ಬಟ್ಟೆಯಿಂದ ದಿನ ಸ್ವಚ್ಛಗೊಳಿಸಿ. ಏಕೆಂದರೆ ದಿನ ಇವುಗಳನ್ನು ನಾವು ಬಹಳಷ್ಟು ಬಾರಿ ಮುಟ್ಟುತ್ತೇವೆ. ಅವು ಸ್ವಚ್ಛವಾಗಿರುವುದು ಬಹಳ ಅಗತ್ಯ.

ಬೆಡ್‌ ರೂಮ್

ಬೆಡ್‌ ರೂಮಿನಲ್ಲಿ ಧೂಳಿನ ಕಣಗಳಿಂದ ಬರುವ ಕೀಟಾಣುಗಳು ಹಾಸುಗೆ ಹಾಗೂ ದಿಂಬುಗಳ ಮೇಲೆ ಜಾಗ ಮಾಡಿಕೊಳ್ಳುತ್ತವೆ. ಅಲ್ಲೇ ಅವು ತಮ್ಮ ಆಹಾರ ಸೇವಿಸುತ್ತವೆ. ಡಾ. ಕಿಲಿಪ್‌ಟಿಯರನೋ ತಮ್ಮ `ದಿ ಸೀಕ್ರೆಟ್‌ ಲೈಫ್‌ ಆಫ್‌ ಜರ್ಮ್ಸ್’ ಪುಸ್ತಕದಲ್ಲಿ ಬರೆದಿರುವಂತೆ ಹಾಸುಗೆಯ ಮೇಲೆ ಬೆವರು ಮತ್ತು ವೀರ್ಯವಲ್ಲದೆ ಇನ್ನೂ ಕೆಲವು ವಸ್ತುಗಳು ಬೀಳುತ್ತಿರುತ್ತವೆ. ಅವುಗಳಿಂದ ಬ್ಯಾಕ್ಟೀರಿಯಾ ಉತ್ಪನ್ನವಾಗುತ್ತವೆ. ತ್ವಚೆಗೆ ಸಂಬಂಧಿಸಿದ ರೋಗಗಳು ಹಾಗೂ ಅಲರ್ಜಿ ಉಂಟಾಗುವುದಕ್ಕೆ ಬ್ಯಾಕ್ಟೀರಿಯಾ ಕಾರಣವೆಂದು ಬಹಳಷ್ಟು ವೈದ್ಯರು ಹೇಳುತ್ತಾರೆ.

ತಡೆಯುವುದು ಹೇಗೆ?

DEL_5577

ಹಾಸುಗೆ ಹಾಗೂ ದಿಂಬುಗಳಿಗೆ ಕವರ್‌ ಹಾಕಿ. ಪ್ರತಿ ತಿಂಗಳೂ ಹಾಸುಗೆಗಳನ್ನು ತಿರುವಿ ಹಾಕಿ. ತಿಂಗಳಿಗೊಮ್ಮೆ ಬಿಸಿಲಿನಲ್ಲಿ ಒಣಗಿಸಿ.

ದಿಂಬುಗಳ ಕವರ್‌ಗಳನ್ನು ವಾರಕ್ಕೊಮ್ಮೆ ಬಿಸಿನೀರಿನಲ್ಲಿ ಒಗೆಯಿರಿ. ರೋಗಾಣುಗಳು ಸಾಯುತ್ತವೆ.

ಒಂದು ದಿಂಬಿನ ಲೈಫ್‌ 3 ರಿಂದ 5 ವರ್ಷ. ಇಂಟರ್‌ ನ್ಯಾಷನಲ್ ಹೈಜೀನ್‌ ಸರ್ವೆ ಪ್ರಕಾರ, 5 ವರ್ಷಗಳಲ್ಲಿ 1 ದಿಂಬಿನಲ್ಲಿ ಶೇ.10ರಷ್ಟು ಧೂಳು ಜಮೆಯಾಗಿರುತ್ತದೆ. ಆದ್ದರಿಂದ 5 ವರ್ಷಗಳ ನಂತರ ಅದನ್ನು ಅಗತ್ಯವಾಗಿ ಬದಲಿಸಿ.

ಪಿಲ್ಲೋ ಕವರ್‌, ಬೆಡ್‌ ಶೀಟ್‌ನ್ನು ವಾರಕ್ಕೊಮ್ಮೆ ಬದಲಿಸಿ.

ರಗ್‌ಗಳನ್ನೂ ವಾರಕ್ಕೊಮ್ಮೆ ಒಗೆಯಿರಿ. ಕಂಬಳಿಯನ್ನೂ ವಾರಕ್ಕೊಮ್ಮೆ ವ್ಯಾಕ್ಯೂಂ ಕ್ಲೀನರ್‌ನಿಂದ ಸ್ವಚ್ಛಗೊಳಿಸಿ. 1 ತಿಂಗಳ ನಂತರ ಡ್ರೈಕ್ಲೀನ್‌ ಮಾಡಿಸಿ. ಕಂಬಳಿಗೂ ಕವರ್‌ ಹಾಕಿಡಿ ಮತ್ತು ಅದನ್ನು ನಿಯಮಿತವಾಗಿ ಒಗೆಯಿರಿ.

ಬಾಥ್‌ ರೂಮ್

ಬಾಥ್‌ ರೂಮ್ ಏರಿಯಾದಲ್ಲಿ ಟಾಯ್ಲೆಟ್‌ ಸೀಟ್‌, ವಾಶ್‌ ಬೇಸಿನ್‌, ಶವರ್‌, ಕರ್ಟನ್‌, ಶವರ್‌ ಹೆಡ್‌, ಬಕೆಟ್‌, ಮಗ್‌, ಡೋರ್‌ ಮೇಲೆ ಬಹಳ ಬ್ಯಾಕ್ಟೀರಿಯಾ ಇರುತ್ತವೆ. ಒಳ್ಳೆಯ ವಾತಾವರಣ ಸಿಕ್ಕಾಗ ಸ್ವಲ್ಪ ಸಮಯದಲ್ಲೇ ದ್ವಿಗುಣವಾಗುತ್ತವೆ.

ಚಿಕಿತ್ಸೆ

DSC_9342

ಸ್ನಾನದ ಮನೆಯ ಪ್ಲ್ಯಾಸ್ಟಿಕ್‌ ಬಕೆಟ್‌, ಮಗ್‌ನ್ನು ಪ್ರತಿದಿನ ಸ್ವಲ್ಪ ಸೋಪ್‌ ಹಾಕಿ ಸ್ವಚ್ಛಗೊಳಿಸಿ. ನಂತರ 2 ತೊಟ್ಟು ಆ್ಯಂಟಿಸೆಪ್ಟಿಕ್ ಲೋಶನ್‌ ಹಾಕಿ ರಿಸ್ಕ್ ಮಾಡಿ.

ಸ್ನಾನದ ನಂತರ ಬಾಥ್‌ ರೂಮ್ ನ್ನು ವೈಪರ್‌ನಿಂದ ಸ್ವಚ್ಛಗೊಳಿಸಿ. ನಂತರ ಬಾಥ್‌ ರೂಂ ಒದ್ದೆ ಇರದಂತೆ ಎಕ್ಸಾಸ್ಟ್ ಫ್ಯಾನ್ ಹಾಕಿ.

ಸ್ನಾನಕ್ಕೆ ಬಾಥ್‌ ಟಬ್‌ ಇದ್ದರೆ ವಾರಕ್ಕೆ 3 ಬಾರಿ ಅದರ ನೀರು ಖಾಲಿ ಮಾಡಿ ಆ್ಯಂಟಿ ಸೆಪ್ಟಿಕ್‌ ಲೋಶನ್‌ ಹಾಕಿ ಸ್ವಚ್ಛಗೊಳಿಸಿ.

ಟವೆಲ್‌ನ್ನು ಪ್ರತಿದಿನ ಬಿಸಿನೀರಿನಿಂದ ಒಗೆಯಿರಿ.

ದಿನ ಸ್ವಲ್ಪ ಹೊತ್ತು ಬಾಥ್‌ ರೂಮಿನ ಕಿಟಕಿಗಳು ತೆರೆದಿರಲಿ. ಸೂರ್ಯನ ಕಿರಣಗಳು ಹಾಗೂ ತಾಜಾ ಗಾಳಿ ಒಳಗೆ ಬರುವಂತಿರಬೇಕು.

ಚಪ್ಪಲಿ, ಶೂಗಳನ್ನು ಶೂ ರಾಕ್‌ನಲ್ಲಿಡಿ. ಬೆಡ್‌ ರೂಮಿನಲ್ಲಿ ಇಡಬೇಡಿ.

ಬೆಡ್‌ ರೂಮಿನಲ್ಲಿರುವ ಆಲ್ಮೇರಾಗಳನ್ನು ವಾರಕ್ಕೊಮ್ಮೆ ಅಗತ್ಯವಾಗಿ ಸ್ವಚ್ಛಗೊಳಿಸಿ.

ಮಕ್ಕಳ ಸಾಫ್ಟ್ ಟಾಯ್ಸ್ ಗಳನ್ನು 10-15 ದಿನಗಳಿಗೊಮ್ಮೆ ಸ್ವಚ್ಛಗೊಳಿಸಿ. ಅವನ್ನು ಟವೆಲ್‌ನ‌ಲ್ಲಿ ಸುತ್ತಿ ವಾಶಿಂಗ್‌ ಮೆಷಿನ್‌ನಲ್ಲಿ ಸ್ವಚ್ಛಗೊಳಿಸಿ.

ವಾರಕ್ಕೆ 3 ಬಾರಿ ಫ್ಲಶ್‌ ಹ್ಯಾಂಡ್‌, ಟಾಯ್ಲೆಟ್‌ ಸೀಟ್‌, ಡೋರ್‌ ಹ್ಯಾಂಡ್‌, ಲೈಟ್‌ ಸ್ವಿಚ್‌ ಇತ್ಯಾದಿಗಳನ್ನು ಆ್ಯಂಟಿ ಸೆಪ್ಟಿಕ್‌ ಲೈಪ್ಸ್ ಗಳಿಂದ ಅಗತ್ಯವಾಗಿ ಒರೆಸಿ.

ಶವರ್‌ ಹೆಡ್‌ ಮೇಲೆ ರೋಗಾಣುಗಳು ಬಹಳ ಬೇಗ ಹುಟ್ಟುತ್ತವೆ. ಅದನ್ನು 2 ನಿಮಿಷ ಹಾಟ್‌ ಸೆಟಿಂಗ್‌ನಲ್ಲಿ ನೀರಿನೊಂದಿಗೆ ಆನ್ ಮಾಡಿದರೆ ರೋಗಾಣುಗಳು ಸಾಯುತ್ತವೆ.

ಬಾಥ್‌ ರೂಮ್ನಲ್ಲಿ ನೀರು ಹೋಗುವ ಕಡೆ ಕಸ ಇರದಂತೆ ಮಾಡಿ. ಅದನ್ನು ಸ್ವಚ್ಛಗೊಳಿಸಿ 2 ಕಪ್‌ ವಿನಿಗರ್‌ ಹಾಕಿ. ವಿನಿಗರ್ ಶೇ.99ರಷ್ಟು ಬ್ಯಾಕ್ಟೀರಿಯಾಗಳನ್ನು ಸಾಯಿಸುತ್ತದೆ.

ಕಿಚನ್

ಅರಿಜೋನಾ ವಿಶ್ವವಿದ್ಯಾಲಯದ ಸಂಶೋಧಕರು ಅಡುಗೆಮನೆಯಲ್ಲಿ ಪಾತ್ರೆ ಸ್ವಚ್ಛಗೊಳಿಸುವ ಸ್ಪಂಜ್‌, ಪಾತ್ರೆಗಳನ್ನು ಒರೆಸುವ ಬಟ್ಟೆ ಮತ್ತು ಸಿಂಕ್‌ನಲ್ಲಿ ಅತ್ಯಂತ ಹೆಚ್ಚು ರೋಗಾಣುಗಳಿರುವುದನ್ನು ಕಂಡುಹಿಡಿದರು. ಅದಲ್ಲದೆ ಕಸದ ಡಬ್ಬಿ, ರೆಫ್ರಿಜರೇಟರ್‌ಹಾಗೂ ಡಿಶ್‌ ರಾಕ್‌ ಇತ್ಯಾದಿಗಳ ಮೇಲೂ ರೋಗಾಣುಗಳು ಇರುತ್ತವೆ. ನಮ್ಮ ಪಾತ್ರೆ ಸ್ವಚ್ಛವಾಗಿದೆ,  ಒರೆಸುವ ಬಟ್ಟೆ ಸ್ವಚ್ಛವಾಗಿದೆ ಎಂದು ಅನಿಸುತ್ತದೆ. ಆದರೆ ಅದು ಸರಿಯಲ್ಲ. ಅದನ್ನು ರೋಗಾಣು ರಹಿತವಾಗಿ ಮಾಡಬೇಕಾದರೆ ಅಡುಗೆಮನೆಯ ಸ್ವಚ್ಛತೆಯನ್ನೂ ಸರಿಯಾಗಿ ಮಾಡಬೇಕು.

ಚಿಕಿತ್ಸೆ

DSC_3686

ಕಿಚನ್‌ ಸ್ಲ್ಯಾಬ್‌ ಮತ್ತು ಗ್ಯಾಸ್‌ ಸ್ಟವ್ ನ್ನು ಮೊದಲು ಸೋಪು ಹಾಕಿದ ಸ್ಪಂಜಿನಿಂದ ಸ್ವಚ್ಛಗೊಳಿಸಿ. ಮತ್ತೆ 2 ಬಾರಿ ಬೇರೆ ಬಟ್ಟೆಯಿಂದ ಒರೆಸಿ. ವರ್ಕಿಂಗ್‌ ಸ್ಪೇಸ್‌ ಸ್ವಚ್ಛವಾಗಿರಲಿ.

ಕಿಚನ್‌ ಸಿಂಕ್‌ನ್ನು ಯಾವಾಗಲೂ ಸ್ವಚ್ಛವಾಗಿಡಿ. ಪಾತ್ರೆಗಳನ್ನು ತೊಳೆಯುವ ಮೊದಲು ಮತ್ತು ನಂತರ ಅದನ್ನು ವಿಮ್ ಪೌಡರ್ ನಿಂದ ಸ್ವಚ್ಛಗೊಳಿಸಿ. ಕೆಲಸದ ನಂತರ ಒರೆಸಿಡಿ.

ಸಿಂಕ್‌ನ್ನು ಜರ್ಮ್ ಫ್ರಿ ಆಗಿಡಲು ಕಾಲು ಕಪ್‌ ವಿನಿಗರ್‌ಗೆ ಸಮಪ್ರಮಾಣದ ನೀರು ಬೆರೆಸಿ ಸಿಂಕ್‌ನಲ್ಲಿ ಹರಡಿ. ಸ್ವಲ್ಪ ಹೊತ್ತಿನ ನಂತರ ಸ್ವಚ್ಛಗೊಳಿಸಿ

ಪಾತ್ರೆಗಳನ್ನು ಒರೆಸಲು ಡಸ್ಟರ್‌, ಕೈಗಳನ್ನು ಒರೆಸಲು ಟವೆಲ್ ‌ಮತ್ತು ಸ್ಲ್ಯಾಬ್‌ ಒರೆಸಲು ನ್ಯಾಪ್‌ಕಿನ್‌ಗಳನ್ನು ಬೇರೆ ಬೇರೆ ಇಡಿ. ದಿನ ಬೆಳಗ್ಗೆ ಮತ್ತು ರಾತ್ರಿ ಬೇರೆ ಬೇರೆ ನ್ಯಾಪ್‌ ಕಿನ್‌ಗಳನ್ನು ಉಪಯೋಗಿಸಿ.

ಪಾತ್ರೆ ತೊಳೆಯುವ ಸ್ಕ್ರಬ್‌ನ್ನು ಕೆಲಸದ ನಂತರ `ಆ್ಯಂಟಿ ಸೆಫ್ಟಿಕ್‌’ ಲೋಶನ್‌ನಿಂದ ರಿಸ್ಕ್ ಮಾಡಿ ಒಣಗಿಸಿ.

ಕಿಚನ್‌ ಎಕ್ಸಾಸ್ಟ್ ಫ್ಯಾನ್‌, ಕ್ಯಾಬಿನೆಟ್‌ ಹ್ಯಾಂಡ್‌, ಚಿಮಣಿ ಇತ್ಯಾದಿಗಳನ್ನೂ ವಾರಕ್ಕೊಮ್ಮೆ ಅಗತ್ಯವಾಗಿ ಸ್ವಚ್ಛಗೊಳಿಸಿ.

ಫ್ರಿಜ್‌ನ್ನೂ ಸಹ ವಾರಕ್ಕೊಮ್ಮೆ ಅಗತ್ಯವಾಗಿ ಸ್ವಚ್ಛಗೊಳಿಸಿ. ಅದಕ್ಕಾಗಿ ಮೆಡಿಕೇಟೆಡ್‌ ಡಿಟರ್ಜೆಂಟ್‌ ಉಪಯೋಗಿಸಿ.

ಕಿಚನ್‌ನ ಕಿಟಕಿಗಳು ಮತ್ತು ಜಾಲರಿಗಳನ್ನು ಸ್ವಚ್ಛಗೊಳಿಸಲು ಮೂರನೇ ಒಂದು ಕಪ್‌ ವಿನಿಗರ್‌ನಲ್ಲಿ ಕಾಲು ಕಪ್‌ ಆಲ್ಕೋಹಾಲ್ ಬೆರೆಸಿ ಮತ್ತು ಮಿಶ್ರಣದಿಂದ ಕಿಟಕಿಗಳು ಮತ್ತು ಜಾಲರಿಗಳನ್ನು ಸ್ವಚ್ಛಗೊಳಿಸಿ.

ಕಿಚನ್‌ನ ಡಸ್ಟ್ ಬಿನ್‌ನಲ್ಲಿ ವಿಮ್ ಪೌಡರ್‌ ಮತ್ತು ವಿನಿಗರ್‌ ಹಾಕಿ ವಾರಕ್ಕೊಮ್ಮೆ ಉಜ್ಜಿ ತೊಳೆದು ಒಣಗಿಸಿ. ಕಸ ಹಾಕುವ ಮೊದಲು ಅದರಲ್ಲಿ ಡಸ್ಟ್ ಬಿನ್‌ನ ಕವರ್‌ ಹಾಕಿ.

ಕಿಚನ್‌ ನಲ್ಲಿಗಳನ್ನು ದಿನ ಸ್ವಚ್ಛಗೊಳಿಸಿ. ಅದರಲ್ಲಿ ಕಸ ಇರದಂತೆ ಮಾಡಿ. ಆಗ ಬ್ಯಾಕ್ಟೀರಿಯಾ ಉತ್ಪನ್ನವಾಗುವುದಿಲ್ಲ.

ತರಕಾರಿ ಕತ್ತರಿಸುವ ಬೋರ್ಡ್‌ನ್ನು ಸ್ವಚ್ಛಗೊಳಿಸಿ. ಏಕೆಂದರೆ ಅತ್ಯಂತ ಹೆಚ್ಚು ಬ್ಯಾಕ್ಟೀರಿಯ ಅಲ್ಲಿಯೇ ಉತ್ಪತ್ತಿಯಾಗುತ್ತವೆ.

ವೆಜ್‌ ಮತ್ತು ನಾನ್‌ ವೆಜ್‌ ಕತ್ತರಿಸಲು ಬೇರೆ ಬೇರೆ ಚಾಪಿಂಗ್‌ ಬೋರ್ಡ್‌ ಉಪಯೋಗಿಸಿ.

ಇತರ ಎಚ್ಚರಿಕೆಗಳು

DSC_3857

ವಾಶಿಂಗ್‌ ಮೆಷಿನ್‌ನಲ್ಲೂ ಬಹಳ ಬೇಗ ಬ್ಯಾಕ್ಟೀರಿಯಾ ಹುಟ್ಟುತ್ತವೆ. ಆದ್ದರಿಂದ ಬಟ್ಟೆ ಒಗೆದ ನಂತರ ವಾಶ್‌ ಡ್ರಮ್ ನ್ನು ಡಿಸ್‌ ಇನ್‌ಫೆಕ್ಟೆಂಟ್‌ನಿಂದ ಒರೆಸಿ.

ರಿಮೋಟ್‌ ಕಂಟ್ರೋಲ್‌, ಟೆಲಿಫೋನ್‌ ರಿಸೀವರ್‌, ಫ್ರಿಜ್‌ನ ಹ್ಯಾಂಡ್‌, ಮೊಬೈಲ್‌, ಡೋರ್‌ ಬೆಲ್ ‌ಇತ್ಯಾದಿಗಳನ್ನು ದಿನ ಆ್ಯಂಟಿ ಬ್ಯಾಕ್ಟೀರಿಯಲ್ ವೈಪ್ಸ್ ನಿಂದ ಒರೆಸಿ.

ಮೊಬೈಲ್‌, ಕಂಪ್ಯೂಟರ್‌ ಬೋರ್ಡ್‌ನ್ನು  ದಿನಕ್ಕೆ 4-5 ಬಾರಿ ಸ್ವಚ್ಛಗೊಳಿಸಿ.

ಚಿಕಿತ್ಸೆ

ಹೊರಗಿನಿಂದ ಬಂದ ನಂತರ, ಕೆಮ್ಮಿದ ಸೀನಿದ ನಂತರ, ಟಾಯ್ಲೆಟ್‌ನಿಂದ ಬಂದ ಬಳಿಕ, ಸಾಕು ಪ್ರಾಣಿಗಳನ್ನು ಮುಟ್ಟಿದ ನಂತರ ಮಕ್ಕಳಿಗೆ ತಿನ್ನಿಸುವ ಹಾಗೂ ನೀವು ತಿನ್ನುವ ಮೊದಲು ಕೈಗಳನ್ನು ಅಗತ್ಯವಾಗಿ ತೊಳೆಯಿರಿ.

ಕೈಗಳನ್ನು ತೊಳೆಯಲು ಮೆಡಿಕೇಟೆಡ್‌ ಲಿಕ್ವಿಡ್‌ ಸೋಪ್‌ ಅತ್ಯಂತ ಉಪಯುಕ್ತ.

ಸ್ನಾನ ಮಾಡುವ ನೀರಿಗೆ ಕೆಲವು ಹನಿ ಆ್ಯಂಟಿ ಬ್ಯಾಕ್ಟೀರಿಯ್‌ ಲೋಶನ್‌ ಅಗತ್ಯವಾಗಿ ಹಾಕಿ.

ಹೆಚ್ಚು ಬೆವರುತ್ತಿದ್ದರೆ ಅಂಡರ್‌ ಆರ್ಮ್ಸ್ ನ ಸ್ವಚ್ಛತೆ ಬಗ್ಗೆ ಗಮನಿಸಿ. ಆಗಾಗ್ಗೆ ಪ್ಯೂಬಿಕ್‌ ಏರಿಯಾದ ಕೂದಲಿನ ಸ್ವಚ್ಛತೆಯನ್ನೂ ಮಾಡಿ.

ಸ್ನಾನ ಮಾಡಲು ನಿಮ್ಮದೇ ಬೇರೆ ಸೋಪ್‌ ಇಟ್ಟುಕೊಳ್ಳಿ. ಉಗುರುಗಳನ್ನು ಆಗಾಗ್ಗೆ ಅಗತ್ಯವಾಗಿ ಕತ್ತರಿಸಿ. ಕೊಳೆಯಾದ ಉಗುರುಗಳಿಂದಲೂ ಅಸ್ವಸ್ಥರಾಗುವ ಸಂಭಾವ್ಯತೆ ಹೆಚ್ಚಾಗಿರುತ್ತದೆ.

ಪರ್ಸನಲ್ ಹೈಜೀನ್

DSC_3797

ಯಾವಾಗಲೂ ಸ್ವಚ್ಛವಾದ ಹಾಗೂ ಸೋಂಕುರಹಿತ ಬಟ್ಟೆಗಳನ್ನೇ ಧರಿಸಿ.

ಇನ್ನೊಬ್ಬರ ಟವೆಲ್‌, ಬಟ್ಟೆಗಳು, ಕನ್ನಡಕ, ಬಾಚಣಿಗೆ, ಲಿಪ್‌ಸ್ಟಿಕ್‌ ಇತ್ಯಾದಿ ಉಪಯೋಗಿಸಬೇಡಿ.

ಮೇಕಪ್‌ ಕಿಟ್‌ನಲ್ಲೂ ಜರ್ಮ್ಸ್ ಇರುತ್ತವೆ. ಆದ್ದರಿಂದ ಮೇಕಪ್‌ ಬ್ರಶ್‌, ಪಫ್‌, ಐ ಬ್ರೋ ಪೆನ್ಸಿಲ್ ‌ಇತ್ಯಾದಿಗಳನ್ನು ಉಪಯೋಗಿಸುವ ಮೊದಲು ಆ್ಯಂಟಿ ಸೆಪ್ಟಿಕ್‌ ವೈಪ್ಸ್ ನಿಂದ ಒರೆಸಿ.

ಮಹಿಳೆಯರ ಪರ್ಸ್‌ನ ಹ್ಯಾಂಡ್‌ನಲ್ಲೂ ಟಾಯ್ಲೆಟ್‌ ಸೀಟ್‌ನಲ್ಲಿರುವಷ್ಟು ಜರ್ಮ್ಸ್ ಇರುತ್ತವೆ. ಇತ್ತೀಚೆಗೆ ನಡೆದ ಸಮೀಕ್ಷೆಯಲ್ಲಿ ಇದು ತಿಳಿಯಿತು. ಆದ್ದರಿಂದ ನಿಮ್ಮ ಪರ್ಸ್‌ನ್ನು ನಿಯಮಿತವಾಗಿ ಸ್ವಚಗೊಳಿಸಿ.

– ನಿರ್ಮಲಾ ಪ್ರಸಾದ್‌

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ