ಮುಟ್ಟಿನ ಅಥವಾ ಪೀರಿಯಡ್ಸ್ ಹುಡುಗಿಯರಲ್ಲಿ ಉಂಟಾಗುವ ಒಂದು ಸಾಮಾನ್ಯ ಹಾಗೂ ನೈಸರ್ಗಿಕ ದೈಹಿಕ ಪ್ರಕ್ರಿಯೆಯಾಗಿದೆ. 12-15 ವರ್ಷಗಳ ನಡುವೆ ಹುಡುಗಿಯರ ಅಂಡಕೋಶದಲ್ಲಿ ಪ್ರತಿ ತಿಂಗಳು ಒಂದು ಅಂಡ ಬೆಳವಣಿಗೆಯಾಗುವ ಪ್ರಕ್ರಿಯೆ ಆರಂಭವಾಗುತ್ತದೆ. ಅದಕ್ಕೆ ಈಸ್ಟ್ರೋಜೆನ್‌ ಹಾಗೂ ಪ್ರೊಜೆಸ್ಟ್ರಾನ್‌ ಹಾರ್ಮೋನುಗಳು ಕಾರಣವಾಗಿವೆ.

ಇದು ಒಂದು ರೀತಿಯ ವಿಶಿಷ್ಟ ದೈಹಿಕ ಬದಲಾವಣೆಯಾಗಿದೆ. ಆದರೆ ಗಮನಹರಿಸಬೇಕಾದ ಸಂಗತಿಯೆಂದರೆ, ಮುಟ್ಟಿನ ದಿನಗಳಲ್ಲಿ ವೈಯಕ್ತಿಕ ಸ್ವಚ್ಛತೆಯ ಬಗ್ಗೆ ಕಾಳಜಿ ವಹಿಸದೇ ಇರುವುದರಿಂದ ಹುಡುಗಿಯರು ಹಾಗೂ ಮಹಿಳೆಯರು ಅನೇಕ ಬಗೆಯ ರೋಗಗಳಿಗೆ ತುತ್ತಾಗಬೇಕಾಗುತ್ತದೆ. ಸೂಕ್ತ ಸ್ವಚ್ಛತೆ ಕಾಪಾಡಿಕೊಳ್ಳದೇ ಇದ್ದರೆ ಸೋಂಕಿನ ಸಾಧ್ಯತೆ ಇರುತ್ತದೆ. ಅದರಿಂದ ಜ್ವರ, ಅನಿಯಮಿತ ಮುಟ್ಟು, ಅತಿಯಾದ ರಕ್ತಸ್ರಾವ ಉಂಟಾಗುವುದರ ಜೊತೆ ಜೊತೆಗೆ ಗರ್ಭ ಧರಿಸಲು ತೊಂದರೆ ಉಂಟಾಗಬಹುದು.

ಮುಟ್ಟಿನ ದಿನಗಳಲ್ಲಿ ಸ್ವಚ್ಛತೆಯ ಬಗ್ಗೆ ಗಮನಹರಿಸದೆ ಇದ್ದರೆ ಸೋಂಕಿನ ಹೊರತಾಗಿ ಹಲವು ಗಂಭೀರ ರೋಗಗಳು ತಗಲುವ ಅಪಾಯ ಇರುತ್ತದೆ.

ಯುಟಿಐ ಸಮಸ್ಯೆ : ಒಂದು ವೇಳೆ ಯುರಿಥ್ರಾ ಅಂದರೆ ಮೂತ್ರ ಮಾರ್ಗದಲ್ಲಿ ಬ್ಯಾಕ್ಟೀರಿಯಾದ ಪ್ರವೇಶ ಆಗಿಬಿಟ್ಟರೆ, ಯೂರಿನರಿ ಟ್ರ್ಯಾಕ್ಟ್ ಇನ್‌ಫೆಕ್ಷನ್‌ ಅಂದರೆ ಯುಟಿಐನ ಅಪಾಯ ಇದ್ದೇ ಇರುತ್ತದೆ. ಇದೊಂದು ರೀತಿಯ ಅಪಾಯಕಾರಿ ರೋಗ. ಏಕೆಂದರೆ ಇದಕ್ಕೆ ಸಕಾಲಕ್ಕೆ ಚಿಕಿತ್ಸೆ ಪಡೆಯದೇ ಇದ್ದರೆ ಅದು ಕಿಡ್ನಿಗೂ ಮಾರಕ ಪರಿಣಾಮ ಬೀರಬಹುದು.

ವಜೈನಾಗೆ ಹಾನಿ : ಹಾನಿಕಾರಕ ಬ್ಯಾಕ್ಟೀರಿಯಾಗಳ ಉಪಟಳ ಜಾಸ್ತಿ ಆಗತೊಡಗಿದರೆ ಅದರಿಂದ ಜೆನಿಟ್‌ಟ್ರ್ಯಾಕ್‌ ಅಂದರೆ ಜನನಾಂಗ ಮಾರ್ಗದಲ್ಲಿ ಅದರ ಅಪಾಯ ಉಂಟಾಗುವ ಸಾಧ್ಯತೆ ಇರುತ್ತದೆ. ಹಾಗಾಗ ಅದು ಜೈನಾಗೂ ಹಾನಿಯನ್ನುಂಟು ಮಾಡುವ ಸಾಧ್ಯತೆಯನ್ನು ಅಲ್ಲಗಳೆಯಲಾಗುದಿಲ್ಲ.

ಬಂಜೆತನದ ಅಪಾಯ : ಮುಟ್ಟಿನ ದಿನಗಳಲ್ಲಿ ಸ್ವಚ್ಛತೆ ಕಾಪಾಡಿಕೊಳ್ಳದೇ ಇರುವುದರಿಂದ ಮಹಿಳೆಯರಲ್ಲಿ ಬಂಜೆತನದ ಸಾಧ್ಯತೆ ಕೂಡ ಇರಬಹುದು.

ಸರ್ವೈಕಲ್ ಕ್ಯಾನ್ಸರ್‌ನ ಅಪಾಯ : ಯುಟಿಐ ಹಾಗೂ ರೀಪ್ರೊಡೆಕ್ಟಿವ್ ‌ಟ್ರ್ಯಾಕ್‌ ಇನ್‌ಫೆಕ್ಷನ್‌ನ ಕಾರಣದಿಂದ ಸರ್ವೈಕಲ್ ಕ್ಯಾನ್ಸರ್‌ನ ಅಪಾಯ ಕೂಡ ಹಲವು ಪಟ್ಟು ಹೆಚ್ಚುತ್ತದೆ.

ಮುಟ್ಟಿನ ದಿನಗಳಲ್ಲಿನ ತೊಂದರೆಗಳ ಬಗ್ಗೆ ನಾವು ಯಾವಾಗಲೂ ಹೇಳುತ್ತಲೇ ಇರುತ್ತೇವೆ. ಆದರೆ ಆ ದಿನಗಳಲ್ಲಿ ಯಾವ ರೀತಿ ಇರಬೇಕು, ಹೇಗಿರಬೇಕು ಎನ್ನುವುದರ ಬಗ್ಗೆ ಹೆಚ್ಚು ಪ್ರಸ್ತಾಪ ಮಾಡಲು ಹೋಗುವುದೇ ಇಲ್ಲ. ಈಗಲೂ ಇದು ಎಂತಹ ಒಂದು ವಿಷಯವೆಂದರೆ, ಅದರ ಬಗ್ಗೆ ಮಾತುಕತೆ ನಡೆಸಲು ಜನರು ಹಿಂದೇಟು ಹಾಕುತ್ತಾರೆ.

ಕೆಲವು ಸಂಗತಿಗಳ ಬಗ್ಗೆ ಗಮನವಿರಲಿ

ಸೂಕ್ತ ಸ್ಯಾನಿಟರಿ ಪ್ಯಾಡ್‌ನ ಆಯ್ಕೆ ಮಾಡುವುದು ಅತ್ಯಂತ ಅವಶ್ಯ. ಬಳಸುವ ಸ್ಯಾನಿಟರಿ ಪ್ಯಾಡ್‌ ಹೇಗಿರಬೇಕೆಂದರೆ, ಅದು ರಕ್ತ ಸ್ರಾವದ ಹರಿವನ್ನು ಬೇಗ ಹಾಗೂ ಸುಲಭವಾಗಿ ಹೀರಿಕೊಳ್ಳಬೇಕು. ಒಂದೇ ಬ್ರ್ಯಾಂಡ್‌ನ ಸ್ಯಾನಿಟರಿ ನ್ಯಾಪ್‌ಕಿನ್‌ನ್ನು ಬಳಸಿ. ಮೇಲಿಂದ ಮೇಲೆ ಬ್ರ್ಯಾಂಡ್‌ನ್ನು ಬದಲಿಸಬೇಡಿ.

ಮುಟ್ಟಿನ ಆರಂಭಿಕ ದಿನಗಳಲ್ಲಿ ಹೆಚ್ಚು ರಕ್ತಸ್ರಾವ ಉಂಟಾಗುತ್ತದೆ. ಹಾಗಾಗಿ ಪ್ರತಿ 4-5 ಗಂಟೆಗಳಿಗೊಮ್ಮೆ ಸ್ಯಾನಿಟರಿ ಪ್ಯಾಡ್‌ನ್ನು ಅವಶ್ಯ ಬದಲಿಸಿ. ಒಂದು ವೇಳೆ ಹುಡುಗಿಯರು ಟ್ಯಾಂಪೋನ್‌ನ್ನು ಬಳಸುತ್ತಿದ್ದರೆ, ಅದನ್ನು ಅವರು ಪ್ರತಿ 2 ತಾಸಿಗೊಮ್ಮೆ ಬದಲಿಸಬೇಕು.

ಮುಟ್ಟಿನ ದಿನಗಳಲ್ಲಿ ಉಂಟಾಗುವ ದುರ್ವಾಸನೆಯಿಂದ ದೂರ ಇರಲು ಹುಡುಗಿಯರು ಹಾಗೂ ಮಹಿಳೆಯರು ತಮ್ಮ ಗುಪ್ತಾಂಗದ ಸ್ವಚ್ಛತೆಯ ಬಗ್ಗೆ ಹೆಚ್ಚಿನ ಕಾಳಜಿ ವಹಿಸಬೇಕು.

ಮುಟ್ಟಿನ ದಿನಗಳಲ್ಲಿ ಮಹಿಳೆಯರಿಗೆ ದಣಿವು ಉಂಟಾಗುತ್ತದೆ ಹಾಗೂ ಸೊಂಟದ ನೋವು ವಿಪರೀತವಾಗಿರುತ್ತದೆ. ಮುಟ್ಟಿನ ದಿನಗಳಲ್ಲಿ ಕೆಲವು ಮಹಿಳೆಯರು ಸಿಡಿಮಿಡಿ ಪ್ರವೃತ್ತಿಯವರು ಆಗುತ್ತಾರೆ. ಇಂತಹ ಸ್ಥಿತಿಯಿಂದ ಮುಕ್ತಿ ಕಂಡುಕೊಳ್ಳಲು ಬಿಸಿ ನೀರಿನಿಂದ ಸ್ನಾನ ಮಾಡಿ. ಸ್ನಾನದಿಂದ ಕೇವಲ ದುರ್ಗಂಧವಷ್ಟೇ ಹೋಗುವುದಿಲ್ಲ, ತಾಜಾತನದ ಅನುಭವ ಕೂಡ ಉಂಟಾಗುತ್ತದೆ.

ಪೀರಿಯಡ್ಸ್ ಆರಂಭದ 2-3 ದಿನಗಳಲ್ಲಿ ವೇಗದ ಡ್ಯಾನ್ಸ್ ಅಥವಾ ಎಕ್ಸರ್‌ಸೈಜ್‌ ಮಾಡಬೇಡಿ. ಪೀರಿಯಡ್ಸ್ ಸಂದರ್ಭದಲ್ಲಿ ದೇಹದಲ್ಲಿ ದಣಿವು ಹಾಗೂ ನೋವು ಉಂಟಾಗುತ್ತದೆ. ಇಂತಹ ಸಂದರ್ಭದಲ್ಲಿ ಲೈಂಗಿಕ ಚಟುವಟಿಕೆ ನಡೆಸಬೇಡಿ.

ಉಪಯೋಗಿಸಿದ ಸ್ಯಾನಿಟರಿ ಪ್ಯಾಡ್‌ನ್ನು ಸರಿಯಾಗಿ ಡಿಸ್‌ಪೋಸ್‌ ಮಾಡುವುದು ಅತ್ಯವಶ್ಯ. ಡಿಸ್‌ಪೋಸ್‌ ಮಾಡುವ ಮೊದಲು ಅದನ್ನು ಪೇಪರ್‌ ಹಾಳೆಯಲ್ಲಿ ಸುತ್ತಿ.

ನಿಮಗೆ ಪೀರಿಯಡ್ಸ್ ಬರುವ 5 ದಿನ ಮೊದಲು ಹಾಗೂ ನಂತರ ನೋವು ಬಂದರೆ ವೈದ್ಯರ ಸಲಹೆಯನ್ನು ಅವಶ್ಯವಾಗಿ ಪಡೆಯಿರಿ.

ಸ್ವಚ್ಛತೆ ಹಾಗೂ ಆರೋಗ್ಯವನ್ನು ಕಾಯ್ದುಕೊಂಡು ಹೋಗಲು ಟಿಶ್ಯೂ ಪೇಪರ್‌, ಹೆಡ್‌ ಸ್ಯಾನಿಟೈಸರ್‌, ಟವೆಲ್‌, ಆ್ಯಂಟಿಸೆಪ್ಟಿಕ್ ಔಷಧಿ ನೀರಿನ ಬಾಟಲ್ ಹಾಗೂ ಆಹಾರದ ಪೌಷ್ಟಿಕ ಪದಾರ್ಥಗಳನ್ನು ಜೊತೆಗಿಟ್ಟುಕೊಳ್ಳಿ.

ಊಟ ತಿಂಡಿಯ ಬಗ್ಗೆ ಗಮನವಿರಲಿ

ಈ ಅವಧಿಯಲ್ಲಿ ತೀವ್ರ ನೋವು ಅನಿಸುತ್ತಿದ್ದರೆ, ಡಯೆಟ್‌ನಲ್ಲಿ ಈ ಸಂಗತಿಗಳನ್ನು ಗಮನದಲ್ಲಿಟ್ಟುಕೊಳ್ಳಿ.

ಸಾಕಷ್ಟು ನೀರು ಕುಡಿಯಿರಿ : ದಿನಕ್ಕೆ 7-8 ಗ್ಲಾಸ್‌ ನೀರು ಕುಡಿಯುವುದರಿಂದ ದೇಹ ಹೈಡ್ರೇಟ್‌ ಆಗಿರುತ್ತದೆ. ನೋವು ಹಾಗೂ ತೊಂದರೆಗಳಿಂದ ಅಂತಹ ಸಂದರ್ಭದಲ್ಲಿ ಇದು ಉಪಯುಕ್ತ.

ಆರೋಗ್ಯಕರ ಆಹಾರ ಸೇವಿಸಿ : ಗ್ರೀನ್‌ ವೆಜಿಟೆಬಲ್ಸ್, ಗ್ರೀನ್‌ ಟೀ, ಬಾಳೆಹಣ್ಣು ಹಾಗೂ ಡ್ರೈಫ್ರೂಟ್ಸ್ ಸೇವಿಸಿ.

ಜಂಕ್‌ ಫುಡ್‌ನಿಂದ ದೂರ ಇರಿ : ಚಹಾ, ಕಾಫಿ, ಕೂ್ಲ ಡ್ರಿಂಕ್ಸ್ ಎಣ್ಣೆ ಪದಾರ್ಥಗಳು ಹಾಗೂ ಫ್ಯಾಟಿ ಫುಡ್‌ಗಳು ಪೀರಿಯಡ್ಸ್ ತೊಂದರೆಯನ್ನು ಹೆಚ್ಚಿಸುತ್ತವೆ. ಹೀಗಾಗಿ ಅಂತಹ ಪದಾರ್ಥಗಳನ್ನು ದೂರ ಇಡಿ.

ಎಕ್ಸರ್‌ಸೈಜ್‌ ಮಾಡಿ : ವೈದ್ಯರ ಸಲಹೆಯ ಮೇರೆಗೆ ಸಾಧಾರಣ ವ್ಯಾಯಾಮ ಅನುಸರಿಸಿ. ಅದು ಪೀರಿಯಡ್ಸ್ ಕ್ರ್ಯಾಂಪ್‌ನಿಂದ ನಿರಾಳತೆ ದೊರಕಿಸಿ ಕೊಡುತ್ತದೆ.

ವಿಶ್ರಾಂತಿ ಪಡೆಯಿರಿ : ಪೀರಿಯಡ್ಸ್ ನ ನೋವಿನಿಂದ ಪಾರಾಗಲು ವಿಶ್ರಾಂತಿ ಪಡೆಯಿರಿ. ಒತ್ತಡದಿಂದ ದೂರ ಇರಿ 7-8 ಗಂಟೆಗಳ ಪರಿಪೂರ್ಣ ನಿದ್ರೆ ಅತ್ಯವಶ್ಯಕ.

– ಸಂಧ್ಯಾ 

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ