– ಡಾ. ಅಂಬಿಕಾ 

ಕಂಗಳು ನಮ್ಮ ದೇಹದ ಬಹು ಅತ್ಯಗತ್ಯ ಹಾಗೂ ನಾಜೂಕು ಅಂಗಗಳು. ಇದರ ಕುರಿತಾಗಿ ಸ್ವಲ್ಪ ನಿರ್ಲಕ್ಷ್ಯ ವಹಿಸಿದರೂ, ಸಮಸ್ಯೆ ಗಂಭೀರ ರೂಪ ತಾಳುತ್ತದೆ. ಕಂಗಳನ್ನು ಆದಷ್ಟೂ ಜಾಗೃತವಾಗಿ ನೋಡಿಕೊಳ್ಳಬೇಕು. ಸಣ್ಣಪುಟ್ಟ ಸಮಸ್ಯೆಯಾಗಿ ಆರಂಭಿಸಿದ್ದು ಮುಂದೆ ಗಂಭೀರ ಕಾಯಿಲೆ ಆಗಬಹುದು, ಕಂಗಳ ಜ್ಯೋತಿ ಹೋಗಿ ಕುರುಡಾಗಬಹುದು. ಕಂಗಳ ಒಳಗೆ ಅನೇಕ ಸಣ್ಣ ಸಣ್ಣ ರಕ್ತವಾಹಿನಿಗಳಿರುತ್ತವೆ. ಅವಕ್ಕೆ ಹಾನಿ ಆಗುವುದರಿಂದ ಎಷ್ಟೋ ಸಲ ರಕ್ತ ಹೋಗುತ್ತದೆ, ಕಂಗಳು ಬಲು ಕೆಂಪಾಗುತ್ತವೆ.

ಹಾಗೆ ನೋಡಿದರೆ ಕಂಗಳು ಕೆಂಪಾಗಲು ಅನೇಕ ಕಾರಣಗಳಿವೆ. ಕಂಜಕ್ಟಿವೈಟಿಸ್‌. ಆ್ಯಕ್ಯೂಟ್‌ ಐರೈಡೋಸಾಕ್ಲೈಟಿಸ್‌, ಆ್ಯಕ್ಯೂಟ್‌ ಕಂಜಸ್ಟಿವ್‌ ಗ್ಲಾಕೋಮಾ, ಸ್ಕ್ಲೇರೈಟಿಸ್‌ ರಿಫ್ರಾಕ್ಟಿವ್‌ ಎರರ್ಸ್‌, ಕಂಗಳಿಗೆ ಹೊರಗಿನಿಂದ ಪೆಟ್ಟು, ಧೂಳು ಇನ್ನಿತರ ಕಣಗಳ ಬೀಳುವಿಕೆ, ಕೀಟ ಬಾಧೆ ಇತ್ಯಾದಿ.

puffy-eyes

ಕಂಗಳಲ್ಲಿ ಏನಾದರೂ ಬಿದ್ದಾಗ……

ಕಂಗಳಿಗೆ ಹೊರಗಿನ ವಸ್ತುಗಳೇನಾದರೂ ಬಿದ್ದಾಗ, ತಕ್ಷಣ ಅವನ್ನು ಜೋರಾಗಿ ಉಜ್ಜಬೇಡಿ. ಎಲ್ಲಕ್ಕೂ ಮೊದಲು ತಣ್ಣೀರಿನಿಂದ ಚೆನ್ನಾಗಿ ತೊಳೆಯಿರಿ. ಏನಾದರೂ ಸಣ್ಣ ಚೂರು ಬಿದ್ದಿರುವುದು ಗೊತ್ತಾದಾಗ, ಹತ್ತಿ ಅಥವಾ ಕಾಟನ್‌ ಕರ್ಚೀಫ್‌ ತುದಿಯಿಂದ ಅದನ್ನು ಎಚ್ಚರಿಕೆಯಿಂದ ಹೊರಗೆ ತೆಗೆದುಕೊಳ್ಳಿ. ಅದಾದ ಮೇಲೂ ತೊಂದರೆ ಎನಿಸಿದರೆ, ತಕ್ಷಣ ನೇತ್ರತಜ್ಞರನ್ನು ಸಂಪರ್ಕಿಸಿ. ಕಣ್ಣಿಗೆ ಬಿದ್ದ ಸಣ್ಣ ಪೆಟ್ಟನ್ನೂ ನಿರ್ಲಕ್ಷಿಸಬಾರದು. ಆದಷ್ಟು ಬೇಗ ಅದಕ್ಕೆ ಚಿಕಿತ್ಸೆ ಕೊಡಿಸಿ.

ಕಂಗಳ ಸಂರಕ್ಷಣೆ

ಕಂಗಳಿಗೆ ಸೋಂಕು (ಐ ಇನ್‌ಫೆಕ್ಷನ್‌) ತಗುಲಿದ ವ್ಯಕ್ತಿಯ ಸಂಪರ್ಕವನ್ನು ತಪ್ಪಿಸಿ. ಅಂಥವರ ಕೈ ಕುಲುಕಬೇಡಿ, ಟವೆಲ್‌, ಕರ್ಚೀಫ್‌ ಇತ್ಯಾದಿ ಬಳಸಬೇಡಿ.

ಹೆಚ್ಚು ಧೂಳು ಮಣ್ಣು ಇರುವಂಥ ಕಡೆ ಕಣ್ಣಿಗೆ ಸನ್‌ಗ್ಲಾಸಸ್‌ ಧರಿಸಿ. ಸ್ವಿಮಿಂಗ್‌ ಪೂಲ್ ಅಥವಾ ಸಾರ್ವಜನಿಕ ಸ್ಥಳಗಳಲ್ಲಿ ಅನಿವಾರ್ಯವವಾಗಿ ಸ್ನಾನ ಮಾಡಬೇಕಾಗಿ ಬಂದಾಗ, ನಂತರ ಶುದ್ಧ ತಣ್ಣೀರಿನಿಂದ ಕಂಗಳನ್ನು ಚೆನ್ನಾಗಿ ತೊಳೆಯಿರಿ. ಯಾವ ಕಾಲವೇ ಇರಲಿ, ಪ್ರತಿದಿನ 2-3 ಸಲ ಕಂಗಳನ್ನು ಚೆನ್ನಾಗಿ ತೊಳೆದುಕೊಳ್ಳಿ. ಮಲಗಿ ಓದುವ, ಟಿ.ವಿ. ನೋಡುವ ಅಭ್ಯಾಸ ಬಿಟ್ಟುಬಿಡಿ. ಸೂರ್ಯರಶ್ಮಿ ಅಥವಾ ಪ್ರಖರ ಬೆಳಕನ್ನು ನೇರ ದಿಟ್ಟಿಸಲು ಹೋಗಲೇಬೇಡಿ. ಇದರಿಂದ ಕಂಗಳಿಗೆ ಹಾನಿ ತಪ್ಪಿದ್ದಲ್ಲ.

health

ಕಂಗಳ ಸುರಕ್ಷತೆಗಾಗಿ ಆಹಾರ

ಆರೋಗ್ಯಕರ ಹಾಗೂ ಸುಂದರ ಕಂಗಳಿಗಾಗಿ ನಾವು ಬಳಸುವ ಆಹಾರದ ಕಡೆ ಗಮನ ಕೊಡಬೇಕಾದುದು ಬಲು ಮುಖ್ಯ. ಯಾರು ಕತ್ತಲಲ್ಲಿ ಲೈಟ್‌ ಬಳಸಿ ಬಹಳ ಹೊತ್ತಿನವರೆಗೂ ಕೆಲಸ ಮಾಡುತ್ತಾರೋ, ಪ್ರಖರ ಅಥವಾ ಬಲು ಮಂದ ಕೃತಕ ಬೆಳಕಿನಲ್ಲಿ ಸತತ ದುಡಿಯುತ್ತಾರೋ ಅಂಥವರು ತಮ್ಮ ಕಂಗಳ ಕಡೆ ವಿಶೇಷ ಗಮನ ನೀಡಬೇಕು. ವಿಟಮಿನ್‌ ಸಿ ಕಂಗಳ ಕಾಂತಿ ಕಾಪಾಡುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಇದನ್ನು ಅಗತ್ಯವಾಗಿ ನಮ್ಮ ಆಹಾರದ ಒಂದು ಭಾಗವಾಗಿಸಿಕೊಳ್ಳಬೇಕು. ಇದಕ್ಕಾಗಿ ಹಾಲು, ಮೊಸರು, ಮೊಟ್ಟೆ, ಸೊಪ್ಪು, ಹಸಿ ತರಕಾರಿ, ಕ್ಯಾರೆಟ್‌, ಮಾವು, ಪರಂಗಿ, ಕಿತ್ತಳೆ, ಕರ್ಬೂಜಾ ಇತ್ಯಾದಿಗಳನ್ನು ಧಾರಾಳ ಸೇವಿಸಿ. ಹಾಗೆಯೇ ಕಂಗಳಿಗೆ ವಿಟಮಿನ್‌ ಎ ಕೂಡ ಅಷ್ಟೇ ಮುಖ್ಯ. ಇದನ್ನು ಬೇಳೆ, ಕಾಳು, ಬಾಳೆ, ಟೊಮೇಟೊ, ಹಸಿ ತರಕಾರಿ, ಸೊಪ್ಪುಗಳಿಂದ ಪಡೆಯಬಹುದು. ನಮ್ಮ ಸುರಕ್ಷಿತ ಕಂಗಳಿಗಾಗಿ ನಾವು ಪ್ರತಿದಿನ 10 ಸಾವಿರ ಯೂನಿಟ್‌ ವಿಟಮಿನ್‌ ಸೇವಿಸಬೇಕು.

ಕಂಗಳ ಸೌಂದರ್ಯಕ್ಕಾಗಿ ವ್ಯಾಯಾಮ

ಕೆಲಸದ ನಡುನಡುವೆ ಕಂಗಳನ್ನು ಮುಚ್ಚಿ ತೆರೆದು ಮಾಡುತ್ತಿರಿ. ಸ್ವಲ್ಪ ಹೊತ್ತು ಕಂಗಳನ್ನು ಮುಚ್ಚೇ ಇದ್ದು ನಂತರ ತೆರೆಯಿರಿ.

ತಲೆಯನ್ನು ತಿರುಗಿಸದೆ ಕಂಗಳನ್ನು ಮಾತ್ರ ಎಡಬಲದ ಕಡೆ ತಿರುಗಿಸಿ, ನಂತರ ಸಾಧ್ಯವಾದಷ್ಟೂ ದೂರದಲ್ಲಿ ದೃಷ್ಟಿ ನೆಡಬೇಕು. ಆಮೇಲೆ ನಿಧಾನವಾಗಿ ನಿಮ್ಮ ಹತ್ತಿರದ ವಸ್ತುಗಳನ್ನು ಗಮನಿಸಿ. ಕಂಗಳನ್ನು ಬಲಕ್ಕೆ ತಿರುಗಿಸಿ ಸಾಧ್ಯವಾದಷ್ಟೂ ದೂರ ನೋಡಿ. ನಂತರ ಮಧ್ಯಕ್ಕೆ ತಂದು, ಪುನಃ ಎಡಕ್ಕೆ ತಿರುಗಿಸಿ ದೂರ ನೋಡಿ.

ತಲೆಯನ್ನು ಅಲ್ಲಾಡಿಸದೆ, ಸಾಧ್ಯವಾದಷ್ಟೂ ಮೇಲ್ಭಾಗದಲ್ಲಿ ಗಮನಿಸಿ. ನಿಧಾನವಾಗಿ ದೃಷ್ಟಿ ತಗ್ಗಿಸಿ, ತಗ್ಗು ಪ್ರದೇಶಕ್ಕೆ ಹೋಗಿ ಸಾಧ್ಯವಾದಷ್ಟೂ ಆಳವಾಗಿ ನೋಡಿ.

ಕಣ್ಣಿಗೆ ಉರಿ, ಅಹಿತ ಎನಿಸಿದಾಗ ಹಸಿರಿನ ಕಡೆ ಹೋಗಿ ಗಿಡಮರಗಳನ್ನೇ 5-6 ನಿಮಿಷ ದಿಟ್ಟಿಸುತ್ತಿರಿ.

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ