ಇತ್ತೀಚೆಗೆ ನಡೆಸಿದ ಒಂದು ಸಂಶೋಧನೆಯಿಂದ ತಿಳಿದುಬಂದ ಸಂಗತಿಯೆಂದರೆ, ಇಂದಿನ ಆಧುನಿಕ ತಾಯಂದಿರಲ್ಲಿ ನವಜಾತ ಶಿಶುವಿನ ಯೋಗಕ್ಷೇಮ ಹಾಗೂ ಅದರ ಆರೋಗ್ಯದ ಕುರಿತಂತೆ ಚಿಂತೆ ಹೆಚ್ಚುತ್ತ ಹೊರಟಿದೆ. ಒಂದು ಹಂತದವರೆಗೆ ಈ ಒಂದು ಸ್ಥಿತಿಗೆ ನ್ಯೂಕ್ಲಿಯರ್‌ ಕುಟುಂಬ ವ್ಯವಸ್ಥೆ ಹಾಗೂ ಇಂಟರ್‌ನೆಟ್‌ನಲ್ಲಿ ಲಭ್ಯವಾಗುವ ಅರೆಬರೆ ಆರೋಗ್ಯ ಸೂಚನೆಗಳು ಕಾರಣ ಎಂದು ಹೇಳಬಹುದಾಗಿದೆ. ವಿದೇಶಿ ವಿವಿಯೊಂದರಲ್ಲಿ ನಡೆಸಲಾದ ಈ ಸಂಶೋಧನೆಯಲ್ಲಿ ಕಂಡುಕೊಂಡ ಸಂಗತಿಯೇನೆಂದರೆ, ಹೆಚ್ಚಿನ ತಾಯಂದಿರು ತಮ್ಮನ್ನು ತಾವು ಜವಾಬ್ದಾರಿ ಇಲ್ಲದವರು, ನಿರ್ಲಕ್ಷ್ಯದಿಂದಿರುವವರು, ಕೆಟ್ಟ ತಾಯಿ ಎಂದೆಲ್ಲ ಭಾವಿಸಿ ಅಪರಾಧಪ್ರಜ್ಞೆಯಿಂದ ಸುತ್ತುವರೆದಿರುತ್ತಾರೆ.

ಅಪರಾಧಪ್ರಜ್ಞೆ ಏಕೆ?

ಆರೋಗ್ಯ ವಿಜ್ಞಾನಿಗಳು ಕಂಡುಕೊಂಡದ್ದೇನೆಂದರೆ, ಹೊಸದಾಗಿ ತಾಯಿಯಾದವರಲ್ಲಿ ಆ್ಯಂಗ್ಸೈಟಿ ಪ್ರಮಾಣ ಸ್ವಲ್ಪ ಹೆಚ್ಚೇ ಇತ್ತು. ಶೇ.45ರಷ್ಟು ತಾಯಂದಿರಲ್ಲಿ ಅದರ ಪ್ರಮಾಣ ಹೆಚ್ಚಿಗೆ ಇತ್ತು. ಕನ್ಸಲ್ಟೆಂಟ್‌ ಸೈಕ್ರಿಯಾಟ್ರಿಸ್‌ ಡಾ. ಸಂಜಯ್‌ ಹೇಳುವುದೇನೆಂದರೆ, ಇಂದಿನ ನವ ತಾಯಂದಿರಲ್ಲಿ ತಮ್ಮ ನವಜಾತ ಶಿಶುಗಳ ಬಗ್ಗೆ ಚಿಂತೆ ಇರುವುದು ಸಾಮಾನ್ಯ ಸಂಗತಿಯೇ ಆಗಿಬಿಟ್ಟಿದೆ. ಇಂದಿನ ನ್ಯೂಕ್ಲಿಯರ್‌ ಅಂದರೆ ವಿಭಕ್ತ ಕುಟುಂಬಗಳಲ್ಲಿ ಅನುಭವಿ ಅತ್ತೆಯಂದಿರು ಇರುವುದೇ ಇಲ್ಲ. ಹೀಗಾಗಿ ಓದುಬರಹ ಬಲ್ಲ ಆಧುನಿಕ ಸೊಸೆಯಂದಿರು ಮಗುವಿನ ಕುರಿತಾದ ಪ್ರತಿಯೊಂದು ಜಿಜ್ಞಾಸೆಗೂ ಇಂಟರ್‌ನೆಟ್‌ನಲ್ಲಿಯೇ ಪರಿಹಾರ ಹುಡುಕುತ್ತಾರೆ. ಅದರಲ್ಲಿ ಎಷ್ಟೊಂದು ಸಂಗತಿಗಳನ್ನು ಉಲ್ಲೇಖಿಸಲಾಗಿರುತ್ತದೆ ಎಂದರೆ, ಅವನ್ನು ಓದಿ ಅವರು ಗೊಂದಲಕ್ಕೊಳಗಾಗುತ್ತಾರೆ. ಒಂದಿಷ್ಟು ಮಟ್ಟಿಗೆ ಅವರು ಹೆದರಿಬಿಡುತ್ತಾರೆ. ಅವರಿಗೆ ಕ್ಷಣಕ್ಷಣಕ್ಕೂ ಒಂದು ಬಗೆಯ ಹೆದರಿಕೆ ಕಾಡುತ್ತಿರುತ್ತದೆ. ತಾನು ಮಗುವಿಗಾಗಿ ಸಾಕಷ್ಟು ಸಂಗತಿಗಳನ್ನು ಅನುಸರಿಸುತ್ತಿಲ್ಲ ಎಂದು ಆಕೆಗೆ ಅನಿಸುತ್ತಿರುತ್ತದೆ.

ಇದರ ಹೊರತಾಗಿ ಹೊಸ ತಾಯಂದಿರಲ್ಲಿ ಹಾರ್ಮೋನ್‌ ಬದಲಾವಣೆಗಳು ಆಗುತ್ತಿರುತ್ತವೆ. ಅಷ್ಟೇ ಅಲ್ಲ ಸಾಮಾಜಿಕ ಕೌಟುಂಬಿಕ ಮತ್ತು ಕೆರಿಯರ್‌ನಲ್ಲಿ ಏರಿಳಿತ ತಕ್ಷಣಕ್ಕೆ ಹೊಂದಾಣಿಕೆ ಮಾಡಿಕೊಳ್ಳುವುದು ಅವರಿಗೆ ಕಷ್ಟಕರವಾಗಿ ಪರಿಣಮಿಸುತ್ತದೆ. ಹೀಗಾಗಿ ಹೊಸ ತಾಯಂದಿರು ಬಹುಬೇಗ ಖಿನ್ನತೆಗೆ ತುತ್ತಾಗುತ್ತಾರೆ.

ಏನಿದು ಪೋಸ್ಟ್ ಪಾರ್ಟಮ್ ಆ್ಯಂಗ್ಸೈಟಿ?

ಯಾವುದೇ ಒಬ್ಬ ತಾಯಿಗೆ ತನ್ನ ಕರುಳಿನ ಕುಡಿಯ ಬಗ್ಗೆ ಚಿಂತೆ ವ್ಯಕ್ತಪಡಿಸುವುದು ಸಹಜ ಸಂಗತಿಯೇ ಆಗಿದೆ. ಏಕೆಂದರೆ ಮಗು ತನ್ನ ಸಮಸ್ಯೆ ಏನೆಂದು ಹೇಳಲು ಅಸಮರ್ಥವಾಗಿರುತ್ತದೆ. ಅದರ ನಗು ಅಳುವಿನಲ್ಲೇ ಅದರ ಸಮಸ್ಯೆ ಏನೆಂದು ತಾಯಿ ಅರ್ಥ ಮಾಡಿಕೊಳ್ಳಬೇಕಾಗುತ್ತದೆ. ಆದರೆ ಮಗುವಿನ ಕುರಿತಾದ ತಾಯಿಯ ಚಿಂತೆ ಅತಿಯಾಗಿಬಿಟ್ಟರೆ, ಅದು ತಾಯಿಯ ಆರೋಗ್ಯಕ್ಕೆ ಮಾರಕವಾಗಿ ಪರಿಣಮಿಸಬಹುದು. ಈ ಸ್ಥಿತಿಯನ್ನು `ಪೋಸ್ಟ್ ಪಾರ್ಟಮ್ ಆ್ಯಂಗ್ಸೈಟಿ’ ಎಂದು ಹೇಳಲಾಗುತ್ತದೆ. ಈ ಮನಸ್ಥಿತಿಯ ಕೆಲವು ಲಕ್ಷಣಗಳು ಹೀಗಿರುತ್ತವೆ.

ತನ್ನನ್ನು ತಾನು ಕೆಟ್ಟ ತಾಯಿ ಎಂದು ಭಾವಿಸುವುದು.

ಮಗುವಿನ ಆರೋಗ್ಯ, ಸುರಕ್ಷತೆ, ನಿದ್ರೆ ಮುಂತಾದವುಗಳ ಕುರಿತಂತೆ ಸದಾ ಚಿಂತೆ ಮಾಡುವುದು.

ಮನಸ್ಸಿನಲ್ಲಿ ಮಗುವಿನ ಜೀವನದ ಬಗ್ಗೆ ಸದಾ ಕೆಟ್ಟ ಯೋಚನೆಗಳು ಬರುವುದು ಹಾಗೂ ಕೆಟ್ಟ ಕನಸು ಕಾಣುವುದು.

ಮಗುವಿನ ಪ್ರತಿಯೊಂದು ಆಗುಹೋಗುಗಳಲ್ಲಿ ಏನಾದರೂ ಕೊರತೆ ಕಂಡುಬರುವುದು, ಮೇಲಿಂದ ಮೇಲೆ ವೈದ್ಯರ ಬಳಿ ಕರೆದುಕೊಂಡು ಹೋಗುವುದು.

ನಿದ್ರೆಯಲ್ಲಿ ಗಾಬರಿಯಿಂದ ಎದ್ದೇಳುವುದು, ಮೇಲಿಂದ ಮೇಲೆ ಮಗುವಿನತ್ತ ನೋಡುವುದು.

ಹಸಿವು ಆಗದೇ ಇರುವುದು.

ಮಾಂಸಖಂಡಗಳಲ್ಲಿ ನೋವಿನ ಅನುಭೂತಿ, ಎಳೆದಂತಾಗುವಿಕೆ.

ಯಾವುದೇ ಕೆಲಸದಲ್ಲಿ ಮನಸ್ಸನ್ನು ಕೇಂದ್ರೀಕರಿಸಲು ಆಗದೇ ಇರುವುದು.

ಸಿಡಿಮಿಡಿತನ ಹಾಗೂ ಮಾತುಮಾತಿಗೂ ಇನ್ನೊಬ್ಬರ ಮೇಲೆ ಕೋಪಗೊಳ್ಳುವುದು, ತಲೆನೋವಿನ ತಕರಾರು ಹಾಗೂ ಅಳುಮೂಂಜಿ ಸ್ವಭಾವ.

ಅಪರಾಧಪ್ರಜ್ಞೆಯಿಂದ ಹೊರಬನ್ನಿ…..

ನಿಮ್ಮ ಖಿನ್ನತೆ ಒಳ್ಳೆಯ ಪೋಷಕತ್ವದ ವೈರಿಯಾಗಬಹುದು. ಹೀಗಾಗಿ ನೀವು ಈ ಸಮಸ್ಯೆಯಿಂದ ಹೊರಬರಲು ಗಂಭೀರ ಪ್ರಯತ್ನ ಮಾಡುವುದು ಅತ್ಯವಶ್ಯ.

ಶಿಶುತಜ್ಞರ ಮೇಲೆ ನಂಬಿಕೆ ಇಡಿ :  ಮಗುವಿನ ಆರೋಗ್ಯ ಹಾಗೂ ಪಾಲನೆ ಪೋಷಣೆಗೆ ಸಂಬಂಧಪಟ್ಟಂತೆ ನಿಮ್ಮ ಮನಸ್ಸಿನಲ್ಲಿ ಯಾವುದೇ ಸಂದೇಹ ಅಥವಾ ಪ್ರಶ್ನೆಗಳು ಎದ್ದರೆ, ವೈದ್ಯರ ಬಳಿ ಹೋಗಿ ಅವರ ಸಲಹೆ ಪಡೆದುಕೊಳ್ಳಿ. ನಿಮ್ಮ ಮನಸ್ಸಿನಲ್ಲಿ ಏನೇನು ಸಂದೇಹಗಳು ಉಂಟಾಗಿವೆ ಎಂಬುದರ ಬಗ್ಗೆ ಒಂದು ಕಾಗದದ ಮೇಲೆ ಬರೆದುಕೊಂಡು, ಕ್ರಮವಾಗಿ ಒಂದೊಂದರ ಬಗ್ಗೆ ಕೇಳಿ ಅದಕ್ಕೆ ಪರಿಹಾರ ಏನು ಎಂದು ವಿಚಾರಿಸಿ. ಇಂಟರ್‌ನೆಟ್‌ನಲ್ಲಿ ಮಗುವಿನ ಪಾಲನೆ ಪೋಷಣೆಯ ಬಗ್ಗೆ ಟಿಪ್ಸ್ ಹುಡುಕದೆ ವೈದ್ಯರ ಬಳಿ ಅಥವಾ ಕುಟುಂಬದ ಅನುಭವಿ ಅಮ್ಮ, ಅಜ್ಜಿ ಇಲ್ಲವೆ ನಿಮ್ಮ ಅತ್ತೆಯ ಬಳಿ ಸಲಹೆ ಕೇಳಿ.

ಭಾವನೆಗಳನ್ನು ಹಂಚಿಕೊಳ್ಳಿ : ಯಾವುದೇ ಬಗೆಯ ಸಂದೇಹ ಅಥವಾ ಪ್ರಶ್ನೆ ಮನಸ್ಸಿನಲ್ಲಿ ಎದ್ದಾಗ ನಿಮಗೆ ನೀವೇ ಆ ಬಗ್ಗೆ ಮನಸ್ಸಿನಲ್ಲಿ ಕೊರಗದೆ, ಚಿಂತೆ ಮಾಡದೇ ಅವುಗಳ ಬಗ್ಗೆ ನಿಮ್ಮ ಕುಟುಂಬದವರ ಬಳಿ ನಿಮ್ಮ ಭಾವನೆ ಹಂಚಿಕೊಳ್ಳಿ. ಅವರಿಂದ ಸೂಕ್ತ ಸಲಹೆ ದೊರೆತು ನಿಮ್ಮ ಮನಸ್ಸು ಹಗುರಗೊಳ್ಳುತ್ತದೆ.

ನಿಮ್ಮನ್ನು ಪ್ರಶಂಸಿಸಿಕೊಳ್ಳಿ : ಒಬ್ಬ ತಾಯಿಯಾಗಿ ನಾನು ಮಗುವಿಗಾಗಿ ಏನೆಲ್ಲ ಪ್ರಯತ್ನ ಮಾಡುತ್ತಿದ್ದೇನೆ, ಅವೆಲ್ಲ ಒಳ್ಳೆಯವು ಎಂದು ಹೇಳಿಕೊಂಡು ನಿಮಗೆ ನೀವೇ ಪ್ರಶಂಸೆ ಮಾಡಿಕೊಳ್ಳಿ. ನಾನು ಮಗುವಿಗಾಗಿ ಸಕಲ ಸೌಲಭ್ಯಗಳನ್ನು ದೊರಕಿಸಿಕೊಡುತ್ತಿರುವೆ. ವೈದ್ಯರ ಬಳಿ ಕಾಲಕಾಲಕ್ಕೆ ಹೋಗುತ್ತಿರುವೆ, ಸೂಕ್ತ ರೀತಿಯಲ್ಲಿ ಸ್ತನ್ಯಪಾನ ಮಾಡಿಸುತ್ತಿರುವೆ, ಅತ್ಯಗತ್ಯ ಚುಚ್ಚುಮದ್ದು ಕೊಡಿಸುತ್ತಿರುವೆ, ಒಬ್ಬ ತಾಯಿಯಾಗಿ ಇದಕ್ಕಿಂತ ಹೆಚ್ಚಿಗೆ ಏನನ್ನು ಮಾಡಲು ಸಾಧ್ಯ ಎಂದು ನಿಮಗೆ ನೀವೇ ಸಮಾಧಾನ ಹೇಳಿಕೊಳ್ಳಿ.

ಬೇರೆಯವರಿಗೂ ಮಗುವಿನ ಜವಾಬ್ದಾರಿ ಕೊಡಿ : ದಿನವಿಡೀ ಮಗುವಿನ ಜೊತೆಗೇ ಇರುವುದು ಹಾಗೂ ಅದರ ಒಂದೊಂದು ಆಗುಹೋಗುಗಳ ಬಗ್ಗೆ ಸಂದೇಹದ ದೃಷ್ಟಿಯಿಂದ ನೋಡುವುದು ಮಗು ಹಾಗೂ ನಿಮ್ಮ ದೃಷ್ಟಿಯಿಂದ ಹಾನಿಕರ. ದಿನದಲ್ಲಿ ಸ್ವಲ್ಪ ಹೊತ್ತಾದರೂ ನಿಮ್ಮನ್ನು ಅಲಂಕರಿಸಿಕೊಳ್ಳಲು, ವಿಶ್ರಾಂತಿಗಾಗಿ ಸಮಯ ತೆಗೆದಿಟ್ಟುಕೊಳ್ಳಿ. ಈ ಸಮಯದಲ್ಲಿ ಮಗುವಿನ ಜವಾಬ್ದಾರಿಯನ್ನು ಪತಿ ಅಥವಾ ಕುಟುಂಬದ ಇತರೆ ಸದಸ್ಯರಿಗೆ ಕೊಡಿ. ಇದರಿಂದ ನಿಮಗೂ ವಿಶ್ರಾಂತಿ ದೊರಕುತ್ತದೆ ಹಾಗೂ ಊಟತಿಂಡಿ ಸೇವನೆಗೂ ಅವಕಾಶವಾಗುತ್ತದೆ.

ಮನೋತಜ್ಞರ ಸಲಹೆ ಪಡೆಯಿರಿ : ಒಂದು ವೇಳೆ ನೀವು ಅತಿಯಾಗಿ ಖಿನ್ನತೆಯಿಂದ ಬಳಲುತ್ತಿದ್ದರೆ, ಯಾರಾದರೂ ಮನೋತಜ್ಞರ ಬಳಿ ಹೋಗಿ ಸಲಹೆ ಪಡೆದುಕೊಳ್ಳಿ. ಅವರು ನಿಮಗೆ ರಿಲ್ಯಾಕ್ಸ್ ಟಿಪ್ಸ್ ಹೇಳಿಕೊಡಬಹುದು. ಕೌನ್ಸೆಲಿಂಗ್‌ ಮಾಡಬಹುದು. ಇದು ನಿಮ್ಮ ಮಾನಸಿಕ ನೆಮ್ಮದಿಗೆ ಅನುಕೂಲವಾಗಬಹುದು.

ಎನ್‌. ಶ್ವೇತಾ 

Tags:
COMMENT