ಆಹಾರ ಪ್ರತಿ ಜೀವರಾಶಿಗೂ ಅತ್ಯವಶ್ಯಕ. ದೇಹದ ಬೆಳವಣಿಗೆಯ ಚಟುವಟಿಕೆಯಲ್ಲಿ ಶಕ್ತಿ ಪಡೆಯುವಲ್ಲಿ ಹಾಗೂ ರೋಗರುಜಿನಗಳಿಂದ ರಕ್ಷಿಸುವುದಕ್ಕಾಗಿ ಆಹಾರವನ್ನು ಸೇವಿಸಬೇಕು. ನಾವು ಸೇವಿಸುವ ಆಹಾರದಿಂದಲೇ ಆರೋಗ್ಯ. ಅದನ್ನು ಕಾಪಾಡಿಕೊಳ್ಳಲು ಯಾವಾಗ, ಯಾವ ರೀತಿಯಲ್ಲಿ, ಎಷ್ಟು ಪ್ರಮಾಣದಲ್ಲಿ ಹಾಗೂ ಎಂತಹ ಆಹಾರವನ್ನು ಸೇವಿಸಬೇಕು ಎಂಬ ಅರಿವು ನಮಗೆ ಇರಬೇಕು. ದಿನನಿತ್ಯ ಉಪಯೋಗಿಸುವ ಆಹಾರ ಪದಾರ್ಥಗಳಲ್ಲಿರುವ ಔಷಧೀಯ ಗುಣಗಳನ್ನು ಗುರುತಿಸಿ ಅವುಗಳ ಉಪಯೋಗದಿಂದ ಸಣ್ಣಪುಟ್ಟ ಕಾಯಿಲೆಗಳನ್ನು ಮನೆಯಲ್ಲಿಯೇ ಗುಣಪಡಿಸಿಕೊಳ್ಳಲು ಹಾಗೂ ಆಹಾರದಿಂದಲೇ ರೋಗ ತಡೆಗಟ್ಟುವ ಶಕ್ತಿಯನ್ನು `ಆಹಾರದಿಂದ ಆರೋಗ್ಯ’ ಎನ್ನಬಹುದು.

“ಉತ್ತಮ ಆರೋಗ್ಯವನ್ನು ಕಾಪಾಡಿಕೊಳ್ಳಲು ಪೌಷ್ಟಿಕವಾದ ಆಹಾರವನ್ನು ಸಮತೋಲನದಲ್ಲಿ ಸೇವಿಸಬೇಕು. `ಪ್ರಿಕಾಶನ್‌ ಈಸ್‌ ಬೆಟರ್‌ ದ್ಯಾನ್‌ ಕ್ಯೂರ್‌’ ಎನ್ನುವಂತೆ ರೋಗಗಳು ಬಂದ ನಂತರ ದುಬಾರಿ ವೆಚ್ಚದ ಔಷಧಿಗಳಿಗೆ ಮೊರೆ ಹೋಗುವ ಬದಲು ನಾವು ನಮ್ಮ ಪ್ರಕೃತಿದತ್ತವಾಗಿ ಸಿಗುತ್ತಿರುವ ಆಹಾರದಿಂದಲೇ ಆರೋಗ್ಯವನ್ನು ಕಾಪಾಡಿಕೊಳ್ಳುವ ಜೀವನ ಶೈಲಿಯನ್ನು ಅವಳಡಿಸಿಕೊಳ್ಳಬೇಕು. ಆರೋಗ್ಯವಂತ ಬದುಕನ್ನು ನಮ್ಮದಾಗಿಸಿಕೊಳ್ಳಬೇಕು,” ಎನ್ನುತ್ತಾರೆ ಹ್ಯೂಮನ್‌ ನ್ಯೂಟ್ರಿಷಿಯನ್‌ಪದವೀಧರ ಗೃಹಿಣಿ ವೀಣಾ ಶ್ರೀನಾಥ್‌.

ಯಾವುದೇ ರೋಗದ ವಿರುದ್ಧ ಸುಲಭವಾಗಿ ಹೋರಾಡುವ ಸಾಮರ್ಥ್ಯವನ್ನು ಪೌಷ್ಟಿಕಾಂಶಗಳು ಕೊಡಬಹುದೇ? ಎಂದು ಖ್ಯಾತ ಆರೋಗ್ಯ ತಜ್ಞರಾದ ಡಾ. ಎಚ್‌.ಎಸ್‌. ಪ್ರೇಮಾರವರನ್ನು ಕೇಳಿದಾಗ ಹಲವಾರು ವಿಷಯಗಳನ್ನು ತಿಳಿಸಿದರು.

“ಒಂದೊಂದು ಕಾಯಿಲೆಗೂ ಒಂದೊಂದು ರೀತಿಯ ನಿರ್ದಿಷ್ಟ ಆಹಾರಗಳಿರುತ್ತವೆ. ಅವುಗಳಿಗೆ ಅನುಗುಣವಾಗಿ ಥೆರಪಿಸ್ಟ್ ಆಹಾರ (ಚಿಕಿತ್ಸಕ ಆಹಾರ)ಗಳನ್ನು ನೀಡುತ್ತೇವೆ. ಉದಾಹರಣೆಗೆ ಕಬ್ಬಿಣಾಂಶದ ಕೊರತೆ ಅಂದರೆ ಅನಿಮಿಕ್‌ ಇರುವವರಿಗೆ ದಂಟಿನ ಸೊಪ್ಪು, ಪಾಲಕ್‌ ಸಲಹೆ ಮಾಡುತ್ತೇವೆ. ಆದಷ್ಟೂ ಸ್ಥಳೀಯ ಕಬ್ಬಿಣಾಂಶದ ಆಹಾರಗಳನ್ನು ತೆಗೆದುಕೊಳ್ಳುವಂತೆ ಹೇಳುತ್ತೇವೆ. ಬಾಣಂತಿಯರಲ್ಲಿ ಹೆಚ್ಚಾಗಿ ಕ್ಯಾಲ್ಶಿಯಂ ಕೊರತೆ ಕಾಣಸಿಗುತ್ತದೆ. ಇಲ್ಲಿ ಬಡ ಬಲ್ಲಿದರೆಂಬ ಭೇದಭಾವ ಇರುವುದಿಲ್ಲ.

“ವಾತ, ಪಿತ್ತ, ಶೀತಗಳು ಎಲ್ಲರ ದೇಹಕ್ಕೂ ಒಂದೇ. ಹಾಗಾಗಿ ಈ ಸಮಯದಲ್ಲಿ ಉಷ್ಣದ ಪದಾರ್ಥಗಳನ್ನು ಸೇವಿಸಲು ಹೇಳುತ್ತೇವೆ. ಸಸ್ಯಮೂಲ ಆಹಾರಗಳು ದುಬಾರಿ ಇರುವುದಿಲ್ಲ. ಕೈಗೆಟುಕು ಬೆಲೆಯಲ್ಲೇ ದೊರೆಯುತ್ತವೆ. ಇದರಲ್ಲಿ ಹೆಚ್ಚಿನ ಕಬ್ಬಿಣಾಂಶ ಇರುವುದರಿಂದ ಇದನ್ನೇ ಸಜೆಸ್ಟ್ ಮಾಡುತ್ತೇವೆ. ಹಾಲು, ರಾಗಿ ಈ ಸಮಯದಲ್ಲಿ ಬಹಳವೇ ಉಪಯೋಗಕ್ಕೆ ಬರುತ್ತದೆ. ಒಂದೊಂದು ಆಹಾರಾಂಶ ದೇಹದ ಒಳಗೆ ಹೋಗಿ ತನ್ನ ನಿರ್ದಿಷ್ಟ ಕೆಲಸಗಳನ್ನು ಮಾಡುತ್ತಿರುತ್ತದೆ. ಹಾಗಾಗಿ ರೋಗ ನಿರೋಧಕ ಶಕ್ತಿ (ಇಮ್ಯೂನಿಟಿ) ಹೆಚ್ಚಾಗಿ ಆರೋಗ್ಯವಂತ ಬದುಕು ನಮ್ಮದಾಗುತ್ತದೆ. ಚಿಕಿತ್ಸಕ ಆಹಾರಗಳನ್ನು ಸಜೆಸ್ಟ್ ಮಾಡುವಾಗ ವಯಸ್ಸು, ಲಿಂಗ, ಶಾರೀರಿಕ ಸಮಸ್ಯೆ, ಜೆನೆಟಿಕ್‌ ತೊಂದರೆ ಹಾಗೂ ಪರಿಸರಕ್ಕೆ ಅನುಗುಣವಾಗಿ ಹೇಳುತ್ತೇವೆ. ಜೊತೆಗೆ ಕ್ಯಾಲರಿಯನ್ನೂ ಅಡ್ಜೆಸ್ಟ್ ಮಾಡಿ ಹೇಳುತ್ತೇವೆ.”

ಡಾ. ಎಸ್‌. ವಿವೇಕ್‌, ಎಂಬಿಬಿಎಸ್‌, ಎಂಡಿ, ಡಿಎನ್‌ಬಿ, ಅಸೋಸಿಯೇಟ್‌ ಪ್ರೊಫೆಸರ್‌, ಅಜೀಜಿಯಾ ಇನ್ ಸ್ಟಿಟ್ಯೂಟ್‌ ಆಫ್‌ ಮೆಡಿಕಲ್ ಸೈನ್ಸ್, ಕೊಲ್ಲಂ, ಕೇರಳ. ಇವರು ಆಹಾರ ಪದ್ಧತಿಯ ಬಗ್ಗೆ ತಮ್ಮ ಅನಿಸಿಕೆಯನ್ನು ಹೀಗೆ ಪ್ರಾರಂಭಿಸಿದರು….

`ಎಷ್ಟು ನೀನುಂಡರೇಂ ಪುಷ್ಟಿ ಮೈಗಾಗುವುದು, ಹೊಟ್ಟೆ ಜೀರ್ಣಿಸುವಷ್ಟೇ ಮಿಕ್ಕದ್ದೆಲ್ಲ ಕಸ, ಎಷ್ಟು ಗಳಿಸಿಟ್ಟೊಡಂ ನಿನಗೆ ದಕ್ಕುವುದೆಷ್ಟು? ಮುಷ್ಟಿ ಪಿಷ್ಟ ತಾನೇ?  ಮಂಕುತಿಮ್ಮ’

ಅರ್ಥ : ನೀನೆಷ್ಟು ಉಂಡರೇನು? ಅದರಲ್ಲಿ ನಿನ್ನ ದೇಹದ ಪುಷ್ಟಿಗೆ ಒದಗುವುದು ನಿನ್ನ ಹೊಟ್ಟೆ ಜೀರ್ಣಿಸುವಷ್ಟೇ. ಮಿಕ್ಕದ್ದೆಲ್ಲ ಕಸವಾಗಿ ನಿನ್ನ ಶರೀರಿದಿಂದ ಹೊರಗೆ ಹೋಗುತ್ತದೆ. ಈ ಸಾರ್ವಕಾಲಿಕ ಸರಳ ವಿಷಯವನ್ನು ಎತ್ತಿ ಹೇಳುತ್ತಾ ಅದರ ಆಧಾರದಿಂದ ಗಹನ ವಿಚಾರವೊಂದನ್ನು ಈ ಮುಕ್ತಕದಲ್ಲಿ ಡಿ. ವಿ. ಗುಂಡಪ್ಪನವರು ಹೀಗೆ ಮಂಡಿಸುತ್ತಾರೆ. ನೀನೆಷ್ಟು ಗಳಿಸಿದರೂ ನಿನಗೆ ದಕ್ಕವುದೆಷ್ಟು? ಒಂದು ಮುಷ್ಟಿ ಪಿಷ್ಟ ಅಲ್ಲವೇ?

ಏನು ತಿನ್ನುತ್ತೇವೋ ಹಾಗೇ ನಾವು ಬದುಕುತ್ತೇವೆ. ಹಿತ ಮಿತವಾದ ಆಹಾರ ಸದಾಕಾಲಕ್ಕೂ ಯೋಗ್ಯವಾದದ್ದು. ಹೆಚ್ಚು ಮಸಾಲಭರಿತ, ಮಾಂಸಾಹಾರಗಳು ಆರೋಗ್ಯಕ್ಕೆ ಎಂದಿದ್ದರೂ ಹಾನಿಕಾರಕವೇ. ಇವುಗಳಿಂದ ಪಚನಕ್ರಿಯೆ ಮಂದಗತಿಯಲ್ಲಿ ಸಾಗಿ ದೇಹದಲ್ಲಿ ಕೊಬ್ಬಿನ ಅಂಶ ಶೇಖರಣೆಯಾಗುತ್ತಾ ಹೋಗುತ್ತದೆ. ಕ್ರಮೇಣವಾಗಿ ಹಲವಾರು ರೋಗಗಳಿಗೆ ದೇಹ ವಾಸಸ್ಥಾನವಾಗಿ ಬಿಡುತ್ತದೆ. ದೇಹ ರಚನೆಯಲ್ಲಿ ಜೆನೆಟಿಕ್‌ ಪ್ರಭಾವ ಕೂಡಿರುತ್ತದೆ. ಯಾವುದೇ ಆಹಾರನ್ನಾಗಲಿ ತುಂಬು ಮನಸ್ಸಿನಿಂದ ತೃಪ್ತಭಾವದಿಂದ ತಿಂದರೆ ಖಂಡಿತಾ ತೊಂದರೆ ಆಗುವುದಿಲ್ಲ. ಉದಾಹರಣೆಗೆ ಐಸ್‌ಕ್ರೀಂ ತಿಂದರೆ ನನಗೆ ನೆಗಡಿ ಬರುತ್ತದೆ ಎಂದುಕೊಂಡು ತಿಂದರೆ ಖಂಡಿತಾ ಶೀತ ಆಗೇ ಆಗುತ್ತದೆ. ಭಯ, ಅನುಮಾನದಿಂದ ತಿಂದಾಗ ಅದರಿಂದ ತೊಂದರೆ ತಪ್ಪಿದ್ದಲ್ಲ. ಹಾಗಾಗಿ ಹಿತಮಿತವಾದ ಆಹಾರ ಸೇವಿಸಿ ಸಂತೋಷದಿಂದಿರಿ. ಪೌಷ್ಟಿಕಾಂಶದ ವಿಧಾನಗಳೆಂದರೆ ಕಾರ್ಬೋಹೈಡ್ರೇಟ್ಸ್, ಪ್ರೋಟೀನ್ಸ್, ಕೊಬ್ಬು, ಮಿನರಲ್ಸ್, ವಿಟಮಿನ್ಸ್, ನೀರು.

ವಿಟಮಿನ್‌ ಸಿ, ಇ, ಕೆ ಗಳು ರೋಗ ನಿರೋಧಕ ಶಕ್ತಿಯನ್ನು ಹೆಚ್ಚು ಮಾಡುತ್ತವೆ. ಆ ಸಾಲಿಗೆ ಎಲೆಗಳು, ಸೊಪ್ಪು, ಬೇವು, ತುಳಸಿ, ಬಿಲ್ವ, ದೊಡ್ಡಪತ್ರೆಗಳು ಮುಖ್ಯವಾಗುತ್ತವೆ. ನಮ್ಮ ದೇಹ ರಚನೆ ಹಾಗೂ ದೇಹ ಪ್ರಕೃತಿಗೆ ಹೊಂದುವಂಥದ್ದನ್ನು ತೆಗೆದುಕೊಳ್ಳುವುದು ಉತ್ತಮ. ಸಾಮಾನ್ಯವಾಗಿ ಆ ಭಾಗದ ಪರಿಸರಕ್ಕನುಗುಣವಾಗಿ ಇವುಗಳನ್ನು ಸಜೆಸ್ಟ್ ಮಾಡುತ್ತೇವೆ. ಇದಕ್ಕೆಲ್ಲ ಒಮ್ಮೆ ಡಯೇಟಿಶಿಯನ್‌ ಭೇಟಿ ಮಾಡಿ ಅವರ ಸಲಹೆಯ ಮೇರೆಗೆ ಹೋದರೆ ತೊಂದರೆ ಇರುವುದಿಲ್ಲ.

ಇಂದು ಇಡೀ ಜಗತ್ತೇ ಕೊರೊನಾ ಎಂಬ ವೈರಾಣುವಿಗೆ ತಲ್ಲಣಗೊಳ್ಳುತ್ತಿರುವ ಸಂದರ್ಭದಲ್ಲಿ ಧನಾತ್ಮಕ ಚಿಂತನೆಗೆ ಹೆಚ್ಚಿನ ಆದ್ಯತೆ ನೀಡಬೇಕಿದೆ. ಆಲೋಚನೆಗಳು ಉತ್ತಮವಾಗಿರಲಿ, ಮಾನಸಿಕ ಸದೃಢತೆಯಿಂದಾಗಿ ಹೆಚ್ಚಿನ ಬಲ ದೊರಕುತ್ತದೆ. ಜೀವನಶೈಲಿಯನ್ನು ಸುಂದರಗೊಳಿಸಲೋಸುಗ ಯೋಗ, ಪ್ರಾಣಾಯಾಮಕ್ಕೆ ಹೆಚ್ಚಿನ ಮಹತ್ವ, ಸಮಯವನ್ನು ನೀಡಿದರೆ ಒಳಿತು.

ರೋಗ ಚಿಕಿತ್ಸಕರೂ, ನನ್ನ ನೆಚ್ಚಿನ ಗುರುಗಳೂ ಆದ ರತ್ನಾತಿ ಮೋಹನ್‌ ರಾಂರವರು ಉತ್ತಮವಾದ ಸಲಹೆಗಳೊಟ್ಟಿಗೆ ಯೋಗದ ಮಹತ್ವವನ್ನೂ ಉಪದೇಶಿಸಿದರು. ಇಂದಿನ ವೇಗದ ಯುಗದಲ್ಲಿ `ಸ್ಚ್ರೆಸ್‌’ ಎನ್ನುವುದು ಒಂದು ಮಗುವನ್ನೂ ಬಿಡದಷ್ಟು ಆರಿಸಿಬಿಟ್ಟಿದೆ. ಇದರಿಂದಾಗಿ ಕ್ಯಾನ್ಸರ್‌ನಂತಹ ಮಾರಕ ರೋಗಗಳು ಮನುಷ್ಯನನ್ನು ಸಾವಿನೆಡೆಗೆ ಕೊಂಡೊಯ್ಯುತ್ತಿವೆ. ಜೀವನ ಶೈಲಿ ಹದಗೆಡುತ್ತಿದೆ. ವಾತಾವರಣದಲ್ಲಿ ಕಲುಷಿತತೆ, ಆಹಾರದಲ್ಲಿ ಕಲಬೆರಕೆ! ಇದನ್ನೆಲ್ಲಾ ಮನಗಂಡ ಕೆಲವು ವ್ಯವಹಾರಸ್ಥರು, ಕಡಿಮೆ ಸಮಯದಲ್ಲಿ ಹೆಚ್ಚು ಹಣ ಮಾಡುವ ಉದ್ದೇಶದಿಂದ ನಾವು ನಿಮಗೆ ಉತ್ತಮ ಹಾಗೂ ಒಳ್ಳೆಯ ಆಹಾರ ನೀಡುತ್ತೇವೆ ಎಂಬ ಲೇಬಲ್ ಹಾಕಿಕೊಂಡು ಹಲವಾರು ಕಂಪನಿಗಳು ನಾಯಿಕೊಡೆಗಳಂತೆ ಏಳುತ್ತಿವೆ.  ಮೋಸ ಹೋಗೋ ಜನಕ್ಕೆ ಸರಿಯಾಗಿ ಟೋಪಿ ಹಾಕುತ್ತಿವೆ. ಗ್ರಾಮೀಣ ಪದಾರ್ಥಗಳನ್ನು ನೇರ ರೈತನಿಂದ ಪಡೆಯುತ್ತ ನಮ್ಮ ಆರೋಗ್ಯವನ್ನು ನಾವೇ ಕಾಪಾಡಿಕೊಳ್ಳುವ ಪರಿಸ್ಥಿತಿಗೆ ಬರುತ್ತಿದ್ದೇವೆ. ಇಂದು ಮನುಷ್ಯನ ಬಳಿ ದುಡ್ಡು ಸಾಕಷ್ಟಿದೆ. ಅದರಿಂದ ಆರೋಗ್ಯವನ್ನು ಪಡೆದುಕೊಳ್ಳದಂತಹ ಮಟ್ಟಕ್ಕೆ ಬಂದು ನಿಂತಿದ್ದೇವೆ.

ಆಹಾರ ಸೇವನೆಯಿಂದ ಗುಣವನ್ನು ಅಳೆಯುವ ನಿಟ್ಟಿನಲ್ಲಿ ಈ ಅಂಶಗಳು ಬೆಳಕಿಗೆ ಬರುತ್ತವೆ.

ತಮೋ ಗುಣವುಳ್ಳವರಲ್ಲಿ ಇನ್ನೊಬ್ಬರ ಮಾತನ್ನು ಕೇಳುವ ಗುಣ ಅತಿಯಾಗಿರುತ್ತದೆ. ಇವರಲ್ಲಿ ಆಲಸ್ಯತನ ಹೆಚ್ಚಾಗಿರುತ್ತದೆ. ಸ್ವಂತ ಬುದ್ಧಿ ಬಹಳವೇ ಕಡಿಮೆ. ತಣ್ಣಗಿನ ಹಳಸಿದ ಆಹಾರ ಸೇವನೆ ಇವರ ಒಂದು ಪ್ರಮುಖ ಗುಣ. ಇಂಥವರಿಗೆ ಒಂದು ಒಳ್ಳೆಯ ಉದಾಹರಣೆ ಎಂದರೆ ಭಯೋತ್ಪಾದಕರು!

ರಜೋ ಗುಣದವರಲ್ಲಿ ಅತಿಯಾದ ಚಟುವಟಿಕೆ ಇರುತ್ತದೆ. ಹೆಸರಿನ ಹಿಂದೆ ಓಡುತ್ತಿರುತ್ತಾರೆ. ಹೆಸರು ಮಾಡಲು ಏನೆಲ್ಲ ಕೆಲಸಗಳನ್ನು ಮಾಡಲು ತಯಾರಿರುತ್ತಾರೆ. ಅತಿಯಾದ ಆಸೆಗಳಿರುತ್ತವೆ. ಮನಸ್ಸು, ಆರೋಗ್ಯ ಸರಿ ಇರುವುದಿಲ್ಲ. ವಿಲ್ ‌ಪವರ್ ಹೆಚ್ಚಾಗಿ ಇರುತ್ತದೆ. ಆದರೆ ಅದು ಸರಿಯಾಗಿ ಉಪಯೋಗಕ್ಕೆ ಬಾರದ ಮಟ್ಟದಲ್ಲಿ ನಿಂತಿರುತ್ತಾರೆ.

ಸಾತ್ವಿಕ ಗುಣ ಎಲ್ಲದಕ್ಕೂ ಉತ್ತಮವಾದುದು. ಸಮಂಜಸವಾದ ಮನುಷ್ಯನ ನಡಾವಳಿಗಳನ್ನು ಅವನ ಬುದ್ಧಿಮಟ್ಟವನ್ನು ಹತೋಟಿಯಲ್ಲಿಟ್ಟು ಸಭ್ಯ ಮಾರ್ಗದಲ್ಲಿ ಉತ್ತಮ ಜೀವನಶೈಲಿಯಲ್ಲಿ ನಡೆಯಲು ಅನುವು ಮಾಡಿಕೊಡುತ್ತದೆ. ಇದಿಷ್ಟೂ ರತ್ನಾವಾಚಾ!

ಶರೀರ ಸದಾ ಚಟುವಟಿಕೆಯಿಂದಿರಲು ಆರೋಗ್ಯವಂತರಾಗಿರಲು ಅದಕ್ಕೆ ಸಾಕಷ್ಟು ಪ್ರಮಾಣದಲ್ಲಿ ಶಕ್ತಿ ಬೇಕಾಗುತ್ತದೆ. ವಿವಿಧ ಬಗೆಯ ಅಮೈನೋ ಆಮ್ಲಗಳು, ಜೀವಸತ್ವಗಳು, ಖನಿಜಗಳು, ಶರ್ಕರ ಪಿಷ್ಟಗಳು, ಕೊಬ್ಬು, ನೀರು ಹೀಗೆ ಎಲ್ಲಾ ಪೋಷಕಾಂಶಗಳೂ ಬೇಕೇಬೇಕು. ಯಾವ ಆಹಾರ ಪದಾರ್ಥಗಳು ದೇಹಕ್ಕೆ ಪ್ರತಿನಿತ್ಯ ಬೇಕಾಗುವಷ್ಟು ಪ್ರಮಾಣದಲ್ಲಿ ಪೋಷಕಾಂಶಗಳೊಟ್ಟಿಗೆ ಸೇವಿಸುತ್ತೇವೋ ಅದಕ್ಕೆ `ಸಮತೋಲನ ಆಹಾರ’ ಎನ್ನುತ್ತೇವೆ. ಪೌಷ್ಟಿಕಾಂಶಗಳು ಎಂದರೆ ಮೊಳಕೆ ಕಟ್ಟಿದ ಕಾಳುಗಳು, ಧಾನ್ಯಗಳು, ಬೇಳೆಕಾಳುಗಳು, ತರಕಾರಿ, ಹಣ್ಣು, ಮಾಂಸ, ಮೀನು, ಹಾಲು, ಮೊಟ್ಟೆ, ಎಣ್ಣೆ, ತುಪ್ಪ ಇವುಗಳಿಂದ ನಮಗೆ ದೊರಕುತ್ತವೆ.

`ನೀನೇನು ತಿನ್ನೋಕೆ ಅಂತಾನೇ ಹುಟ್ಟಿದ್ಯಾ…..’ ಎಂದು ಎಷ್ಟೋ ಜನ ಎಷ್ಟೋ ಕಡೆ ತಮಾಷೆ ಮಾಡೋದಿದೆ. ತಿನ್ನುವುದಕ್ಕೂ ಪುಣ್ಯ ಮಾಡಿರಬೇಕು. ಸಾಮಾನ್ಯರು ತಿನ್ನುವ ಹಾಗೇ ಬಿಪಿ, ಶುಗರ್‌ ಅಥವಾ ಇತರೆ ಕಾಯಿಲೆಗಳಿರುವವರು ಎಲ್ಲ ಆಹಾರವನ್ನೂ ಸೇವಿಸುವ ಹಾಗಿಲ್ಲ. ಅಂಥವರುಗಳಿಗೆ ರಿಸ್ಟ್ರಿಕ್ಷನ್‌ ಇರುತ್ತದೆ. ಇಂದಿನ ಈ ವೇಗದ ಯುಗದಲ್ಲಿ ಹೆಲ್ತ್ ಕ್ಲಬ್‌, ನ್ಯೂಟ್ರೀಶಿಯನ್ಸ್ ಕ್ಲಬ್‌ಗಳು ಹೊಸ ಕಾನ್ಸೆಪ್ಟ್ ಗಳೊಂದಿಗೆ ತಲೆ ಎತ್ತುತ್ತಿರುವುದು ಸ್ವಾಗತಾರ್ಹ. ಜನತೆಗೆ ಪೌಷ್ಟಿಕಾಂಶದ ಬಗ್ಗೆ ತಿಳಿವಳಿಕೆ ನೀಡುತ್ತ ದೇಹಕ್ಕೆ ಅದರ ಅವಶ್ಯಕತೆ ಎಷ್ಟಿರಬೇಕೆಂದು ತಿಳಿಸುವಲ್ಲಿ ಯಶಸ್ವಿಯಾಗುತ್ತಿದ್ದಾರೆ.

ಕೊನೆಯ ಮಾತು. ಪೌಷ್ಟಿಕಾಂಶಯುಕ್ತವಾದ ಸೊಪ್ಪು, ಹಸಿ ತರಕಾರಿ, ಕಾಳು ಹೇರಳವಾಗಿ ತಿನ್ನಿ. ಬಿಸಿಬಿಸಿಯಾಗಿ ಮಾಡಿದ್ದು ತಿನ್ನಿ, ತಿನ್ನೋದನ್ನು ಖುಷಿಯಾಗಿ ನೆಮ್ಮದಿಯಿಂದ ತಿನ್ನಿ. ಕೊಂಕಾಡದಿರಿ. ಪಾಲಿಗೆ ಬಂದದ್ದು ಪಂಚಾಮೃತ ಎನ್ನುತ್ತಾ ಪ್ರತಿಯೊಂದು ತಿನ್ನೋ ಪದಾರ್ಥ ದೇವರ ಪ್ರಸಾದವೆಂದು ಕಣ್ಣಿಗೊತ್ತಿಕೊಂಡು ತಿನ್ನೋಣ. ತಿನ್ನೋ ಪದಾರ್ಥವನ್ನು ಬಿಸಾಡುವುದು ಬೇಡ. ಬೆಳೆದ ರೈತನಿಗೆ ಈ ಮೂಲಕ ಗೌರವ ಸಮರ್ಪಿಸೋಣ! ಆರೋಗ್ಯವೇ ಭಾಗ್ಯವೆಂದು ಬದುಕೋಣ! ಸ್ವಸ್ಥ ಬದುಕನ್ನು ಸಂಭ್ರಮಿಸೋಣ!

ಸವಿತಾ ನಾಗೇಶ್

Tags:
COMMENT