ಮಳೆಗಾಲ ಬಂದಾಗ ನಾವು ಎಂದಿನಂತೆ ಆರೋಗ್ಯ ರಕ್ಷಣೆಯ ಕಡೆ ಹೆಚ್ಚಿನ ಗಮನ ಕೊಡುವಂತೆ ಪಾದಗಳ ಸಂರಕ್ಷಣೆಯತ್ತಲೂ ಎಚ್ಚರ ವಹಿಸಬೇಕು. ಹೇಗೆಂದು ವಿವರವಾಗಿ ನೋಡೋಣವೇ.

ಪಾದಗಳು ದೇಹದ ಅಭಿನ್ನ ಅಂಗ. ಇವುಗಳ ಸಂರಕ್ಷಣೆ ಅತ್ಯಗತ್ಯ. ಅದರಲ್ಲೂ ಮಳೆಗಾಲದಲ್ಲಿ ಈ ಕಡೆ ಹೆಚ್ಚು ನಿಗಾ ವಹಿಸಲೇಬೇಕು. ಏಕೆಂದರೆ ಈ ಸೀಸನ್‌ನಲ್ಲಿ ಪಾದಗಳು ಹೆಚ್ಚು ಒದ್ದೆ ಆಗಿರುತ್ತವೆ. ಅದರಿಂದಾಗಿ ಹಲವು ಬಗೆಯ ಸೋಂಕು ತಗುಲುವ ಸಾಧ್ಯತೆಗಳಿವೆ. ಹೆಚ್ಚು ಸಮಯ ಪಾದಗಳು ಒದ್ದೆ ಆಗುವುದರಿಂದ ಹಾಗೂ ಸೂಕ್ತ ಸಮಯಕ್ಕೆ ಅದು ಸ್ವಚ್ಛ, ಶುಭ್ರ ಆಗದಿದ್ದರೆ ಅದಕ್ಕೆಲ್ಲ ಫಂಗಸ್‌ ತಗುಲುತ್ತದೆ. ಈ ಕಾರಣ ಸೋಂಕು ಹೆಚ್ಚಾಗುವ ಸಂಭವವಿದೆ. ಆಗ ಅದಕ್ಕೆ ಸೂಕ್ತ ಚಿಕಿತ್ಸೆ ದೊರಕದಿದ್ದರೆ, ಪಾದಗಳು ಕೆಟ್ಟದಾಗಿ ಕಾಣುತ್ತವೆ. ಇದಕ್ಕಾಗಿ ಇಲ್ಲಿವೆ ಪರಿಹಾರಗಳು :

– ಪಾದಗಳನ್ನು ನಿಯಮಿತಾಗಿ ಸ್ವಚ್ಛಗೊಳಿಸಿ. ಹೊರಗಿನಿಂದ ಮನೆಗೆ ಬಂದ ತಕ್ಷಣ ಮೆಡಿಕೇಟೆಡ್‌ ಸೋಪ್‌ನಿಂದ ಪಾದಗಳನ್ನು ತೊಳೆದು ಒಣಗಿಸಿ. ಅಗತ್ಯವಾಗಿ ಬೆರಳು ಸಂದುಗಳ ನಡುವೆ ಆ್ಯಂಟಿಫಂಗಲ್ ಪೌಡರ್‌ ಉದುರಿಸಿ.

– ಮಳೆಗಾಲದಲ್ಲಿ ಹೆಚ್ಚಾಗಿ ಪಾದಗಳು ಕ್ಯಾಂಡಿಡಯೋಸಿಸ್‌ ಎಂಬ ರೋಗಕ್ಕೆ ಈಡಾಗುತ್ತದೆ. ಇದಕ್ಕೆ ಕಾರಣ ತೇವಾಂಶದ ವಾತಾವರಣ, ಮತ್ತೆ ಮತ್ತೆ ಪಾದ ಒದ್ದೆಮುದ್ದೆ ಆಗುವುದು, ಚಪ್ಪಲಿ ಶೂ ಮಧ್ಯೆ ನೀರು ಸೇರಿಕೊಳ್ಳುವುದು ಇತ್ಯಾದಿ. ಹೀಗಾದಾಗ ತಕ್ಷಣ ವೈದ್ಯರನ್ನು ಸಂಪರ್ಕಿಸಿ ಚಿಕಿತ್ಸೆ ಪಡೆಯಿರಿ.

– ನಿಯಮಿತವಾಗಿ ಪೆಡಿಕ್ಯೂರ್‌ ಮಾಡಿಸುವುದರಿಂದ ಪಾದ ಮೃದು ಮತ್ತು ಆರ್ದ್ರತೆಯಿಂದ ಕೂಡಿರುತ್ತದೆ. ಇದರಲ್ಲಿ ಕಾಲುಬೆರಳುಗಳ ಸ್ವಚ್ಛತೆಯ ಜೊತೆಗೆ ಉಪಕರಣಗಳ ನೆರವಿನಿಂದ ಪಾದಕ್ಕೆ ವ್ಯಾಯಾಮ ಸಿಗುತ್ತದೆ.

– ಕಾಲುಬೆರಳಿನ ಉಗುರುಗಳನ್ನು ಆಗಾಗ ಕರ್ವ್ ಶೇಪ್‌ನಲ್ಲಿ ಕತ್ತರಿಸಿ, ಆಗ ಅದರಲ್ಲಿ ಕೊಳೆ ಜಮೆಯಾಗದು. ಉಗುರು ಕತ್ತರಿಸುವಾಗ ಅದರ ಕ್ಯುಟಿಕಲ್ಸ್ ಕತ್ತರಿಸಬೇಡಿ. ಏಕೆಂದರೆ ಇದು ಉಗುರಿನ ಕಠೋರ ಭಾಗವನ್ನು ಮೃದುಗೊಳಿಸುತ್ತದೆ,

– ಸದಾ ಉತ್ತಮ ಗುಣಮಟ್ಟದ ಫುಟ್‌ವೇರ್‌ನ್ನೇ ಧರಿಸಿ. ಇದು ಗಾಳಿ ಆಡುವಂತಿರಬೇಕು. ಆಗ ಅದು ಪಾದಗಳನ್ನು ಬೇಗ ಒಣಗಿಸುತ್ತದೆ.

– ಇತ್ತೀಚೆಗೆ ಕ್ಲೋಸ್ಡ್ ಫುಟ್‌ವೇರ್‌ ಸಹ ಮಳೆಯ ನೆಪದಿಂದಲೇ ರೂಪಿಸಲಾಗಿದೆ. ಇದು ತುಸು ಸ್ಟೈಲಿಶ್‌ ಆಗಿಯೂ ಇರುತ್ತದೆ. ಇದರಲ್ಲಿ ಗಮ್ ಬೂಟ್‌, ಸ್ಟ್ರಾಪರ್‌, ಬಿವ್ಯಾರಿನಾಸ್‌. ರಬ್ಬರ್‌ ಚಪ್ಪಲಿಗಳು ಇತ್ಯಾದಿ ಜನಪ್ರಿಯ ಎನಿಸಿವೆ.

– ಶೂ/ಚಪ್ಪಲಿ ಕಡಿಮೆ ಹೀಲ್‌ನದೇ ಆಗಿರಲಿ, ಆಗ ಜಾರಿ ಬೀಳುವ ಭಯವಿಲ್ಲ.

– ನೀವು ಆಫೀಸ್‌ ತಲುಪಿದ ನಂತರ, ಒದ್ದೆ ಪಾದಗಳನ್ನು ತಕ್ಷಣ ಒಣಬಟ್ಟೆಯಿಂದ ಒರೆಸಿಕೊಳ್ಳಿ. ಫುಟ್‌ವೇರ್‌ ಒಣಗಿದ ನಂತರವೇ ಧರಿಸಿರಿ. ಮನೆಗೆ ಹೋದ ತಕ್ಷಣ, ಬಿಸಿ ನೀರಿಗೆ 1 ಚಮಚ ವಿನಿಗರ್‌ ಬೆರೆಸಿ, ಅದರಲ್ಲಿ ಪಾದಗಳನ್ನು ಅದ್ದಿಡಿ. ಆಮೇಲೆ ಪಾದಗಳನ್ನು ಚೆನ್ನಾಗಿ ಒರೆಸಿ, ಒಣಗಿಸಿ, ಫುಟ್‌ ಕ್ರೀಂ ಹಚ್ಚಿಕೊಳ್ಳಿ.

– ಫಂಗಸ್‌ನಿಂದ ಪಾರಾಗಲು ಬೇಕಿಂಗ್‌ ಸೋಡ ಬಳಸಬಹುದು. ಇದು ಪಿಎಚ್ ಬ್ಯಾಲೆನ್ಸ್ ಮೇಂಟೇನ್‌ ಮಾಡಲು ಸಹಕರಿಸುತ್ತದೆ. ಇದರ ಪೇಸ್ಟ್ ಮಾಡಿ ಪಾದಕ್ಕೆ ಹಚ್ಚಬಹುದು, ಪುಡಿಯನ್ನು ಫುಟ್‌ವೇರ್‌ ಮೇಲೆ ಸಿಂಪಡಿಸಬಹುದು.

– ಯಾವುದೇ ಬಗೆಯ ಪಾದಗಳ ಇನ್‌ಫೆಕ್ಷನ್‌ನಿಂದ ಪಾರಾಗಲು, ಒಂದು ಟಬ್‌ಗೆ 2-3 ಚಮಚ ಕಲ್ಲುಪ್ಪು ಬೆರೆಸಿ, 15 ನಿಮಿಷ ಪಾದಗಳನ್ನು ಅದರಲ್ಲಿ ಅದ್ದಿಡಿ. ಹೀಗೆ ಡೇಲಿ ಮಾಡುವುದರಿಂದ ಸೋಂಕು ಆಗೋಲ್ಲ. ಇದು ಎಲ್ಲಕ್ಕಿಂತಲೂ ಉತ್ತಮ ಆ್ಯಂಟಿಸೆಪ್ಟಿಕ್‌ ಎನಿಸಿದೆ.

– ಬೆಚ್ಚಗಿನ ನೀರಿಗೆ ತುಸು ಅರಿಶಿನ ಬೆರೆಸಿ, ಸೋಂಕು ತಗುಲಿರುವ ಬೆರಳು ಸಂದುಗಳನ್ನು ತೊಳೆದು, ಒರೆಸಿ, ಒಣಗಿಸಿ, ಬೋರಿಕ್‌ ಪೌಡರ್‌ ಉದುರಿಸಿ,

– ಕೊಬ್ಬರಿ ಎಣ್ಣೆಗೆ ತುಸು ಬೇವಿನ ಎಣ್ಣೆ ಬೆರೆಸಿ ಬೆರಳು ಸಂದುಗಳಿಗೆ ಸವರುವುದರಿಂದ, ಫಂಗಸ್‌ ಕಡಿಮೆ ಆಗುತ್ತದೆ, ಅದರಿಂದಾಗುವ ನೋವಿನ ಬಾಧೆ  ತಪ್ಪುತ್ತದೆ.

– ಅಕಸ್ಮಾತ್‌ ನೀವು ಡಯಾಬಿಟಿಕ್‌ ಆಗಿದ್ದರೆ, ನಿಮ್ಮ ಪಾದಗಳನ್ನು ಮತ್ತಷ್ಟು ಎಚ್ಚರಿಕೆಯಿಂದ ಗಮನಿಸಿಕೊಳ್ಳಿ. ನೈಲಾನ್‌ ಬದಲಿಗೆ ಕಾಟನ್‌ ಸಾಕ್ಸ್ ಧರಿಸಿರಿ. ಸಾಕ್ಸ್ ಒದ್ದೆ ಅನಿಸಿದಾಗ ತಕ್ಷಣ ಬದಲಾಯಿಸಿ ಒಣಗಿದ್ದನ್ನು ಧರಿಸಿರಿ. ಸದಾ ಒಂದು ಜೊತೆ ಒಣ ಸಾಕ್ಸ್ ನಿಮ್ಮ ಬಳಿ ಇರಲಿ. ಈ ಮಳೆಗಾಲದಲ್ಲಿ ಬರಿಗಾಲಲ್ಲಿ ಓಡಾಡಲೇ ಬೇಡಿ. ಇದಕ್ಕೂ ಮೀರಿ ಸಮಸ್ಯೆ ಕಾಣಿಸಿದರೆ ಕೂಡಲೇ ಚರ್ಮತಜ್ಞರನ್ನು ಸಂಪರ್ಕಿಸಿ.

– ಎಸ್‌. ಅನುಪಮಾ

Tags:
COMMENT