ತಿಂಗಳ ಆ ದಿನಗಳಲ್ಲಿ ಪ್ರತಿಯೊಬ್ಬ ಮಹಿಳೆಯ ಅವಶ್ಯಕತೆ ಬೇರೆ ಬೇರೆಯೇ ಆಗಿರುತ್ತದೆ. ಕೆಲವು ಮಹಿಳೆಯರಿಗೆ ಕಾಟನ್‌ ನ್ಯಾಪ್‌ಕಿನ್‌ ಹಿತಕರ ಎನಿಸಿದರೆ, ಬೇರೆ ಕೆಲವು ಜನರಿಗೆ ನಿಟ್ಟೆಡ್‌ ಉಪಯಕ್ತ ಎನಿಸುತ್ತವೆ. ಎಲ್ಲರ ಅವಶ್ಯಕತೆಗಳನ್ನು ಗಮನದಲ್ಲಿಟ್ಟುಕೊಂಡು ಮಾರುಕಟ್ಟೆಯಲ್ಲಿ ಬಗೆ ಬಗೆಯ ನ್ಯಾಪ್‌ಕಿನ್‌ಗಳು ಲಭ್ಯವಿವೆ. ಈ ಎಲ್ಲ ನ್ಯಾಪ್‌ಕಿನ್‌ಗಳು ಕೇವಲ ಅವರ ಅವಶ್ಯಕತೆಗಳಷ್ಟೇ ಅಲ್ಲ, ಅವರು ಧರಿಸುವ ಪೋಷಾಕುಗಳನ್ನು ಸಹ ಗಮನದಲ್ಲಿಟ್ಟುಕೊಂಡು ತಯಾರಿಸಲಾಗುತ್ತದೆ.

ಸ್ಯಾನಿಟರಿ ಪ್ಯಾಡ್ಸ್, ಸ್ಯಾನಿಟರಿ ಟವಲ್, ಮ್ಯಾಕ್ಸಿ, ಪ್ಯಾಡ್ಸ್ ಇವೆಲ್ಲ ಸ್ಯಾನಿಟರಿ ನ್ಯಾಪ್‌ಕಿನ್‌ನ ಬೇರೆ ಬೇರೆ ಹೆಸರುಗಳಾಗಿವೆ. ಸ್ಯಾನಿಟರಿ ಪ್ಯಾಡ್‌ ಎಂಬುದು ಕಾಟನ್‌ ಮತ್ತು ಸೆಲ್ಯುಲೋಸ್‌ನಿಂದ ನಿರ್ಮಿಸಿದ ಒಂದು ಹೀರಿಕೊಳ್ಳುವ ಸಾಧನವಾಗಿದ್ದು, ಅದು ಮುಟ್ಟಿನ ಹರಿವನ್ನು ಜೆಲ್ಲಿಯಲ್ಲಿ ಬದಲಿಸುತ್ತದೆ.

ಹೇಗೆ ಬಂತು ಸ್ಯಾನಿಟರಿ ನ್ಯಾಪಕಿನ್‌?

ಹಿಂದಿನ ಕಾಲದಲ್ಲಿ ಮಹಿಳೆಯರು ಮುಟ್ಟಿನ ಸ್ರಾವವನ್ನು ತಡೆಯಲು ಹುಲ್ಲು, ಮೊಲದ ಚರ್ಮ, ತೆಂಗಿನ ನಾರು ಮುಂತಾದವುಗಳನ್ನು ಉಪಯೋಗಿಸುತ್ತಿದ್ದರು. ಕ್ರಮೇಣ ಬಟ್ಟೆಯನ್ನು ಉಪಯೋಗಿಸತೊಡಗಿದರು. ಬಳಿಕ 1895ರಲ್ಲಿ ಮಾರುಕಟ್ಟೆಯಲ್ಲಿ ಮೊದಲ ಸ್ಯಾನಿಟರಿ ನ್ಯಾಪ್‌ಕಿನ್‌ ಬಂತು. ಅದು ಆಯತಾಕಾರದಲ್ಲಿತ್ತಲ್ಲದೆ, ಹತ್ತಿಯ ಎಳೆಯಿಂದ ತಯಾರಿಸಿದುದಾಗಿತ್ತು. ಅದನ್ನು ಉಪಯೋಗಿಸಿದ ಬಳಿಕ ಸುಲಭವಾಗಿ ನಾಶಗೊಳಿಸಬಹುದಾಗಿತ್ತು. ಈ ಪ್ಯಾಡ್‌ನ್ನು ಬೆಲ್ಟ್ ನ ಸಹಾಯದಿಂದ ಕಟ್ಟಿಕೊಂಡು ಧರಿಸಬೇಕಾಗಿತ್ತು. ಆದರೆ ಮಹಿಳೆಯರಿಗೆ ಹೀಗೆ ಕಟ್ಟಿಕೊಳ್ಳಲು ತೊಂದರೆಯಾಗುತ್ತಿತ್ತು. ಹೀಗಾಗಿ ಇದರ ರಚನೆಯನ್ನು ಬದಲಿಸಲಾಯಿತು. ಪ್ಯಾಡ್‌ನ ಕೆಳಭಾಗದಲ್ಲಿ ಒಂದು ಬಗೆಯ ಅಂಟು ಪದಾರ್ಥವನ್ನು ಸವರಲಾಯಿತು. ಏಕೆಂದರೆ ಇದು ಪ್ಯಾಂಟಿಯಲ್ಲಿ ಸುಲಭವಾಗಿ ಅಂಟಿಕೊಂಡು ಸುರಕ್ಷತೆ ನೀಡಬೇಕಿತ್ತು. ಕಾಲಕಾಲಕ್ಕೆ ಇದರಲ್ಲಿ ಸಾಕಷ್ಟು ಬದಲಾವಣೆಯನ್ನು ಕೂಡ ಮಾಡಲಾಯಿತು. ಇಂದು ಹಲವು ಬಗೆಯ ನ್ಯಾಪ್‌ಕಿನ್‌ಗಳು ಲಭ್ಯವಿದ್ದು, ಮಹಿಳೆಯರಿಗೆ ತೇವದಿಂದ ಸ್ವಾತಂತ್ರ್ಯ ದೊರೆತಿದೆ.

ಪ್ಯಾಂಟಿ ಲೈನರ್‌ : ಇದು ಅತ್ಯುತ್ತಮ ರೀತಿಯಲ್ಲಿ ಹೀರುವ ಸಾಮರ್ಥ್ಯ ಹೊಂದಿದ್ದು, ವಿಂಗ್ಸ್ ಹಾಗೂ ವಿಂಗ್ಸ್ ರಹಿತ ಎರಡೂ ರೀತಿಯಲ್ಲಿ ಪ್ಯಾಡ್‌ನ್ನು ಉಪಯೋಗಿಸಬಹುದಾಗಿದೆ.

ಅಲ್ಟ್ರಾಥಿನ್‌ : ಈ ಬಗೆಯ ಪ್ಯಾಡ್‌ಗಳು ಬೇರೆ ಪ್ಯಾಡ್‌ಗಳಿಗೆ ಹೋಲಿಸಿದಲ್ಲಿ ಸಾಕಷ್ಟು ತೆಳ್ಳಗೆ ಹಾಗೂ ಆರಾಮದಾಯಕವಾಗಿರುತ್ತವೆ. ಯಾವ ಯುವತಿಯರು ಜೀನ್ಸ್ ಅಥವಾ ಟ್ರೌಸರ್‌ ಧರಿಸುತ್ತಾರೊ, ಅವರಿಗೆ ಅಲ್ಟ್ರಾಥಿನ್‌ ಪ್ಯಾಡ್ಸ್ ಉತ್ತಮವಾಗಿರುತ್ತವೆ.

ರೆಗ್ಯುಲರ್‌ ಪ್ಯಾಡ್ಸ್ : ಇವು ಮಧ್ಯಮ ಪ್ರಮಾಣದಲ್ಲಿ ಹೀರುವ ಸಾಮರ್ಥ್ಯ ಹೊಂದಿದ್ದು, ಅದು ಸ್ರಾವವನ್ನು ಹೀರಿಕೊಂಡು ಮೇಲ್ಭಾಗವನ್ನು ಶುಷ್ಕವಾಗಿಡುತ್ತವೆ. ಸಾಮಾನ್ಯ ಸ್ರಾವವಾಗುವ ಮಹಿಳೆಯರಿಗೆ ಇವು ಉಪಯುಕ್ತ.

ಮ್ಯಾಕ್ಸಿ / ಸೂಪರ್‌: ಮುಟ್ಟಿನ ದಿನಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ರಕ್ತಸ್ರಾವ ಉಂಟಾಗುವ ಮಹಿಳೆಯರಿಗೆ ಮ್ಯಾಕ್ಸಿ ಪ್ಯಾಡ್‌ಗಳು ಉಪಯುಕ್ತ. ಇವು ಸಾಕಷ್ಟು ದಪ್ಪ ಹಾಗೂ ಉದ್ದವಾಗಿರುತ್ತವೆ. ಸಾಮಾನ್ಯವಾಗಿ ವೈದ್ಯರು ಹೆರಿಗೆಯ ಬಳಿಕದ ದಿನಗಳಲ್ಲಿ ಮ್ಯಾಕ್ಸಿ ಪ್ಯಾಡ್ಸ್ ಉಪಯೋಗಿಸಲು ಸಲಹೆ ನೀಡುತ್ತಾರೆ.

ನೈಟಿ ಪ್ಯಾಡ್ಸ್ : ಇವು ಸಾಕಷ್ಟು ಉದ್ದವಾಗಿರುತ್ತವೆ ಹಾಗೂ ಹೆಚ್ಚು ಹೊತ್ತಿನ ತನಕ ಉಳಿಯುತ್ತವೆ. ರಾತ್ರಿ ಮಲಗುವಾಗ ಈ ಪ್ಯಾಡ್‌ನ್ನು ಉಪಯೋಗಿಸಲಾಗುತ್ತದೆ. ಏಕೆಂದರೆ ಮೇಲಿಂದ ಮೇಲೆ ಎದ್ದು ಪ್ಯಾಡ್‌ ಬದಲಿಸುವ ಅವಶ್ಯಕತೆ ಉಂಟಾಗುವುದಿಲ್ಲ.

ಸುವಾಸಿತ ಪ್ಯಾಡ್ಸ್ : ಈಗ ಮಾರುಕಟ್ಟೆಯಲ್ಲಿ ಸುವಾಸಿತ ಪ್ಯಾಡ್‌ಗಳು ಕೂಡ ಲಭ್ಯವಿವೆ. ಅವು ನಿಮಗೆ ದಿನವಿಡೀ ಲಘು ಸುವಾಸನೆ ಬೀರುತ್ತ ನಿಮ್ಮನ್ನು ತಾಜಾತನದಿಂದ ಇಡುತ್ತವೆ.

ಆಕಾರ : ಸ್ಯಾನಿಟರಿ ಪ್ಯಾಡ್‌ಗಳು 2 ಬಗೆಯ ಆಕಾರವನ್ನು ಹೊಂದಿರುತ್ತವೆ. ಮೊದಲನೆಯದು ರೆಕ್ಟ್ಯಾಂಗ್ಯುಲರ್‌ ಶೇಪ್‌. ಅದನ್ನು ಪ್ಯಾಂಟಿಯಲ್ಲಿ ಅಂಟಿಸಲಾಗುತ್ತದೆ. ಎರಡನೆಯದು ವಿಂಗ್ಸ್ ಶೇಪ್‌. ಇದರಲ್ಲಿ ಅಳವಡಿಸಿರುವ ವಿಂಗ್ಸ್ ನ್ನು ಪ್ಯಾಂಟಿಯಿಂದ ಹೊರಗಡೆ ಅಂಟಿಸಲಾಗುತ್ತದೆ. ಏಕೆಂದರೆ ಹೆಚ್ಚಿನ ಸ್ರಾವದ ಸಂದರ್ಭದಲ್ಲಿ ಅಂಚುಗಳಿಗೆ ಸುರಕ್ಷತೆ ದೊರೆಯಲಿ ಎನ್ನುವುದಾಗಿರುತ್ತದೆ.

ಮೆಟೀರಿಯಲ್ : ಸ್ಯಾನಿಟರಿ ಪ್ಯಾಡ್‌ನಲ್ಲಿ ಪ್ಲೇನ್‌ ಕಾಟನ್‌, ಸಿಂಥೆಟಿಕ್‌ ಮೆಟೀರಿಯಲ್, ನೆಟ್‌ ಸ್ಪ್ರಿಂಗ್‌, ನಾನ್‌ಲೇನ್‌ ಕ್ಲಾಥ್‌, ಏರ್‌ಲೆಡ್‌ ಪೀಲ್, ಬ್ರೀದೆಬಲ್ ಪೀಯಿಫಿಲ್ಮ್, ಪ್ಲಾಸ್ಟಿಕ್‌, ಟಿಶ್ಯೂ ಪೇಪರ್‌ ಮುಂತಾದವುಗಳನ್ನು ಬಳಸಲಾಗುತ್ತದೆ.

have-a-happy-period

ಸಾಮಾನ್ಯವಾಗಿ ಪ್ಯಾಡ್‌ನಲ್ಲಿ 3 ಬಗೆಯ ಪದರುಗಳಿರುತ್ತವೆ. ಮೊದಲ ಪದರ ನೆಟ್‌ನಿಂದ ಕೂಡಿರುತ್ತದೆ. ಅದು ಮೇಲ್ಭಾಗವನ್ನು ಶುಷ್ಕವಾಗಿಡುತ್ತದೆ. ಎರಡನೇ ಪದರ ಹತ್ತಿಯ ಎಳೆಯದಾಗಿದ್ದು, ಅದು ದ್ರವ ಪದಾರ್ಥವನ್ನು ಜೆಲ್ಲಿಯ ರೂಪದಲ್ಲಿ ಬದಲಿಸುತ್ತದೆ ಹಾಗೂ ಮೂರನೇ ಲೇಯರ್‌ನಲ್ಲಿ ಪ್ಲಾಸ್ಟಿಕ್‌ನ ಅಂಡರ್‌ ಲೈನಿಂಗ್‌ ಇರುತ್ತದೆ. ಅದು ಬಾಹ್ಯ ಸುರಕ್ಷತೆ ನೀಡುತ್ತದೆ. ಈಗ 7 ಲೇಯರ್ಸ್ ನ ಪ್ಯಾಡ್‌ಗಳು ಕೂಡ ಬಂದಿದ್ದು, ಅವು ಕೂಡ ಸಾಕಷ್ಟು ಸುರಕ್ಷತೆ ನೀಡುತ್ತವೆ. ಇವುಗಳ ಲೇಯರ್ಸ್ ಸಾಕಷ್ಟು ಸಾಫ್ಟ್ ಮತ್ತು ಆರಾಮದಾಯಕವಾಗಿರುತ್ತವೆ. ಅವು ತೇವಾಂಶವನ್ನು ಬ್ಲಾಕ್‌ ಮಾಡಿ ಜೆಲ್‌ನಲ್ಲಿ ಪರಿವರ್ತಿಸುತ್ತವೆ. ಜೊತೆಗೆ ಬ್ಯಾಕ್ಟೀರಿಯಾ ಹಾಗೂ ಸೋಂಕಿನಿಂದಲೂ ರಕ್ಷಿಸುತ್ತವೆ. ಇವುಗಳ ನಡುವೆ ಒಂದು ತೆರನಾದ `ಸೆಕ್ಯೂರ್‌ ಸೆಂಟರ್‌’ ಇರುತ್ತದೆ. ಅದು ಹೆಚ್ಚಿನ ಸ್ರಾವವನ್ನು ಸುಲಭವಾಗಿ ಹೀರಿಕೊಳ್ಳುತ್ತದೆ.

ಸ್ಯಾನಿಟರ್‌ ನ್ಯಾಪ್‌ಕಿನ್‌ನ ಹೊರತಾಗಿ ಟವೆಲ್ ‌ಮತ್ತು ಟ್ಯಾಂಪೂನ್‌ ಕೂಡ ಸ್ಯಾನಿಟರಿ ಪ್ರೊಟೆಕ್ಷನ್‌ ನೀಡುತ್ತವೆ. ಟವೆಲ್‌ನ್ನು ಪ್ಯಾಂಟಿಯ ಒಳಭಾಗದಲ್ಲಿ ಇಡಲಾಗುತ್ತದಾದರೆ, ಟ್ಯಾಂಪೂನ್‌ನ್ನು ಯೋನಿಯೊಳಗೆ. ಒಂದು ವೇಳೆ ನೀವು ಮುಟ್ಟಿನ ಆರಂಭದ ದಿನಗಳಲ್ಲಿ ಇದ್ದು, ನ್ಯಾಪ್‌ಕಿನ್‌ ನಿಮಗೆ ಸರಿಹೊಂದುತ್ತಿಲ್ಲ ಎನ್ನುವುದಾದರೆ ಟವೆಲ್ ‌ನಿಮಗೆ ಸೂಕ್ತ ಪರ್ಯಾಯವಾಗಿರುತ್ತದೆ.

ಸಾಮಾನ್ಯವಾಗಿ ಹುಡುಗಿಯರು ಈಜು ಸಂದರ್ಭದಲ್ಲಿ ಟ್ಯಾಂಪೂನ್‌ನನ್ನು ಉಪಯೋಗಿಸುತ್ತಾರೆ. ಆದರೆ ತಾರುಣ್ಯಾವಸ್ಥೆಯಲ್ಲಿ ಟ್ಯಾಂಪೂನ್‌ ಬಳಸುವುದು ಸಾಕಷ್ಟು ಕಠಿಣ ಹಾಗೂ ಹಾನಿಕಾರಕವಾದುದಾಗಿರುತ್ತದೆ. ಬೆಂಗಳೂರಿನ ಸ್ತ್ರೀರೋಗ ತಜ್ಞೆ ಡಾ. ನಿಧಿ ಹೇಳುವುದೇನೆಂದರೆ, ಮುಟ್ಟಿನ ದಿನಗಳಲ್ಲಿ ನೈರ್ಮಲ್ಯದ ಬಗ್ಗೆ ಗಮನಕೊಡುವುದು ಹೆಚ್ಚು ಅಗತ್ಯ. ಈಗಲೂ ಹೆಚ್ಚಿನ ಮಹಿಳೆಯರು ಬಟ್ಟೆಯನ್ನೇ ಉಪಯೋಗಿಸುತ್ತಾರೆ. ಆದರೆ ಇದು ಆರೋಗ್ಯದ ದೃಷ್ಟಿಯಿಂದ ಒಳ್ಳೆಯದಲ್ಲ. ಇದರ ಕಾರಣದಿಂದ ಸೋಂಕು ಉಂಟಾಗಬಹುದು. ಇಂತಹ ಸ್ಥಿತಿಯಲ್ಲಿ ನ್ಯಾಪ್‌ಕಿನ್‌ ಅತ್ಯುತ್ತಮ ಡಿಸ್ಪೋಸಬಲ್ ಉತ್ಪನ್ನವಾಗಿದೆ. ಇದು ಯಾವುದೇ ವಯಸ್ಸಿನ ಮಹಿಳೆಯರಿಗೂ ಬಳಸಲು ಸೂಕ್ತವಾಗಿದೆ.

ನ್ಯಾಪ್‌ಕಿನ್‌ ಹಾರ್ಮೋನನ್ನು ಬ್ಯಾಲನ್ಸ್ ಮಾಡುತ್ತದೆ ಹಾಗೂ ಒತ್ತಡವನ್ನು ನಿವಾರಿಸಿ ಆ ದಿನಗಳನ್ನು ಸುಲಭಗೊಳಿಸಲು ನೆರವಾಗುತ್ತದೆ.

ಸಾಮಾನ್ಯವಾಗಿ ಮಹಿಳೆಯರು ನ್ಯಾಪ್‌ಕಿನ್‌ ಬಳಸುವಾಗ ಕೆಳಕಂಡ ತಪ್ಪಗಳನ್ನು ಮಾಡುತ್ತಾರೆ. ಅವುಗಳ ಬಗ್ಗೆ ಅವರು ಗಮನಹರಿಸಬೇಕು.

ನ್ಯಾಪ್‌ಕಿನ್‌ನ್ನು ಬಳಸುವ ಮುನ್ನ ಎಷ್ಟೋ ಸಲ ಮಹಿಳೆಯರು ತಮ್ಮ ಕೈಗಳನ್ನು ಸ್ವಚ್ಛಗೊಳಿಸಿರುವುದಿಲ್ಲ. ಹೀಗಾಗಿ ನ್ಯಾಪ್‌ಕಿನ್‌ನ್ನು ತೆಗೆದು ಅಂಟಿಸಲು ಹೋದಾಗ ಕೈಗಳಿಗೆ ತಗುಲಿಕೊಂಡ ಬ್ಯಾಕ್ಟೀರಿಯಾಗಳು ನ್ಯಾಪ್‌ಕಿನ್‌ಗೂ ಅಂಟಿಕೊಳ್ಳುತ್ತವೆ.

ಹೆಚ್ಚು ಅವಧಿಯತನಕ ಒಂದೇ ನ್ಯಾಪ್‌ಕಿನ್‌ ಧರಿಸುತ್ತಾರೆ, ಇದು ಸರಿಯಲ್ಲ.

ಪ್ಯಾಕೆಟ್‌ ಮೇಲೆ ನಮೂದಿಸಿದ ಉತ್ಪನ್ನದ ದಿನಾಂಕ, ಪ್ಯಾಕಿಂಗ್‌ ದಿನಾಂಕ ಮತ್ತು ಅದರ ಎಕ್ಸ್ ಪೈರಿ ದಿನಾಂಕಗಳನ್ನು ಗಮನಿಸುವುದಿಲ್ಲ. ಎಕ್ಸ್ ಪೈರಿ ದಿನಾಂಕ ಆಗಿಹೋದ ಬಳಿಕ ಅದನ್ನು ಬಳಸುತ್ತಾರೆ. ಈ ಕಾರಣದಿಂದ ಸೋಂಕಿನ ಸಮಸ್ಯೆ ಉಂಟಾಗುತ್ತದೆ. ಹೀಗೆ ಮಾಡಲು ಹೋಗಬೇಡಿ.

ಸೋಂಕಿನ ಲಕ್ಷಣಗಳು

ಹೆಚ್ಚಿನ ಪ್ರಮಾಣದಲ್ಲಿ ಸ್ರಾವ.

ಮುಟ್ಟಿನ ಸಂದರ್ಭದಲ್ಲಿ ಬಿಳಿ ಅಥವಾ ಗ್ರೇ ಬಣ್ಣದ ದ್ರವ ಹೊರಬರುವುದು.

ಮುಟ್ಟಿನ ಸಮಯದಲ್ಲಿ ಮೀನಿನಂತೆ ವಾಸನೆ ಹೊರಹೊಮ್ಮುವುದು.

ಡಿಸ್ಪೋಸ್‌ ಮಾಡುವುದು ಹೇಗೆ?

ನ್ಯಾಪ್‌ಕಿನ್‌ನ್ನು ಉಪಯೋಗಿಸಿದ ಬಳಿಕ ಟಾಯ್ಲೆಟ್‌ ಪೇಪರ್‌ ಅಥವಾ ವರ್ತಮಾನ ಪತ್ರಿಕೆಯಲ್ಲಿ ಸುತ್ತಿಡಿ.

ಪೇಪರ್‌ನಲ್ಲಿ ಸುತ್ತಿದ ನ್ಯಾಪ್‌ಕಿನ್‌ನ್ನು ಮಹಿಳೆಯರು ಎಲ್ಲೆಂದರಲ್ಲಿ ಬಿಸಾಡುತ್ತಾರೆ. ಹೀಗೆ ಮಾಡುವುದು ತಪ್ಪು. ನ್ಯಾಪ್‌ಕಿನ್‌ನ್ನು ಪ್ಲಾಸ್ಟಿಕ್‌ ಕವರ್‌ನಲ್ಲಿ ಹಾಕಿ ಬಿಸಾಡಿ.

ನ್ಯಾಪ್‌ಕಿನ್‌ನ್ನು ಯಾವುದೇ ಕಾರಣಕ್ಕೂ ಟಾಯ್ಲೆಟ್‌ನಲ್ಲಿ ಡಿಸ್ಪೋಸ್‌ ಮಾಡಬೇಡಿ.  ನೈರ್ಮಲ್ಯ ಯಾವುದೇ ನ್ಯಾಪ್‌ಕಿನ್‌ನ್ನು ಆಯ್ಕೆ ಮಾಡುವ ಸಂದರ್ಭದಲ್ಲಿ ಪ್ಯಾಡ್‌ನಲ್ಲಿ ಬಳಸಲ್ಪಡುವ ಸೂಕ್ಷ್ಮ ಪ್ಲಾಸ್ಟಿಕ್‌ ಫ್ಯಾಬ್ರಿಕ್‌ ಅಥವಾ ಜೆಲ್‌ನಿಂದ ನಿಮಗೆ ಅಲರ್ಜಿಯೇನೂ ಉಂಟಾಗುತ್ತಿಲ್ಲ ತಾನೇ? ತುರಿಕೆಯಂತಹ ಸಮಸ್ಯೆ ಉಂಟಾಗುತ್ತಿದ್ದರೆ ನ್ಯಾಪ್‌ಕಿನ್‌ ಬಳಸುವುದನ್ನು ನಿಲ್ಲಿಸಿ, ಹತ್ತಿಯ ನ್ಯಾಪ್‌ಕಿನ್‌ನ್ನು ಬಳಸಲು ಆರಂಭಿಸಿ.

ಈ ಅವಧಿಯಲ್ಲಿ ಜೈನ್‌ ಭಾಗದಲ್ಲಿ ಯಾವುದೇ ತೆರನಾದ ಸ್ಪ್ರೇ ಮಾಡಬೇಡಿ. ಈ ಸ್ಪ್ರೇ ಸ್ವಲ್ಪ ಸಮಯದ ಮಟ್ಟಿಗೆ ಬ್ಯಾಕ್ಟೀರಿಯಾ ಹಾಗೂ ದುರ್ವಾಸನೆಯಿಂದ ರಕ್ಷಿಸಬಹುದು. ಆದರೆ ಇವುಗಳಿಂದ  ಸೋಂಕು ಉಂಟಾಗುವ ಸಾಧ್ಯತೆ ಇರುತ್ತದೆ.

ನಿಮ್ಮ ಮಗಳಿಗೆ ಮೊದಲೇ ತಿಳಿಸಿ

ನಿಮ್ಮ ಮಗಳಿಗೆ ಮೊದಲೇ ಈ ವಿಷಯದ ಬಗ್ಗೆ ತಿಳಿಸಿ. ಏಕೆಂದರೆ ಆಕೆ ಯೌವನಕ್ಕೆ ಕಾಲಿಟ್ಟಾಗ ಯಾವುದೇ ಸಮಸ್ಯೆ ಉಂಟಾಗಬಾರದು.

ಇದೊಂದು ನೈಸರ್ಗಿಕ ನಿಯಮ. ಪ್ರತಿಯೊಬ್ಬ ಹುಡುಗಿಯೂ ಇದನ್ನು ಎದುರಿಸಬೇಕಾಗುತ್ತದೆ.

ಇದು ನಮ್ಮ ಸಂತಾನೋತ್ಪತ್ತಿ ಪ್ರಕ್ರಿಯೆಯ ಒಂದು ಭಾಗ. ತಾಯಿಯಾಗಲು ಇದು ಅತ್ಯವಶ್ಯ ಎಂದು ತಿಳಿಹೇಳಿ.

– ಡಾ. ಸುಧಾ

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ