ದೇಹವನ್ನು ಆರೋಗ್ಯದಿಂದಿಡಲು ಕೇವಲ ಪೌಷ್ಟಿಕ ಆಹಾರ ಸೇವಿಸಿದರೆ ಸಾಲದು. ತಿಂದ ಆಹಾರವನ್ನು ಸರಿಯಾಗಿ ಪಚನ ಮಾಡಿಕೊಳ್ಳುವುದು ಅತ್ಯವಶ್ಯ. ಆಹಾರದ ಸರಿಯಾದ ಪಚನಕ್ರಿಯೆಯಿಂದಲೇ ದೇಹ ಆರೋಗ್ಯದಿಂದ ಇರುತ್ತದೆ.
ಏಕೆಂದರೆ ಆಹಾರ ಹಾಗೂ ದ್ರವ ಪದಾರ್ಥಗಳ ಪಚನದಿಂದಾಗಿ ದೇಹಕ್ಕೆ ಶಕ್ತಿ ಹಾಗೂ ಪೋಷಣೆ ದೊರಕುತ್ತದೆ.
ಪಚನಕ್ರಿಯೆ ದುರ್ಬಲವಾಗಿದ್ದರೂ ಆಹಾರವನ್ನು ಶಕ್ತಿಯಾಗಿ ಬದಲಿಸುವ ಸಾಮರ್ಥ್ಯ ದುರ್ಬಲವಾಗುತ್ತದೆ. ಆ ಕಾರಣದಿಂದ ಆಹಾರ ಪಚನವಾಗದೆಯೇ ಮಲದ ರೂಪದಲ್ಲಿ ಹೊರಗೆ ಹೋಗುತ್ತದೆ. ಅದರಿಂದಾಗಿ ಗ್ಯಾಸ್, ಅಸಿಡಿಟಿ, ಮಲಬದ್ಧತೆಯಂತಹ ಸಮಸ್ಯೆಗಳು ಎದುರಾಗುತ್ತವೆ. ತಲೆ ಸುತ್ತಿದಂತಾಗುವುದು, ಹೊಟ್ಟೆನೋವು, ಹೊಟ್ಟೆಯಲ್ಲಿ ಊತ, ಅಪಚನ ಗ್ಯಾಸ್ ಇವೆಲ್ಲ ಪಚನಕ್ರಿಯೆ ಸರಿಯಾಗಿ ಇಲ್ಲದಿರುವುದರ ಸಂಕೇತಗಳಾಗಿವೆ.
ತಜ್ಞರ ಪ್ರಕಾರ, ಪಚನಕ್ರಿಯೆ ಸರಿಯಾಗಿ ಇಲ್ಲದಿರುವುದು ಹಲವು ಅಪಾಯಕಾರಿ ರೋಗಗಳಿಗೆ ಆಹ್ವಾನ ಕೊಡುತ್ತದೆ. ಹೊಟ್ಟೆಯ ಸಮಸ್ಯೆಗಳಿಗೆ ಮುಖ್ಯ ಕಾರಣ ಇಂದಿನ ಅಸ್ತವ್ಯಸ್ತ ಲೈಫ್ ಸ್ಟೈಲ್ ಆಗಿದೆ.
ನಮ್ಮ ದೇಹದ ಪಚನಾಂಗ ವ್ಯವಸ್ಥೆ ಆಹಾರವನ್ನು ಪಚನ ಮಾಡುವ ಕೆಲಸ ಮಾಡುತ್ತದೆ. ಆಹಾರದ ಪಚನ ಕ್ರಿಯೆಯಲ್ಲಿ ಹಲ್ಲು, ಬಾಯಿ, ಲಾವಾರಸ ಗ್ರಂಥಿಗಳು, ಚಿಕ್ಕ ಕರುಳು, ಅನ್ನನಾಳ, ದೊಡ್ಡ ಕರುಳು ಪ್ರಮುಖ ಪಾತ್ರ ವಹಿಸುತ್ತವೆ. ಆಹಾರ ಬಾಯಿಗೆ ಬರುತ್ತಿದ್ದಂತೆ ಹಲ್ಲುಗಳು ಅದನ್ನು ಸರಿಯಾಗಿ ಅಗಿಯುವುದರಿಂದ ಲಾವಾರಸದಲ್ಲಿರುವ ಕಿಣ್ವಗಳು (ಎಂಜೈಮ್ಸ್) ಅದನ್ನು ಪಚನ ಮಾಡುವ ಕ್ರಿಯೆಯಲ್ಲಿ ನೆರವಾಗುತ್ತವೆ. ಬಾಯಿಯ ನಂತರ ಆಹಾರ ಅನ್ನನಾಳದ ಮುಖಾಂತರ ಹೊಟ್ಟೆಗೆ ಪ್ರವೇಶಿಸುತ್ತದೆ.
ಹೊಟ್ಟೆಯ ಗೋಡೆಗಳ ಮುಖಾಂತರ ಸ್ರವಿಸಲ್ಪಡುವ ಆ್ಯಸಿಡ್ ಆಹಾರವನ್ನು ಚಿಕ್ಕ ಚಿಕ್ಕ ಕಣಗಳಾಗಿ ಪರಿವರ್ತಿಸಿ ಅದನ್ನು ಘನ ಪದಾರ್ಥವಾಗಿ ಪರಿವರ್ತಿಸುತ್ತದೆ. ಆ ಬಳಿಕ ಆಹಾರ ಚಿಕ್ಕ ಕರುಳಿಗೆ ಪ್ರವೇಶಿಸುತ್ತದೆ. ಚಿಕ್ಕ ಕರುಳಿನ ಗ್ರಂಥಿಗಳು ಆಹಾರದಿಂದ ಶೇ.90ರಷ್ಟು ಪೋಷಕಾಂಶಗಳನ್ನು ಹೀರಿಕೊಳ್ಳುತ್ತವೆ. ಚಿಕ್ಕ ಕರುಳಿನ ಮುಖಾಂತರ ಆಹಾರ ದೊಡ್ಡ ಕರುಳಿಗೆ ತಲುಪುತ್ತದೆ. ಅಲ್ಲಿ ನೀರನ್ನೆಲ್ಲ ಹೀರಿಕೊಂಡ ಬಳಿಕ ಅದು ತ್ಯಾಜ್ಯ ರೂಪದಲ್ಲಿ ಮಲದ್ವಾರದಲ್ಲಿ ಶೇಖರಣೆಯಾಗುತ್ತದೆ.
ಪಚನ ಕ್ರಿಯೆಯಲ್ಲಿ ಸಮಸ್ಯೆ ಏಕೆ?
ಇಂದಿನ ಧಾವಂತದ ಜೀವನದಲ್ಲಿ ವ್ಯಸ್ತ ಜೀವನಶೈಲಿ ಹಾಗೂ ಅನಿಯಮಿತ ಆಹಾರಗಳೇ ಸರಿಯಾದ ಪಚನಕ್ರಿಯೆಗೆ ಸಾಕಷ್ಟು ಮಟ್ಟಿಗೆ ಕಾರಣವಾಗಿದೆ. ತಜ್ಞರ ಪ್ರಕಾರ, ಒಂದೇ ಸ್ಥಳದಲ್ಲಿ ಕುಳಿತು ಕೆಲಸ ಮಾಡುವವರಿಗೆ ಪಚನ ಕ್ರಿಯೆಯ ಸಮಸ್ಯೆ ಇರುತ್ತದೆ. ಕುಳಿತು ಕೆಲಸ ಮಾಡುವುದರಿಂದ ಆಹಾರವನ್ನು ಪಚನ ಮಾಡುವ ಕರುಳುಗಳ ಗತಿ ಮಂದವಾಗುವದರಿಂದ ಈ ಸಮಸ್ಯೆ ಉಂಟಾಗುತ್ತದೆ.
ಮಸಾಲೆ ಹಾಗೂ ಖಾರದ ಪದಾರ್ಥಗಳನ್ನು ಅವಶ್ಯಕತೆಗಿಂತ ಹೆಚ್ಚು ಸೇವನೆ ಮಾಡುವುದರಿಂದ ಹೊಟ್ಟೆಯಲ್ಲಿ ಊತದ ಸ್ಥಿತಿ ಉಂಟಾಗುತ್ತದೆ.
ಏಕೆಂದರೆ ಖಾರ ಹಾಗೂ ಮಸಾಲೆಯಲ್ಲಿರುವ ತೀಕ್ಷ್ಣತೆ ಹೊಟ್ಟೆಯಿಂದ ಹೊರಹೊಮ್ಮುವ ಗ್ಯಾಸ್ಟ್ರಿಕ್ ಆ್ಯಸಿಡ್ ನ ಪರಿಣಾಮವನ್ನು ಕಡಿಮೆಗೊಳಿಸುತ್ತದೆ. ಅದೇ ರೀತಿ ಆಹಾರ ಸೇವನೆಗೂ ಮುನ್ನ ಹಾಗೂ ನಂತರ ಅತಿಯಾಗಿ ಚಹಾ, ಕಾಫಿ ಕುಡಿಯುವುದರಿಂದ ಕಬ್ಬಿಣಾಂಶ ಹಾಗೂ ಸೂಕ್ಷ್ಮ ಪೋಷಕಾಂಶಗಳನ್ನು ಹೀರಿಕೊಳ್ಳುವ ಸಾಮರ್ಥ್ಯ ಕುಗ್ಗುತ್ತದೆ.
ದೀರ್ಘ ಕಾಲದ ತನಕ ಆ್ಯಂಟಿ ಬಯಾಟಿಕ್ ಗಳನ್ನು ಸೇವಿಸುವುದರಿಂದಲೂ ಪಚನಕ್ರಿಯೆಯ ಮೇಲೆ ದುಷ್ಪರಿಣಾಮ ಉಂಟಾಗುತ್ತದೆ. ಹೊಟ್ಟೆ ಹಾಗೂ ಕರುಳಿನಲ್ಲಿರುವ ಪಚನಕ್ರಿಯೆಗೆ ಸಹಕರಿಸುವ ಕೆಲವು ಒಳ್ಳೆಯ ಬ್ಯಾಕ್ಟೀರಿಯಾಗಳನ್ನು ಈ ಔಷಧಿಗಳು ನಾಶ ಮಾಡುತ್ತವೆ. ಅತಿಯಾದ ಒತ್ತಡದ ಕಾರಣದಿಂದಲೂ ಕರುಳುಗಳ ಕಾರ್ಯವೈಖರಿ ಸರಿಯಾಗಿ ನಡೆಯುವುದಿಲ್ಲ. ಅದರಿಂದ ಪಚನ ವ್ಯವಸ್ಥೆ ಹದಗೆಡುತ್ತದೆ. ಪಚನ ವ್ಯವಸ್ಥೆ ಹದಗೆಡುವುದರಿಂದ ನಾವು ಏನನ್ನು ಸೇವಿಸುತ್ತೇವೆಯೋ, ಅದನ್ನು ನಾವು ಸರಿಯಾಗಿ ಪಚನ ಮಾಡಿಕೊಳ್ಳಲು ಆಗುವುದಿಲ್ಲ. ಅದರ ಪರಿಣಾಮ ಎಂಬಂತೆ ದೇಹಕ್ಕೆ ಬೇಕಾಗುವ ಅತ್ಯಗತ್ಯ ವಿಟಮಿನ್ಸ್ ಮತ್ತು ಮಿನರಲ್ಸ್ ದೊರೆಯುವುದಿಲ್ಲ. ಆ ಕಾರಣದಿಂದ ನಮ್ಮ ದೇಹ ರೋಗಗ್ರಸ್ತವಾಗುತ್ತದೆ. ಕ್ರಮೇಣ ನಮ್ಮ ರೋಗನಿರೋಧಕ ಶಕ್ತಿಯೂ ದುರ್ಬಲಗೊಳ್ಳುತ್ತದೆ.