ನಾವು ಸದಾ ಆರೋಗ್ಯವಂತರಾಗಿರಲು ಹಸಿರು ತರಕಾರಿ, ಸಲಾಡ್‌, ಹಣ್ಣುಗಳನ್ನು ಧಾರಾಳವಾಗಿ ಸೇವಿಸಬೇಕೆಂದು ಗೊತ್ತಿದೆ. ಆದರೆ ನಮ್ಮಲ್ಲಿ ಬಹಳಷ್ಟು ಮಂದಿಗೆ ಇಂಥ ಉತ್ತಮ ಪೋಷಕಾಂಶಗಳನ್ನು ಗಳಿಸಲು ಕೇವಲ ಒಂದೇ ಬಣ್ಣದ ಹಸಿರು ತರಕಾರಿ, ಹಣ್ಣು ಅಲ್ಲ…. ಬದಲಿಗೆ ಹಲವು ಬಣ್ಣಗಳದ್ದನ್ನು ಸೇವಿಸಬೇಕೆಂದು ಗೊತ್ತಿಲ್ಲ. ಬನ್ನಿ, ಅವುಗಳ ಬಗ್ಗೆ ವಿವರವಾಗಿ ತಿಳಿಯೋಣವೇ?:

ಕೆಂಪು : ಆ್ಯಂಥೋಸೈನಿನ್‌, ಲೈಕೋಪೀನ್‌, ಪೊಟ್ಯಾಶಿಯಂ, ಎಲೆಕ್ಟ್ರೊಲೈಟ್ಸ್, ವಿಟಮಿನ್‌ ಸಿ ಮುಂತಾದ ಪೋಷಕಾಂಶಗಳು ಕೆಂಪು ಬಣ್ಣದ ಹಣ್ಣು, ತರಕಾರಿಗಳಲ್ಲಿ ಲಭ್ಯ. ಟೊಮೇಟೊ, ಚೆರ್ರಿ, ಕಲ್ಲಂಗಡಿಹಣ್ಣು, ದಾಳಿಂಬೆ, ಬೀಟ್‌ರೂಟ್‌ ಮುಂತಾದವುಗಳಲ್ಲಿ ಇವು ಸುಲಭ ಲಭ್ಯ. ಇದನ್ನು ಸಲಾಡ್‌ ಅಥವಾ ಜೂಸ್‌ ರೂಪದಲ್ಲಿ ಸೇವಿಸುವುದು ಒಳ್ಳೆಯದು. ಬೀಟ್‌ರೂಟ್‌ನಲ್ಲಂತೂ ಹೃದಯಕ್ಕೆ ಸ್ನೇಹಪೂರ್ಣವಾದ ಪೋಷಕಾಂಶಗಳಿವೆ. ಇವು ಕಂಗಳು, ರೋಗನಿರೋಧಕ ಶಕ್ತಿ ಹೆಚ್ಚಿಸಲು ಪೂರಕ. ಕೊಲೆಸ್ಟ್ರಾಲ್ ತಗ್ಗಿಸಲು, ಚರ್ಮ ಬಿಸಿಲಿಗೆ ಕಂಗೆಡದಂತೆ ಕಾಪಾಡುವಲ್ಲಿಯೂ ಪೂರಕ.

ಕೆಂಪು ಚೆರ್ರಿಯಲ್ಲಿ ಶಕ್ತಿಶಾಲಿ ಆ್ಯಂಟಿ ಆಕ್ಸಿಡೆಂಟ್ಸ್ ಇದ್ದು, ದೇಹದಲ್ಲಿನ ಫ್ರೀ ರಾಡಿಕಲ್ಸ್ ಜೊತೆ ಹೋರಾಡಲು ಸಹಕರಿಸುತ್ತದೆ. ಟೊಮೇಟೋದಲ್ಲೂ ಇದೇ ಗುಣ ಹೆಚ್ಚಿದ್ದು, ಕ್ಯಾನ್ಸರ್‌ಕಾರಣ ಫ್ರೀ ರಾಡಿಕಲ್ಸ್ ದೇಹಕ್ಕೆ ಹಾನಿ ಮಾಡದಂತೆ ಕಾಪಾಡುತ್ತದೆ.

ಕಿತ್ತಳೆ : ಬೀಟಾ ಕೆರೋಟಿನ್‌ ಎಂಬುದು ಒಂದು ಬಗೆಯ ಹಳದಿ, ಕಿತ್ತಳೆ ಕೆರೋಟಿನೈಡ್‌ ಆಗಿದ್ದು, ತುಸು ಸಪ್ಪೆ ಸಪ್ಪೆ ಹಣ್ಣುಗಳಾದ ಪರಂಗಿ, ಸಕ್ಕರೆ ಬಾದಾಮಿ, ಕ್ಯಾರೆಟ್‌, ಸಿಹಿಗುಂಬಳ ಇತ್ಯಾದಿ ಕಿತ್ತಳೆ ಬಣ್ಣಗಳ ಹಣ್ಣು ತರಕಾರಿಗಳಲ್ಲಿ ಧಾರಾಳವಾಗಿ ಇರುತ್ತವೆ. ಬೀಟಾ ಕೆರೋಟಿನ್‌ನ್ನು ವಿಟಮಿನ್‌ ಆಗಿ ಇವು ಬದಲಾಯಿಸುತ್ತವೆ. ಇದು ನಮ್ಮ ಚುರುಕು ದೃಷ್ಟಿ, ದೇಹದ ಜೀವಕೋಶಗಳ ಅಭಿವೃದ್ಧಿಗೆ ಪೂರಕ. ಇವು ಹಾನಿಕಾರಕ ಯುವಿ ಕಿರಣಗಳಿಂದಲೂ ನಮ್ಮನ್ನು ಕಾಪಾಡುತ್ತವೆ. ಕಿತ್ತಳೆ ಬಣ್ಣದ ಹಣ್ಣು ಮತ್ತು ತರಕಾರಿ ನಮ್ಮಲ್ಲಿ ಯೌವನ ಉಳಿಸುತ್ತವೆ. ಕಿತ್ತಳೆಹಣ್ಣು ಮತ್ತು ಸಿಹಿಗುಂಬಳದಲ್ಲಿ ವಿಟಮಿನ್‌ ಸಿ ಹೇರಳವಾಗಿದೆ.

ಹಳದಿ : ಹಳದಿ ಕ್ಯಾಪ್ಸಿಕಂ, ಜೋಳ, ನಿಂಬೆ, ಮಾವು, ಬಾಳೆಹಣ್ಣು, ಅನಾನಸ್‌, ಹಳದಿ ಸೀಬೆಹಣ್ಣು, ಸೇಬು ಮುಂತಾದವುಗಳಿಂದ ನಿಮ್ಮ ಆರೋಗ್ಯ ಕಾಪಾಡಿಕೊಳ್ಳಿ. ನಿಮ್ಮ ದೈನಂದಿನ ಆಹಾರದಲ್ಲಿ  ಜೀರ್ಣ ವ್ಯವಸ್ಥೆ ಸುಧಾರಿಸಲು ಅಥವಾ ಚರ್ಮದ ರೋಗ ನಿವಾರಣೆಗೆ ಹಳದಿ ಬಣ್ಣದ ಹಣ್ಣು ತರಕಾರಿ ಬಲು ಮುಖ್ಯ. ಅನಾನಸ್‌ನಲ್ಲಿನ ಬ್ರೋಮ್ ಎಂಬ ರಾಸಾಯನಿಕ ಅಜೀರ್ಣ ಸಮಸ್ಯೆ ದೂರವಾಗಿಸುತ್ತದೆ, ಊತ ನಿವಾರಿಸುತ್ತದೆ. ಜೋಳದಲ್ಲಿ ಲಭ್ಯವಿರುವ ನಿಕೋಟಿನಿಕ್‌ ಆ್ಯಸಿಡ್‌ ದೇಹದ ಫ್ರೀರಾಡಿಕಲ್ಸ್ ನ್ನು ನಿವಾರಿಸುತ್ತವೆ. ನಿಂಬೆಯಲ್ಲಿನ ವಿಟಮಿನ್‌ಸಿ ಮತ್ತು ಸಿಟ್ರಿಕ್‌ ಆಮ್ಲ ಬಲು ಉಪಕಾರಿ. ಮಾವಿನಲ್ಲಿ ವಿಟಮಿನ್‌ ಹೆಚ್ಚು ಆರೋಗ್ಯಕರ.

ಹಸಿರು : ಎಲ್ಲಕ್ಕೂ ಉತ್ಕೃಷ್ಟ ಆರೋಗ್ಯಕಾರಿ ಆಹಾರ ಪದಾರ್ಥಗಳೆಂದರೆ ಹಸಿರು ಬಣ್ಣದಿಂದ ಕೂಡಿದ್ದು. ಇವನ್ನು ನಿಮ್ಮ ಆಹಾರದಲ್ಲಿ  ವಿಭಿನ್ನ ಪ್ರಕಾರಗಳಲ್ಲಿ ಬೆರೆಸಿಕೊಳ್ಳಿ. ಎಲ್ಲಾ ಬಗೆಯ ಹಸಿರು ಸೊಪ್ಪು, ಹಸಿ ಬಟಾಣಿ, ಹುರುಳಿ, ಗೋರಿಕಾಯಿ, ಎಲೆಕೋಸು, ಬ್ರೋಕ್ಲಿ, ಸೋರೆ, ಪಡವಲ, ಸೌತೇಕಾಯಿ, ಬೆಂಡೆಕಾಯಿ, ವಿವಿಧ ಅವರೆಕಾಯಿಗಳು ಇತ್ಯಾದಿಗಳಲ್ಲಿ ಹೇರಳ ಪೋಷಕಾಂಶಗಳಿವೆ. ಇವುಗಳಲ್ಲಿ ಸಕ್ಕರೆಯ ಅಂಶ ಬಹಳ ಕಡಿಮೆ ಪ್ರಮಾಣದಲ್ಲಿದ್ದು, ನಾರಿನಂಶ ಹೇರಳವಾಗಿರುತ್ತದೆ.

ಇಂಥ ಹಸಿರು ಪದಾರ್ಥ ನಮ್ಮ ದೇಹದಲ್ಲಿನ ಶುಗರ್‌ ಲೆವೆಲ್‌ನ್ನು ಕಂಟ್ರೋಲ್ ಮಾಡುತ್ತವೆ, ಫೈಟೋನ್ಯೂಟ್ರಿಯೆಂಟ್ಸ್ ಗೆ ಮೂಲ ಆಧಾರವಾಗಿವೆ. ಸೊಪ್ಪುಗಳಲ್ಲಂತೂ ಹೆಚ್ಚು ಕ್ಯಾಲ್ಶಿಯಂ, ಪೊಟ್ಯಾಶಿಯಂ, ವಿಟಮಿನ್‌ ತುಂಬಿರುತ್ತವೆ. ಬ್ರೋಕ್ಲಿ ನಮ್ಮ ದೇಹಕ್ಕೆ ಹೆಚ್ಚಿನ ರೋಗನಿರೋಧಕ ಶಕ್ತಿ ತುಂಬಬಲ್ಲದು.

ನೀಲಿ : ಮುಖ್ಯವಾಗಿ ಬದನೆ, ನೇರಳೆಹಣ್ಣು, ಬ್ಲೂಬೆರಿ, ಕಪ್ಪುದ್ರಾಕ್ಷಿ, ಊಟಿ ಆ್ಯಪಲ್ ಇತ್ಯಾದಿಗಳಲ್ಲಿ ಆ್ಯಂಥ್ರೋಸೈನಿನ್ಸ್ ಎಂಬ      ಫೈಟೋಕೆಮಿಕಲ್ಸ್ ತುಂಬಿದ್ದು, ಕಾರ್ಡಿಯೊವ್ಯಾಸ್ಕ್ಯುಲರ್‌ ಆರೋಗ್ಯವನ್ನು ಸುಧಾರಿಸುವಲ್ಲಿ ಪೂರಕ. ಇವು ಕೆಲವು ನಿಶ್ಚಿತ ಕ್ಯಾನ್ಸರ್‌ ಮತ್ತು ಸ್ಟ್ರೋಕ್ಸ್ ಬಾಧೆ ತಡೆಯುವಲ್ಲೂ ಪೂರಕ. ಹೆಚ್ಚಿನ ಪ್ರಮಾಣದ ಆ್ಯಂಥ್ರೋಸೈನಿನ್ಸ್ ಅಂಶದ ಸೇವನೆಯಿಂದ ಟೈಪ್‌ಡಯಾಬಿಟೀಸ್‌ನ್ನು ಆದಷ್ಟೂ ತಗ್ಗಿಸಬಹುದು. ನೀಲಿ ಮತ್ತು ನೇರಳೆ ಬಣ್ಣದ ಹಣ್ಣು ತರಕಾರಿಗಳಲ್ಲಿ ವಿಟಮಿನ್‌ಸಿ, ಫೈಬರ್‌, ಮ್ಯಾಂಗನೀಸ್‌ ಇತ್ಯಾದಿ ಹೇರಳವಾಗಿರುತ್ತವೆ.

ಬಿಳುಪು : ಬಿಳಿ ಬಣ್ಣದ ಆಹಾರ ಸಾಮಗ್ರಿ ನಮಗೆ ರೋಗನಿರೋಧಕ ಶಕ್ತಿ ಹೆಚ್ಚಿಸುತ್ತದೆ. ಇದರಲ್ಲಿ ಬೀಟಾ ಗ್ಲೂಕ್ಯಾನ್ಸ್ ಅಡಗಿದ್ದು, ರಕ್ತದ  ಉತ್ಪಾದನೆ ಹೆಚ್ಚಿಸುವಲ್ಲಿ ಸಹಾಯಕ, ಜೀವಕೋಶಗಳನ್ನು ಉತ್ತಮ ರೀತಿಯಲ್ಲಿ ಸದೃಢಗೊಳಿಸುತ್ತವೆ. ಇವುಗಳಲ್ಲಿ ಆ್ಯಂಟಿಆಕ್ಸಿಡೆಂಟ್ಸ್ ಅಡಗಿದ್ದು, ಕ್ಯಾನ್ಸರ್‌ ನಿವಾರಣೆಗೆ ಪ್ರಭಾವಶಾಲಿ ನೆರವು ನೀಡುತ್ತದೆ. ಬಾಳೆ, ಹೂಕೋಸು, ಸೇಬು, ಬಟಾಣಿ, ಆಲೂ, ಅಣಬೆ ಇತ್ಯಾದಿಗಳ ನಿಯಮಿತ ಸೇವನೆಯಿಂದ ಮೂಡ್‌ ಸುಧಾರಿಸುತ್ತದೆ. ಬಿ‌6 ಮತ್ತು ಪೊಟ್ಯಾಶಿಯಂ ಅಂಶಗಳು ಸಹಜವಾಗಿ  ಹೆಚ್ಚುತ್ತವೆ. ಹೀಗಾಗಿ ಹೃದ್ರೋಗಗಳು ಸಹಜವಾಗಿ ತಗ್ಗುತ್ತವೆ.

– ಸೌಮ್ಯಾ ನಾಗೇಂದ್ರ

ಆಹಾರ ತಯಾರಿಗೆ ಬಣ್ಣಗಳ ಮಿಶ್ರಣ

ನೀವು ಹಣ್ಣು ತರಕಾರಿ ಕೊಳ್ಳುವಾಗ, ಎಲ್ಲಾ ಬಗೆಯ ಸಾಮಗ್ರಿ ಖರೀದಿಸಬೇಕು ಎಂಬುದನ್ನು ಮರೆಯದಿರಿ.

ಪ್ರತಿ ಬಣ್ಣದ ಹಣ್ಣನ್ನೂ ಸೇವಿಸಿ. ಇದರಿಂದ ನಿಮಗೆ ವೈವಿಧ್ಯಮಯ ಫೈಟೊನ್ಯೂಟ್ರಿಯೆಂಟ್ಸ್ ಲಭಿಸುತ್ತವೆ.

ಬೆಳಗಿನ ತಿಂಡಿಗೆ ಕೇವಲ ಓಟ್‌ಮೀಲ್ ಸೇವಿಸುವ ಬದಲು ಬಗೆಬಗೆಯ ಹಣ್ಣು, ಚಿಯಾಸೀಡ್ಸ್, ಫ್ಲ್ಯಾಕ್ಸ್ ಸೀಡ್ಸ್, ಕಟ್‌ನಟ್ಸ್ ಬೆರೆಸಿಕೊಳ್ಳಿ.

ಬೆಳಗಿನ ತಿಂಡಿಗೆ  ಮತ್ತೊಂದು ಆಯ್ಕೆ ಎಂದರೆ, ಎಲ್ಲಾ ಬಗೆಯ ತರಕಾರಿ ಜೊತೆ ಬೆಂದ ಮೊಟ್ಟೆ ಸೇವನೆ. ಈ ಪ್ರೋಟೀನ್‌ ಮಿಶ್ರಿತ ಆಹಾರದಲ್ಲಿ ಕನಿಷ್ಠ 2-3 ಬಗೆಯ ಬಣ್ಣಗಳ ಸಾಮಗ್ರಿ ಅಂದ್ರೆ ಪಾಲಕ್‌ಸೊಪ್ಪು, ಕೆಂಪು ಹಳದಿ ಕ್ಯಾಪ್ಸಿಕಂ, ಟರ್ನಿಪ್‌, ಈರುಳ್ಳಿ ಮುಂತಾದುವನ್ನು ಅಗತ್ಯ ಸೇರಿಸಿ.

ಬಣ್ಣ ಬಣ್ಣದ ತರಕಾರಿ ಮಿಶ್ರಣದಿಂದ ತಾಜಾ ಸಲಾಡ್‌ ಸಿದ್ಧಪಡಿಸಿ. ಇಂಥ ಹಸಿ ತರಕಾರಿ ಸಲಾಡ್‌ ಸೇವನೆಯಿಂದ ಮಹತ್ವಪೂರ್ಣ ಫೈಟೊನ್ಯೂಟ್ರಿಯೆಂಟ್ಸ್ ಲಭಿಸುತ್ತವೆ. ಇವು ತರಕಾರಿ ಬೇಯಿಸುವಾಗ ಎಷ್ಟೋ ಸಲ ನಷ್ಟವಾಗುತ್ತದೆ.

ಬ್ಲೂಬೆರಿ, ರಾಸ್‌ಬೆರಿ, ದ್ರಾಕ್ಷಿ, ಬ್ಲ್ಯಾಕ್‌ಬೆರಿ ಇತ್ಯಾದಿಗಳನ್ನೂ ನಿಮ್ಮ ಸಲಾಡ್‌ಗೆ ಸೇರಿಸಿಕೊಳ್ಳಿ.

ನೇರಳೆ ಬಣ್ಣದ ಎಲೆಕೋಸು, ಅಖರೋಟ್‌, ಏಪ್ರಿಕಾಟ್‌, ಅನಾನಸ್‌, ಕೆಂಪು ಸೇಬು, 3 ಬಗೆಯ ಕ್ಯಾಪ್ಸಿಕಂ ಇತ್ಯಾದಿಗಳನ್ನು ನಿಮ್ಮ ಪಾಸ್ತಾ, ಸ್ಟ್ಯೂ, ಅವಿಯಲ್, ಬಿಸಿಬೇಳೆ ಬಾಥ್‌ ಇತ್ಯಾದಿಗಳಿಗೆ ಧಾರಾಳ ಬಳಸಿಕೊಳ್ಳಿ.

Tags:
COMMENT