ನವಜಾತ ಶಿಶುವಿಗೆ ಸ್ತನ್ಯಪಾನ ಅಗತ್ಯವೆಂದು ಎಲ್ಲರಿಗೂ ಗೊತ್ತು. ವಿಶೇಷವಾಗಿ ಆರಂಭದ 6 ತಿಂಗಳವರೆಗೆ. ಆದರೆ ಸ್ತನ್ಯಪಾನ ಮಾಡದ ಮಕ್ಕಳಿಗೆ ಹೋಲಿಸಿದರೆ ಸ್ತನ್ಯಪಾನ ಮಾಡುವ ಮಕ್ಕಳು ಸಾಯುವ ಪ್ರಮಾಣ 14 ಪಟ್ಟು ಕಡಿಮೆ. ತಾಯಿಯ ಹಾಲಿನಲ್ಲಿರುವ ಕೊಲೋಸ್ಟ್ರಂ ಮಗುವನ್ನು ರಕ್ಷಿಸುತ್ತದೆ. ಜೊತೆಗೆ ಅದರಲ್ಲಿರುವ ಪೌಷ್ಟಿಕಾಂಶಗಳು ಕಾಯಿಲೆಗಳಿಂದ ರಕ್ಷಿಸುತ್ತವೆ.
ಈ ಪ್ರಕ್ರಿಯೆಯಿಂದ ತಾಯಿಯಲ್ಲಿ ಅಲ್ಜೈಮರ್ಸ್ ವಿಕಸಿತಗೊಳ್ಳುವ ಭಯ ಕಡಿಮೆಯಾಗುತ್ತದೆ. ಮಗುವಿನಲ್ಲಿ ವಿಕಸಿತವಾಗುತ್ತಿರುವ ಶ್ವಾಸಕೋಶಗಳು ಸದೃಢಗೊಳ್ಳುತ್ತವೆ. ಅದರಿಂದ ಮಗುವಿಗೆ ಉಬ್ಬಸದ ಅಪಾಯ ಕಡಿಮೆಯಾಗುತ್ತದೆ. ಜೊತೆಗೆ ಮಗುವಿಗೆ ಡಯೇರಿಯಾ ಮತ್ತು ನ್ಯೂಮೋನಿಯಾ ಉಂಟಾಗುವ ಸಾಧ್ಯತೆ ಕಡಿಮೆ.
ಇತ್ತೀಚೆಗೆ ವಿಜ್ಞಾನಿಗಳು ಸ್ತನ್ಯಪಾನ ಮತ್ತು ಸ್ತನ ಕ್ಯಾನ್ಸರ್‌ಗಳ ನೇರ ಸಂಬಂಧವನ್ನು ತಿಳಿಯುವಲ್ಲಿ ಯಶಸ್ವಿಯಾಗಿದ್ದಾರೆ. ಸ್ತನ್ಯಪಾನ ಮಾಡಿಸುವುದರಿಂದ ಮಕ್ಕಳಿಗೆ ಹಾಗೂ ತಾಯಿಗೂ ಒಳ್ಳೆಯದು. ಏಕೆಂದರೆ ಇದರಲ್ಲಿ ಅಂಡಾಶಯದ ಕ್ಯಾನ್ಸರ್ ಹಾಗೂ ಸ್ತನ ಕ್ಯಾನ್ಸರ್ ಉಂಟಾಗುವ ಅಪಾಯ ಸಾಕಷ್ಟು ಕಡಿಮೆ ಆಗುತ್ತದೆ. ವಿಶೇಷವಾಗಿ ಯುವತಿಯರ ವಿಷಯದಲ್ಲಿ.
ಜೀವನಶೈಲಿಯಲ್ಲಿ ಬದಲಾವಣೆ
ಕೊಲಂಬಿಯಾ ಯೂನಿವರ್ಸಿಟಿಯಲ್ಲಿನ ಒಂದು ಅಧ್ಯಯನದ ಪ್ರಕಾರ ಸ್ತನ್ಯಪಾನ ಮಾಡಿಸುವುದರಿಂದ ಈಸ್ಟ್ರೋಜನ್ ರಿಸೆಪ್ಟರ್ ನೆಗೆಟಿವ್ ಮತ್ತು ಪ್ರೊಜೆಸ್ಟರಾನ್ ರಿಸೆಪ್ಟರ್ ನೆಗೆಟಿವ್ ಬ್ರೆಸ್ಟ್ ಕ್ಯಾನ್ಸರ್‌ನ ಅಪಾಯ ಇರುವುದಿಲ್ಲ. ಭಾರತದಲ್ಲಿ ಹಿಂದೆ ಸ್ತನ ಕ್ಯಾನ್ಸರ್‌ನ ಬಗ್ಗೆ ತಿಳಿದವರು ಕಡಿಮೆ. ಆದರೆ ಈಗ ಹಾಗಿಲ್ಲ. ಭಾರತೀಯ ಮಹಿಳೆಯರು, ವಿಶೇಷವಾಗಿ ನಗರದ ಮಹಿಳೆಯರು ತಮ್ಮ ಜೀವನಶೈಲಿಯ ಕಾರಣದಿಂದಾಗಿ ಬಹಳಷ್ಟು ಪ್ರಭಾವಿತರಾಗಿದ್ದಾರೆ. ಬಹಳ ತಡವಾಗಿ ತಾಯಿಯಾಗುವ ಪ್ರವೃತ್ತಿ, ಸ್ತನ್ಯಪಾನ ಮಾಡಿಸದೆ ಇರುವುದು, ಸಾಮಾಜಿಕ ಕಾರಣಗಳು, ಒತ್ತಡಗಳಿಗೆ ಬಲಿಯಾಗುವುದು ಇತ್ಯಾದಿ ಕಾರಣಗಳು ಇರುತ್ತವೆ.
ಮಹಿಳೆಯರಲ್ಲಿ ಕ್ಯಾನ್ಸರ್‌ನ ಬಗ್ಗೆ ಇರುವ ಒಟ್ಟು ವಿಧಗಳಲ್ಲಿ ಶೇ.25-32ರಷ್ಟು ಸ್ತನ ಕ್ಯಾನ್ಸರ್ ಇದೆ. ಮುಖ್ಯವಾಗಿ, 50 ವರ್ಷಕ್ಕಿಂತ ಒಳಗಿನ ಮಹಿಳೆಯರು ಪ್ರಭಾವಿತರಾಗುತ್ತಾರೆ. ಅದರರ್ಥ 20 ರಿಂದ 50 ವರ್ಷದ ನಡುವಿನ ಶೇ.48ರಷ್ಟು ಮಹಿಳೆಯರು ಇದಕ್ಕೆ ಬಲಿಯಾಗುತ್ತಾರೆ. ಪಾಶ್ಚಾತ್ಯ ದೇಶಗಳಲ್ಲಿ 100ಕ್ಕೆ 89 ಮಹಿಳೆಯರು ಇದರಿಂದ ಪಾರಾಗುತ್ತಾರೆ. ಆದ್ದರಿಂದ ಭಾರತದಲ್ಲೂ ಸ್ತನ್ಯಪಾನ ಮಾಡಿಸುವ ಮಹತ್ವದ ಬಗ್ಗೆ ಮಹಿಳೆಯರನ್ನು ಜಾಗೃತಗೊಳಿಸಬೇಕಾದ ಅಗತ್ಯವಿದೆ. ಅದಕ್ಕಾಗಿ ಅಭಿಯಾನ ನಡೆಸುವ ಅಗತ್ಯವಿದೆ. ಸಂದೇಶಗಳು ಹೆಚ್ಚು ಹೆಚ್ಚಾಗಿ ಮಹಿಳೆಯರನ್ನು ತಲುಪುವಂತಾಗಬೇಕು.
ಕ್ಯಾನ್ಸರ್ ರಿಸರ್ಚ್ ಫಂಡ್ ಮೂಲಕ ಮಾಡಿದ ಕ್ಯಾನ್ಸರ್ ಬಗೆಗಿನ ಅಧ್ಯಯನದ ಪ್ರಕಾರ, ಮಹಿಳೆಯರು ಕನಿಷ್ಠ 1 ವರ್ಷದವರೆಗೆ ಸ್ತನ್ಯಪಾನ ಮಾಡಿಸುತ್ತಾರೆ. ಅವರಿಗೆ ಸ್ತನ ಕ್ಯಾನ್ಸರ್ ಆಗುವ ಸಂಭಾವ್ಯತೆ ಶೇ.5 ರಷ್ಟು ಕಡಿಮೆಯಾಗುತ್ತದೆ. ಬಹಳ ದೀರ್ಘಕಾಲ ಸ್ತನ್ಯಪಾನ ಮಾಡಿಸುವ ಮಹಿಳೆಯರಿಗೆ ಕ್ಯಾನ್ಸರ್ ಆಗುವ ಅಪಾಯ ಅಷ್ಟೇ ಕಡಿಮೆಯಾಗುತ್ತದೆ.
ಹೆಚ್ಚು ಗರ್ಭಪಾತ ಹೊಣೆ
ಅಖಿಲ ಭಾರತ ಆಯುರ್ವೇದ ಸಂಸ್ಥೆ ಮತ್ತು ಭಾರತೀಯ ಚಿಕಿತ್ಸಾ ಸಂಶೋಧನಾ ಪರಿಷತ್ ಮೂಲಕ ನಡೆಸಿದ ಒಂದು ಅಧ್ಯಯನದ ಪ್ರಕಾರ ನಗರದ ಉದ್ಯೋಗಸ್ಥ ಮಹಿಳೆಯರು ಹೆಚ್ಚು ಗರ್ಭಪಾತ ಮಾಡಿಸಿಕೊಳ್ಳುತ್ತಾರೆ. ಬಹಳ ತಡವಾಗಿ ಮಕ್ಕಳನ್ನು ಪಡೆಯುತ್ತಾರೆ. ಅವರು ಸ್ತನ್ಯಪಾನ ಮಾಡಿಸುವ ಅವಧಿ ಕಡಿಮೆ, ಗರ್ಭನಿರೋಧಕ ಮಾತ್ರೆಗಳನ್ನು ಹೆಚ್ಚು ಸೇವಿಸುತ್ತಾರೆ. ಅಂತಹ ಮಹಿಳೆಯರಿಗೆ ಸ್ತನ ಹಾಗೂ ಅಂಡಾಶಯದ ಕ್ಯಾನ್ಸರ್‌ನ ಆತಂಕ ಹೆಚ್ಚಾಗಿರುತ್ತದೆ. ಗರ್ಭನಿರೋಧಕ ಮಾತ್ರೆಗಳನ್ನು ಸೇವಿಸುವ ಭಾರತೀಯ ಮಹಿಳೆಯರಿಗೆ ಕ್ಯಾನ್ಸರ್‌ನ ಅಪಾಯ 9.5ರಷ್ಟು ಹೆಚ್ಚಾಗಿದೆ.