ಶರೀರದಲ್ಲಿ ಎನರ್ಜಿ ಖಾಯಮ್ಮಾಗಿಡಲು ಬೇಸಿಗೆಯಲ್ಲಿ ವಿಶೇಷವಾಗಿ ಹುರಿದ, ಕರಿದ ಮಸಾಲೆಯುಕ್ತ ಆಹಾರವನ್ನು ದೂರ ಮಾಡಿ. ನಿಮ್ಮ ಆಹಾರದಲ್ಲಿ ಆರೋಗ್ಯಕರವಾದ ಹಾಗೂ ಉಷ್ಣತೆಯಿಂದ ಪಾರು ಮಾಡುವಂತಹ ಪದಾರ್ಥಗಳನ್ನು ಸೇರಿಸಿಕೊಳ್ಳಿ.

ಇದರ ಬಗ್ಗೆ ಹೆಸರಾಂತ ಡಯೆಟ್‌ ಅಂಡ್‌ ನ್ಯೂಟ್ರಿಶನ್‌ ಕನ್ಸಲ್ಟೆಂಟ್‌ ಮಾಲತಿ, ಉಷ್ಣತೆಯಿಂದ ಪಾರಾಗಲು ಶರೀರದಲ್ಲಿ ನೀರಿನ ಕೊರತೆಯಾಗದಂತೆ ಹಾಗೂ ಎನರ್ಜಿ ಲೆವೆಲ್ ಸರಿಯಾಗಿರುವಂತೆ ಮಾಡುವ ಹಣ್ಣುಗಳನ್ನು ಹೆಚ್ಚಾಗಿ ಸೇವಿಸಿ ಎಂದರು. ಬೇಸಿಗೆಯಲ್ಲೂ ಕೂಲ್ ಕೂಲ್‌ ಆಗಿರುವಂತಹ ಕೆಲವು ಉಪಾಯಗಳನ್ನು ಅವರು ತಿಳಿಸಿದರು.

ಎಳನೀರು : ಎಳನೀರು ಕುಡಿಯುವುದು ಆರೋಗ್ಯಕ್ಕೆ ಬಹಳ ಲಾಭಕರ. ಎಳನೀರು ದೇಹದಲ್ಲಾದ ನೀರಿನ ಕೊರತೆಯನ್ನು ದೂರ ಮಾಡುತ್ತದೆ. ಹೊಟ್ಟೆನೋವು, ಅಸಿಡಿಟಿ ಮತ್ತು ಅಲ್ಸರ್‌ನಂತಹ ಸಮಸ್ಯೆಗಳಿಂದಲೂ ಪರಿಹಾರ ಸಿಗುತ್ತದೆ. ಆದರೆ ಇದನ್ನು ಖಾಲಿ ಹೊಟ್ಟೆಯಲ್ಲಿ ಕುಡಿಯಬಾರದು. ಶರೀರದಲ್ಲಿ ಗ್ಲೂಕೋಸ್‌ನ ಕೊರತೆಯಾಗಿದ್ದರೆ ಎಳನೀರು ಕುಡಿಯಬಹುದು. ಇದಲ್ಲದೆ, ಡೀ ಹೈಡ್ರೇಶನ್‌, ವೇಟ್‌ ಲಾಸ್‌ ಮತ್ತು ಬ್ಲಡ್‌ ಪ್ರೆಶರ್‌ನಲ್ಲಿ ಸುಧಾರಣೆ ತರಲು ಸಹ ಇದು ಲಾಭಕಾರಿ.

ಎಳನೀರಿನಲ್ಲಿ ಪೊಟ್ಯಾಶಿಯಂ, ಮೆಗ್ನೀಶಿಯಂ. ಸೋಡಿಯಂ ಮತ್ತು ಫಾಸ್ಛರಸ್‌ನಂತಹ ಮಿನರಲ್‌ಗಳಿವೆ. ಶರೀರದಲ್ಲಿ ನೀರಿನ ಕೊರತೆ ಅಥವಾ ಮಾಂಸಖಂಡಗಳಲ್ಲಿ ಬಿಗಿತದ ಸಮಸ್ಯೆ ಉಂಟಾದಾಗ 3-4 ದಿನ ದಿನಕ್ಕೆರಡು ಬಾರಿ ಎಳನೀರು ಕುಡಿಯಿರಿ. ಎಳನೀರಿನಲ್ಲಿ ಆ್ಯಂಟಿ ಫಂಗಲ್, ಆ್ಯಂಟಿ ಬ್ಯಾಕ್ಟೀರಿಯಲ್ ಗುಣಗಳು ಇರುತ್ತವೆ. ಇದನ್ನು ನಿಯಮಿತವಾಗಿ ಕುಡಿಯುವುದರಿಂದ ರೋಗನಿರೋಧಕ ಸಾಮರ್ಥ್ಯ ಹೆಚ್ಚುತ್ತದೆ. ಎಳನೀರಿನಲ್ಲಿ ರಾಸಾಯನಿಕ ಗುಣಗಳು ಪ್ಲಾಸ್ಮಾದಂತಿರುತ್ತವೆ. ಬೇಸಿಗೆಗೆ ಇದು ಆದರ್ಶ ಪೇಯವಾಗಿದೆ.

ನಿಂಬೆ : ನಿಂಬೆಹಣ್ಣು ಎಲ್ಲ ಸೀಸನ್‌ಗಳಲ್ಲೂ ಸಿಗುತ್ತದೆ. ಇದು ಆಹಾರದ ಸ್ವಾದ ಹೆಚ್ಚಿಸುವುದಷ್ಟೇ ಅಲ್ಲ ಅದರಲ್ಲಿ ಅನೇಕ ಔಷಧೀಯ  ಗುಣಗಳೂ ಇರುತ್ತವೆ. ಬೇಸಿಗೆಯಲ್ಲಿ ನಿಂಬೆಯ ಶರಬತ್‌ ಶರೀರಕ್ಕೆ ತಂಪು ನೀಡುತ್ತದೆ. ಇದು ಪಚನಕಾರಿ, ನೋವು ನಿವಾರಕ, ರಕ್ತಶೋಧಕ, ರೋಗ ನಿವಾರಕ ಹಾಗೂ ಶಕ್ತಿವರ್ಧಕ ಆಗಿದೆ. ಇದು ನರಗಳ ತೊಂದರೆಗಳನ್ನು ನಿವಾರಿಸಿ ಹೃದಯ, ಮೆದುಳನ್ನು ಶಾಂತವಾಗಿಡುತ್ತದೆ.  ನಿಂಬೆಯಲ್ಲಿ ಸಿಟ್ರಿಕ್‌ ಆ್ಯಸಿಡ್‌, ಪ್ರಾಕೃತಿಕ ಶರ್ಕರ ಕ್ಯಾಲ್ಶಿಯಂ, ಫಾಸ್ಪರಸ್‌, ಪೊಟ್ಯಾಶಿಯಂ ಮತ್ತು ವಿಟಮಿನ್‌ `ಸಿ’ ಇರುತ್ತದೆ. ಬೇಸಿಗೆಯಲ್ಲಿ ನಿಂಬೆಯ ಶರಬತ್‌ ನಮಗೆ ಉಷ್ಣತೆಯಿಂದ ಪರಿಹಾರ ನೀಡುತ್ತದೆ. ನಿಂಬೆ ಆಮ್ಲೀಯವಾಗಿದ್ದರೂ ಪಿತ್ತನಾಶಕವಾಗಿದೆ.

ಕಿತ್ತಳೆ : ಬೇಸಿಗೆಯಲ್ಲಿ ಕಿತ್ತಳೆಹಣ್ಣು ತಿನ್ನುವುದರಿಂದ ಹೃದಯ ಹಾಗೂ ಮೆದುಳು ಕೂಲ್ ಆಗಿರುತ್ತದೆ. ಇದರಲ್ಲಿ ವಿಟಮಿನ್‌ `ಸಿ’ ಹೆಚ್ಚಾಗಿರುತ್ತದೆ. ಜೊತೆಗೆ ಇದರಲ್ಲಿ ಐರನ್‌, ಪೊಟ್ಯಾಶಿಯಂ ಕೂಡ ಇರುತ್ತದೆ. ಕಿತ್ತಳೆಯ ಅತ್ಯಂತ ದೊಡ್ಡ ವಿಶೇಷತೆಯೆಂದರೆ ಅದರಲ್ಲಿರುವ ಫ್ರಕ್ಟೋಸ್‌, ಖನಿಜಗಳು ಮತ್ತು ವಿಟಮಿನ್‌ ಶರೀರದಲ್ಲಿ ಸೇರುತ್ತವೆ ಎನರ್ಜಿ ಕೊಡಲು ಪ್ರಾರಂಭಿಸುತ್ತದೆ. ಒಂದು ಗ್ಲಾಸ್‌ ಕಿತ್ತಳೆ ಜೂಸ್‌ ತನುಮನಕ್ಕೆ ಶೀತಲತೆ ಕೊಟ್ಟು ಸುಸ್ತು ಮತ್ತು ಒತ್ತಡವನ್ನು ದೂರ ಮಾಡುತ್ತದೆ. ಹೃದಯ ಮತ್ತು ಮೆದುಳಿಗೆ ಹೊಸ ಶಕ್ತಿ ಮತ್ತು ತಾಜಾತನ ಕೊಡುತ್ತದೆ. ಇದರಲ್ಲಿ ಕಡಿಮೆ ಕ್ಯಾಲೋರಿ ಇರುತ್ತದೆ. ಯಾವುದೇ ರೀತಿಯ ಸ್ಯಾಚುರೇಟೆಡ್‌ ಫ್ಯಾಟ್‌ ಅಥವಾ ಕೊಲೆಸ್ಟ್ರಾಲ್ ಕಿತ್ತಳೆಯಲ್ಲಿ ಇರುವುದಿಲ್ಲ. ಇದರಲ್ಲಿ ಫೈಬರ್‌ ಇದ್ದು ಹಾನಿಕಾರಕ ಅಂಶಗಳನ್ನು ಶರೀರದಿಂದ ಹೊರಗೆ ದೂಡಲು ಸಹಾಯಕವಾಗುತ್ತದೆ.

ನೆಲ್ಲಿಕಾಯಿ : ಗ್ರೀಷ್ಮ ಋತುವಿನಲ್ಲಿ ಹೆಚ್ಚು ಉಷ್ಣತೆಯಿಂದಾಗಿ ಬಲಹೀನತೆಯುಂಟಾದರೆ ನೆಲ್ಲಿಕಾಯಿ ಮುರಬ್ಬಾ ತಿಂದು ನೀರು ಕುಡಿಯಿರಿ. ಬಲಹೀನತೆ ದೂರವಾಗುವುದು. ನೆಲ್ಲಿಕಾಯಿ ಮುರಬ್ಬಾವನ್ನು ಬೇಸಿಗೆಯಲ್ಲಿ ದಿನ ತಿಂದರೆ ಅದು ಬಹಳಷ್ಟು ತಂಪು ನೀಡಿ ಮೆದುಳಿಗೆ ಶಕ್ತಿ ನೀಡುತ್ತದೆ.

ನೆಲ್ಲಿಕಾಯಿ ಬಹಳಷ್ಟು ಗುಣಗಳ ಭಂಡಾರವೇ ಆಗಿದೆ. ಅದರಲ್ಲಿ ಐರನ್‌ ಮತ್ತು ವಿಟಮಿನ್‌ `ಸಿ’ ಸಾಕಷ್ಟು ಪ್ರಮಾಣದಲ್ಲಿದೆ. ಇದನ್ನು ತಿನ್ನುವುದರಿಂದ ಜೀರ್ಣಕ್ರಿಯೆ ಹಾಗೂ ಶರೀರದ ರೋಗನಿರೋಧಕ ಶಕ್ತಿ ಹೆಚ್ಚುತ್ತದೆ. ಬಿಕ್ಕಳಿಕೆ ಮತ್ತು ವಾಂತಿ ಉಂಟಾದಾಗ ನೆಲ್ಲಿಕಾಯಿ ರಸನ್ನು ಕಲ್ಲುಸಕ್ಕರೊಂದಿಗೆ ದಿನಕ್ಕೆ 2-3 ಬಾರಿ ತೆಗೆದುಕೊಳ್ಳಬೇಕು.

ಕಲ್ಲಂಗಡಿ : ಕಲ್ಲಂಗಡಿಯಲ್ಲಿ ನೀರು ಮತ್ತು ಸಕ್ಕರೆ ಹೆಚ್ಚಿನ ಪ್ರಮಾಣದಲ್ಲಿರುತ್ತದೆ. ಬೇಸಿಗೆಯಲ್ಲಿ ಡೀ ಹೈಡ್ರೇಶನ್‌ ಹಾಗೂ ಅಸಿಡಿಟಿ ದೂರ ಮಾಡುತ್ತದೆ. ಇದರಲ್ಲಿ ವಿಟಮಿನ್‌ ಎ, ಬಿ. ಸಿ  ಮತ್ತು ಕಬ್ಬಿಣದ ಅಂಶ ಹೆಚ್ಚಾಗಿರುತ್ತದೆ. ಕಲ್ಲಂಗಡಿ ರಕ್ತದೊತ್ತಡವನ್ನು  ಸಮತೋಲನದಲ್ಲಿಡುತ್ತದೆ ಮತ್ತು ಅನೇಕ ಕಾಯಿಲೆಗಳನ್ನು ದೂರಮಾಡುತ್ತದೆ. ಸುಡು ಬಿಸಿಲಿನಲ್ಲಿ ತಲೆನೋವು ಬಂದಾಗ ಅರ್ಧ ಲೋಟ ಕಲ್ಲಂಗಡಿ ಹಣ್ಣಿನ ರಸ ಕುಡಿದರೆ ಲಾಭಕಾರಿ. ಇದು ಉಷ್ಣತೆಯನ್ನು ದೂರ ಮಾಡಿ ಶೀತಲತೆ ಕೊಡುತ್ತದೆ. ವಿಟಮಿನ್‌ಅಲ್ಲದೆ, ಇದರಲ್ಲಿ ಲೈಕೋಪಿನ್‌ ಕೂಡ ಪಡೆಯಬಹುದು. ಅದು ತ್ವಚೆಯನ್ನು ತಾರುಣ್ಯವಾಗಿಡಲು ಸಹಾಯಕಾರಿ. ಜೊತೆಗೆ ಅದು ಮನಸ್ಸು ಹಾಗೂ ಮೆದುಳು ಎರಡನ್ನೂ ತಂಪಾಗಿಡುತ್ತದೆ.

ಕರಬೂಜಾ : ಕರಬೂಜಾ ಶರೀರದಲ್ಲಿ ನೀರಿನ ಕೊರತೆ ಪೂರೈಸುವುದಲ್ಲದೆ, ಅದರಲ್ಲಿ ವಿಟಮಿನ್‌ ಎ, ಬಿ, ಸಿ, ಮೆಗ್ನೀಶಿಯಂ, ಸೋಡಿಯಂ, ಪೊಟ್ಯಾಶಿಯಂನಂತಹ ಮಿನರಲ್‌ಗಳು ಹೆಚ್ಚಿನ ಪ್ರಮಾಣದಲ್ಲಿವೆ. ಅದರಿಂದ ಕೊಲೆಸ್ಚ್ರಾಲ್ ಹೆಚ್ಚುವುದಿಲ್ಲ. ಹೀಗಾಗಿ ತೂಕ ಕರಗಿಸಲು ಮತ್ತು ಹೃದಯರೋಗಗಳಲ್ಲಿ  ಇದರ ಸೇವನೆ ಬಹಳ ಲಾಭಕಾರಿಯಾಗಿದೆ. ಇದರ ನಿಯಮಿತ ಸೇವನೆಯಿಂದ ತ್ವಚೆಗೆ ಸಂಬಂಧಿಸಿದ ಕಾಯಿಲೆಗಳೂ ಉಂಟಾಗುವುದಿಲ್ಲ. ಇದು ಶರೀರದ ಉಷ್ಣವನ್ನು ದೂರ ಮಾಡುತ್ತದೆ. ಇದರಲ್ಲಿ ಸಕ್ಕರೆ ಮತ್ತು ಕ್ಯಾಲೋರಿಯ ಪ್ರಮಾಣ ಹೆಚ್ಚಾಗಿರುವುದಿಲ್ಲ. ಜೊತೆಗೆ ಅದು ಆ್ಯಂಟಿ ಆಕ್ಸಿಡೆಂಟ್‌ ಆಗಿದ್ದು ವಿಟಮಿನ್‌ `ಸಿ’ಯ ಒಳ್ಳೆಯ ಸ್ರೋತವಾಗಿದೆ.

ಲೀಚಿ : ಈ ಹಣ್ಣು ಸ್ವಾದದಲ್ಲಿ ಎಷ್ಟು ಉತ್ತಮವಾಗಿದೆಯೋ ಅಷ್ಟೇ ವೇಗವಾಗಿ ಶರೀರದಲ್ಲಿ ನೀರಿನ ಕೊರತೆಯನ್ನು ಪೂರೈಸುತ್ತದೆ. ಇದರಿಂದ ಶರೀರಕ್ಕೆ ಗ್ಲೂಕೋಸ್‌ ದೊರಕಿ ಆಯಾಸ ದೂರವಾಗುತ್ತದೆ. ಇದನ್ನು ರಾಯಲ್ ಫ್ರೂಟ್‌ ಎಂದೂ ಹೇಳುತ್ತಾರೆ. ಇದು ಪೌಷ್ಟಿಕಾಂಶಗಳ ಭಂಡಾರವಾಗಿದೆ. ಇದರಲ್ಲಿ ಬಹಳಷ್ಟು ವಿಟಮಿನ್‌ ಸಿ, ಪೊಟ್ಯಾಶಿಯಂ ಮತ್ತು ಸಕ್ಕರೆ ಇರುತ್ತದೆ. ಆದ್ದರಿಂದ ಇದು ಶರೀರದಲ್ಲಿ ನೀರಿನ ಪ್ರಮಾಣವನ್ನು ಸಮತೋಲನದಲ್ಲಿಟ್ಟು ತಂಪು ನೀಡುತ್ತದೆ. 10 ಲೀಚಿಗಳಲ್ಲಿ ಸುಮಾರು 65 ಕ್ಯಾಲೋರಿ ಸಿಗುತ್ತದೆ. ಬೇಸಿಗೆಯಲ್ಲಿ ಶರೀರದಲ್ಲಿ ನೀರು ಮತ್ತು ಖನಿಜಗಳ ಕೊರತೆಯಾದಾಗ ಲೀಚಿಯ ರಸ ಬಹಳ ಲಾಭಕಾರಿ. ಅದು ಪಚನಕ್ರಿಯೆಯನ್ನು ಸದೃಢಗೊಳಿಸುತ್ತದೆ.

ದ್ರಾಕ್ಷಿ : ದ್ರಾಕ್ಷಿಯಲ್ಲಿ ಅನೇಕ ರೀತಿಯ ಪೌಷ್ಟಿಕಾಂಶಗಳಿವೆ. ಅವು ಶರೀರದ ಆರೋಗ್ಯವನ್ನು ಕಾಪಾಡಲು ಅಗತ್ಯವಾಗಿವೆ. ದ್ರಾಕ್ಷಿಯಲ್ಲಿ ವಿಟಮಿನ್‌, ಪೊಟ್ಯಾಶಿಯಂ, ಸಿಟ್ರಿಕ್‌ ಆ್ಯಸಿಡ್‌, ಕ್ಯಾಲ್ಶಿಯಂ, ಫಾಸ್ಛರಸ್‌, ಮೆಗ್ನೀಶಿಯಂ, ಕಾರ್ಬೋಹೈಡ್ರೇಟ್‌ ಮತ್ತು ಗ್ಲೂಕೋಸ್‌ ಹೇರಳವಾಗಿದ್ದು, ಅವು ಶರೀರದಲ್ಲಿ ರಕ್ತವೃದ್ಧಿ ಮಾಡುತ್ತವೆ ಹಾಗೂ ಬಲಹೀನತೆ ದೂರ ಮಾಡುತ್ತದೆ. ದ್ರಾಕ್ಷಿಯಲ್ಲಿರುವ ಸಕ್ಕರೆ ರಕ್ತದಲ್ಲಿ ಸುಲಭವಾಗಿ ಬೆರೆತು ಆಯಾಸ ದೂರ ಮಾಡಿ ಶರೀರಕ್ಕೆ ಶಕ್ತಿ ಕೊಡುತ್ತದೆ. ದ್ರಾಕ್ಷಿ ಶರೀರದಲ್ಲಿರುವ ವಿಷಯುಕ್ತ ಅಂಶಗಳನ್ನು ಸುಲಭವಾಗಿ ಶರೀರದಿಂದ ಹೊರಹಾಕುತ್ತದೆ. ರಕ್ತದ ಕ್ಷಾರೀಯತೆಯನ್ನು ಸಮತೋಲನದಲ್ಲಿಡುತ್ತದೆ. ಬೇಯಿಸಿದ ದ್ರಾಕ್ಷಿ ತಂಪು ಗುಣ ಹೊಂದಿರುತ್ತದೆ.

ಬೇಲ : ಬೇಸಿಗೆಯಲ್ಲಿ  ಬೇಲದ ಹಣ್ಣಿನ ಪಾನಕ ನಿಮಗೆ ತಂಪು ನೀಡಿ ತಾಜಾತನ ತುಂಬುತ್ತದೆ. ಅದು ಆರೋಗ್ಯಕ್ಕೆ ಸಂಬಂಧಿಸಿದ ಹಲವಾರು ಸಮಸ್ಯೆಗಳನ್ನು ದೂರ ಮಾಡುತ್ತದೆ. ಅದರಲ್ಲಿ ಕಾರ್ಬೊಹೈಡ್ರೇಟ್‌, ಫ್ಯಾಟ್ಸ್, ಪ್ರೋಟೀನ್‌, ವಿಟಮಿನ್‌ ಎ, ಬಿ. ಸಿ.  ಥೈಯ್‌ಮೈನ್‌, ರೈಬೋ ಪ್ಲೇಬಿನ್‌, ಕ್ಯಾಲ್ಶಿಯಂ, ಪೊಟ್ಯಾಶಿಯಂ, ಫೈಬರ್‌ ಇರುತ್ತದೆ. ಇದನ್ನು ಅಮೃತ ಫಲ, ಶ್ರೀಫಲ ಎಂದೂ ಕರೆಯುತ್ತಾರೆ. ಇದು ಉಷ್ಣತೆ ಹಾಗೂ ಹೊಟ್ಟೆಯ ರೋಗಗಳಿಂದ ಮುಕ್ತಿ ಕೊಡುತ್ತದೆ. ಬೇಸಿಗೆಯ ಉಷ್ಣತೆಯಿಂದ ಪಾರಾಗಲು ಬೇಲದ ಹಣ್ಣಿನ ಜೂಸ್‌ನ್ನು ಅಗತ್ಯವಾಗಿ ಕುಡಿಯಿರಿ. ಬೇಲ ತಂಪು ಗುಣ ಹೊಂದಿದೆ. ಬೇಲದಲ್ಲಿ ಮ್ಯೂಸಿವೇಸ್‌ ಬಹಳಷ್ಟು ಇದ್ದು ಡಯೇರಿಯಾ ನಂತರ ಅವು ಗಾಯಗಳನ್ನು ಕೂಡ ಮುಚ್ಚಿಬಿಡುತ್ತವೆ.

ಮಾವು : ಮಾವಿನ ಕಾಯಿ ಮತ್ತು ಪುದೀನಾ ಎಲೆಗಳಿಂದ ತಯಾರಿಸಿದ ಮಾವಿನ ಪಾನಕ ಒಳ್ಳೆಯ ಸ್ವಾದಿಷ್ಟ ಪೇಯವಾಗಿದೆ. ವಿಶೇಷವಾಗಿ ಬೇಸಿಗೆಯಲ್ಲಿ ಹೆಚ್ಚು ಉಷ್ಣತೆ ಇದ್ದಾಗ ಇದು ಬಹಳಷ್ಟು ತಂಪು ಮಾಡುತ್ತದೆ. ಇದರಲ್ಲಿ ಕೊಬ್ಬಾಗಲೀ ಕೊಲೆಸ್ಟ್ರಾಲ್ ಆಗಲೇ ಇಲ್ಲ. ಮಾವಿನಲ್ಲಿ ಹೆಚ್ಚು ಪ್ರಮಾಣದಲ್ಲಿ ಎನ್‌ಝೈಮ್ಸ್ ಇವೆ. ಅವು ಪಚನಕ್ರಿಯೆಗೆ ಸಹಾಯ ಮಾಡುತ್ತವೆ. ಮಾವಿನಹಣ್ಣಿನಲ್ಲಿ ಮಲಬದ್ಧತೆ ನಿವಾರಿಸುವ ವಿಶೇಷ ಗುಣವಿದೆ. ಜೊತೆಗೆ ಅದರಲ್ಲಿ ವಿಟಮಿನ್‌ ಎ ಮತ್ತು ಸಿ ಹೇರಳವಾಗಿದೆ. ಊಟ ಮಾಡಿದ ನಂತರವೇ ಇದನ್ನು ತಿನ್ನಬೇಕು. ಮಾವು ಉಷ್ಣಕಾರಿ. ಆದರೆ ಅದನ್ನು ನೀರು ಅಥವಾ ಫ್ರಿಜ್‌ನಲ್ಲಿ ಅರ್ಧ ಗಂಟೆ  ಇಟ್ಟರೆ ಅದು ಹೊಟ್ಟೆಗೆ ತಂಪು ಕೊಡುತ್ತದೆ.

ನೇರಳೆ : ಬೇಸಿಗೆಯಲ್ಲಿ ಸಿಗುವ ಈ ಹಣ್ಣು ನಿಮ್ಮನ್ನು ತಾಜಾ ಆಗಿಡುತ್ತದಲ್ಲದೆ ಮೂತ್ರದಲ್ಲಿ ಸಕ್ಕರೆಯ ಪ್ರಮಾಣವನ್ನೂ ಕಡಿಮೆ ಮಾಡುತ್ತದೆ. ಬಾಯಾರಿಕೆಯನ್ನು ಶಾಂತಗೊಳಿಸಿ ಶರೀರಕ್ಕೆ ಹೆಚ್ಚಿನ ಪ್ರಮಾಣದಲ್ಲಿ ಆ್ಯಂಟಿ ಆಕ್ಸಿಡೆಂಟ್‌ ಕೊಡುತ್ತದೆ.

ಪರಂಗಿ ಹಣ್ಣು : ಪೌಷ್ಟಿಕಾಂಶಗಳಿಂದ ತುಂಬಿರುವ ಪರಂಗಿ ಹಣ್ಣಿನಲ್ಲಿ ಬೀಟಾ, ಕೆರೋಟಿನ್‌, ವಿಟಮಿನ್‌, ಫೈಬರ್‌, ಪೊಟ್ಯಾಶಿಯಂ ಮತ್ತು ಅನೇಕ ರೀತಿಯ ವಿಟಮಿನ್‌ಗಳು ಸಿಗುತ್ತವೆ. ಅದರಿಂದ ಹೊಟ್ಟೆಯ ಸಮಸ್ಯೆಗಳು ದೂರಾಗುತ್ತವೆ. ಅದರ ಜೂಸ್‌ನಿಂದ ಶರೀರದಲ್ಲಿ ತಾಜಾತನ ಮತ್ತು ಸ್ಛೂರ್ತಿ ತುಂಬಿರುತ್ತದೆ. ಸುಡುಬಿಸಿಲಿನಲ್ಲಿ ಇದು ಶರೀರದ ಉಷ್ಣತೆಯನ್ನು ನಿಯಂತ್ರಿಸುತ್ತದೆ. ಅದರಿಂದ ತ್ವಚೆ ಪ್ರಾಕೃತಿಕ ರೂಪದಲ್ಲಿ ಹೊಳೆಯ್ತುತದೆ. ಪರಂಗಿಹಣ್ಣಿನ ಮಿಲ್ಕ್ ಶೇಕ್‌ ಬಹಳಷ್ಟು ಸ್ವಾದಿಷ್ಟವಾಗಿದ್ದು  ಶಕ್ತಿ ಕೊಡುವ ಪೇಯವಾಗಿದೆ. ಅದು ಕೊಲೆಸ್ಟ್ರಾಲ್‌ನ್ನು ಕಡಿಮೆ ಮಾಡಿ ಪಚನಶಕ್ತಿಯನ್ನು ಹೆಚ್ಚಿಸುತ್ತದೆ.

ಕೆ. ವಾರಿಜಾ

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ