ಆಹಾರ ಪದಾರ್ಥಗಳಲ್ಲಿ ಸರಿಯಾದ ಸಮತೋಲನ ಕಾಯ್ದುಕೊಳ್ಳುವುದರ ಮೂಲಕ ನೀವು ನಿಮ್ಮ ತೂಕದ ಮೇಲೆ ನಿಯಂತ್ರಣ ತಂದುಕೊಳ್ಳಬಹುದು.
ಹೆಚ್ಚುತ್ತಿರುವ ತೂಕ ನಿಮ್ಮ ಹಣೆಯ ಮೇಲೆ ಚಿಂತೆಯ ಗೆರೆಗಳನ್ನು ಮೂಡಿಸಿರಬಹುದು. ಜನರ ಎದುರು ಬರಲು ನಿಮಗೆ ಒಂದು ರೀತಿಯಲ್ಲಿ ಸಂಕೋಚ ಆಗುತ್ತಿರಬಹುದು. ಅದು ನಿಮ್ಮನ್ನು ಕೀಳರಿಮೆಗೂ ದೂಡುತ್ತಿರಬಹುದು. ಈ ರೀತಿಯ ಸ್ಥಿತಿ ನಿಮಗೆ ಹೆರಿಗೆಯ ಬಳಿಕ ಆಗಿರಬಹುದು ಅಥವಾ ಆಕಸ್ಮಿಕವಾಗಿಯೇ ಹೀಗಾಗಿರಬಹುದು.
ನೀವು ನಿಮ್ಮ ತೂಕವನ್ನು ಕಡಿಮೆ ಮಾಡಿಕೊಳ್ಳಲು ವ್ಯಾಯಾಮ, ಜಿಮ್, ಕಾರ್ಡಿಯಾ ಎಕ್ಸರ್‌ಸೈಜ್ ಹೀಗೆ ಏನೆಲ್ಲ ಪ್ರಯತ್ನ ಮಾಡುತ್ತಿರಬಹುದು. ಆದರೆ ಒಂದು ಸಂಗತಿ ನೆನಪಿನಲ್ಲಿರಲಿ, ತೂಕ ಕಡಿಮೆ ಮಾಡಿಕೊಳ್ಳುವುದರ ಅರ್ಥ ಕ್ರ್ಯಾಶ್ ಡಯೆಟಿಂಗ್ ಮಾಡಿಕೊಂಡು ಒಮ್ಮೆಲೆ ತೆಳ್ಳಗಾಗುವುದು ಅಲ್ಲ. ಹೀಗೆ ಮಾಡುವುದರಿಂದ ನಿಮ್ಮ ಸ್ಟೆಮಿನಾ ಕಡಿಮೆಯಾಗುತ್ತದೆ. ಕೆಲಸದಲ್ಲಿ ಮನಸ್ಸು ನಿಲ್ಲುವುದಿಲ್ಲ, ದೇಹದಲ್ಲಿ ಎನರ್ಜಿಯೂ ಇರುವುದಿಲ್ಲ. ನೀವು ಆರೋಗ್ಯಕರ ಆಹಾರದ ಜೊತೆಜೊತೆಗೆ ಎಕ್ಸರ್‌ಸೈಜ್ ಮೂಲಕ ನೀವು ನಿಮ್ಮ ತೂಕವನ್ನು ನಿಯಂತ್ರಣದಲ್ಲಿಟ್ಟುಕೊಳ್ಳಬಹುದು.
ನಿಮ್ಮ ಮುಂಜಾನೆಯ ಉಪಾಹಾರ ಸಮತೋಲನದಿಂದ ಕೂಡಿರಬೇಕು. ಒಂದು ನಿಯಮಿತ ಅಂತರದಲ್ಲಿ ನೀವು ಏನನ್ನಾದರೂ ತಿನ್ನುತ್ತಾ ಇರಿ. ಆದರೆ ನಿಮ್ಮ ಡಯೆಟ್‌ನಲ್ಲಿ ಕ್ಯಾಲೋರಿಯ ಪ್ರಮಾಣ ಕಡಿಮೆ ಇರಬೇಕು. ಹುರಿದ, ಕರಿದ ಹಾಗೂ ಫಾಸ್ಟ್ ಫುಡ್‌ನಿಂದ ದೂರ ಇರಿ. ರಾತ್ರಿಯ ಊಟ 8-9ರ ತನಕ ಮುಗಿದಿರಲಿ ಒಳ್ಳೆಯದು. ಏಕೆಂದರೆ ಆಹಾರ ಪಚನವಾಗಲು ಸಾಕಷ್ಟು ಸಮಯಾವಕಾಶ ಲಭಿಸಬೇಕು.
ಒಟ್ಟಾರೆ ನಿಮ್ಮ ಡಯೆಟ್ ಸಮತೋಲನದಿಂದ ಕೂಡಿರಬೇಕು. ಅದರಲ್ಲಿ ಪ್ರೋಟೀನ್, ವಿಟಮಿನ್, ಕಾರ್ಬೋಹೈಡ್ರೇಟ್ ಯಥೇಚ್ಛ ಪ್ರಮಾಣದಲ್ಲಿರಬೇಕು. ಒಬ್ಬ ಸಾಮಾನ್ಯ ವ್ಯಕ್ತಿ ಪ್ರತಿದಿನ 2,500 ಕ್ಯಾಲೋರಿಯ ಡಯೆಟ್ ತೆಗೆದುಕೊಳ್ಳಬೇಕು. ಆಗ ನಮ್ಮ ದೇಹ ಆರೋಗ್ಯದಿಂದ ನಳನಳಿಸುತ್ತದೆ.
ನೀವು ನಿಮಗಾಗಿ ಡಯೆಟ್ ಪ್ಲ್ಯಾನ್‌ನ್ನು ಹೀಗೆ ಮಾಡಿಕೊಳ್ಳಿ:
- ದಿನಕ್ಕೆ 3 ಸಲದ ಬದಲಿಗೆ 5 ಸಲ ಆಹಾರ ಸೇವನೆ ಮಾಡಿ. ನೀವು ಸೇವಿಸುವ ಆಹಾರದಲ್ಲಿ ಕಾಳುಗಳು, ಬ್ರೌನ್ ರೈಸ್ ಮುಂತಾದವು ಸೇರ್ಪಡೆಗೊಳ್ಳಬೇಕು.
- ನಿಮ್ಮ ಡಯೆಟ್‌ನಲ್ಲಿ ಟೋನ್ಡ್ ಹಾಲಿನಿಂದ ತಯಾರಿಸಿದ ಮೊಸರು, ಪನೀರ್, ಬೇಳೆ ಮುಂತಾದವನ್ನು ಸೇರಿಸಿ.
- ಮಲಬದ್ಧತೆ ಹಾಗೂ ಹೊಟ್ಟೆ ಹಿಂಡುವುದರಿಂದ ಬಚಾವಾಗಲು ಆಹಾರದಲ್ಲಿ ನಾರಿನಂಶ ಹೆಚ್ಚಿಸಿ. ಅದಕ್ಕಾಗಿ ಸಪ್ಲಿಮೆಂಟ್‌ಗಳ ಬದಲು ನೈಸರ್ಗಿಕ ನಾರಿನಂಶ ಸೇವಿಸಿ. ನಾರಿನಂಶದ ಮೂಲಗಳೆಂದರೆ ಕಾಳುಗಳು, ಮನೆಯಲ್ಲೇ ತಯಾರಿಸಿದ ಸೂಪ್, ಬೇಳೆಗಳು, ಹಣ್ಣುಗಳು. ಇವುಗಳಲ್ಲಿ ನಾರಿನಂಶದ ಜೊತೆ ಜೊತೆಗೆ ಹಲವು ಬಗೆಯ ಮಿನರಲ್ಸ್ ಹಾಗೂ ವಿಟಮಿನ್ಸ್ ಲಭಿಸುತ್ತವೆ.
- ಮೂಳೆಗಳ ಬಲವರ್ಧನೆಗೆ ನಿಮ್ಮ ಆಹಾರದಲ್ಲಿ ಕ್ಯಾಲ್ಶಿಯಂ ಪ್ರಮಾಣ ಹೆಚ್ಚಿಸಿ. ಕ್ಯಾಲ್ಶಿಯಂನ ಮೂಲಗಳೆಂದರೆ ಹಾಲು, ಒಣಹಣ್ಣುಗಳು, ಮೀನು, ಬಿಳಿ ಎಳ್ಳು, ಕಲ್ಲಂಗಡಿ ಬೀಜ ಮುಂತಾದವು. ತೆಳ್ಳಗಾಗುವ ಮೋಹದಲ್ಲಿ ಕ್ಯಾಲ್ಶಿಯಂ ಒಳಗೊಂಡ ಆಹಾರವನ್ನು ನಿರ್ಲಕ್ಷ್ಯ ಮಾಡುವುದರಿಂದ ಕೀಲುನೋವಿನ ತೊಂದರೆ ನಿಮ್ಮನ್ನು ಬಾಧಿಸಬಹುದು.
- ತೂಕ ಕಡಿಮೆ ಮಾಡಿಕೊಳ್ಳಲು ನೀವು ಕೊಬ್ಬಿನ ಪ್ರಮಾಣ ಕಡಿಮೆ ಮಾಡಲು ಪ್ರಯತ್ನ ಮಾಡುವಿರಿ. ಆದರೆ ತೂಕ ಕಡಿಮೆ ಮಾಡಿಕೊಳ್ಳಲು ಒಮ್ಮೆಲೇ ಕೊಬ್ಬಿನ ಪ್ರಮಾಣ ಕಡಿಮೆ ಮಾಡುವ ಅಗತ್ಯವಿಲ್ಲ. ಆಹಾರ ತಜ್ಞರ ಪ್ರಕಾರ, ಎನರ್ಜಿ ಲೆವೆಲ್‌ನ್ನು ಕಾಯ್ದುಕೊಂಡು ಹೋಗಲು ಟಿಶ್ಶು ರಿಪೇರ್ ಮತ್ತು ವಿಟಮಿನ್‌ಗಳನ್ನು ದೇಹದ ಎಲ್ಲ ಭಾಗಗಳಿಗೂ ತಲುಪಿಸಲು ಆಹಾರದಲ್ಲಿ ಯಥೇಚ್ಛ ಪ್ರಮಾಣದಲ್ಲಿ ಕ್ಯಾಲ್ಶಿಯಂ ಇರಬೇಕು. ಹೀಗಾಗಿ ಆಹಾರದಿಂದ ಕೊಬ್ಬನ್ನು ಸಂಪೂರ್ಣವಾಗಿ ನಿವಾರಿಸುವ ಬದಲು ನೀವು ಅಷ್ಟಿಷ್ಟು ಪ್ರಮಾಣದಲ್ಲಿ ಸೇವನೆ ಮಾಡುವುದರ ಮೂಲಕ ದೇಹಕ್ಕೆ ಪೋಷಕಾಂಶ ದೊರಕಿಸಿಕೊಳ್ಳಬೇಕು.