ಸಾಮಾನ್ಯವಾಗಿ ನಮ್ಮ ತಪ್ಪು ಅಭ್ಯಾಸಗಳೇ ನಮ್ಮನ್ನು ಅನಾರೋಗ್ಯಕ್ಕೆ ಈಡು ಮಾಡುತ್ತವೆ. ಊಟ ತಿಂಡಿಯ ಸ್ವಚ್ಛತೆ ಕಡೆ ಗಮನ ಕೊಡದಿರುವುದು, ಕಲುಷಿತ ಆಹಾರ ಸೇವನೆ ಇತ್ಯಾದಿಗಳ ಕಾರಣದಿಂದ ಬ್ಯಾಕ್ಟೀರಿಯಾ ನಮ್ಮ ದೇಹ ಪ್ರವೇಶಿಸುತ್ತದೆ, ರೋಗ ತರುತ್ತದೆ. ಸಂಶೋಧನೆಗಳಿಂದ ತಿಳಿದು ಬಂದ ವಿಚಾರವೆಂದರೆ, ಕಲುಷಿತ ಆಹಾರದ ಸೇವನೆಯಿಂದ ಬ್ಯಾಕ್ಟೀರಿಯಾ ನಮ್ಮ ದೇಹ ಪ್ರವೇಶಿಸಿದ ತಕ್ಷಣ, ಅದರ ಸಂಖ್ಯೆ ಬಹು ಬೇಗ ಹಲವು ಪಟ್ಟು ಹೆಚ್ಚುತ್ತದೆ. ಇದರಿಂದ ಹೊಟ್ಟೆನೋವು, ವಾಂತಿಭೇದಿ, ಜ್ವರ ಇತ್ಯಾದಿ ಹೆಚ್ಚುತ್ತದೆ. ಈ ಸಮಸ್ಯೆ ಮುಂದೆ ತೀವ್ರ ಉಲ್ಬಣಗೊಂಡಾಗ, ಅದು ನಮ್ಮ ಇಮ್ಯೂನಿಟಿ ಮೇಲೂ ಪ್ರಭಾವ ಬೀರುತ್ತದೆ.
ಆದರೆ ಇದೀಗ ಇಡೀ ವಿಶ್ವ ಕೋವಿಡ್ ಜೊತೆ ಹೋರಾಡುತ್ತಿರುವಾಗ, ನಿರ್ಲಕ್ಷ್ಯ ವಹಿಸುವ ಪ್ರಶ್ನೆಯೇ ಇಲ್ಲ. ಹೀಗಿರುವಾಗ ನೀವು ಮನೆಯಲ್ಲೇ ಆಹಾರ ತಯಾರಿಸಿ ಅಥವಾ ಹೊರಗಿನಿಂದ ಊಟ ತಿಂಡಿ ತರಿಸಿ ಶುಭ್ರತೆ ಸ್ವಚ್ಛತೆಗಳತ್ತ ಮೊದಲು ಗಮನಹರಿಸಿ. ಇಲ್ಲದಿದ್ದರೆ ಸ್ವಲ್ಪ ನಿರ್ಲಕ್ಷ್ಯ ವಹಿಸಿದರೂ ಅದು ಭಾರಿ ಹಾನಿಗೆ ನಾಂದಿ.
ವಿಶಿ ಪ್ರಕಾರ, ವಿಶ್ವದೆಲ್ಲೆಡೆ ಪ್ರತಿ ವರ್ಷ ಕಲುಷಿತ ಆಹಾರ ಸೇವನೆಯಿಂದ 10ರಲ್ಲಿ ಒಬ್ಬ ವ್ಯಕ್ತಿ ರೋಗಿಯಾದರೆ, ಹಾಗೂ ಪ್ರತಿ ವರ್ಷ ಇದರಿಂದಾಗಿ 4 ಲಕ್ಷ 20 ಸಾವಿರ ಜನ ಸಾಯುತ್ತಿದ್ದಾರೆ. ಹೀಗಾಗಿ ಈ ಸಂದರ್ಭದಲ್ಲಿ ನಾವು ಹೇಗೆ ನಮ್ಮ ಆಹಾರವನ್ನು ಹೈಜಿನಿಕ್ ಆಗಿ ಇರಿಸಿಕೊಳ್ಳುವುದು, ಆ ಮೂಲಕ ಕುಟುಂಬದ ಆರೋಗ್ಯ ಹೇಗೆ ಕಾಪಾಡಿಕೊಳ್ಳುವುದು ಎಂಬುದು ಬಲು ಮುಖ್ಯವಾಗುತ್ತದೆ.
ಹಣ್ಣು ತರಕಾರಿಗಳನ್ನು ನೀವು ಬಳಸುವ ಮೊದಲು ಚೆನ್ನಾಗಿ ತೊಳೆಯದಿದ್ದರೆ, ಇದರಿಂದ ರೋಗ ತಪ್ಪಿದ್ದಲ್ಲ. ಈಗಂತೂ ಕೊರೋನಾ ಸೀಸನ್ ಆದ್ದರಿಂದ, ಹೊರಗಿನಿಂದ ಇದನ್ನು ತಂದ ತಕ್ಷಣ 2-3 ಗಂಟೆ ಕಾಲ ಬಿಸಿಲಿಗಿಟ್ಟು, ನಂತರ ಚೆನ್ನಾಗಿ ತೊಳೆದು, ಒಣಗಿಸಿ ಆಮೇಲೆಯೇ ಬಳಸಬೇಕು. ಆಗ ಮಾತ್ರ ನೀವು ಈ ಪದಾರ್ಥ ಯಾವ ಯಾವ ವ್ಯಕ್ತಿಗಳನ್ನು ಹಾದು ಬಂದಿದೆಯೋ ಅವರೆಲ್ಲರ ರೋಗಗಳಿಂದ ಬಚಾವಾಗಬಹುದು. ಆಗ ಮಾತ್ರ ಅಂಥ ವೈರಸ್‌ಗಳ ಕಾಟ ನಿಮಗೆ ಇರದು. ಜೊತೆಗೆ ಹಣ್ಣು ತರಕಾರಿ ಮೇಲೆ ಸಿಂಪಡಿಸಲಾಗಿರುವ ಕೀಟನಾಶಕ ಕೆಮಿಕಲ್ಸ್ ನಿಂದಲೂ ನೀವು ಪಾರಾಗುವಿರಿ.
ಶುಭ್ರತೆ ಹೇಗೆ?
ಪ್ರತಿಯೊಂದು ಹಣ್ಣು ತರಕಾರಿಯನ್ನೂ ನಲ್ಲಿ ಕೆಳಗಿನ ಹರಿವು ನೀರಲ್ಲಿ ಹಿಡಿದು, ನಿಧಾನ ತಿಕ್ಕಿ ತೊಳೆಯಿರಿ. ಇದರಿಂದ ಅದಕ್ಕಂಟಿದ ಕೀಟನಾಶಕ, ಕೀಟಾಣು ತೊಲಗುತ್ತದೆ. ಫುಡ್‌ಡ್ರಗ್ ಅಡ್ಮಿನ್ ಪ್ರಕಾರ, ಯಾವುದೇ ಸೋಪು, ಡಿಟರ್ಜೆಂಟ್ ಬಳಸಿ ಇವನ್ನು ತೊಳೆಯುವ ಅಗತ್ಯವಿಲ್ಲ. ಏಕೆಂದರೆ ಅವುಗಳ ಸ್ಟ್ರಾಂಗ್ ಕೆಮಿಕಲ್ಸ್ ಸಂಪರ್ಕ ನಿಮ್ಮ ಹಾರ್ಮೋನ್ ಬ್ಯಾಲೆನ್ಸ್ ಬ್ಯಾಲೆನ್ಸ್ ಹಾಳು ಮಾಡುವುದರಿಂದ ನಿಮ್ಮ ಆರೋಗ್ಯಕ್ಕೆ ಹಾನಿ ತಪ್ಪಿದ್ದಲ್ಲ. ಹೀಗಾಗಿ ಶುದ್ಧ ನೀರು ಇಂಥ ಸ್ವಚ್ಛತೆಗೆ ಬೇಕಾದಷ್ಟಾಯಿತು. ಆದರೆ ಇಂಥ ಕ್ಲೀನಿಂಗ್‌ಗೆ ಮೊದಲು, ನಂತರ ನಿಮ್ಮ ಕೈಗಳನ್ನು ಚೆನ್ನಾಗಿ ತೊಳೆದಿರಬೇಕೆಂದು ತಿಳಿದಿರಿ.
ಹಣ್ಣು ತರಕಾರಿ ಶುಚಿಗೊಳಿಸಲು, ಒಂದು ಬಕೆಟ್ ನೀರಿಗೆ ತುಸು ವಿನಿಗರ್, ಕಲ್ಲುಪ್ಪು, 2-3 ಚಿಟಕಿ ಅರಿಶಿನ, ಬೇಕಿಂಗ್ ಪೌಡರ್‌ಹಾಕಿ, ಅದರಲ್ಲಿ ತರಕಾರಿಯನ್ನು 1-2 ಗಂಟೆ ಕಾಲ ನೆನೆಸಿ, ನಂತರ ತೊಳೆದು ಒರೆಸಿಕೊಳ್ಳುವುದರಿಂದ ಹೆಚ್ಚಿನ ಲಾಭವಿದೆ. ಇದನ್ನು ಫ್ರಿಜ್‌ನಲ್ಲಿ ಎತ್ತಿರಿಸಿ, ಬೇಕಾದಾಗ ಬಳಸಿ.