ಡೈರಿ ಉತ್ಪನ್ನಗಳಿಂದ ಶರೀರಕ್ಕೆ ಅಗತ್ಯವಾದ ಪೌಷ್ಟಿಕಾಂಶಗಳು ದೊರೆಯುತ್ತವೆ. ಅವುಗಳೆಂದರೆ ಪ್ರೋಟೀನ್‌, ಕಾರ್ಬೋಹೈಡ್ರೇಟ್‌, ವಿಟಮಿನ್‌, ಕ್ಯಾಲ್ಶಿಯಂ, ಮೆಗ್ನೀಶಿಯಂ, ಫಾಸ್ಛರಸ್‌, ಪೊಟ್ಯಾಶಿಯಂ, ಜಿಂಕ್‌…. ಇತ್ಯಾದಿ. ಆದರೆ ಹಾಲು ಮತ್ತು ಅದರಿಂದ ತಯಾರಾದ ಇತರೆ ತಿನಿಸುಗಳಿಗೆ ಸಂಬಂಧಿಸಿದಂತೆ ಕೆಲವಾರು ಕಲ್ಪನೆ ಮಾತುಗಳು ಕೇಳಿಬರುತ್ತವೆ. ಆದರೆ ಅವುಗಳಿಗೆ ಯಾವುದೇ ವೈಜ್ಞಾನಿಕ ಆಧಾರಗಳಿಲ್ಲ. ಈ ಡೈರಿ ಉತ್ಪನ್ನಗಳನ್ನು ನಮ್ಮ ದಿನನಿತ್ಯದ ಆಹಾರದಲ್ಲಿ ಬಳಸುವುದು ಒಳ್ಳೆಯದು.

ಡೈರಿ ಉತ್ಪನ್ನಗಳಿಗೆ ಸಂಬಂಧಿಸಿದಂತೆ ಪ್ರಚಲಿತವಾಗಿರುವ ಕೆಲವು ಕಲ್ಪನೆಗಳು ಮತ್ತು ವಾಸ್ತವಗಳು ಹೀಗಿವೆ :

ಮಿಥ್ಯೆ : ಡೈರಿ ಉತ್ಪನ್ನಗಳ ಸೇವನೆಯಿಂದ ದೇಹದ ತೂಕ ಹೆಚ್ಚುತ್ತದೆ.

ಸತ್ಯ : ಸೇವಿಸಿದ ಆಹಾರದ ಕ್ಯಾಲೋರಿಯು ಸಾಕಷ್ಟು ಪ್ರಮಾಣದಲ್ಲಿ ಬಳಕೆಯಾಗದಿದ್ದರೆ ತೂಕ ಹೆಚ್ಚುತ್ತದೆ. ಶಾರೀರಿಕ ಚಟುವಟಿಕೆ ಮತ್ತು ವ್ಯಾಯಾಮದ ಕೊರತೆಯೂ ತೂಕದ ಹೆಚ್ಚಳಕ್ಕೆ ಕಾರಣವಾಗುತ್ತದೆ.

– ಸಂಶೋಧಕರ ಅಭಿಪ್ರಾಯದಲ್ಲಿ ದಿನಕ್ಕೆ 3 ಸಲ ನಿಗದಿತ ಪ್ರಮಾಣದಲ್ಲಿ ಡೈರಿ ಉತ್ಪನ್ನಗಳ ಸೇವನೆಯಿಂದ ದೇಹದ ತೂಕ ಕಡಿಮೆಯಾಗುವುದಲ್ಲದೆ, ಕೊಬ್ಬು ಕರಗುತ್ತದೆ.

– ಕ್ಯಾಲ್ಶಿಯಂ ದೇಹದ ಕೊಬ್ಬನ್ನು ಇಳಿಸುತ್ತದೆ. ಹೀಗೆ ಇದು ತೂಕವನ್ನು ಇಳಿಸುವುದರಲ್ಲಿ ಸಹಕಾರಿಯಾಗಿರುತ್ತದೆ.

– ನೀವು ಬಳಸುವ ತಿನಿಸುಗಳಲ್ಲಿ ಫ್ಯಾಟ್‌ ಮತ್ತು ಕ್ಯಾಲೋರಿ ಕಡಿಮೆ ಇವೆಯೇ ಎಂದು ಗಮನಿಸಿ. ನೀವು ಕೊಳ್ಳುವಾಗ ಲೆಸ್‌ ಫ್ಯಾಟ್‌ ಎಂದು ನಮೂದಾಗಿರುವ ಉತ್ಪನ್ನಗಳನ್ನು ಮಾತ್ರ ಖರೀದಿಸಿ.

ಮಿಥ್ಯೆ : ಸಾಧಾರಣ ಹಾಲಿಗಿಂತ ಆರ್ಗ್ಯಾನಿಕ್‌ ಮಿಲ್ಕ್ ಹೆಚ್ಚು ಆರೋಗ್ಯಕರ.

ಸತ್ಯ : ಸಾಧಾರಣ ಮತ್ತು ಆರ್ಗ್ಯಾನಿಕ್‌ ಮಿಲ್ಕ್ ಎರಡೂ ಪುಷ್ಚಿಕರವಾದವುಗಳೇ. ಎರಡೂ ಒಂದೇ ರೀತಿಯ ಗುಣಗಳಿಂದ  ಕೂಡಿದ್ದು ಆರೋಗ್ಯಕರವಾಗಿರುವುದು. ವ್ಯತ್ಯಾಸವಿರುವುದು ಕೇವಲ ತಯಾರಿಕೆ ವಿಧಾನದಲ್ಲಿ ಮಾತ್ರ.

– ಯುಎಸ್‌ಡಿಎ ಪ್ರಕಾರ ಒಂದು ಹಸುವಿಗೆ ಆರ್ಗ್ಯಾನಿಕ್‌ ಆಹಾರವನ್ನು ಮಾತ್ರ ನೀಡುತ್ತಿದ್ದು, ಅದನ್ನು ನಿಗದಿತ ವೇಳೆಯಲ್ಲಿ ಮೇಯಿಸಲು ಕರೆದೊಯ್ಯುತ್ತಿದ್ದು ಮತ್ತು ಯಾವುದೇ ಬಗೆಯ ಕೃತಕ ಹಾರ್ಮೊನ್‌ ಅಥವಾ ಆ್ಯಂಟಿಬಯಾಟಿಕ್‌ ಔಷಧಗಳನ್ನು ಕೊಡಿಸದೆ ಇರುವಂತಹ ಹಸುವಿನ ಹಾಲಿಗೆ ಆರ್ಗ್ಯಾನಿಕ್‌ ಲೇಬಲ್ ನೀಡಲಾಗುತ್ತದೆ.

– ಡೈರಿ ಉತ್ಪನ್ನಗಳು ನಮ್ಮ ಆರೋಗ್ಯಕರ ಆಹಾರದ ಒಂದು ಪ್ರಮುಖ ಭಾಗವಾಗಿರುವಂತೆ ಆರ್ಗ್ಯಾನಿಕ್‌ ಮಿಲ್ಕ್ ನಲ್ಲಿ ಸಹ ಅಂಥವೇ ಪೌಷ್ಟಿಕಾಂಶಗಳು ಇರುತ್ತವೆ. ಈ ಎರಡೂ ರೀತಿಯ ಹಾಲು ಶುದ್ಧ, ಸುರಕ್ಷಿತ ಮತ್ತು ಪೌಷ್ಟಿಕ ಎಂದು ನಿಶ್ಚಿತಗೊಳಿಸಲು ಸರಿಯಾದ ರೀತಿಯಲ್ಲಿ ಪರೀಕ್ಷಿಸಿರಬೇಕಾಗುತ್ತದೆ.

ಮಿಥ್ಯೆ : ಹಾಲು ಕಫ ಉಂಟು ಮಾಡುತ್ತದೆ.

ಸತ್ಯ : ಹಾಲು ಮತ್ತು ಡೈರಿ ಉತ್ಪನ್ನಗಳಿಂದ ಕಫ ಉಂಟಾಗುತ್ತದೆ ಎಂಬುದಕ್ಕೆ ಯಾವುದೇ ಯಥಾರ್ಥ ಪ್ರಮಾಣವಿಲ್ಲ. ಹಾಲು ಮತ್ತು ಕಫಕ್ಕೆ ಸಂಬಂಧವಿದೆ ಎನ್ನುವುದಕ್ಕೆ ವೈದ್ಯಕೀಯ ಆಧಾರವಿಲ್ಲ.

– ಹಾಲು ಕುಡಿದ ನಂತರ ಮತ್ತು ಐಸ್‌ಕ್ರೀಮ್ ತಿಂದ ನಂತರ ಕೆಲವರಿಗೆ ಗಂಟಲಿನಲ್ಲಿ ಕರಕರೆಯುವಂತೆ ಭಾಸವಾಗುತ್ತದೆ. ಬಹುಶಃ ಅವರು ಅದನ್ನು ಕಫ ಎಂದು ಭಾವಿಸಬಹುದು. ಆದರೆ ಅದು ಹಾಲಿನಲ್ಲಿ ಕೆನೆಯ ಅಂಶವಾಗಿದ್ದು, ಶರೀರದ ತಾಪಮಾನದಿಂದಾಗಿ ಕರಗುತ್ತದೆ. ಅದು ಅಷ್ಟಕ್ಕೇ ಕೊನೆಯಾಗುತ್ತದೆಯೇ ಹೊರತು, ಯಾವುದೇ ರೀತಿಯಿಂದ ಹಾನಿಕಾರಕವಲ್ಲ.

ಮಿಥ್ಯೆ : ಡೇರಿ ಉತ್ಪನ್ನಗಳು ಆಸ್ತಮಾ ಅಥವಾ ಉಬ್ಬಸವನ್ನು ಹೆಚ್ಚಿಸುತ್ತದೆ.

ಸತ್ಯ : ಯಾವುದೇ ಶೋಧನೆಗಳು ಈ ಕಲ್ಪನೆಯನ್ನು ಸರಿಯೆಂದು ಒಪ್ಪುವುದಿಲ್ಲ.

– ಅಧ್ಯಯನದ ಪ್ರಕಾರ, ಹಾಲು ಮತ್ತು ಡೈರಿ ಉತ್ಪನ್ನಗಳಿಂದ ಕೆಮ್ಮು, ನೆಗಡಿ, ಎದೆ ಹಿಂಡುವಿಕೆ ಲಕ್ಷಣಗಳು ಕಾಣುವುದಿಲ್ಲ.

– ವಾಸ್ತವವಾಗಿ ಡೈರಿ ಉತ್ಪನ್ನಗಳು ಮಕ್ಕಳಲ್ಲಿ ಶೀತದ ಪ್ರವೃತ್ತಿಯನ್ನು ದೂರಗೊಳಿಸುತ್ತವೆ. ಕೇವಲ ಶೇ.2.5ರಷ್ಟು ಜನರು ಮಾತ್ರ ಇದರಿಂದ ಆಸ್ತಮಾಕ್ಕೆ ಗುರಿಯಾಗಬಹುದು.

– ಉಬ್ಬಸವನ್ನು ಹೆಚ್ಚಿಸುವ ಕೆಲವು ಅಂಶಗಳೆಂದರೆ ಮಣ್ಣಿನ ಧೂಳು, ಹೂವಿನ ಪರಾಗಗಳು, ಋತು ಬದಲಾವಣೆ ಮತ್ತು ವೈರಲ್ ಇನ್‌ಫೆಕ್ಷನ್‌ ಹಾಗೂ ಇವುಗಳಿಂದಾಗಬಹುದಾದ ಅಲರ್ಜಿ.

– ಉಬ್ಬಸದ ತೊಂದರೆ ಇರುವ ವ್ಯಕ್ತಿಗಳು ತಮ್ಮ ಕಾಯಿಲೆಯನ್ನು ಹತೋಟಿಯಲ್ಲಿಡಲು ನಿತ್ಯ ನಿಗದಿತ ಪ್ರಮಾಣದಲ್ಲಿ ಡೈರಿ ಉತ್ಪನ್ನಗಳ ಸೇವನೆ ಮಾಡಬೇಕೆಂದು ಆಸ್ತಮಾದ ಒಂದು ನ್ಯಾಷನಲ್ ಕಮಿಟಿಯು ಅಭಿಪ್ರಾಯಪಡುತ್ತದೆ.

ಮಿಥ್ಯೆ : ಲ್ಯಾಕ್ಟೋಸ್‌ ಅಲರ್ಜಿ ಇರುವವರು ಡೈರಿ ಉತ್ಪನ್ನಗಳನ್ನು ಸೇವಿಸಲೇಬಾರದು.

ಸತ್ಯ : ಲ್ಯಾಕ್ಟೋಸ್‌ ಅಲರ್ಜಿಯನ್ನು ಹಾಲಿನ ಅಲರ್ಜಿ ಎಂದು ಭಾವಿಸಲಾಗುತ್ತದೆ. ಶರೀರದಲ್ಲಿ ಒಂದು ನಿರ್ದಿಷ್ಟ ಎಂಜೈಮ್ ನ ಕೊರತೆಯಿಂದಾಗಿ ಹಾಲಿನಲ್ಲಿನ ಸಕ್ಕರೆ ಜೀರ್ಣಿಸಿಕೊಳ್ಳಲು ಅಸಮರ್ಥವಾಗುತ್ತದೆ.

– ನಿಮಗೆ ಲ್ಯಾಕ್ಟೋಸ್‌ ಅಲರ್ಜಿ ಆಗಿದ್ದರೆ ಡೈರಿ ಉತ್ಪನ್ನಗಳನ್ನು ದೂರ ಮಾಡಬೇಡಿ.

– ಒಂದು ಅಧ್ಯಯನದ ಪ್ರಕಾರ, ಲ್ಯಾಕ್ಟೋಸ್‌ ಅಲರ್ಜಿಕ್‌ ವ್ಯಕ್ತಿಗಳು ದಿನ 1 ಲೋಟ ಹಾಲು ಮತ್ತು ಕೆಲವು ಡೈರಿ  ಉತ್ಪನ್ನಗಳನ್ನು ಸುಲಭವಾಗಿ ಜೀರ್ಣಿಸಿಕೊಳ್ಳಬಲ್ಲರು.

– ಡೈರಿ ಉತ್ಪನ್ನಗಳ ಸೇವನೆಯನ್ನು ಸಂಪೂರ್ಣವಾಗಿ ನಿಲ್ಲಿಸುವುದರಿಂದ ಶರೀರದಲ್ಲಿ ಕ್ಯಾಲ್ಶಿಯಂ ಮತ್ತು ಇತರೆ ಪೌಷ್ಟಿಕಾಂಶಗಳ ಕೊರತೆಯಾಗಬಹುದು.

– ಹಾರ್ಡ್‌ ಚೀಸ್‌ (ಪನೀರ್‌) ಮತ್ತು ಯೋಗರ್ಟ್‌ನಲ್ಲಿ ಲ್ಯಾಕ್ಟೋಸ್‌ನ ಅಂಶ ಕಡಿಮೆ ಇರುತ್ತದೆ. ಇವುಗಳನ್ನು ಸುಲಭವಾಗಿ ಜೀರ್ಣಿಸಿಕೊಳ್ಳಬಹುದು. ಯೋಗರ್ಟ್‌ನಲ್ಲಿರುವ ಉಪಯೋಗಿ ಜೀವಾಣುಗಳು ಲ್ಯಾಕ್ಟೋಸ್‌ನ್ನು ಜೀರ್ಣಿಸಲು ಸಹಾಯ ಮಾಡುತ್ತವೆ. ಲ್ಯಾಕ್ಟೋಸ್‌ ಕಡಿಮೆ ಪ್ರಮಾಣದಲ್ಲಿರುವ ಕ್ರೀಮ್, ಬೆಣ್ಣೆ, ಫ್ಲೇವರ್ಡ್‌ ಮಿಲ್ಕ್ ಹಾಗೂ ಲ್ಯಾಕ್ಟೋಸ್‌ ರಹಿತವಾದ ಹಾಲು ಮತ್ತು ಹಾಲಿನ ಉತ್ಪನ್ನಗಳು ಸಹ ದೊರೆಯುತ್ತವೆ.

ಮಿಥ್ಯೆ : ಹಾಲಿನ ಬದಲು ಕ್ಯಾಲ್ಶಿಯಂಯುಕ್ತ ಬದಲಿ ಆಹಾರ ಸೇವನೆ ಮಾಡಬಹುದು.

ಸತ್ಯ : ಹಾಲು ಅತಿ ಹೆಚ್ಚಿನ ಕ್ಯಾಲ್ಶಿಯಂನ ಮೂಲವಾಗಿರುವುದಲ್ಲದೆ ಪ್ರೋಟೀನ್‌, ವಿಟಮಿನ್‌ ಎ, ವಿಟಮಿನ್‌ ಬಿ12, ವಿಟಮಿನ್‌ ಡಿ, ರೈಬೊಫ್ಲೆಮಿನ್‌, ಪೊಟಾಶಿಯಂ, ಮೆಗ್ನೀಶಿಯಂ, ಫಾಸ್ಛರಸ್‌ ಮತ್ತು ಜಿಂಕ್‌ಗಳನ್ನು ಒದಗಿಸಿಕೊಡುತ್ತದೆ. ಹಾಲಿನಲ್ಲಿರುವ ವಿಟಮಿನ್‌ ಡಿ ಶರೀರದಲ್ಲಿನ ಕ್ಯಾಲ್ಶಿಯಂನ ಹೀರುವಿಕೆಗೆ ಅಗತ್ಯವಾದ ಪೌಷ್ಟಿಕಾಂಶವಾಗಿದೆ.

– ಮಕ್ಕಳಿಗೆ ಸಾಕಷ್ಟು ಪ್ರಮಾಣದಲ್ಲಿ ಹಾಲು ಮತ್ತು ಡೈರಿ ಉತ್ಪನ್ನಗಳನ್ನು ಕೊಡಬೇಕು. ಅವುಗಳಲ್ಲಿರುವ ಕ್ಯಾಲ್ಶಿಯಂ ಆಹಾರವನ್ನು ಸುಲಭವಾಗಿ ಜೀರ್ಣಿಸಲು ಮತ್ತು ಹೀರಿಕೊಳ್ಳಲು ಅಗತ್ಯವಾದ ಪೌಷ್ಟಿಕಾಂಶವಾಗಿದೆ.

– ಕ್ಯಾಲ್ಶಿಯಂನ ಬದಲಿ ಆಹಾರ ಡೈರಿ ಉತ್ಪನ್ನಗಳಲ್ಲಿರುವ ಎಲ್ಲ ಪೌಷ್ಟಿಕಾಂಶಗಳನ್ನೂ ಹೊಂದಿರುವುದಿಲ್ಲ. ಡೈರಿ ಉತ್ಪನ್ನಗಳಾದ ಕೋಲ್ಡ್ ಮಿಲ್ಕ್, ಫ್ರೂಟಿ ಮಿಲ್ಕ್ ಶೇಕ್‌ಗಳನ್ನು ಆಸ್ವಾದಿಸುವ ಆನಂದ ನಿಮಗೆ ಪೂರಕ ಆಹಾರದಿಂದ ದೊರೆಯುವುದಿಲ್ಲ. ಅಲ್ಲದೆ, ತಿಂಡಿಯ ಜೊತೆಗೆ ಒಂದು ಗ್ಲಾಸ್‌ ಹಾಲು ಅಥವಾ ಮಿಲ್ಕ್ ಶೇಕ್‌ನ ಮೇಲೊಂದು ಸ್ಕೂಪ್‌ ಐಸ್‌ಕ್ರೀಂ ಇರಿಸಿ ಸವಿಯುವ ಅವಕಾಶ ನಿಮಗೆ ಸಿಗುವುದಿಲ್ಲ.

ಮಿಥ್ಯೆ : ಹಾಲು ಮತ್ತು ಡೈರಿ ಉತ್ಪನ್ನಗಳಿಂದ ಮೂತ್ರಾಶಯದಲ್ಲಿ ಕಲ್ಲು ಉಂಟಾಗುವ ಸಂಭವವಿರುತ್ತದೆ.

ಸತ್ಯ : ಮೂತ್ರಾಶಯದಲ್ಲಿ ಕಲ್ಲು ಉಂಟಾಗುವುದಕ್ಕೆ ಡೈರಿ ಉತ್ಪನ್ನಗಳ ಸೇವನೆ ಕಾರಣವಲ್ಲ. ಕೆಲವು ಸಂಶೋಧನೆಗಳ ಪ್ರಕಾರ ಹಾಲು ಕುಡಿಯುವ ಅಭ್ಯಾಸ ಇಟ್ಟುಕೊಂಡಿರುವುದರಿಂದ  ಕಲ್ಲು ಉಂಟಾಗುವ ಸಂಭವ ಕಡಿಮೆ ಇರುತ್ತದೆ.

– ಮಹಿಳೆಯರಿಗೆ ಸಂಬಂಧಿಸಿದಂತೆ ನಡೆಸಿದ ಒಂದು ಅಧ್ಯಯನದಿಂದ ತಿಳಿದು ಬಂದಿರುವುದೇನೆಂದರೆ, ದಿನಕ್ಕೆ 3 ಅಥವಾ ಹೆಚ್ಚು ಬಾರಿ ಡೈರಿ ಉತ್ಪನ್ನಗಳನ್ನು ಸೇವಿಸುವ ಮಹಿಳೆಯರಿಗೆ 8 ವರ್ಷ ಕಾಲ ಮೂತ್ರಾಶಯದಲ್ಲಿ ಕಲ್ಲು ಉಂಟಾಗುವ ಸಂಭವ ಬಹಳ ಪಟ್ಟು ಕಡಿಮೆ ಇರುತ್ತದೆ.

– ಕ್ಯಾಲ್ಶಿಯಂ, ಆಹಾರದಲ್ಲಿರುವ ಆಕ್ಸಿಡೆಂಟ್‌ನ್ನು ನಿಯಂತ್ರಿಸಿ ಶರೀರದಲ್ಲಿ ಅದರ ಪ್ರಮಾಣವನ್ನು ಸೀಮಿತಗೊಳಿಸುತ್ತದೆ. ಈ ರೀತಿ ಮೂತ್ರಾಶಯದಲ್ಲಿ ಕಲ್ಲು ಕಾಣಿಸುವ ಸಂಭವ ಕಡಿಮೆಯಾಗುತ್ತದೆ.

– ಕ್ಯಾಲ್ಶಿಯಂನ ಬದಲಿ ಆಹಾರದಿಂದ ಇಂತಹ ಪರಿಣಾಮ ಇರುವುದಿಲ್ಲ. ಹೀಗಾಗಿ ಕಲ್ಲು ಉಂಟಾಗುವ ಸಂಭವ ಹೆಚ್ಚುತ್ತದೆ. ಆದ್ದರಿಂದ ನೀವು ನಿತ್ಯ ಕ್ಯಾಲ್ಶಿಯಂ ಭರಿತ ಆಹಾರವನ್ನೇ ಸೇವಿಸಿ.

– ಆಕ್ಸಿಂಟ್‌ ಜೊತೆಗೆ ಕೊಂಚ ಕ್ಯಾಲ್ಶಿಯಂ ಕೂಡ ಶರೀರದಿಂದ ಹೊರಹೋಗುವುದರಿಂದ ಊಟ ತಿಂಡಿಯ ಜೊತೆಗೆ ಕ್ಯಾಲ್ಶಿಯಂ ಸೇವಿಸಬೇಕೆಂದು ಸಲಹೆ ನೀಡಲಾಗುತ್ತದೆ. ಕ್ಯಾಲ್ಶಿಯಂನ ಈ ಕೊರತೆಯನ್ನು ಡೈರಿ ಉತ್ಪನ್ನಗಳು ಪೂರೈಸಬಲ್ಲವು. ಮೂತ್ರಾಶಯದಲ್ಲಿ ಕಲ್ಲಿನ ತೊಂದರೆ ಇರುವವರು ಹಾಲು ಮತ್ತು ಇತರೆ ಡೈರಿ ಉತ್ಪನ್ನಗಳ ಸೇವನೆಯನ್ನು ನಿಲ್ಲಿಸಬಾರದು.

ಮಿಥ್ಯೆ : ಚೀಸ್‌ ಮತ್ತು ಕೊಬ್ಬಿನಿಂದ ಕೂಡಿದ ಡೈರಿ ಉತ್ಪನ್ನಗಳ ಸೇವನೆಯು ಮೊಡವೆಗಳಿಗೆ ಕಾರಣವಾಗುತ್ತವೆ.

ಸತ್ಯ : ಡೈರಿ ಉತ್ಪನ್ನಗಳಿಗೂ ಮೊಡವೆಗಳಿಗೂ ಯಾವ ಸಂಬಂಧ ಇಲ್ಲ. ಚರ್ಮ ರೋಗತಜ್ಞರ ಪ್ರಕಾರ, ಯಾವುದೇ ಆಹಾರ ಅಥವಾ ಡೈರಿ ಉತ್ಪನ್ನಗಳ ಸೇವನೆಯು ಮೊಡವೆಗಳಿಗೆ ಕಾರಣವಲ್ಲ. ಚರ್ಮದ ಗುಣ, ಆನುವಂಶಿಕತೆ, ಹಾರ್ಮೋನ್‌, ವಾಯುಮಾಲಿನ್ಯ ಮುಂತಾದವು ಅದಕ್ಕೆ ಕಾರಣವಾಗಬಹುದು.

– ಚರ್ಮಕ್ಕೆ ವಿಟಮನ್‌ ಎ ಮತ್ತು ಡಿ ಅಗತ್ಯವಾಗಿರುತ್ತವೆ. ವಿಟಮಿನ್‌ ಡಿ ಮೊಡವೆಗಳ ತಡೆಯುವಿಕೆ ಮತ್ತು ನಿವಾರಣೆಗೆ ಸಹಾಯಕಾರಿ. ವಿಟಮಿನ್‌ ಎ ಚರ್ಮದ ಮೇಲಾಗುವ ಅತಿಕ್ರಮಣವನ್ನು ತಡೆಗಟ್ಟುವಲ್ಲಿ ಪ್ರಯೋಜನಕಾರಿ.

– ಈ ವಿಟಮಿನ್‌ಗಳು ಹಾಲು ಮತ್ತು ಡೈರಿ ಉತ್ಪನ್ನಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ದೊರೆಯುತ್ತವೆ.

– ಆದ್ದರಿಂದ ಡೈರಿ ಉತ್ಪನ್ನಗಳನ್ನು ನಮ್ಮ ದಿನನಿತ್ಯದ ಆಹಾರದ ಪಟ್ಟಿಯಿಂದ ದೂರಗೊಳಿಸುವುದು ಸರಿಯಲ್ಲ.

– ಕಡಿಮೆ ಕೊಬ್ಬಿನಾಂಶದಿಂದ ಕೂಡಿದ ಹಾಲು, ಚೀಸ್‌, ಯೋಗರ್ಟ್‌ ಹಾಗೂ ಹಣ್ಣು ತರಕಾರಿ ಮತ್ತು ನಿಗದಿತ ಪ್ರಮಾಣದಲ್ಲಿ ನೀರು ಮುಂತಾದವುಗಳ ಸೇವನೆಯಿಂದ ನಿಮ್ಮ ಚರ್ಮದ ಗುಣವನ್ನು ಉತ್ತಮಪಡಿಸಿಕೊಳ್ಳಬಹುದು.

ಮಿಥ್ಯೆ : ಡೈರಿ ಉತ್ಪನ್ನಗಳು ಹೃದಯ ರೋಗವನ್ನು ಹೆಚ್ಚಿಸುವ ಸಂಭವಿರುತ್ತದೆ.

ಸತ್ಯ : ಹಾಲು ಮತ್ತು ಡೈರಿ ಉತ್ಪನ್ನಗಳ ಸೇವನೆಯು ಹೃದಯ ರೋಗಕ್ಕೆ ಕಾರಣವಲ್ಲ. ಬದಲಾಗಿ ಅವು ಆ ರೋಗವನ್ನು ನಿವಾರಿಸಲು ಸಹಕಾರಿಯಾಗುತ್ತವೆ.

– ಹೆಚ್ಚು ಕೊಬ್ಬಿನಿಂದ ಕೂಡಿದ ಪದಾರ್ಥಗಳ ಸೇವನೆಯು ಹೃದಯರೋಗಕ್ಕೆ ಕಾರಣವಾಗಬಹುದು. ಏಕೆಂದರೆ ಇವುಗಳಿಂದ ಶರೀರದಲ್ಲಿ ಕೊಲೆಸ್ಟ್ರಾಲ್ (ಎಲ್‌ಡಿಎಲ್)ನ ಪ್ರಮಾಣ ಹೆಚ್ಚುತ್ತದೆ.

ಬೇರೆ ಬೇರೆ ಬಗೆಯ ಕೊಬ್ಬುಗಳು ಎಲ್‌ಡಿಎಲ್ ಮೇಲೆ ಬೇರೆ ಬೇರೆ ರೀತಿಯಾಗಿ ಪ್ರಭಾವ ಬೀರುತ್ತವೆ.

– ಎಲ್ಲ ಕೊಬ್ಬುಗಳೂ ಒಂದೇ ಬಗೆಯಾಗಿರುವುದಿಲ್ಲ. ಒಂದು ಅಧ್ಯಯನದ ಪ್ರಕಾರ ಡೈರಿ ಉತ್ಪನ್ನಗಳಲ್ಲಿರುವ ಕೊಬ್ಬಿನಾಂಶ ಸಂಕೀರ್ಣವಾಗಿದ್ದು, ಅವುಗಳಲ್ಲಿ ಪ್ರಯೋಜನಕಾರಿ ಗುಣಗಳಿರುತ್ತವೆ.

– ಈ ಉತ್ಪನ್ನಗಳಲ್ಲಿ ಅಡಕವಾಗಿರುವ ಸಿಟ್ರಿಕ್‌ ಆ್ಯಸಿಡ್‌ನಂತಹ ಕೊಬ್ಬಿನಾಂಶ ವಾಸ್ತವವಾಗಿ ಕೊಲೆಸ್ಟ್ರಾಲ್ ಮತ್ತು ಎಲ್‌ಡಿಎಲ್‌ನ್ನು ಕಡಿಮೆ ಮಾಡುತ್ತದೆ.

– ಡೈರಿ ಉತ್ಪನ್ನಗಳಲ್ಲಿರುವ ಪ್ರೋಟೀನ್‌, ಕ್ಯಾಲ್ಶಿಯಂ ಮತ್ತು ಇತರೆ ಪೌಷ್ಟಿಕಾಂಶಗಳು ಕೊಬ್ಬಿನಿಂದ ಉಂಟಾಗುವ ಪ್ರಭಾವವನ್ನು ಸಮತೋಲನಗೊಳಿಸಿ ಆರೋಗ್ಯವನ್ನು ಕಾಪಾಡುತ್ತದೆ ಎಂಬುದನ್ನು ಸದಾ ನೆನಪಿನಲ್ಲಿಟ್ಟುಕೊಳ್ಳಬೇಕು.

– ಜೆ. ತನುಜಾ

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ