ಒಳ ಉಡುಪುಗಳ ಈ ಸ್ಟೈಲ್‌ ಮತ್ತು ಆರೋಗ್ಯದೊಂದಿಗಿನ  ಸಂಪರ್ಕದ ಬಗ್ಗೆ ತಿಳಿದುಕೊಳ್ಳುವುದು ಅತ್ಯವಶ್ಯ.

ಹುಡುಗಿಯರು ಪರ್ಫೆಕ್ಟ್ ಆಗಿ ಕಾಣಲು ಹೊರ ಉಡುಪುಗಳ ಬಗ್ಗೆಯೇ ಗಮನ ಕೊಡುತ್ತಾರೆ. ಆದರೆ ಒಳ ಉಡುಪುಗಳ ಬಗೆಗೂ ತಿಳಿದುಕೊಳ್ಳುವುದು ಅತ್ಯಗತ್ಯ. ಸಾಮಾನ್ಯವಾಗಿ ಹುಡುಗಿಯರು ಎಲ್ಲ ಬಟ್ಟೆಗಳ ಜೊತೆಗೆ ಒಂದೇ ತೆರನಾದ ಪ್ಯಾಂಟಿಗಳನ್ನು ಧರಿಸುತ್ತಾರೆ. ಇದರಿಂದಾಗಿ ಅವರಿಗೆ ತಮಗಿಷ್ಟವಾದ ಡ್ರೆಸ್‌ ಧರಿಸಿದ ಬಳಿಕ ಹಿತಾನುಭವ ಆಗುವುದಿಲ್ಲ. ಹೀಗಾಗಿ ಯಾವುದೇ ಬಗೆಯ ಡ್ರೆಸ್‌ ಜೊತೆಗೆ ಮ್ಯಾಚ್‌ ಆಗುಂತಹ ಪ್ಯಾಂಟಿಗಳನ್ನು ಧರಿಸಬೇಕು. ಬೇರೆ ಬೇರೆ ತೆರನಾದ ಪ್ಯಾಂಟಿಗಳ ಬಗ್ಗೆ ತಿಳಿದುಕೊಳ್ಳಿ.

ಬ್ರೀಫ್‌ ಪ್ಯಾಂಟಿ : ಇದು ಗುಪ್ತಾಂಗದ ಭಾಗಕ್ಕೆ ಪೂರ್ಣ ಕವರೇಜ್‌ ಮಾಡುತ್ತದೆ. ಇದರ ಎಲಾಸ್ಟಿಕ್‌ ಹೊಕ್ಕುಳ ಹಾಗೂ ಸೊಂಟವನ್ನು ಕೂಡ ಕವರ್‌ ಮಾಡುತ್ತದೆ. ಮುಟ್ಟಿನ ದಿನಗಳಲ್ಲಿ ಇದೇ ರೀತಿಯ ಪ್ಯಾಂಟಿ ಧರಿಸಬೇಕು. ಮುಟ್ಟಿನ ದಿನಗಳಲ್ಲಿ ಹೆಚ್ಚು ನಡೆಯಬೇಕಾಗಿದ್ದಲ್ಲಿ ಅಥವಾ ಹೆಚ್ಚು ಸಪೋರ್ಟ್‌ನ ಅಗತ್ಯವಿದ್ದರೆ, ಈ ಪ್ಯಾಂಟಿ ಬೆಸ್ಟ್. ಇದರಲ್ಲಿ ಪ್ಯಾಡ್‌ ಚೆನ್ನಾಗಿ ಸೆಟ್‌ ಆಗುತ್ತದೆ ಮತ್ತು ಬಟ್ಟೆಗಳಿಗೆ ಹಾನಿಯಾಗುವ ಸಾಧ್ಯತೆ ಇರುವುದಿಲ್ಲ. ಈ ಪ್ಯಾಂಟಿಯನ್ನು ಹೈವೇಸ್ಟ್ ಜೀನ್ಸ್ ಜೊತೆಗೂ ಧರಿಸಬಹುದು. ಆದರೆ ಲೋ ವೇಸ್ಟ್ ಜೀನ್ಸ್ ಜೊತೆಗೆ ಧರಿಸಬಾರದು. ಏಕೆಂದರೆ ಹಿಂಭಾಗದಿಂದ ಪ್ಯಾಂಟಿ ಗೋಚರಿಸುವ ಸಾಧ್ಯತೆ ಇರುತ್ತದೆ.

ಹೈಕಟ್‌ ಬ್ರೀಫ್‌ ಪ್ಯಾಂಟಿ : ಇದನ್ನು ಲೋ ಸೈಜ್‌ ಜೀನ್ಸ್ ಜೊತೆಗೆ ಧರಿಸಬಹುದು. ಇದರ ಎಲಾಸ್ಟಿಕ್‌ ಹೊಕ್ಕುಳ ಮತ್ತು ಸೊಂಟದಿಂದ ಒಂದೂವರೆ ಇಂಚು ಕೆಳಗೆ ಇರುತ್ತವೆ. ಇದು ಬ್ರೀಫ್‌ ಪ್ಯಾಂಟಿಯ ಹಾಗೆ ಆರಾಮದಾಯಕವಾಗಿರುತ್ತದೆ. ಆದರೆ ಇದರ ಕವರೇಜ್‌ ಬ್ರೀಫ್‌ ಪ್ಯಾಂಟಿಗಿಂತ ಕಡಿಮೆ ಇರುತ್ತದೆ.

ಬಾಯ್ಸ್ ಶಾರ್ಟ್ಸ್ ಪ್ಯಾಂಟಿ : ಇದು ಹುಡುಗರ ಬಾಕ್ಸರ್‌ ಬ್ರೀಫ್‌ನಂತೆ ಇರುತ್ತದೆ. ಇದರ ಎಲಾಸ್ಟಿಕ್‌ ಸೊಂಟದಿಂದ ಕೆಳಭಾಗ ಹಿಪ್ಸ್ ಲೈನ್‌ನಲ್ಲಿ ಇರುತ್ತದೆ. ಇದರ ಲೆಗ್‌ ಹೋಲ್ಸ್ ತೊಡೆಯತನಕ ಇರುತ್ತದೆ. ನೋಡಲು ಇದು ಬಹಳ ಚಿಕ್ಕದು. ಶಾರ್ಟ್ಸ್ ಹಾಗೆ ಕಂಡುಬರುತ್ತದೆ. ಈ ಪ್ಯಾಂಟಿಯನ್ನು ಬಿಗಿಯಾದ ಡ್ರೆಸ್‌ಗಳ ಜೊತೆ ಧರಿಸಬಹುದಾಗಿದೆ.

ಟಾಂಗಾ ಪ್ಯಾಂಟಿ : ಈ ಪ್ಯಾಂಟಿ ಗುಪ್ತಾಂಗದ ಭಾಗವನ್ನಷ್ಟೇ ಕವರ್‌ ಮಾಡುತ್ತದೆ. ಇದರ ಸೈಡ್‌ ಕಟ್‌ ಬಹಳ ಡೀಪ್‌ ಆಗಿರುತ್ತದೆ. ಅದು ಸೊಂಟದಿಂದ ಹಿಡಿದು ಹಿಪ್‌ ಬೋನ್ಸ್ ತನಕ ಕವರ್‌ ಮಾಡುತ್ತದೆ. ನಿಮಗೆ ಪ್ಯಾಂಟಿಯ ಶೇಪ್‌ ಸರಿ ಆಗದೇ ಹೋದರೆ ನೀವು ಇದನ್ನು ಟೈಟ್‌ ಸ್ಕರ್ಟ್‌, ಪ್ಯಾಂಟ್‌ ಅಥವಾ ಯಾವುದಾದರೂ ಬಿಗಿಯಾದ ಡ್ರೆಸ್‌ನ ಕೆಳಗೆ ಧರಿಸಬಹುದು. ಒಂದು ವೇಳೆ ನಿಮಗೆ ಇನ್‌ಫೆಕ್ಷನ್‌ ಅಥವಾ ರಾಶೆಸ್‌ ಉಂಟಾಗಿದ್ದರೆ, ಈ ಪ್ಯಾಂಟಿಯನ್ನು ಬಳಸಬೇಡಿ.

ಮಹಿಳೆಯರಿಗೆ ಫ್ಯಾಷನೆಬಲ್ ಹಾಗೂ ಸ್ಟೈಲಿಶ್‌ ಬಟ್ಟೆ ಧರಿಸುವುದು ಬಹಳ ಇಷ್ಟ. ಹೀಗಾಗಿ ಅವರು ಸ್ಟೈಲಿಶ್‌ ಬಟ್ಟೆಗಳ ಜೊತೆಗೆ ಸ್ಟೈಲಿಶ್‌ ಆಗಿರುವ ಒಳ ಉಡುಪುಗಳನ್ನು ಧರಿಸಲು ಇಷ್ಟಪಡುತ್ತಾರೆ. ಆದರೆ ಹೆಚ್ಚಿನ ಸ್ಟೈಲಿಶ್‌ ಇನ್ನರ್‌ ವೇರ್‌ಗಳ ಫ್ಯಾಬ್ರಿಕ್‌ ಅಷ್ಟೇನೂ ಉತ್ತಮವಾಗಿರುವುದಿಲ್ಲ. ಈ ಕಾರಣದಿಂದ ಗುಪ್ತಾಂಗದ ಭಾಗದಲ್ಲಿ ಸೋಂಕು ಉಂಟಾಗುವ ಸಾಧ್ಯತೆ ಇರುತ್ತದೆ.

ಬಿಕಿನಿ : ಬಿಕಿನಿ ಪ್ಯಾಂಟಿಯನ್ನು ಬಹಳಷ್ಟು ಹುಡುಗಿಯರು ಪ್ರತಿದಿನ ಧರಿಸುತ್ತಾರೆ. ಈ ಪ್ಯಾಂಟಿ ಬಹಳಷ್ಟು ಕಡಿಮೆ ಕವರೇಜ್‌ ಕೊಡುತ್ತದೆ. ಇದನ್ನು ಮುಟ್ಟಿನ ದಿನಗಳಲ್ಲಾಗಲಿ ಅಥವಾ ಬಿಗಿ ಉಡುಪುಗಳ ಜೊತೆಯಾಗಲಿ ಧರಿಸಲು ಆಗದು. ಮುಟ್ಟಿನ ದಿನಗಳಲ್ಲಿ ಇದನ್ನು ಧರಿಸುವುದರಿಂದ ಸೋಂಕು ಉಂಟಾಗುವ ಅಪಾಯ ಇರುತ್ತದೆ. ನೀವು ಹೆಚ್ಚು ಬಿಗಿಯಾಗಿರುವ ಉಡುಪುಗಳನ್ನು ಧರಿಸುವುದಿದ್ದರೆ ಈ ಪ್ಯಾಂಟಿ ಧರಿಸಬೇಡಿ.

ಮಹಿಳೆಯರು ಸಾಮಾನ್ಯವಾಗಿ ಪ್ಯಾಂಟಿ ಕುರಿತಂತೆ ಮಾಡುವ ತಪ್ಪುಗಳ ಬಗ್ಗೆ ಇಲ್ಲಿದೆ ವಾಸ್ತವ ಸಂಗತಿ.

ಸಿಂಥೆಟಿಕ್‌ ಪ್ಯಾಂಟಿ ಧರಿಸುವುದು: ಡಿಸೈನರ್‌ ಪ್ಯಾಂಟಿ ಧರಿಸುವ ಅಪೇಕ್ಷೆಯಿಂದ ಬಹಳಷ್ಟು ಮಹಿಳೆಯರು ಸಿಂಥೆಟಿಕ್‌ ಬಟ್ಟೆಯಿಂದ ತಯಾರಾದ ಪ್ಯಾಂಟಿ ಧರಿಸುತ್ತಾರೆ. ಅದು ನೋಡಲು ಬಹಳಷ್ಟು ಸ್ಟೈಲಿಶ್‌ ಆಗಿ ಕಂಡುಬಂದರೂ, ಇಡೀ ದಿನ ಧರಿಸುವುದರಿಂದ ನಿಮಗೆ ತೊಂದರೆಯಾಗಬಹುದು. ಅಂದಹಾಗೆ ಸಿಂಥೆಟಿಕ್‌ ಪ್ಯಾಂಟಿ ಬೆವರನ್ನು ಸುಲಭವಾಗಿ ಹೀರಿಕೊಳ್ಳವುದು. ಅದರಿಂದಾಗಿ ತೊಡೆಯ ಸಂದುಗಳಲ್ಲಿ ತುರಿಕೆ, ಕೆರೆತ ಉಂಟಾಗಬಹುದು. ಹೀಗಾಗಿ ಯಾವಾಗಲೂ ಕಾಟನ್‌ ಪ್ಯಾಂಟಿಗಳನ್ನೇ ಧರಿಸಿ. ಕಾಟನ್‌ ಪ್ಯಾಂಟಿಗಳಲ್ಲಿ ಈಗ ಹಲವು ಬಗೆಯ ಡಿಸೈನ್‌ಗಳು ಬರುತ್ತವೆ. ಕಾಟನ್ನಿನ ಪ್ಯಾಂಟಿ ಯುಟಿಐ ಮತ್ತು ಫಂಗಲ್ ಇನ್‌ಫೆಕ್ಷನ್‌ನಿಂದ ರಕ್ಷಿಸಿಕೊಳ್ಳಲು ನೆರವಾಗುತ್ತದೆ.

ಚಿಕ್ಕ ಸೈಜ್‌ ಪ್ಯಾಂಟಿ : ಎಷ್ಟೋ ಮಹಿಳೆಯರು ತಮ್ಮ ಸೈಜ್‌ಗಿಂತ ಚಿಕ್ಕ ಅಳತೆಯ ಪ್ಯಾಂಟಿ ಧರಿಸುತ್ತಾರೆ. ಅದರಿಂದಾಗಿ ತೊಡೆಯ ಆಂತರಿಕ ಭಾಗಗಳಲ್ಲಿ ಗಾಯ ಉಂಟಾಗಬಹುದು. ಅದರಿಂದ ಬಹಳಷ್ಟು ಹಿಂಸೆ ಎನಿಸುತ್ತದೆ. ಚಿಕ್ಕ ಗಾತ್ರದ ಪ್ಯಾಂಟಿಯಿಂದಾಗಿ ಟೈಟ್‌ ಬಟ್ಟೆಗಳನ್ನು ಧರಿಸಿದಾಗ ಪ್ಯಾಂಟಿಯ ಶೇಪ್‌ ಬಹಳ ವಿಚಿತ್ರವಾಗಿ ಕಂಡುಬರುತ್ತದೆ.

ಪ್ಯಾಂಟಿಯನ್ನು ಬದಲಿಸದಿರುವುದು : ಎಷ್ಟೋ ಮಹಿಳೆಯರು ಆಲಸ್ಯತನದಿಂದಲೊ ಕೆಲಸದ ವ್ಯಸ್ತತೆಯಿಂದಲೊ ಅಥವಾ ಅನಾರೋಗ್ಯದ ಕಾರಣದಿಂದಲೋ ಸ್ನಾನ ಮಾಡುವುದಿಲ್ಲ. ಕೈಕಾಲು ಮುಖ ತೊಳೆದುಕೊಂಡು ಮೇಲಿನ ಬಟ್ಟೆಗಳನ್ನು ಬದಲಿಸುತ್ತಾರೆ. ಆದರೆ ಒಳ ಉಡುಪುಗಳನ್ನು ಬದಲಿಸುವುದು ಅತ್ಯವಶ್ಯ ಎಂದು ಭಾವಿಸುವುದಿಲ್ಲ ಅಥವಾ ನಿರ್ಲಕ್ಷ್ಯ ಮಾಡುತ್ತಾರೆ. ಆದರೆ ಬಹಳ ಹೊತ್ತಿನ ತನಕ ಒಂದೇ ಪ್ಯಾಂಟಿಯನ್ನು ಧರಿಸುವುದರಿಂದ ಗುಪ್ತಾಂಗಕ್ಕೆ ತೊಂದರೆ ಉಂಟಾಗಬಹುದು. ಪ್ರತಿದಿನ ಪ್ಯಾಂಟಿ ಬದಲಿಸುವುದು ಅತ್ಯವಶ್ಯ. ಏಕೆಂದರೆ ನೀವು ಬ್ಯಾಕ್ಟೀರಿಯಾ, ಯುಟಿಐ ಮತ್ತು ವೆಜೈನ್‌ ಇನ್‌ಫೆಕ್ಷನ್‌ ನಂತಹ ಅಪಾಯದಿಂದ ದೂರ ಇರಲು ಸಾಧ್ಯವಾಗುತ್ತದೆ.

ದೀರ್ಘಾವಧಿ ತನಕ ಪ್ಯಾಂಟಿಯ ಬಳಕೆ: ಪ್ರತಿಯೊದು ಪ್ಯಾಂಟಿಗೂ ಒಂದು ಲೈಫ್‌ ಇರುತ್ತದೆ. ಆದರೆ ಅದೆಷ್ಟೋ ಮಹಿಳೆಯರು ಅವನ್ನು ಬಹಳ ದಿನಗಳ ಕಾಲ ಹಾಗೆಯೇ ಉಪಯೋಗಿಸುತ್ತಿರುತ್ತಾರೆ. ಯಾವುದೇ ಪ್ಯಾಂಟಿಯಾದರೂ 4-6 ತಿಂಗಳಷ್ಟೇ ಉಪಯೋಗಿಸಬೇಕು. ಅದರ ಸೇಫ್ ಲೈಫ್‌ ದಾಟಿದ ಬಳಿಕ ಅದನ್ನು ಎಸೆದುಬಿಡುವುದೇ ಸೂಕ್ತ.

– ಮಧುರಾ

 

COMMENT