ಹಿಂದೆ ಇದ್ದ ಅಡುಗೆಮನೆ ಕ್ರಮೇಣ ಬದಲಾಗುತ್ತಾ ಈಗ ಅತ್ಯಾಧುನಿಕ ವಿನ್ಯಾಸ ಪಡೆದುಕೊಂಡಿದೆ. ನಿಮ್ಮ ಕೈಗೆಟುಕುವ ಬಜೆಟ್‌ನಲ್ಲಿ, ಕಾಲಕ್ಕೆ ತಕ್ಕಂತೆ ಆಧುನಿಕ ಅಡುಗೆಮನೆಯ ರೂಪುರೇಷೆ ಹೇಗಿರಬೇಕು ಎಂದು ವಿವರವಾಗಿ ತಿಳಿಯೋಣವೇ….?

“ಹೋಗೋ, ಯಾವಾಗ್ಲೂ ಹೆಣ್ಣು ಹುಡುಗಿ ಹಾಗೆ ಅಡುಗೆಮನೇಲೇ ಬಿದ್ದಿರ್ತೀಯಾ, ಹೊರಗೆ ಹೋಗಿ ಏನಾದರೂ ಕೆಲಸ ನೋಡಬಾರದೇ,” ಎಂದು ಈಗ ಅಪ್ಪಿತಪ್ಪಿಯಾದರೂ ಎನ್ನುವಂತಿಲ್ಲ. ಹುಡುಗರಿಗೂ ಸಿಟ್ಟು ಬರುತ್ತೆ. ಒಂದು ರೀತಿಯಲ್ಲಿ ಹುಡುಗಿಯರಿಗೂ ಕೋಪ ಬರುತ್ತೆ. ಅಡುಗೆಮನೆ ಬರಿಯ ಹೆಣ್ಣಿನ ಸೊತ್ತಾಗಿ ಉಳಿದಿಲ್ಲ. ಅಂತೆಯೇ ಹೆಣ್ಣು ಸದಾ ಅಡುಗೆಮನೆಯಲ್ಲೇ ಕೊಳೆಯಬೇಕಾಗಿಲ್ಲ. ಅಂದರೆ ಅಡುಗೆಮನೆಯನ್ನು ಬಳಸಬೇಕಾದವರು ಎಲ್ಲರೂ ಆದ್ದರಿಂದ ಅದನ್ನು ರೂಪಿಸುವಾಗ ಎಲ್ಲರಿಗೂ ಅನುಕೂಲವಾಗುವಂತೆ ಇರಬೇಕು.

ಅಡುಗೆ ಪುರಾಣ

ಪುರಾಣವನ್ನು ಅವಲೋಕಿಸಿದಾಗ ಅಲ್ಲಿ ಬಹಳ ಪ್ರಸಿದ್ಧ ಶೆಫ್‌ಗಳೆಲ್ಲರೂ ಗಂಡಸರೇ. ನಳ, ಭೀಮ ಇತ್ಯಾದಿ….. ಅಂತೆಯೇ ಇಂದಿನ ಪ್ರಸಿದ್ಧ ಶೆಫ್‌ಗಳೂ ಗಂಡಸರೇ. ಅವರ ವಿಡಿಯೋಗಳನ್ನು ನೋಡಲು ಎಲ್ಲರೂ ಮುಗಿಬೀಳುತ್ತಾರೆ. ವಿದೇಶಕ್ಕೆ ಹೋಗುವ ಗಂಡು ಹೈಕಳೆಲ್ಲಾ ಅಡುಗೆ ಮಾಡಲು ಕಲಿಯಲೇ ಬೇಕು. ಪ್ರಸಿದ್ಧ ಬಾಲಿವುಡ್‌ ನಟ ಅಮಿತಾಭ್‌ ಬಚ್ಚನ್‌ ಸ್ವಿಟ್ಜರ್‌ಲ್ಯಾಂಡ್‌ನಲ್ಲಿ ಒಂದು ಅಪಾರ್ಟ್‌ಮೆಂಟ್‌ನಲ್ಲಿ ವಾಸವಾಗಿದ್ದುಕೊಂಡು ಅವರೇ ಅಡುಗೆ ಮಾಡಿಕೊಳ್ಳುತ್ತಿದ್ದರಂತೆ. ಹೀಗಾಗಿ ಅಡುಗೆಮನೆ ಹೆಣ್ಣಿಗಷ್ಟೇ ಸೀಮಿತ ಸ್ಥಳವಲ್ಲ ಎನ್ನುವ ವಾದಗಳು ಎಷ್ಟೇ ಇದ್ದರೂ ಸಹ, ಯಾರು ಏನೇ ಹೇಳಲಿ ಶೇಕಡವಾರು ಲೆಕ್ಕ ಹಾಕಿದಾಗ ಒಟ್ಟಾರೆ ನಮ್ಮ ಭಾರತದಲ್ಲಿ ಅಡುಗೆಮನೆಯ ಪಾರುಪತ್ಯ ಹೆಣ್ಣುಮಕ್ಕಳದೇ. ಅಂತೆಯೇ ಸಮಾಜದಲ್ಲಿ ಹೆಣ್ಣುಮಕ್ಕಳ ಪಾತ್ರ ಬದಲಾದಂತೆ ಅಡುಗೆಮನೆಯ ರೂಪಿಸುವಿಕೆಯೂ ಬದಲಾಗಿದೆ.

ಅಡುಗೆಮನೆಯ ಇತಿಹಾಸ

ಒಮ್ಮೆ ಅಡುಗೆಮನೆಯ ಇತಿಹಾಸವನ್ನು ಅವಲೋಕಿಸಿದಾಗ, ಮೊದಲಿಗೆ ಅಡುಗೆಮನೆ ಎಂದಾಗ ಮಸಿಗಟ್ಟಿದ ಗೋಡೆ, ಅಂತಹ ಗಾಳಿ ಬೆಳಕೂ ಇರುತ್ತಿರಲಿಲ್ಲ. ಆದರೆ ಸ್ವಲ್ಪ ಮುಂದುವರಿದಾಗ ಅಡುಗೆಮನೆ ಸ್ವಲ್ಪ ವಿಶಾಲವಾಯಿತು. ಅಲ್ಲಿಗೆ ಗಾಳಿ ಬೆಳಕು ಬರಲು ಬಿಟ್ಟರು. ಅಡುಗೆಮನೆಯ ಹೊಗೆ ಹೊರಗೆ ಹೋಗಲು ಒಂದು ಎತ್ತರದ ಚಿಮಣಿ ರೂಪಿಸಲಾಗುತ್ತಿತ್ತು.

ಬದಲಾದ ರೂಪುರೇಷೆ

ಅಡುಗೆಮನೆಯ ರೂಪುರೇಷೆ ಬದಲಾಯಿತು. ಸೌದೆಯ ಒಲೆ ಮಾಯವಾಗಿ ಗ್ಯಾಸ್‌, ವಿದ್ಯುತ್‌ ಒಲೆ ಬಂತು. ಅಡುಗೆಮನೆಯ ಹೊಗೆ ಕಡಿಮೆಯಾಯಿತು. ಆದರೂ ಅಡುಗೆ ಮಾಡಲು ಸ್ವಲ್ಪ ಸಮಯ ಹಿಡಿಸುತ್ತಿತ್ತು. ಅಡುಗೆಮನೆಯ ಪಾತ್ರೆ ಪರಟಗಳಲ್ಲೂ ಬದಲಾವಣೆ ಕಂಡುಬಂತು. ಗಂಟೆಗಟ್ಟಲೇ ಮಾಡುತ್ತಿದ್ದ ಅಡುಗೆ, ಪಾತ್ರೆಯಲ್ಲಿ ಬೇಳೆ ಬೇಯಿಸುತ್ತಿದ್ದುದು ಹೋಗಿ ಕುಕ್ಕರ್‌ ಬಂತು. ಅಡುಗೆಮನೆಯಲ್ಲಿ ಕಳೆಯುವ ಸಮಯ ಮತ್ತೂ ಕಡಿಮೆಯಾಯಿತು. ವಿದ್ಯುತ್‌ ಒಲೆ ಮಾಡ್‌ ಆಗಿ ಇಂಡಕ್ಷನ್‌ ಸ್ಟವ್ ಬಂತು. ಮತ್ತೂ ಬೇಗ ಅಡುಗೆ ಮಾಡಬಹುದಾಯಿತು. ಹಿಂದೆ ಹೆಣ್ಣುಮಕ್ಕಳು ಹೊರಗೆ ಹೋಗುತ್ತಿರಲಿಲ್ಲ. ಮನೆಯ ಕೆಲಸವೇ ಅವರ ಪೂರ್ಣ ದಿನದ ಕರ್ತವ್ಯವಾಗಿತ್ತು. ಅದರಲ್ಲೂ ಆಗಿನ ಜೀವನ ಶೈಲಿಗನುಗುಣವಾಗಿ ಮೂರು ಹೊತ್ತೂ ಅಡುಗೆಮನೆಯಲ್ಲೇ ಅವರ ಕೆಲಸ ಹೆಚ್ಚಾಗಿರುತ್ತಿತ್ತು. ಅಲ್ಲದೆ ಹೆಣ್ಣುಮಕ್ಕಳು ಹೊರಗೆ ಹೋಗಿ ಕೆಲಸ ಮಾಡುವುದು ಅಪರೂಪವಾಗಿತ್ತು.

ಆಧುನಿಕ ಜಗತ್ತಿನಲ್ಲಿ……

ಆಧುನಿಕತೆ ಮುಂದುವರಿದಂತೆ ಹೆಣ್ಣುಮಕ್ಕಳ ಸ್ಥಾನ ಬರಿಯ ಅಡುಗೆಮನೆಯಾಗಿ ಉಳಿಯಲಿಲ್ಲ. ಹೆಣ್ಣುಮಕ್ಕಳು ಎಲ್ಲ ಕ್ಷೇತ್ರಗಳಲ್ಲೂ ತಮ್ಮ ಛಾಪನ್ನು ಮೂಡಿಸತೊಡಗಿದರು. ಅಲ್ಲದೆ, ಅಡುಗೆ ಮಾಡುವುದೆಂದರೆ ಯಃಕಶ್ಚಿತ್‌ ಹೆಣ್ಣುಮಕ್ಕಳ ಕಾರ್ಯವೆನಿಸಿಕೊಂಡದ್ದು ಈಗ ಅಡುಗೆ ಎನ್ನುವುದು ಬಹಳ ಗೌರವಪೂರ್ಣ ಕೆಲಸವಾಗಿದೆ. ಅನೇಕ ಸೆಲೆಬ್ರಿಟಿಗಳಿಗೆ ಅಡುಗೆ ಮಾಡುವುದು ಬಹಳ ಪ್ರಿಯವಾದ ಕೆಲಸ. ಅವರ ಅನೇಕ ಶೋಗಳು ಟಿ.ವಿ ಚಾನೆಲ್‌ಗಳಲ್ಲಿ  ಪ್ರಸಾರವಾಗುತ್ತವೆ ಮತ್ತು ಒಳ್ಳೆಯ ಟಿ.ಆರ್‌.ಪಿ ಗಳಿಸುತ್ತದೆ. ಇಡೀ ವಿಶ್ವದಾದ್ಯಂತ ಮಾಸ್ಟರ್‌ ಶೆಫ್‌ ಕಾರ್ಯಕ್ರಮ ಬಹಳ ಜನಪ್ರಿಯ ಹೌದು. ಇದು ಅಡುಗೆಮನೆಯ ಪುರಾಣವಾಯಿತು.

ಅಡುಗೆಮನೆಯ ಅಂದಚೆಂದ

ಅಡುಗೆಮನೆಯ ರೂಪಿಸುವಿಕೆಯ ವಿಷಯಕ್ಕೆ ಬಂದಾಗ ಕಂಬಳಿ ಹುಳು ಆಕರ್ಷಕ ಚಿಟ್ಟೆಯಾಗಿ ಬದಲಾದಂತೆ ಈಗ ಅಡುಗೆಮನೆ ಬಹಳ ಬದಲಾಗಿದೆ. ಮನೆಯ ಅಂದ ಚೆಂದಕ್ಕೆ ಪೂರಕವಾಗುವ ಮನೆಯ ಮುಖ್ಯ ಭಾಗವೆನಿಸಿಕೊಂಡಿದೆ. ಅಡುಗೆಮನೆಯನ್ನು ಪ್ರತ್ಯೇಕವಾಗಿರುವಂತೆ ಮಾಡುವ ಬಾಗಿಲಿರುವುದಿಲ್ಲ. ಹೆಚ್ಚಾದ ಗೋಡೆ ಬಾಗಿಲುಗಳಿರುವುದರಿಂದ ಮನೆ ಪುಟ್ಟದಾಗಿ ಕಾಣುತ್ತದೆ.

ಅಂದು ಅಡುಗೆಮನೆಯ ಒಲೆಯನ್ನು ಗೋಡೆಯ ಪಕ್ಕಕ್ಕೆ ಬರುವಂತೆ ರೂಪಿಸಲಾಗುತ್ತಿತ್ತು. ಆದರೆ ಈಗ ಅಡುಗೆಮನೆ ಎಷ್ಟೇ ಚಿಕ್ಕದಾಗಿದ್ದರೂ ಅದರ ಒಂದು ಪಕ್ಕಕ್ಕೆ ದೊಡ್ಡದಾದ ನಿಚ್‌ನ್ನು ಮೂಡಿಸಿದಾಗ ಅಥವಾ ಕಿಟಕಿ ಎಂದರೂ ಸರಿಯೇ, ಅದರಿಂದ ಅಲ್ಲಿಗೆ ಗಾಳಿ ಬೆಳಕು ಬರಲು ಅನುಕೂಲವಾಗುತ್ತದೆ ಮತ್ತು ಮಾಡಿದ ತಿಂಡಿ ದೋಸೆ, ಚಪಾತಿಯನ್ನು ಬಿಸಿ ಬಿಸಿಯಾಗಿ ಬಡಿಸಲು ಸಹಾಯವಾಗುತ್ತದೆ. ಟಿ.ವಿ ನೋಡುತ್ತಾ ತಿಂಡಿ ತಿನ್ನುವವರಿಗೆ ಎದ್ದು ಬಂದು ತಟ್ಟೆಗೆ ಹಾಕಿಸಿಕೊಳ್ಳಲೂ ಆರಾಮವೆನಿಸುತ್ತದೆ.

ಓಪನ್‌ ಕಿಚನ್‌……

ಇನ್ನೂ ಸ್ವಲ್ಪ ದೊಡ್ಡ ಅಡುಗೆಮನೆಯಾದರೂ ಈಗೆಲ್ಲಾ ತೆರೆದ ಅಡುಗೆಮನೆಯೇ ಹೆಚ್ಚು. ಗೋಡೆಯ ಪಕ್ಕಕ್ಕೆ ಒಲೆ ಬರುವಂತೆ ರೂಪಿಸಿದರೂ, ತರಕಾರಿ ಹೆಚ್ಚುವುದು, ಚಪಾತಿ ಲಟ್ಟಿಸುವುದು ಎಲ್ಲಾ ಅಡುಗೆಮನೆಯ ಮದ್ಯದ ಕೌಂಟರ್‌ನಲ್ಲಿ. ಆ ಕೌಂಟರ್‌ನ ಸುತ್ತ ಓಡಾಡುತ್ತಾ ಕೆಲಸ ಮಾಡಿಕೊಳ್ಳಬಹುದು. ಕೌಂಟರ್‌ನ ಕೆಳಗೆ ಸಾಮಾನುಗಳನ್ನು ಇಡಲು ಅನುಕೂಲವಾಗುತ್ತದೆ.

ಐಲ್ಯಾಂಡ್‌ ಕಿಚನ್‌…..

ಇದೆಲ್ಲಕ್ಕಿಂತ ಮುಂದುವರಿದ ಅಡುಗೆಮನೆಯೆಂದರೆ, ಐಲ್ಯಾಂಡ್‌ ಕಿಚನ್‌. ಇದು ಪೂರ್ಣವಾಗಿ ತೆರೆದ ಅಡುಗೆಮನೆಯಲ್ಲದೆ ಮನೆಯ ಕೇಂದ್ರವಾಗಿಯೇ ರೂಪಿಸಲ್ಪಡುತ್ತದೆ. ಮನೆಯ ಅಂದಕ್ಕೆ ಕಳಸದಂತಿರುತ್ತದೆ. ಜೊತೆಗೆ ಐಲ್ಯಾಂಡ್‌ ಕಿಚನ್‌ನಲ್ಲಿ ಸ್ಟೋರೇಜಿಗೂ ಸಾಕಷ್ಟು ಅವಕಾಶವಿರುತ್ತದೆ. ಐಲ್ಯಾಂಡ್‌ನ ಸುತ್ತಲೂ ಕೆಳಗೆ ಸಾಕಷ್ಟು ಪಾತ್ರೆ, ಸಾಮಾನುಗಳನ್ನು ಜೋಡಿಸಿಕೊಳ್ಳಬಹುದು, ಹೊರಗೆ ಒಂದಿಷ್ಟೂ ಕಾಣುವುದಿಲ್ಲ. ಮೇಲ್ಭಾಗದಲ್ಲಿ ಚಿಮಿಣಿಯ ಕೆಳಗೆ ಹೊಳೆಯುವ ಲೈಟುಗಳನ್ನು ರೂಪಿಸಿದಾಗ ಅಡುಗೆ ಮಾಡುವಾಗ ಬೆಳಕು ಬೇಕಾದಷ್ಟಿರುತ್ತದೆ, ಸ್ಪಷ್ಟವಾಗಿ ಎಲ್ಲ ಕಾಣುತ್ತದೆ. ಉಪಯುಕ್ತತೆ ಮತ್ತು ಕಲಾತ್ಮಕತೆ ಎರಡರ ಮೇಳದಂತೆ ಕಾಣುತ್ತದೆ. ನಿಜಕ್ಕೂ ಮನೆಯ ಅಂದವನ್ನು ಹೆಚ್ಚಿಸುತ್ತದೆ. ಅದನ್ನು ನಿಮ್ಮ ಕುಶಲತೆ ಮತ್ತು ಸುಂದರ ಭಾವಕ್ಕನುಗುಣವಾಗಿ ಮತ್ತಷ್ಟು ಅಲಂಕರಿಸಬಹುದು. ಅಲ್ಲೊಂದು ಪುಟ್ಟ ಹಸಿರು ಗಿಡ, ಪಿಂಗಾಣಿ ಪಾತ್ರೆಗಳು, ಪಿಂಗಾಣಿ ಬಟ್ಟಲುಗಳು ಎಲ್ಲ ನಿಮ್ಮ ಆಯ್ಕೆಗೆ ಬಿಟ್ಟದ್ದು. ಆದರೆ ಮನೆಯ ಕೇಂದ್ರ ಭಾಗದಲ್ಲಿರುವುದರಿಂದ ಅದರ ಅಂದಚಂದದ ಜೊತೆ ಶುಚಿತ್ವಕ್ಕೂ ಗಮನ ಕೊಡಬೇಕಾಗುತ್ತದೆ. ಮನೆ ಎಷ್ಟೇ ಚಿಕ್ಕದಿರಲಿ ಅಥವಾ ದೊಡ್ಡದಿರಲಿ ಅಡುಗೆಮನೆಗೆ ತನ್ನದೇ ಆದ ಪ್ರಾಧಾನ್ಯತೆ ಇದೆ. ಅದು ಮನೆಯೊಡತಿಯ ಮನೋಭಾವವನ್ನು ತಿಳಿಸುತ್ತದೆ.

ಹೀಗೆ ಸಮಾಜದಲ್ಲಿ ಮಹಿಳೆಯ ಸ್ಥಾನ ಬದಲಾದಂತೆ ಮನೆಯಲ್ಲಿ ಅಡುಗೆಮನೆಯ ಪಾತ್ರ ಬದಲಾಗಿದೆ. ಅವರವರ ಭಾವಕ್ಕೆ ತಕ್ಕಂತೆ ಮಾತ್ರವಲ್ಲ, ಮುಖ್ಯವಾಗಿ ಅವರವರ ಅಭಿರುಚಿಯ ಜೊತೆ ಜೇಬಿಗನುಗುಣವಾಗಿಯೂ ರೂಪುಗೊಳ್ಳಬಹುದು. ಆದರೂ ಕಡಿಮೆ ಬಜೆಟ್‌ನಲ್ಲಿಯೂ ಸುಂದರ ಅಡುಗೆಮನೆಯನ್ನು ರೂಪಿಸುವುದು ವಿನ್ಯಾಸಕಾರರ ಜಾಣ್ಮೆಯನ್ನು ಅಲಂಬಿಸಿರುತ್ತದೆ.

ಸುಂದರ ಅಡುಗೆಮನೆ ನಿಮ್ಮದಾಗಬೇಕೇ? ನೀವು ಭೇಟಿ ನೀಡುವ ಮನೆಗಳ ಅಡುಗೆಮನೆಯನ್ನು ಗಮನಿಸಿ. ಅಲ್ಲಿ ನಿಮಗಿಷ್ಟವಾದ ವಿಷಯಗಳನ್ನು ಗುರುತು ಹಾಕಿಕೊಳ್ಳಿ. ಸಾಧ್ಯವಾದುದನ್ನು ಅವಳಡಿಸಿಕೊಳ್ಳಿ. ಎಲ್ಲರೂ ವಾಹ್‌ ಎನ್ನುವ ಚಂದದ ಅಡುಗೆಮನೆ ಖಂಡಿತ ನಿಮ್ಮದಾಗಬಹುದು.

– ಮಂಜುಳಾ ರಾಜ್‌

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ