ಚಿನ್ನ' ಎಂಬ ಈ ಎರಡಕ್ಷರದ ಹೆಸರೇ ಎಷ್ಟೊಂದು ಸುಂದರ. ಚಿನ್ನ ಎಂಬ ಈ ಹೆಸರಿನಲ್ಲಿ ಏನೋ ಒಂದು ಸೆಳೆತವಿದೆ. ಮಧುರ ಬಾಂಧವ್ಯವಿದೆ. ತಾಯಿ ತನ್ನ ಮಗುವಿಗೆ ಪ್ರೀತಿಯಿಂದ ಚಿನ್ನ ಎಂದು ಕರೆದಾಗ, ಆ ಮಗು ಪುಳಕಿತಗೊಂಡು ಮುಖದಲ್ಲಿ ಮಂದಹಾಸ ಬೀರುತ್ತದೆ. ಇನ್ನು ಪ್ರಿಯಕರ ತನ್ನ ಪ್ರೇಯಸಿಗೆ ಚಿನ್ನ ಎಂದು ಕರೆದಾಗ ಆಕೆ ನಸು ನಾಚಿ ಮುಖ ಕೆಂಪಾಗಿ ನಾಚುತ್ತಾಳೆ. ಹಾಗೆ ಗಂಡ ತನ್ನ ಹೆಂಡತಿಗೆ ಚಿನ್ನ ಎಂದು ಪ್ರೀತಿಯಿಂದ ಸಂಬೋಧಿಸಿದಾಗ ಆಕೆಯ ಆಯಾಸವೆಲ್ಲ ಕ್ಷಣ ಮಾತ್ರದಲ್ಲೇ ಕರಗಿ ಹೋಗಿ ಉಲ್ಲಾಸಭರಿತಳಾಗುತ್ತಾಳೆ. ಅಬ್ಬಾ! ಈ ಚಿನ್ನ ಎಂಬ ಹೆಸರಿಗೆ ಅಷ್ಟೊಂದು ಆಕರ್ಷಣೆ ಇದೆಯಾ?
ಭಾರತೀಯರ ಚಿನ್ನದ ನಂಟು ಲೋಹಗಳ ರಾಜ ಪ್ಲಾಟಿನಂ ತರುವಾಯ ಅತಿ ದುಬಾರಿಯಾದ ನಿಸರ್ಗದ ಖನಿಜ ಸಂಪತ್ತು ಎಂದರೆ `ಚಿನ್ನ'. ಲೋಹಗಳಲ್ಲಿ ಚಿನ್ನಕ್ಕೆ ಮಾತ್ರ ಅಗ್ರಸ್ಥಾನ. ಅದರ ಭೌತಿಕ ಗುಣಕ್ಕೆ ಸರಿಸಾಟಿ ಮತ್ತೊಂದಿಲ್ಲ. ಇದೊಂದು ಹಳದಿ ಲೋಹ. ಬಂಗಾರ, ಹೊನ್ನು. ಹೇಮ, ಸುವರ್ಣ, ಕನಕ, ಕಾಂಚನ, ಹಿರಣ್ಯ, ಅರಂ, ಸ್ವರ್ಣ ಹೀಗೆ ಹಲವು ಹೆಸರುಗಳಿಂದ ಕರೆಸಿಕೊಳ್ಳುತ್ತದೆ ಈ ಅಮೂಲ್ಯವಾದ ಧಾತು. ಈ ಹೆಸರಿನಲ್ಲಿ ಏನೋ ಒಂದು ಸೊಗಸು. ಈ ಹಳದಿ ಲೋಹ ಕೇವಲ ಅಂದ ಅಲಂಕಾರದ ವಸ್ತುವಲ್ಲ. ಬದಲಾಗಿ ಸೌಂದರ್ಯ ಹಾಗೂ ಭದ್ರತೆಯ ಸಂಗಮ. ಹಾಗಾಗಿ ಬಂಗಾರದ ಬೆಲೆ ಗಗನಕ್ಕೆ ಏರುತ್ತಿದ್ದರೂ ಚಿನ್ನದೊಡವೆ ಕೊಳ್ಳುವವರಿಗೆ ಕೊರತೆಯೇ ಇಲ್ಲ.
ಶ್ರೇಷ್ಠತೆಯ ಸಂಕೇತ ಚಿನ್ನ
ಶುದ್ಧತೆ, ಸಾಮರ್ಥ್ಯ ಮತ್ತು ಶ್ರೇಷ್ಠತೆಯ ಸಂಕೇತವೂ ಹೌದು. ಅನುಪಮ ಸೌಂದರ್ಯಕ್ಕೂ ಚಿನ್ನವೇ ಆದರ್ಶ. ಕೌಟುಂಬಿಕ ಸಮಾರಂಭಗಳಲ್ಲಿ ಚಿನ್ನ ಧರಿಸಬೇಕೆಂಬ ಅಲಿಖಿತ ನಿಯಮ ಅನಾದಿಕಾಲದಿಂದಲೂ ನಮ್ಮಲ್ಲಿ ಬಳಕೆಯಲ್ಲಿದೆ. ಮಕ್ಕಳಿಂದ ಹಿಡಿದು ವಯಸ್ಸಾದವರಿಗೂ ಚಿನ್ನದ ಮೇಲೆ ವ್ಯಾಮೋಹ ಹೆಚ್ಚು. ಸ್ತ್ರೀಗಂತೂ ಜೀವದಷ್ಟೇ ಪ್ರೀತಿಯ ವಸ್ತು. ಅವಳ ಸೌಂದರ್ಯ ಹಾಗೂ ವ್ಯಕ್ತಿತ್ವಕ್ಕೆ ಕಾಂತಿ ಕೊಡುವ ಸಾಧನ ಕೂಡ. ಈ ಹಳದಿ ಲೋಹದ ಆಕರ್ಷಣೆ ಅಂಥದ್ದು. ಮೈಮೇಲೆ ಧರಿಸಿದರೆ ಸೌಂದರ್ಯದ ಸೊಬಗು ಹೊರಸೂಸುತ್ತದೆ. ಹೆಣ್ಣಿಗೆ ಹಣೆಯ ಮೇಲಿನ ಕುಂಕುಮ ಹೇಗೆ ಸಹಜ ಸೌಂದರ್ಯವನ್ನು ಇಮ್ಮಡಿಗೊಳಿಸುತ್ತದೋ ಹಾಗೆಯೇ ಅವಳ ಮೈಮೇಲೆ ಚಿನ್ನಾಭರಣಗಳು ವಿಶೇಷ ಶೋಭೆ ತರುತ್ತವೆ.
ನವ ಜೋಡಿಗೆ ಆಭರಣ
ಭಾರತೀಯರಿಗೆ ಚಿನ್ನದ ಮೇಲಿನ ಪ್ರೀತಿ ತುಂಬಾ ಹಿಂದಿನದು. ಮದುವೆ, ಹಬ್ಬ ಮುಂತಾದ ಶುಭ ಸಮಾರಂಭಗಳಲ್ಲಿ ಚಿನ್ನದ ಮೆರುಗು ಇಲ್ಲದೆ ಮುಗಿದಂತಾಗುವುದಿಲ್ಲ. ಚಿನ್ನವನ್ನು ಸಾಟಿಯಿಲ್ಲದ ಪ್ರೇಮದ ಕಾಣಿಕೆಯಾಗಿ ಹಿಂದಿನ ಕಾಲದಿಂದಲೂ ಇಂದಿನವರೆಗೂ ಭಾವಿಸುತ್ತಲೇ ಇದ್ದಾರೆ. ವಿವಾಹ ಎನ್ನುವುದು ಇಬ್ಬರ ಬಾಳನ್ನು ಒಂದಾಗಿಸುವ ಮಧುರವಾದ ಘಟ್ಟ. ಅವರ ಬಾಳಿನಲ್ಲಿ ಅತ್ಯಂತ ಪ್ರಾಮುಖ್ಯತೆ ಇರುವ ಸಂಬಂಧವಾಗಿರುತ್ತದೆ. ಈ ಜೀವಗಳನ್ನು ಒಂದಾಗಿಸುವ ಪ್ರೀತಿಗೆ ಚಿನ್ನದ ಉಂಗುರ, ತಾಳಿ, ಬಳೆ...... ತೊಡಿಸುತ್ತಾರೆ.
ವಿವಾಹಿತ ಮಹಿಳೆಯರ ಸಂಕೇತ
ಇಂದು ನಿಶ್ಚಿತಾರ್ಥ (ಎಂಗೇಜ್ ಮೆಂಟ್) ಎಂದ ಕೂಡಲೇ ಉಂಗುರಗಳನ್ನು ಬದಲಿಸಿಕೊಳ್ಳುವ ನಿಶ್ಚಿತಾರ್ಥಕ್ಕೆ ಬಹಳವಾದ ಅರ್ಥವಿದೆ. ಶಾಸ್ತ್ರರೀತ್ಯ ಪ್ರಾಮುಖ್ಯತೆ ಇದೆ. ಭಾವಿ ವಧುವರರು ಉಂಗುರವನ್ನು ಬದಲಾಯಿಸಿಕೊಳ್ಳುವ ಸಮಯ ವಿಶೇಷವಾದದ್ದು. ನಿಶ್ಚಿತಾರ್ಥ ಸಮಯದಲ್ಲಿ ಉಂಗುರಗಳನ್ನು ಬೆರಳಿಗೆ ತೊಡಿಸುವುದರಲ್ಲಿ ಒಂದು ರಹಸ್ಯವಿದೆ. ಈ ಉಂಗುರ ಬೆರಳಿನ ನರಕ್ಕೂ, ಹೃದಯಕ್ಕೂ ಅವಿನಾಭಾವ ಸಂಬಂಧ ಹೊಂದಿದೆ. `ನನ್ನ ಮನಸ್ಸೆಂಬ ಈ ಉಂಗುರನ್ನು ನಿನ್ನ ಬೆರಳಿಗೆ ತೋಡಿಸುತ್ತಿದ್ದೇನೆ. ಉಂಗುರದ ಬೆರಳಿಗೆ ಹಾಕಿದ ಉಂಗುರದ ಮೂಲಕ ನಿನ್ನ ಹೃದಯನ್ನು ಹೊಂದುತ್ತಿದ್ದೇನೆ,' ಎಂದು ಈ ಕ್ರಿಯೆಗೆ ಅರ್ಥ. ನಂತರ ಮದುವೆಯಲ್ಲಿ ಚಿನ್ನದ ತಾಳಿ ಮುಖ್ಯವಾಗಿರುತ್ತದೆ. ತಾಳಿಯೆಂಬುದು ಭಾರತೀಯ ವಿವಾಹಿತ ಮಹಿಳೆಯ ಸಂಕೇತ. ಇದರಿಂದ ದಾಂಪತ್ಯದಲ್ಲಿ ಮಧುರ ಬಾಂಧವ್ಯಗಳು, ಪ್ರೇಮ ರಾಗಗಳನ್ನು ಹೆಚ್ಚಿಸುವುದಕ್ಕೆ ಇದು ಮುಖ್ಯ ಪಾತ್ರ ವಹಿಸುತ್ತದೆ.