ರಂಗೋಲಿ ಶುಭ ಸಂಕೇತದ ಲಕ್ಷಣ. ಭಾರತೀಯ ಪರಂಪರೆಯಲ್ಲಿ ರಂಗೋಲಿಗೆ ವಿಶಿಷ್ಟ ಸ್ಥಾನವಿದೆ. ಭಾರತೀಯ ಮನೆಗಳಲ್ಲಿ ಅದರಲ್ಲೂ ಹಿಂದೂ ಸಂಸ್ಕೃತಿಯಲ್ಲಿ ರಂಗೋಲಿ ಹಾಕುವುದು ಸಂಪ್ರದಾಯಲ್ಲದೆ, ಮನೆಗೆ ಒಂದು ಸೊಗಸು, ಶೋಭೆ ಹೆಚ್ಚುತ್ತದೆ. ಗೃಹಿಣಿಯರಿಗೆ ಪ್ರತಿದಿನ ದೇವರ ಮುಂದೆ, ಹೊರಗಿನ ಅಂಗಳದಲ್ಲಿ ರಂಗೋಲಿ ಪುಡಿಯಿಂದ ರಂಗೋಲಿ ಹಾಕಿ ಮುಂದಿನ ಕೆಲಸದ ಆರಂಭ.

ಇನ್ನು ಹಬ್ಬ ಹರಿದಿನಗಳಲ್ಲಿ ರಂಗೋಲಿಗೆ ಹೆಚ್ಚಿನ ಪ್ರಾಮುಖ್ಯತೆ ಇದೆ. ಆ ದಿನ ಗೃಹಿಣಿಯರಿಗೆ ಕೆಲಸದ ಒತ್ತಡ ಹೆಚ್ಚು. ಹಬ್ಬ ಹರಿದಿನಗಳು ಬಂತೆಂದರೆ ಅಲಂಕಾರಕ್ಕೆ ಪ್ರಾಮುಖ್ಯತೆ ಕೊಡಬೇಕು. ದೇವರ ಮನೆ ಅಲಂಕಾರ, ಬಾಗಿಲುಗಳ ತೋರಣಗಳ ಅಲಂಕಾರ, ನೆಲದ ಮೇಲೆ ರಂಗೋಲಿಯ ಅಲಂಕಾರ ಹೀಗೆ ಬಿಡುವಿಲ್ಲದ ಕೆಲಸ.

ಇಂದಿನ ಕಂಪ್ಯೂಟರ್‌ ಯುಗದಲ್ಲಿ ಸಮಯದ ಅಭಾವವಿರುವುದರಿಂದ ಹಬ್ಬದ ದಿನ ಕೂಡ ರಂಗೋಲಿ ಬಿಡುವುದಕ್ಕೆ ಸಮಯವೇ ಇರುವುದಿಲ್ಲ. ಈಗಿನ ಕಾಲದಲ್ಲಿ ಹೊಸತನ ಬಯಸುವಂತಹ ಸರಳ ಸುಂದರ ಹಾಗೂ ಕೆಲವೇ ನಿಮಿಷದ ಸಮಯದಲ್ಲಿ ಹಾಕುವಂತಹ ವಿಧವಿಧವಾದ ರಂಗೋಲಿಗಳು ಬಂದಿವೆ.

ಅವುಗಳಲ್ಲಿ ಸುಲಭವಾಗಿ ರಚಿಸಲು ಸಾಧ್ಯವಾಗುವಂತಹ ರಂಗೋಲಿ ಎಂದರೆ ಕುಂದನ್‌ ರಂಗೋಲಿ, ಇದು ಪ್ಲಾಸ್ಟಿಕ್‌ ಹಾಳೆಯ ಮೇಲೆ ರಚಿಸುವ ಫ್ಯಾನ್ಸಿ ರಂಗೋಲಿ. ಈ ಕುಂದನ್‌ ನಲ್ಲಿ ರಂಗೋಲಿಗಳು, ಬಾರ್ಡರ್‌ ಗಳು ಮತ್ತು ತೋರಣಗಳನ್ನು ಸಿದ್ಧಪಡಿಸಬಹುದು. ವಿಧವಿಧವಾದ ಹೂ, ತಾವರೆ, ನವಿಲು, ಚಿಟ್ಟೆ, ಎಲೆ, ಆನೆ ಹೀಗೆ ಎಲ್ಲ ತರಹದ ರಂಗೋಲಿ ಹಾಕಿ ಇದರಲ್ಲಿ ಹೊಸ ಹೊಸ ವಿನ್ಯಾಸ ತುಂಬಬಹುದು.

ಇದನ್ನು ಮೊದಲೇ ಬಿಡುವಿನ ವೇಳೆಯಲ್ಲಿ ತಯಾರಿ ಮಾಡಿಕೊಂಡು ಹಬ್ಬ ಹರಿದಿನಗಳಲ್ಲಿ ಅಲಂಕಾರಕ್ಕೆ ದೇವರ ಮನೆ, ಗೋಡೆ ಟೈಲ್ಸ್ ಗೆ ಅಂಟಿಸಬಹುದು. ಹಾಗೆಯೇ ನೆಲದ ಮೇಲೆ ಅಲಂಕಾರವಾಗಿ ಬಾರ್ಡರ್‌ ಮತ್ತು ರಂಗೋಲಿಗಳನ್ನು ಜೋಡಿಸಬಹುದು. ಹಾಗೇ ತೋರಣಗಳನ್ನು ಬಾಗಿಲುಗಳಿಗೆ ಹಾಕಿದರೆ ಅದರ ಅಂದ ಹೆಚ್ಚುತ್ತದೆ. ಪ್ಲೇಟಿಂಗ್‌ (ಮನೆಯಲ್ಲಿ ಗಾಜು ಅಥವಾ ಮಣ್ಣಿನ ಪಾತ್ರೆಯಲ್ಲಿ ನೀರು ತುಂಬಿಟ್ಟು ಅದಕ್ಕೆ ಗುಲಾಬಿ ದಳ ಹಾಕಿಡುವ ವಿಧಾನ)ನಲ್ಲಿ ಇಂತಹ ಪ್ಲಾಸ್ಟಿಕ್‌ ಹಾಳೆಯ ರಂಗೋಲಿ ಮತ್ತು  ದೀಪಗಳನ್ನು ಇಟ್ಟು ಮನೆಯ ಸೌಂದರ್ಯ ಹೆಚ್ಚಿಸಬಹುದು. ಹಬ್ಬಗಳು ಮುಗಿದ ಮೇಲೆ ಇವುಗಳನ್ನು ಪ್ಲಾಸ್ಟಿಕ್‌ ಕವರ್‌ ನಲ್ಲಿ ಎತ್ತಿಟ್ಟು ಮುಂದಿನ ಶುಭ ಸಮಾರಂಭಗಳಿಗೆ ಬಳಸಬಹುದು.

ಹೀಗೆ ಹಬ್ಬ ಹರಿದಿನಗಳಲ್ಲಿ ಅಲಂಕಾರ ಮಾಡಿದಾಗ ನೋಡುಗರ ಕಣ್ಮನ ಸೆಳೆಯುವುದಲ್ಲದೆ, ಮನಸ್ಸಿನ ಭಕ್ತಿಭಾವ ಇನ್ನಷ್ಟು ಹೆಚ್ಚುತ್ತದೆ. ಅಲ್ಲದೆ ನಮ್ಮಲ್ಲಿ ಹುದುಗಿರುವ ಕಲೆ ಜಾಗೃತವಾಗುವುದಲ್ಲದೆ, ಸಾತ್ವಿಕ ಭಾವನೆ ಹೊರಹೊಮ್ಮುತ್ತದೆ.

ಕುಂದನ್ರಂಗೋಲಿ

ಬೇಕಾಗುವ ಸಾಮಗ್ರಿ : ಒ.ಎಚ್‌.ಪಿ (ಓವರ್‌ ಎಚ್‌ ಪ್ರೊಜೆಕ್ಟಿವ್‌) ಹಾಳೆ (ದಪ್ಪನಾದ ಪ್ಲಾಸ್ಟಿಕ್‌ ಹಾಳೆ), ಬಣ್ಣ ಬಣ್ಣದ ಕುಂದನ್‌ ಗಳು (ಹರಳುಗಳು), ನೆಕ್ಕಿಗಳು, ಮುತ್ತುಗಳು, ಮಣಿಗಳು, ಚಿನ್ನದ ಹಾರ, ಸರಗಳು, ಕನ್ನಡಿ ಹಾಗೂ ಫ್ಯಾಬ್ರಿಕ್ಸ್ ಗ್ಲೂ ಅಲ್ಲದೆ, ಚಿತ್ರದ ಡಿಸೈನ್‌.

ವಿಧಾನ : ಒಎಚ್‌ಪಿ ಹಾಳೆಯ ಜೊತೆಗಿರುವ ಬಿಳಿಯ ತೆಳು ಪೇಪರ್‌ ಮೇಲೆ ಸುಂದರವಾದ ಚಿತ್ರವನ್ನು ಬಿಡಿಸಿ. ಅದರ ಮೇಲೆ ಒಎಚ್‌ಪಿ ಹಾಳೆ ಇಡಿ. ಈಗ ಸುಂದರವಾದ ಚಿತ್ರ ಕಾಣುತ್ತದೆ. ಗೆರೆಗಳಿಗೆ ಫ್ಯಾಬ್ರಿಕ್ಸ್ ಗ್ಲೂ ಹಾಕಿ ಬಣ್ಣದ ಸರಗಳನ್ನು ಒಂದು ಅಥವಾ ಎರಡು ಎಳೆ ಅಂಟಿಸಿ. ಅದು ಒಣಗಿದ ನಂತರ ನಿಮ್ಮ ಕಲಾತ್ಮಕತೆಗೆ ತಕ್ಕಂತೆ ಕುಂದನ್‌, ಕನ್ನಡಿ ಮತ್ತು ದಾರ ಅಂಟಿಸಿ ಸಿಂಗರಿಸಿ. ಚೆನ್ನಾಗಿ ಒಣಗಿದ ನಂತರ ಚಿತ್ರದ ಸುತ್ತಾ ಅರ್ಧ ಇಂಚು ಒಎಚ್‌ಪಿ ಹಾಳೆಗಳನ್ನು ಬಿಟ್ಟು ಕತ್ತರಿಸಿಕೊಳ್ಳಿ. ಹಿಂಭಾಗದಲ್ಲಿ ಡಬಲ್ ಗಮ್ ಟೇಪ್‌ ಅಂಟಿಸಿ. ಇದರಲ್ಲಿ ಚಿಕ್ಕ ಚಿಕ್ಕ ಚಿತ್ರಗಳನ್ನು ಮಾಡಿದರೆ ಅಂಚುಗಳಿಗೆ ಜೋಡಿಸಬಹುದು.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ