ಕನ್ನಡಿಗರ ವಿವಿಧ ಜನಾಂಗದ ಮದುವೆಗಳಲ್ಲಿ ಕೊಡವರ ಮದುವೆ ಸಂಪ್ರದಾಯ, ಉಡುಗೆ ತೊಡುಗೆ ಮತ್ತು ಒಡವೆಗಳು ತಮ್ಮದೇ ಆದ ವಿಶೇಷ ಪ್ರತ್ಯೇಕತೆಯನ್ನು ಹೊಂದಿವೆ. ಕೊಡವರ ವಧುವಿನ ಒಡವೆಗಳ ವಿನ್ಯಾಸ, ವೈವಿಧ್ಯತೆ ಮತ್ತು ಆ ಕುರಿತು ಹೆಚ್ಚಿನ ವಿವರಗಳನ್ನು ಸಂಪೂರ್ಣವಾಗಿ ತಿಳಿಯೋಣವೇ........?
ಆಭರಣ ಜನಾಂಗವೊಂದರ ಪ್ರತಿನಿಧಿ ಎಂದರೆ ಅತಿಶಯೋಕ್ತಿಯಲ್ಲ. ಉಡುಗೆ ತೊಡುಗೆ ಎನ್ನುವ ಪದವೇ ವಸ್ತ್ರಕ್ಕೆ ಪೂರಕವಾದ ಆಭರಣಗಳು ಎನ್ನುವುದನ್ನು ಸಂಕೇತಿಸುತ್ತದೆ. ಈ ಆಭರಣಗಳಿಗೆ ಮನಸೋಲದ ನೀರೆಯರೆ ಇಲ್ಲ. ಪ್ರಾಚೀನ ನಾಗರಿಕತೆಯಿಂದ ಮೊದಲುಗೊಂಡು ಇಲ್ಲಿಯವರೆಗೆ ಚಿನ್ನಬೆಳ್ಳಿ, ಪ್ಲಾಟಿನಂ ಇನ್ನಿತರ ಲೋಹಗಳು, ಮಣ್ಣು, ಕಪ್ಪೆ ಚಿಪ್ಪು ಮುಂತಾದವನ್ನು ಉಪಯೋಗಿಸಿಕೊಂಡು ಆಭರಣಗಳನ್ನು ಧರಿಸುವುದಿದೆ.
ಹೆಣ್ಣಿನ ಅಲಂಕಾರಕ್ಕೆ ಶೋಭೆಯನ್ನು ತರುವುದು ಆಭರಣಗಳು. ಪೌರಾಣಿಕ ಚಿತ್ರಪಟಗಳಲ್ಲಿ ರಾಜ, ಮಹಾರಾಜರ ಕಾಲದಿಂದ ಇಲ್ಲಿಯವರೆಗೂ ಆಭರಣಗಳದ್ದೇ ಕಾರುಬಾರು. ಅದರಲ್ಲಿಯೂ ಮುದ್ದು ಮಕ್ಕಳ ಆಭರಣಗಳೆಂದರೆ ಕೇಳಬೇಕೇ? ಮದ್ರಾಸಿ, ಬೆಂಗಾಲಿ, ಕೇರಳಿ, ಕೊಡವ ಆಭರಣಗಳ ವಿಶಿಷ್ಟ ವಿನ್ಯಾಸ ಮದುವೆಯ ಸಂಭ್ರಮಕ್ಕೊಂದು ಕಳೆ ತಂದುಕೊಡುತ್ತದೆ.
ದಕ್ಷಿಣ ಕಾಶ್ಮೀರವೆಂದು ಕರೆಸಿಕೊಂಡಿರುವ ಕೊಡಗು ಪ್ರಕೃತಿ ಸೊಬಗಿನ ಇನ್ನೊಂದು ಹೆಸರು. ಪ್ರಕೃತಿ, ಸೌಂದರ್ಯ, ಶೌರ್ಯವನ್ನು ಸಂಕೇತಿಸುವ ಅಷ್ಟೇ ಮನೋಲ್ಲಾಸವನ್ನು ನೀಡುವ ಕೊಡವರ ಆಭರಣಗಳ ವಿನ್ಯಾಸ ಅನನ್ಯವಾಗಿರುತ್ತದೆ. ಕೊಡವರು ವಿಶೇಷವಾಗಿ ಗುರುತಿಸಿಕೊಂಡಿರುವುದು ವಿಶೇಷ ವಿನ್ಯಾಸದ ಸೀರೆ, ಉಡುಗೆ ಮತ್ತು ಅನುರೂಪದ ಆಭರಣಗಳ ತೊಡುಗೆಯಿಂದ. ಇವರ ಪತ್ತಾಕ್, ಜೋಮಾಲೆ, ಕೊಕ್ಕೆತಾತಿ, ಹವಳದ ಸರ, ಕೈಪಡಚ, ಕಾಲ್ಪಿಲ್ಲಿ, ಜೋಡಿ ಕಡಗ, ಒಂಟಿ ಕಡಗ, ಪೀಚೆಕತ್ತಿ ಇವುಗಳು ಪ್ರಕೃತಿಯಿಂದ ಸ್ಛೂರ್ತಿ ಪಡೆದವು ಆಗಿವೆ.
ಪತ್ತಾಕ್
ಕೊಡವರು ದೇವಕನ್ಯೆಯರೆನ್ನು ಪ್ರತೀತಿ ಇರುವ ಕಾರಣ ಅವರು ಮನುಷ್ಯರನ್ನು ಮದುವೆ ಆಗುವಂತಿಲ್ಲ ಎನ್ನುವಾಗ ನಾಗದೇವ ಪ್ರತ್ಯಕ್ಷನಾಗಿ ನನ್ನ ಆಶೀರ್ವಾದವಿದೆ ಎಂದು ಮದುವೆಯಾಗಲು ಬೆಂಬಲ ಕೊಟ್ಟ ಅನ್ನುವ ಪ್ರತೀತಿ ಇದೆ. ಇವರು ದೇವಕನ್ಯೆಯರೆನ್ನುವ ಕಾರಣಕ್ಕೆ ಗಂಡನಾಗುವವನು ಮಾಂಗಲ್ಯ ಕಟ್ಟುವ ಪದ್ಧತಿ ಇಲ್ಲ ಎಂದು ಐತಿಹ್ಯ ಹೇಳುತ್ತದೆ. ಆದರೆ ಆ ಕಾರಣಕ್ಕೆ ಮದುವೆಯ ಹಿಂದಿನ ದಿನ ಮದುಮಗಳ ತಾಯಿ `ಪತ್ತಾಕ್' ಎನ್ನುವ ಆಭರಣವನ್ನು ಮಗಳ ಕೊರಳಿಗೆ ಧಾರಣೆ ಮಾಡುತ್ತಾರೆ. ಪತ್ತಾಕ್ ಅಂದರೆ ತಾಯಿಯ ಹತ್ತು ಸೌಶೀಲ್ಯ ಗುಣಗಳು ಮಗಳಿಗೂ ಬರಲಿ ಎನ್ನುವ ಆಶಯ ಇದರ ಹಿಂದಿದೆ.
ಪತ್ತಾಕ್ ಮಂಗಳಸೂತ್ರಕ್ಕೆ ಸಮಾನವಾಗಿರುತ್ತದೆ. ಸುಮಂಗಲಿಯ ಸಂಕೇತವಾಗಿರುವ ಪತ್ತಾಕ್ ನ್ನು ಸರಿ ಸುಮಾರು ಅರ್ಧ ಸವರನ್ ಇಲ್ಲವೇ ಅದಕ್ಕೂ ಹೆಚ್ಚಿನ ತೂಕದ ಲಕ್ಷ್ಮಿಕಾಸಿನ ಸುತ್ತ ಮಾಣಿಕ್ಯದ ಹರಳುಗಳನ್ನು ಜೋಡಿಸಿ, ಅದರ ಮೇಲೆ ನಾಗರ ಹೆಡೆ, ಅದರ ಬಾಯಲ್ಲಿ ಮುತ್ತು ಜೋತಾಡುವಂತೆ ಕಲಾತ್ಮಕವಾಗಿ ಮಾಡಿರುತ್ತಾರೆ. ಈ ಪದಕವನ್ನು ಹವಳ ಮತ್ತು ಚಿನ್ನದ ಕಲಾತ್ಮಕ ಗುಂಡುಗಳೊಂದಿಗೆ ಬರೀ ಕರಿಮಣಿ ಸರಕ್ಕೆ ಅಳವಡಿಸುತ್ತಾರೆ. ಕಪ್ಪು ಮಣಿ ಋಣಾತ್ಮಕತೆಯನ್ನು ಹೊಡೆದೋಡಿಸುತ್ತದೆ ಎಂಬ ವಿಚಾರ ಇಲ್ಲಿದೆ.
ಪವಳ ಸರ/ಮಾಲೆ
ಹವಳ ಮತ್ತು ಚಿನ್ನದ ಸಾದಾ ಗುಂಡುಗಳಿಂದ ಮಾಡಿರುವ ಆಭರಣವಿದು. ಇದು ಕೊಡವರ ವಿಶೇಷ ಆಭರಣ. ಪದ್ಧತಿಯಂತೆ ಗಂಡು ಹೆಣ್ಣು ಎನ್ನುವ ಭೇದವಿಲ್ಲದೆ ಇಬ್ಬರೂ ಧರಿಸುತ್ತಾರೆ. ಮದುವೆ ಕಾರ್ಯಗಳೆಲ್ಲ ಸಂಪನ್ನವಾದ ನಂತರ ತಲಕಾವೇರಿ ಭೇಟಿ. ಆಮೇಲೆ ಮದುಮಕ್ಕಳು ಈ ಆಭರಣ ತೆಗೆಯಬಹುದು. ಅಲ್ಲಿಯವರೆಗೂ ಇದನ್ನು ಧರಿಸುವುದು ಕಡ್ಡಾಯವಾಗಿರುತ್ತದೆ. ಹವಳ ಸಂತೋಷ ಫಲವತ್ತತೆಯ ಸಂಕೇತ ಎಂಬಂತೆ ಸಮರ್ಥ ಸಂತಾನಪ್ರಾಪ್ತಿಯ ಆಶಯ ಇದರ ಹಿಂದಿದೆ. ಕಂಕಣ ಧಾರಣೆಯ ಸಂಕೇತವಾಗಿರುವ ಹವಳದ ಸರವನ್ನು ಮದುವೆಯ ಹಿಂದಿನ ದಿನ ಮದುಮಕ್ಕಳ ತಾಯಂದಿರು ಮದುಮಕ್ಕಳಿಗೆ ಧಾರಣೆ ಮಾಡುತ್ತಾರೆ.