ಮನೆ ಕುಟುಂಬದ ಎಲ್ಲರಿಗೆ ಸೇರಿದ ತಾಣ. ಮನೆಯ ಎಲ್ಲ ಸದಸ್ಯರಿಗೂ ಆಶ್ರಯ ನೀಡುವಂತಹ, ಅವರು ಹೆಮ್ಮೆ ಪಡುವಂತಹ ಸ್ಥಳ. ಅಂತೆಯೇ ಮನೆಯ ಜೀವಂತಿಕೆಯನ್ನು ಸಾರುವ ಲಿವಿಂಗ್‌ ರೂಮ್ ಸಹ ಮನೆ ಮಂದಿಯವರೆಲ್ಲರಿಗೂ ಪ್ರಿಯವಾದ ಸ್ಥಳ. ಅಂತೆಯೇ ಎಲ್ಲರ ಬೇಕು ಬೇಡಗಳನ್ನು ಗಮನಿಸಿ ಲಿವಿಂಗ್‌ ರೂಮನ್ನು ರೂಪಿಸಬೇಕಾಗುತ್ತದೆ. ಜೊತೆಗೆ ಮನೆಗೆ ಪ್ರವೇಶ ಮಾಡಿದೊಡನೆಯೇ ಎಲ್ಲರ ಕಣ್ಣಿಗೆ ಬೀಳುವಂತಹುದಾದುದರಿಂದ ಅಗತ್ಯಗಳೊಡನೆ ಆಕರ್ಷಕವಾಗಿರುವುದೂ ಅಷ್ಟೇ ಮುಖ್ಯವೆನಿಸುತ್ತದೆ. ಆಕರ್ಷಕವಾಗಿರಬೇಕು, ಆದರೆ ಹೆಚ್ಚು ಖರ್ಚೂ ಆಗಬಾರದು. ಮನೆಯ ಒಡೆಯನ ಜೇಬಿಗೂ ಹೊರೆಯಾಗಬಾರದು. ಅಂದಮೇಲೆ ಇದರ ರೂಪಿಸುವಿಕೆಯಲ್ಲಿ ಬಹಳ ಎಚ್ಚರ ವಹಿಸಬೇಕಾಗುತ್ತದೆ.

ಸೂರಿನ ಅಲಂಕಾರ

ಲಿವಿಂಗ್‌ ರೂಮಿನ ಅಂದ ಹೆಚ್ಚಬೇಕಾದರೆ ಸೂರಿನಲ್ಲಿ ಸ್ವಲ್ಪವಾದರೂ ಮರದ ಅಲಂಕಾರವಿರಬೇಕು. ಫ್ಯಾನ್‌ ಬರುವ ಕಡೆ, ಇಳಿಬಿಡುವ ದೀಪಗಳ ಅಂದ ಹೆಚ್ಚಿಸಬೇಕಾದರೆ ಅಲ್ಲಿ ಮರದ ಅಗತ್ಯವಿದೆ. ಈ ತುಟ್ಟಿಯ ಯುಗದಲ್ಲಿ ತೇಗದ ಮರವನ್ನು ಬಳಸಬೇಕಾಗಿಲ್ಲ. ಅದೇ ಫಿನಿಶ್‌ ಕೊಡುವ ಪ್ಲೈವುಡ್ಡನ್ನು ಬಳಸಬಹುದು. ಇನ್ನೂ ಬೇಕೆಂದರೆ ಸರಳವಾದ ಫಾಲ್ಸ್ ಸೀಲಿಂಗ್‌ ಮತ್ತಷ್ಟು ಅಂದಕ್ಕೆ ಪೂರಕವಾಗುತ್ತದೆ. ಮೇಲಿನ ಕೆಲಸವಾಯಿತು. ಸೂರಿಗೆ ಬೇಕಾದಷ್ಟು ಮರವನ್ನು ಬಳಸಿ ಮನೆಯ ಶ್ರೀಮಂತಿಕೆಯನ್ನು ಹೆಚ್ಚಿಸಬಹುದು.

ಕಿಟಕಿಗಳು

ಇನ್ನು ಕಿಟಕಿಗಳ ವಿಷಯಕ್ಕೆ ಬಂದಾಗ ಉದ್ದವಾದ ಏಕ ಕಿಟಕಿಗಳನ್ನು ಸಾಲಾಗಿ ರೂಪಿಸಬಹುದು. ಇಲ್ಲವಾದಲ್ಲಿ ಕೆಳಗಿನಿಂದ ಮೇಲಿನ ತನಕ ಆವರಿಸುವ ಬೇ ವಿಂಡೋಸ್‌ನ ಮೊರೆ ಹೋಗಬಹುದು. ಬರಿಯ ಕಿಟಕಿ ಇದ್ದರೆ ಆಯಿತೆ, ಅದಕ್ಕನುಗುಣವಾದ ಬ್ಲೈಂಡ್ಸ್ ಅಥವಾ ಖರ್ಚು ಕಡಿಮೆಯಾಗಬೇಕೆಂದರೆ ಚಂದದ ಕರ್ಟನ್‌ ಸಹ ಚೆನ್ನಾಗಿಯೇ ಇರುತ್ತದೆ, ಅದರಲ್ಲೂ ವಿಧವಿಧಗಳು. ಸೂರ್ಯನ ಬೆಳಕಿರುವಾಗ ಒಂದು ರೀತಿಯ ಕಿಟಕಿಯ ಪರದೆಯಾದರೆ ಸಂಜೆಗತ್ತಲಿಗೆ ಮತ್ತೊಂದು ರೀತಿಯದು. ಹಳೆಯ ರೇಶ್ಮೆ ಸೀರೆಗಳನ್ನು ಬ್ಲೈಂಡ್ಸ್ ನಂತೆ ಬಳಸಬಹುದು. ಆಧುನಿಕ ಜಗತ್ತಿನಲ್ಲಿ ಪುರಾತನ ವಸ್ತುಗಳ ಬಳಕೆಯೂ ವಿಭಿನ್ನವೆನಿಸಿಕೊಳ್ಳುತ್ತದೆ. ಸೂರಿಗೆ ಸಣ್ಣ ಸಣ್ಣ ಪಟ್ಟಿಗಳ ಜೋಡಿಸುವಿಕೆ, ಸೂರಿಗೆ ಒಂದು ವಿಭಿನ್ನ ರೂಪವನ್ನು ನೀಡುತ್ತದೆ.

ಲಿವಿಂಗ್‌ ರೂಮಿಗೆ ಸ್ಪೆಷಲ್ ಎಫೆಕ್ಟ್

ಈಗೀಗ ನಗರದಲ್ಲಿ ನಿವೇಶನಗಳು ಬಹಳ ತುಟ್ಟಿಯಾದ್ದರಿಂದ ವಿಭಾಗಗಳನ್ನು, ಗೋಡೆಗಳನ್ನು ಕಡಿಮೆ ಮಾಡಿದಾಗ ಸ್ಥಳ ವಿಶಾಲವಾಗಿಯೇ ಕಾಣುತ್ತದೆ. ಅಂತಹ ಸಂದರ್ಭಗಳಲ್ಲಿ ಲಿವಿಂಗ್‌ ಮತ್ತು ಡೈನಿಂಗ್‌ ಎರಡನ್ನೂ ಒಂದೆಡೆಯೇ ರೂಪಿಸಬಹುದು. ಆದರೂ ಲಿವಿಂಗ್‌ ರೂಮನ್ನು ಅಲಂಕರಿಸಲು ಮತ್ತು ನಾವು ಆರಾಮವಾಗಿ ಕುಳಿತು ಕೊಳ್ಳಲು ಒಂದು ಸೋಫಾ ಬೇಕೇಬೇಕು. ಅದರಲ್ಲೂ ಬಹಳಷ್ಟು ವಿಧಗಳು, ಮನೆಯಲ್ಲಿರುವ ಸೀನಿಯರ್‌ ಸಿಟಿಝನ್ಸ್ಗೆ ರಿಕ್ಲೈನರ್‌ ಇದ್ದರೆ ಒಳಿತು. ಕಾಲನ್ನು ನೀಟಿಕೊಂಡು ಕೂರಬಹುದು. ಸೋಫಾಗಳಲ್ಲೂ ಬಹು ವಿಧಗಳು, ಬಣ್ಣದಲ್ಲೂ ವಿವಿಧತೆ. ಆದರೂ ತಿಳಿ ಬಣ್ಣದ ಸೋಫಾದ ಚಂದವೇ ಚಂದ. ಕೆನೆ ಬಣ್ಣದ ಸೋಫಾದ ಮೇಲೆ ಗಾಢವಾದ ಬಣ್ಣದ ದಿಂಬುಗಳನ್ನು ಜೋಡಿಸಿದಾಗ ಅದರ ನೋಟ ಮನಮೋಹಕ. ನೋಡಲು ಬಲು ಚೆನ್ನ. ಆದರೆ ನಿರ್ವಹಣೆ ಬಲು ಕಷ್ಟ. ತಿಳಿ ಬಣ್ಣದ ಸೋಫಾಗಳನ್ನು ಶುದ್ಧ ಮಾಡಲು ಮಾರುಕಟ್ಟೆಯಲ್ಲಿ ಅನೇಕ ಶ್ಯಾಂಪೂಗಳು ಲಭ್ಯ. ಅಲ್ಲದೆ, ನಿಮ್ಮ ಸೋಫಾಗಳನ್ನು ಶುದ್ಧ ಮಾಡಲು ವರ್ಷದ ಕಾಂಟ್ರಾಕ್ಟ್ ಸಹ ತೆಗೆದುಕೊಳ್ಳಬಹುದು. ಈಗ ಹಣವಿದ್ದರಾಯಿತು, ಎಲ್ಲ ಸಾಧ್ಯ, ಎಲ್ಲರಿಗೂ ಎಲ್ಲ ಬೇಕು. ಆದರೆ ಬಜೆಟ್‌ ಪರ್ಮಿಟ್‌ ಮಾಡಬೇಕು ಅಷ್ಟೇ. ಸೋಫಾದ ಮುಂದೆ ಒಂದು ಆಕರ್ಷಕ ರತ್ನಗಂಬಳಿ ಹಾಸಿದಾಗ ಸ್ವಲ್ಪ ಮಟ್ಟಿಗೆ ಪಡಸಾಲೆಯ ಅಲಂಕಾರ ಒಂದು ಹದಕ್ಕೆ ಬಂದ ಹಾಗೆಯೇ.

ಆರೋಗ್ಯಕ್ಕೆ ಗದ್ದಾಗದ್ದುಗೆ

ನಿಮಗೆ ಚೆನ್ನಾಗಿ ವ್ಯಾಯಾಮವಾಗ ಬೇಕೆಂದರೆ ನೆಲದ ಮೇಲೆ ದಪ್ಪನಾದ ಗದ್ದಾ (ಲೋ ಲೆವೆಲ್‌ ಸಿಟಿಂಗ್‌)ನ್ನು ಹಾಕಬಹುದು. ಸುತ್ತಲೂ ಮೆತ್ತನೆಯ ಆಕರ್ಷಕ ಬಣ್ಣ ಬಣ್ಣದ ದಿಂಬುಗಳನ್ನು ಜೋಡಿಸಿದಾಗ  ಒಂದು ಒಳ್ಳೆ ನೋಟವನ್ನೇ ಕೊಡುತ್ತದೆ.

ವಿಭಿನ್ನತೆಗೆ ಬೆತ್ತ

ವಿಭಿನ್ನ ನೋಟವನ್ನು ಕೊಡಲು ಬೆತ್ತದ ಆಸನಗಳನ್ನು ಮಾಡಿಸಬಹುದು. ಅದೊಂದು ರೀತಿಯ ಪುರಾತನ ಲುಕ್‌ ಕೊಡುತ್ತದೆ.

ನೋಡುಗರ ಮನಸೆಳೆಯಲು

ಸೋಫಾದ ಮುಂದಿನ ದುಂಡನೆಯ ಅಥವಾ ಚೌಕಾಕಾರದ ಟೀಪಾಯಿಯ ಮೇಲೆ ಒಂದು ಚೆಸ್‌ ಆಟದ ಜೋಡಣೆ. ಪಕ್ಕದಲ್ಲಿ ಒಂದು  ಕ್ಯಾಸಿಯೋ, ಮನೆಯಲ್ಲಿರುವ ಮಕ್ಕಳ ಅಥವಾ ಮಕ್ಕಳ ಮನಸ್ಸಿನ ಜನರ ನೆನಪನ್ನು ತರಿಸಿಕೊಡುತ್ತದೆ. ನಾವು ನೋಡಿದ ಒಂದು ಮನೆಯಲ್ಲಿ ಅಪರೂಪದ ಅಂದರೆ ಮ್ಯೂಸಿಯಂನಲ್ಲಿ ಇಡುವಂತಹ ಚಿತ್ರಗಳನ್ನು ಗೋಡೆಯ ಮೇಲೆ ಹಾಕಲಾಗಿತ್ತು. ಇತಿಹಾಸವನ್ನು ಕೆದಕಿ, ನೆನಪಿಸುವ ಬಹಳ ಪುರಾತನ ಚಿತ್ರಗಳು. ಹೀಗೆ ಲಿವಿಂಗ್‌ ರೂಮನ್ನು ಅಲಂಕರಿಸುವ ವಿಧಾನಗಳು ಅನೇಕ. ಆದರೆ ಎಲ್ಲರ ಉದ್ದೇಶ, ನೋಡುಗರ ಗಮನಸೆಳೆಯಬೇಕು, ಅವರಲ್ಲಿ ಮೆಚ್ಚುಗೆ ಮೂಡಬೇಕು ಎನ್ನುವುದೇ! ಅವರಿಗರಿವಿಲ್ಲದಂತೆ ವಾಹ್‌ ಎನ್ನುವ ಉದ್ಗಾರ ಮೂಡಬೇಕು. ಅವರ ಮೆಚ್ಚುಗೆಯ ಮಾತು ಮನೆಯೊಡೆಯರ ಮನಸ್ಸಿಗೆ ತಂಪನ್ನೆರೆಯುತ್ತದೆ.

ಫ್ಲೋರಿಂಗ್

ಲಿವಿಂಗ್‌ ರೂಮಿನ ನೆಲದ ವಿಷಯ ಬಂದಾಗ ಆಯ್ಕೆಗಳು ಅನೇಕ. ಮರದ ನೆಲ ಅರ್ಥಾತ್‌ ವುಡನ್‌ ಫ್ಲೋರಿಂಗ್‌ ನಿಜಕ್ಕೂ ಸುಂದರ ನೋಟವನ್ನು ಕೊಡುತ್ತದೆ. ಅದರಲ್ಲೂ ಬಣ್ಣದ ಆಯ್ಕೆಗಳಿರುತ್ತವೆ. ರೋಸ್‌ ವುಡ್‌ನ್ನು ನೆನಪಿಸುವ ಗಾಢವಾದ ಕಂದುಬಣ್ಣ ಅಥವಾ ಟೀಕ್‌ ವುಡ್‌ನಂತೆ ಕಾಣುವ ಸ್ವಲ್ಪ ತಿಳಿ ಕಂದುಬಣ್ಣ. ವುಡನ್‌ ಫ್ಲೋರಿಂಗ್‌ ನೋಡಲು ಚಂದ ಮತ್ತು ಚಳಿಗಾಲದಲ್ಲಿ ಬೆಚ್ಚಗಿರುತ್ತದೆ. ಮಕ್ಕಳಿಗೆ ಮತ್ತು ಹಿರಿಯ ನಾಗರಿಕರಿಗೆ ಸೂಕ್ತವಾದುದು. ಅವರಿಗೆ ಥಂಡಿಯಾಗುವುದಿಲ್ಲ. ಈ ರೀತಿ ಅಲಂಕಾರದ ಜೊತೆ ಉಪಯುಕ್ತತೆಯ ಕಡೆಯೂ ಗಮನವೀಯುವುದು ಅಗತ್ಯ. ಪೂರ್ಣವಾಗಿ ಎಲ್ಲೆಡೆ ಮರದ ನೆಲದ ಅಗತ್ಯವಿಲ್ಲ. ಇದರ ಜೊತೆ ವಿಟ್ರಿಫೈಡ್‌ ಟೈಲ್ಸ್, ಮಾರ್ಬಲ್, ಇಟಾಲಿಯನ್‌ ಮಾರ್ಬಲ್, ಗ್ರಾನೈಟ್‌ ಹೀಗೆ ಅನೇಕ ಆಯ್ಕೆಗಳು ಲಭ್ಯ.

ಸೌಂದರ್ಯದ ಭಾಷ್ಯ

ಲಿವಿಂಗ್‌ ರೂಮಿನ ಒಂದು ಮೂಲೆಯಲ್ಲಿ ಮನೆಯೊಡೆಯನ ಜೊತೆ ಮನೆಯೊಡತಿಯ ಒಂದು ಸುಂದರ ಚಿತ್ರ, ಅವರ ಇರುವಿಗೆ ನಾಂದಿ ಕೊಡುತ್ತದೆ. ಲಿವಿಂಗ್‌ ರೂಮಿನ ಅರ್ಥಾತ್‌ ಪಡಸಾಲೆಯ ಒಂದೊಂದು ಅಲಂಕಾರ ಮನೆಯ ಸುಂದರತೆಯ ಭಾಷ್ಯವನ್ನು ಬರೆಯುತ್ತದೆ. ದಿನವಿಡೀ ದುಡಿದು, ದಣಿದು ಮನೆಗೆ ಬಂದಾಗ ತಾನು ಕಟ್ಟಿಸಿದ ಮನೆ, ಮನೆಯ ಕೇಂದ್ರ ಭಾಗವಾದ ಲಿವಿಂಗ್‌ ರೂಮ್ ಮನೆ ಯೋಜನೆಯ ಜೀವಂತಿಕೆಗೆ ಮನ ತ….ನ….ನಾ…. ಹಾಡುತ್ತದೆ. ತಮ್ಮ ಮನೆಯನ್ನು ನೋಡಿದಾಗ ಅವರ ಹೃದಯ ತುಂಬಿ ಬರುತ್ತದೆ.

ಅಂತೂ ಮನೆಯ ಒಳ ಹೊಕ್ಕೊಡನೆಯೇ ಎಲ್ಲರ ಕಣ್ಣಿಗೆ ಬೀಳುವಂತಹ ತಾಣವಾದ ಲಿವಿಂಗ್‌ ರೂಮನ್ನು ಆಕರ್ಷಕವಾಗಿ ಮೂಡಿಸುವುದು ಒಂದು ಸವಾಲೇ ಸರಿ. ಆದರೆ ಈಗ ಮಾರುಕಟ್ಟೆಯಲ್ಲಿ ನಿಮಗೆ ಆಯ್ಕೆಗಳು ವಿಪರೀತವಾಗಿವೆ. ಆದರೆ ಆರಿಸಿಕೊಳ್ಳುವ ಜಾಣ್ಮೆ ನಿಮ್ಮದಾಗಿರಬೇಕಷ್ಟೆ. ವಾಹ್‌ ಎನ್ನುವಂತಹ ಲಿವಿಂಗ್‌ ರೂಮ್ ನಿಮ್ಮದಾಗಬೇಕೇ? ನಿಮ್ಮ ಬುದ್ಧಿಮತ್ತೆಯನ್ನು ಸ್ವಲ್ಪ ಚುರುಕುಗೊಳಿಸಿ

ನಿಮ್ಮ ವಿನ್ಯಾಸಕಾರರಿಗೆ ನಿಮ್ಮ ಮನದಲ್ಲಿರುವ ಚಿತ್ರವನ್ನು ಅರ್ಥ ಮಾಡಿಸಿದಾಗ ಸುಂದರತೆ ಎನ್ನುವ ಕವಿತೆಯೇ ಹೊರಬಿದ್ದೀತು, ಆಲ್ ದಿ ಬೆಸ್ಟ್!

– ಮಂಜುಳಾ ರಾಜ್‌

Tags:
COMMENT