ನಿಮ್ಮ ಸಂಗಾತಿ ತಮ್ಮ ಲುಕ್ಸ್ ಕುರಿತು ನಿರ್ಲಕ್ಷಿಸುತ್ತಾ ತಮ್ಮ ವಯಸ್ಸಿಗಿಂತ ಹಿರಿಯರಾಗಿ ಕಾಣಿಸುತ್ತಾರಾ? ಈ ಹೊಸ ವರ್ಷದಲ್ಲಿ ಅವರು ಅಪ್ ಟು ಡೇಟ್ ಆಗುವಂತೆ ಸಂಕಲ್ಪ ತೊಡಿಸಿ, ನ್ಯೂ ಇಯರ್ಪಾರ್ಟಿಗೆ ಅವರನ್ನು ನೀವೇ ತುಸು ಶ್ರಮವಹಿಸಿ ಹೀಗೇಕೆ ರೆಡಿ ಮಾಡಬಾರದು……?
“ಮೇಘಾ…. ಈ ಸಲದ ನ್ಯೂ ಇಯರ್ ಪಾರ್ಟಿಗೆ ನೀನು ನಿನ್ನ ಪತಿ, ಮಗಳ ಜೊತೆ ನಮ್ಮ ಮನೆಗೆ ಬರಲೇಬೇಕು. ಈ ಸಲ ನಮ್ಮ ಎಲ್ಲಾ ಕ್ಲಾಸ್ ಮೇಟ್ಸ್ ನೂ ಇನ್ವೈಟ್ ಮಾಡಿದ್ದೀನಿ. ಬಹಳ ದಿನಗಳ ನಂತರ ಕುಟುಂಬ ಸಮೇತ ಎಲ್ಲರೂ ಸೇರಿ ಈ ಪಾರ್ಟಿ ಎಂಜಾಯ್ ಮಾಡೋಣ,” ಸ್ನೇಹಾ ತನ್ನ ಬಾಲ್ಯ ಗೆಳತಿಗೆ ಫೋನ್ ಮಾಡಿ ತಿಳಿಸಿದಾಗ, ಮೇಘಾ ಸಂತೋಷವಾಗಿ ಒಪ್ಪಿದಳು.
ಸ್ನೇಹಾ ಕೆಲವೇ ದಿನ ಉಳಿದಿದ್ದ ನ್ಯೂ ಇಯರ್ ಪಾರ್ಟಿಗಾಗಿ ಒಂದೊಂದೇ ಕೆಲಸಗಳಲ್ಲಿ ತಲ್ಲೀನಳಾದಳು. ಮೇಘಾ ಸ್ನೇಹಾ ಬಾಲ್ಯದಿಂದಲೂ ಸಹಪಾಠಿಗಳಾಗಿ ಬೆಳೆದು ಒಂದೇ ಕಾಲೇಜಿನಲ್ಲಿ ಕಲಿತವರು. ಇಬ್ಬರೂ ಕಲಿಕೆಯಲ್ಲೂ ಮುಂದು, ಬ್ಯೂಟಿ ಫಿಟ್ನೆಸ್ ಫ್ರೀಕ್ ನಲ್ಲೂ ಮುಂದಿದ್ದರು. ಸದಾ ಬ್ಯೂಟಿಫುಲ್ ಸ್ಮಾರ್ಟ್ ಆಗಿ ಕಾಲೇಜಿನಲ್ಲಿ ಒಳ್ಳೆ ಹೆಸರು ಗಳಿಸಿದ್ದರು. ಇದಕ್ಕಾಗಿ ಇಬ್ಬರೂ ಒಟ್ಟೊಟ್ಟಿಗೆ ಡ್ರೆಸ್ ಖರೀದಿ, ಜಿಮ್ ಗೆ ಹೋಗುವುದು, ಕಾಸ್ಮೆಟಿಕ್ಸ್ ಶಾಪಿಂಗ್ ಇತ್ಯಾದಿ ಮಾಡುತ್ತಿದ್ದರು. ಕಲಿತು ಕೆಲಸಕ್ಕೆ ಸೇರಿದ ನಂತರ ಮದುವೆಯಾಗಿ ಸ್ನೇಹಾ ಬೆಂಗಳೂರಿನಲ್ಲಿ ಉಳಿದರೆ, ಮೇಘಾ ಮೈಸೂರಿಗೆ ಹೊರಟಿದ್ದಳು. ಹೀಗಾಗಿ ವರ್ಷದಲ್ಲಿ 1-2 ಸಲ ಭೇಟಿ ಆಗುತ್ತಿದ್ದರು.
ಮೇಘಾಳ ಪತಿಗೆ ವರ್ಗಾವಣೆ ಆದ್ದರಿಂದ, ಅವಳೂ ಬೆಂಗಳೂರಿಗೇ ಬಂದು ನೆಲೆಸುವಂತಾಯಿತು. ಇಷ್ಟು ದಿನ ಗೆಳತಿಯರು ಮಾತ್ರ ಭೇಟಿ ಆಗುತ್ತಿದ್ದರು, ಇದೀಗ ಅವರ ಕುಟುಂಬಗಳು ಭೇಟಿ ಆಗುವಂತಾಯಿತು. ಈ ನ್ಯೂ ಇಯರ್ ಪಾರ್ಟಿಗೆ ಸ್ನೇಹಾ ಬೆಂಗಳೂರಿನಲ್ಲೇ ಉಳಿದಿದ್ದ ತನ್ನ ಇತರ ಸಹಪಾಠಿಗಳನ್ನೂ ಕರೆದಿದ್ದಳು.
ಆ ಸಲ ನ್ಯೂ ಇಯರ್ ಪಾರ್ಟಿ ಭಾನುವಾರ ಬಂದಿತ್ತು. ಹೀಗಾಗಿ ಉಳಿದ ಕೊನೆ ತಯಾರಿ ಬೇಗ ಮುಗಿಸಬೇಕೆಂದು ಸ್ನೇಹಾ ಲಘುಬಗೆಯಿಂದ ಎದ್ದು, ಕಾಫಿ ರೆಡಿ ಮಾಡಿ, ಉಳಿದ ಸಣ್ಣಪುಟ್ಟ ಕೆಲಸ ಮುಗಿಸಿ 8 ಗಂಟೆ ಆದರೂ ಇನ್ನೂ ಮಲಗಿದ್ದ ಪತಿಯನ್ನು ಎಬ್ಬಿಸಿದಳು. ಮೇಘಾ ಅಂದು ಬೆಳಗ್ಗೆ 10 ಗಂಟೆಗೇ ಬೇಗ ಬರುವುದಾಗಿ ತಿಳಿಸಿದ್ದಳು. ಇಬ್ಬರೂ ಇಡೀ ದಿನ ಒಟ್ಟಿಗಿದ್ದು, ಪಾರ್ಟಿಯ ತಯಾರಿ ನಡೆಸುವುದೆಂದು ನಿರ್ಧರಿಸಿದರು.
“ಬೇಗ ಏಳಿ ಅಮಿತ್…… ಇವತ್ತು ತನ್ನ ಫ್ರೆಂಡ್ ಮೇಘಾ ಮನೆಯವರ ಜೊತೆ ಬರ್ತಿದ್ದಾಳೆ. ನೀವು ಬೇಗ ರೆಡಿ ಆಗಿ.”
“ಅಯ್ಯೋ ಭಾನುವಾರ…. ಬಿಡುವು ಮಹಾರಾಯ್ತಿ…. ಇನ್ನೂ ಸ್ವಲ್ಪ ಮಲಗಿರ್ತೀನಿ,” ಎಂದು ಕೊಸರಿದ ಪತಿರಾಯ.
“ರೀ, ಆ ಮೇಘಾ ಮುಂದೆ ಸ್ವಲ್ಪ ನೀಟಾಗಿ, ಡೀಸೆಂಟ್ ಆಗಿ ನೀವು ಪ್ರೆಸೆಂಟೆಬಲ್ ಆಗಿರಬೇಕು. ಬೇಗ ಶೇವಿಂಗ್, ಸ್ನಾನ ಮುಗಿಸಿ ರೆಡಿ ಆಗಿ. ಅವಳಂತೂ ಈಗಲೂ ಸ್ಮಾರ್ಟ್ ಆಗಿ ಎಲ್ಲಾ ಮೆಯಿಂಟೇನ್ ಮಾಡ್ತಾಳೆ!”
“ನೀನೇನು ಕಡಿಮೆಯೇ? ಮದುಮಗಳ ತರಹವೇ ಮಿಂಚುತ್ತಿದ್ದೀ…..”
“ನನ್ನ ಕಥೆ ಬಿಡಿ, ನೀವು ನೀಟಾಗಿ ಡ್ರೆಸ್ ಆಗಿರಬೇಕು.”
“ನಾನು ರೆಡಿ ಆಗಲು ಎಷ್ಟು ಹೊತ್ತು? ನಿಮ್ಮಂತೆ ಮೇಕಪ್ ಮಾಡಿಕೊಳ್ಳಬೇಕೇ?”
ಲುಕ್ಸ್ ನಲ್ಲಿ ವ್ಯತ್ಯಾಸ ಆದಾಗ ಅಮಿತ್ ನ ಅರೆ ನೆರೆತ ಕೂದಲು, ಕಪ್ಪು ಕೂದಲ ಮಿಶ್ರ ಹೇರ್ ಸ್ಟೈಲ್, ಬೆಳೆದಿದ್ದ ಬೊಜ್ಜು ನೋಡಿ ಸ್ನೇಹಾ ಕಸಿವಿಸಿಗೊಂಡಳು. ಅಮಿತ್ ತನ್ನ ಬಗ್ಗೆ ಎಂದೂ ಕೇರ್ ತಗೊಳಲ್ಲ ಎಂದು ಪೇಚಾಡಿಕೊಂಡಳು.
ಏನೋ ಕಾರಣವಶಾತ್ ಮೇಘಾ ಬೆಳಗ್ಗೆ ಬರಲಾಗದು, ಸಂಜೆ 6 ಗಂಟೆ ನಂತರ ಬರ್ತೀನಿ ಎಂದು ಸಾರಿ ಹೇಳಿದಳು. ಸರಿ ಎಂದು ಸ್ನೇಹಾ ಉಳಿದ ಅರೇಂಜ್ ಮೆಂಟ್ಸ್ ತಾನೇ ಮಾಡಿಕೊಂಡಳು. ಸಂಜೆ ಹೊತ್ತಿಗೆ ಡೈ ಮಾಡಿದ್ದ ತನ್ನ ಕೂದಲನ್ನು ನೀಟಾಗಿ ಸರಿಪಡಿಸಿಕೊಳ್ಳುತ್ತಿದ್ದಾಗ, ಅಮಿತ್ ಸ್ನೇಹಾಳ ಹಿಂದೆ ಬಂದು ನಿಂತ. ತನ್ನ ಹೇರ್ ಸ್ಟೈಲ್ ಕಾರಣ ಅಮಿತ್ ಹೆಂಡತಿಗಿಂತ ಹೆಚ್ಚು ವಯಸ್ಸಾದವನಂತೆ ಕಾಣುತ್ತಿದ್ದ. ಜೊತೆಗೆ ಬೊಜ್ಜು, ಕಪ್ಪಾಗುತ್ತಿದ್ದ ದೇಹದ ಬಣ್ಣ, ಒಟ್ಟಾರೆ ಅವನ ಪರ್ಸನಾಲ್ಟಿ ಚೆನ್ನಾಗಿರಲಿಲ್ಲ. ಒಮ್ಮೊಮ್ಮೆ ಹೊಸ ಪರಿಚಯದವರು, ಅವನ ಎದುರಿಗೇ ಇವಳನ್ನು ಎರಡನೇ ಹೆಂಡತಿಯೇ ಎಂದೂ ಕೇಳಿದ್ದುಂಟು! ಇವರನ್ನು ಬೇಗ ಸರಿಪಡಿಸುವುದು ಹೇಗೆ ಅಂದುಕೊಂಡಳು.
ಅದಕ್ಕೆ ಅಮಿತ್, “ನನ್ನ ಬಗ್ಗೆ ಯೋಚನೆ ಬೇಡ ಸ್ನೇಹಾ. ಬ್ಯೂಟಿಫುಲ್ ಆಗಿ ಕಂಗೊಳಿಸಬೇಕಿರುವುದು ಹೆಂಗಸರ ಕೆಲಸ. ಗಂಡಸರು ಚೆನ್ನಾಗಿ ಗಳಿಸುತಿದ್ದರೆ ಆಯ್ತು,” ಆ ಘಳಿಗೆಯಲ್ಲೇನೋ ಸ್ನೇಹಾ ಗಂಡನ ಮಾತಿಗೆ ನಕ್ಕು ಸುಮ್ಮನಾದಳು.
ಆದರೆ ಸಂಜೆ ಮೇಘಾ ತನ್ನ ಪತಿ ವರುಣ್ ನನ್ನು ಪರಿಚಯಿಸಿದಾಗ ಸ್ನೇಹಾ ದಂಗಾದಳು. ಮದುವೆಯಲ್ಲಿ ಕಂಡಿದ್ದ ವರುಣ್ ಗಿಂತಲೂ ಈಗ ಆತ ಎಷ್ಟೋ ಹೆಚ್ಚು ಸ್ಮಾರ್ಟ್ ಆಗಿ ಕಾಣುತ್ತಿದ್ದ.
ನೀಟಾಗಿ ತಿದ್ದಿತೀಡಿದ್ದ ತಲೆಗೂದಲು, ತುಸು ಸ್ಟೈಲಿಶ್ ಮೀಸೆ, ಕ್ಲೀನ್ ಶೇವ್, ಪರ್ಫೆಕ್ಟ್ ಬ್ಯಾಲೆನ್ಸ್ಡ್ಬಾಡಿ, ಕಲೆಗುರುತುಗಳಿಲ್ಲದ ಮೈಕಾಂತಿಯಿಂದ ಆತ ಹೊಳೆಯುತ್ತಿದ್ದ. ಹೀಗಾಗಿ ಇನ್ನೂ ಯಂಗ್ ಎನಿಸಿದ್ದ. ಆತ ಬ್ಲೂ ಜೀನ್ಸ್ ಮೇಲೆ ಲೈಟ್ ಬ್ರೌನ್ ಟೀ ಶರ್ಟ್ ಜ್ಯಾಕೆಟ್ ಧರಿಸಿದ್ದ. ಗೊತ್ತಿಲ್ಲದವರಿಗೆ ಬ್ಯಾಚುಲರ್ ಎಂದರೂ ನಡೆಯುತ್ತಿತ್ತು.
ಇತ್ತ ತನ್ನ ಪತಿ ಕಡೆ ತಿರುಗಿದಾಗ, ಸೂಟ್ ಧರಿಸಿದ್ದರೂ ಅಮಿತ್ ಪರ್ಸನಾಲ್ಟಿಯಲ್ಲಿ ಹೆಚ್ಚಿನ ಕಳೆ ಇರಲಿಲ್ಲ. ಕಪ್ಪು ಬಿಳುಪಿನ ಗಡ್ಡ, ಮೈ ಕೈ ತುಂಬಿಕೊಂಡ ಪರ್ಸನಾಲ್ಟಿ, ಒಟ್ಟಾರೆ ಗೆಳತಿಯರ ಮದುವೆ 1-2 ತಿಂಗಳ ಅಂತರದಲ್ಲೇ ನಡೆದಿದ್ದರೂ, ಸ್ನೇಹಾಳ ಗಂಡ ಮಾತ್ರ ವಯಸ್ಸಾದವನಂತೆಯೇ ಕಾಣುತ್ತಿದ್ದ.
“ವರುಣ್, ಹಿಂದಿನ ಛಾರ್ಮ್ ಉಳಿಸಿಕೊಂಡು ಈಗಲೂ ಮಿಂಚುತ್ತಿದ್ದೀರಿ. ಚೆನ್ನಾಗಿ ಮೇಂಟೇನ್ ಮಾಡ್ತೀರಿ ಅನ್ಸುತ್ತೆ!” ಎಂದಳು ಸ್ನೇಹಾ.
“ಯಾರ ಪತಿ ಅಂದುಕೊಂಡಿದ್ದೀ…..?” ಮೇಘಾ ಹೆಮ್ಮೆಯಿಂದ ಹೇಳಿಕೊಂಡಳು.
“ಇದಕ್ಕೆಲ್ಲ ನಿಮ್ಮ ಫ್ರೆಂಡೇ ಕಾರಣ. ನಾನು ಅಮ್ಮಾವ್ರ ಗಂಡನಾಗಿ ಅವಳು ಎಳೆದ ಗೆರೆ ದಾಟೋಲ್ಲ…..” ಎಂದು ವರುಣ್ ನಾಟಕೀಯವಾಗಿ ಹೇಳಿದಾಗ ಎಲ್ಲರೂ ಜೋರಾಗಿ ನಕ್ಕರು.
ಅಲಕ್ಷ್ಯಕ್ಕೆ ಅವಕಾಶ ಬೇಡ
ಅಂತೂ ಹೀಗೆ ಅಂದಿನ ಪಾರ್ಟಿಗೆ ಬಂದಿದ್ದವರೆಲ್ಲ, ಬಹಳ ವರ್ಷಗಳ ನಂತರ ಭೇಟಿಯಾಗಿ ನ್ಯೂ ಇಯರ್ ಪಾರ್ಟಿಯನ್ನು ಚೆನ್ನಾಗಿ ಎಂಜಾಯ್ ಮಾಡಿದರು. ತಡ ರಾತ್ರಿ 1 ಗಂಟೆ ಹೊತ್ತಿಗೆ ಎಲ್ಲರೂ ಹೊರಟುಬಿಟ್ಟರು.
ಮಾರನೇ ದಿನ ರಜೆ ಇದ್ದುದರಿಂದ ಗೆಳತಿಯರು ಶಾಪಿಂಗ್ ಗೆಂದು ಬೇರೆ ಕಡೆ ಹೊರಟರು. ತನ್ನ ಮನದ ಮಾತನ್ನು ಸ್ನೇಹಾ ಗೆಳತಿಗೆ ತಿಳಿಸಿದಳು. ಪತಿ ಯಾವಾಗಲೂ ಲುಕ್ಸ್ ಕುರಿತು ನಿರ್ಲಕ್ಷ್ಯ ವಹಿಸುತ್ತಾರೆಂದೂ ಹೇಳಿದಳು. ಅದಕ್ಕೆ ಮೇಘಾ, ತಾನು ಪತಿ ವರುಣ್ ಬಗ್ಗೆ ಮೊದಲಿನಿಂದಲೂ ಬಹಳ ಕೇರ್ ತೆಗೆದುಕೊಳ್ಳುವುದಾಗಿ ಹೇಳಿದಳು. ಪ್ರತಿ 15 ದಿನಗಳಿಗೊಮ್ಮೆ ತಾನೇ ಆತನ ಕೂದಲಿಗೆ ಡೈ ಹಚ್ಚಿ, ಟ್ರಿಮ್ ಮಾಡುತ್ತಿದ್ದಳು. ತಿಂಗಳಿಗೊಮ್ಮೆ ಹಠದಿಂದ ಮೆನ್ಸ್ ಪಾರ್ಲರ್ ಗೆ ಕಳಿಸುವಳು. ಮುಖಕ್ಕೆ ಫೇಸ್ ಪ್ಯಾಕ್ ಹಚ್ಚಿ, ಪೆಡಿಕ್ಯೂರ್ ಮೆನಿಕ್ಯೂರ್ ಗಳನ್ನು ರೊಟೀನ್ ಆಗಿ ಕಂಟಿನ್ಯೂ ಮಾಡುತ್ತಿದ್ದಳು. ಉಳಿದ ಪರ್ಸನಲ್ ಹೈಜೀನ್ ಬಗ್ಗೆ ವರುಣ್ ತಾನೇ ಬಹಳ ಎಚ್ಚರಿಕೆ ವಹಿಸುತ್ತಿದ್ದ. ಪ್ರತಿ ದಿನ ಜಿಮ್ ಗೆ ಹೋಗುತ್ತಾ, ವ್ಯಾಯಾಮ, ಯೋಗದತ್ತಲೂ ಗಮನ ಕೊಡುತ್ತಿದ್ದ.
ಹೀಗಾಗಿ ಹೆಂಗಸರು ತಮ್ಮ ಬಗ್ಗೆ ಮಾತ್ರ ಕಾಳಜಿ ವಹಿಸದೆ, ತಮ್ಮ ಸಂಗಾತಿಯತ್ತಲೂ ಸಂಪೂರ್ಣ ಗಮನ ಹರಿಸಬೇಕು. ನೀವೇನೋ ಸ್ಟೈಲಿಶ್‌ಗ್ಲಾಮರಸ್ ಆಗಿ ಎಲ್ಲಾ ಕಡೆ ಮಿಂಚುತ್ತೀರಿ, ಆದರೆ ನಿಮ್ಮ ಪತಿ ವಯಸ್ಸಾದವರಂತೆ ಕಂಡುಬಂದರೆ, ಆ ಫಂಕ್ಷನ್ ನಲ್ಲಿ ನಿಮಗೆ ಬಹಳ ಸಂಕೋಚ ಎನಿಸುತ್ತದೆ. ಅವರದು ಮ್ಯಾಚಿಂಗ್ ಅಲ್ಲದ ಡ್ರೆಸ್, ಬಾಲ್ಡ್ ತಲೆ, ಶೇವಿಂಗ್ ಮಾಡದೆ ಬಂದಿದ್ದರೆ ನಿಮ್ಮ ಬ್ಯೂಟಿ ಅದನ್ನು ಮತ್ತಷ್ಟು ಎತ್ತಿ ತೋರಿಸುತ್ತದೆ. ಆದ್ದರಿಂದ ನಿಮ್ಮ ಸಂಗಾತಿಯೂ ನಿಮ್ಮಂತೆಯೇ ಮಿಂಚಿದರೆ ಮಾತ್ರ ನಿಮ್ಮ ಸೌಂದರ್ಯಕ್ಕೂ ಸಾರ್ಥಕತೆ ಬರುತ್ತದೆ.
ಬಾಹ್ಯ ಸೌಂದರ್ಯ ಒಂದೇ ಮುಖ್ಯವಲ್ಲ
ಈ ಕುರಿತಾಗಿ ಸೌಂದರ್ಯ ತಜ್ಞೆಯರು ಹೇಳುವುದೆಂದರೆ, ಹೆಣ್ಣಿಗೆ ಕೇವಲ ಬಾಹ್ಯ ಸೌಂದರ್ಯ ಒಂದೇ ಮುಖ್ಯವಲ್ಲ, ಬದಲಿಗೆ ಬಾಂಡಿಂಗ್ ಬ್ಯೂಟಿ ಸಹ ಬಲು ಮುಖ್ಯ. ಅಂದ್ರೆ ಇಬ್ಬರೂ ಪರಸ್ಪರ ಬಹಳ ಗೌರವಿಸುತ್ತಾರೆ ಹಾಗೂ ಕಾಳಜಿ ವಹಿಸುತ್ತಾರೆ ಅಂತ. ಆಗ ಮಾತ್ರ ಅವರ ದಾಂಪತ್ಯ, ಕೌಟುಂಬಿಕ ಜೀವನ, ಸಾಮಾಜಿಕ ಬಾಧ್ಯತೆಗಳಿಂದ ಕಳೆಕಳೆಯಾಗಿರುತ್ತದೆ. ಇತ್ತೀಚೆಗೆ ಜನ ಕೇವಲ ತಮ್ಮ ಸ್ವಾರ್ಥದ ಬಗ್ಗೆ ಚಿಂತಿಸಿ, ಸಂಗಾತಿಯನ್ನು ಕಡೆಗಣಿಸುತ್ತಾರೆ. ಹೀಗಾಗಿ ವಿರಸ ಹೆಚ್ಚುತ್ತದೆ.
ಹೀಗಾಗಿ ನಿಮ್ಮ ಜೋಡಿ ಮಿಂಚಬೇಕೆಂದು ಬಯಸಿದರೆ ನಿಯಮಿತವಾಗಿ ಡಿಯೋ, ಶಾಂಪೂ, ಬಾಡಿ ಲೋಶನ್, ಶವರ್ ಜೆಲ್ ಇತ್ಯಾದಿ ಅವರೂ ಬಳಸುವಂತೆ ನೋಡಿಕೊಳ್ಳಿ. ನಿಮ್ಮಂತೆಯೇ ನಿಮ್ಮ ಸಂಗಾತಿ ಸಹ ಸ್ಮಾರ್ಟ್ ಆಗಿರಬೇಕಲ್ಲವೇ? ಇದರ ಜವಾಬ್ದಾರಿ ನೀವೇ ವಹಿಸಿಕೊಳ್ಳುವುದು ಮೇಲು. ನಿಮ್ಮನ್ನು ನೀವು ಅಪ್ ಗ್ರೇಡ್ ಮಾಡಿಕೊಳ್ಳಲು ಶುರು ಮಾಡಿದರೆ, ನಿಮ್ಮ ಸಂಗಾತಿಯನ್ನೂ ನಿಮ್ಮೊಂದಿಗೆ ಎಲ್ಲಾ ಕಡೆಗೂ ಕರೆದೊಯ್ದು, ನಿಮ್ಮಂತೆಯೇ ಅವರನ್ನು ಗ್ಲಾಮ್ ಮಾಡಿ.
ಒಂದು ವಿಷಯ ನೆನಪಿಡಿ, ನಿಮ್ಮನ್ನು ನೀವು ತುಂಬಾ ಗ್ಲಾಮರಸ್ ಆಗಿಸಿಕೊಂಡು, ನಿಮ್ಮವರು ಹಳೆ ಝಮಾನಾದವರ ತರಹ ಓಡಾಡುತ್ತಿದ್ದರೆ, ನಿಮ್ಮದು ಹೈ ಸ್ಟಾಂಡರ್ಡ್ ಜೋಡಿ ಎನಿಸದು. ನಿಮ್ಮಂತೆಯೇ ಅವರೂ ಅಪ್ ಡೇಟ್ ಆದರೆ ಮಾತ್ರ ಪರ್ಫೆಕ್ಟ್ ಹೈ ಸ್ಟಾಂಡರ್ಡ್ ಎನಿಸುವಿರಿ. ಅವರು ನಿಮ್ಮಂತಾಗಲು ಅವರಿಗೆ ಸಹಾಯ ಮಾಡಿ.
ಅವರಿಗಾಗಿ ಏನಾದರೂ ವಿಶೇಷವಾಗಿ ಪ್ಲಾನಿಂಗ್ ಮಾಡಿ. ಈ ವಿಚಾರವಾಗಿ ಅವರಿಗೆ ಏನಾದರೂ ವಿಶೇಷ ಗಿಫ್ಟ್ ನೀಡಿ. ಬರ್ತ್‌ಡೇ, ವ್ಯಾಲೆಂಟೈನ್ ಡೇ ಇತ್ಯಾದಿ ಬರಲೇಬೇಕೆಂದು ಕಾಯುವ ಅಗತ್ಯವಿಲ್ಲ. ಸಣ್ಣಪುಟ್ಟ ಸಂದರ್ಭಗಳಿಗೂ ಇಬ್ಬರೂ ಗಿಫ್ಟ್ ಶೇರ್ ಮಾಡಿ. ಅವರಿಗಾಗಿ ಜೀನ್ಸ್, ಟೀಶರ್ಟ್, ಜ್ಯಾಕೆಟ್, ಇತ್ಯಾದಿ ಗಿಫ್ಟ್ ಮಾಡಿ. ಜೀನ್ಸ್ ಟೀಶರ್ಟ್ ನಲ್ಲಿ ಅವರು ತಮ್ಮ ವಯಸ್ಸಿಗಿಂತ ಖಂಡಿತಾ ತುಸು ಯಂಗ್‌ಸ್ಮಾರ್ಟ್ ಆಗಿ ಕಾಣಿಸುತ್ತಾರೆ. ಅವರು ತುಸು ಬಾಲ್ಡ್ ಆಗಿದ್ದರೆ, ಕ್ಯಾಪ್ ಅಥವಾ ವಿಗ್ ನೀಡಿ. ನಿಧಾನವಾಗಿ ಹೇರ್ ವೀವಿಂಗ್‌ಸಹ ಟ್ರೈ ಮಾಡಬಹುದು. ಅವರು ಹೊರಗಿನ ಓಡಾಟಕ್ಕೆ ಹೊರಟಾಗ, ಬಿಸಿಲಿನಲ್ಲಿ ಸನ್ ಟ್ಯಾನ್ ಆಗದಿರಲು ಗಂಡಸರ ಸನ್ ಸ್ಕ್ರೀನ್ ಹಚ್ಚಿಕೊಳ್ಳುವಂತೆ ಅಭ್ಯಾಸ ಮಾಡಿಸಿ, ನಿಧಾನವಾಗಿ ಒಂದೊಂದೇ ವಿಷಯದಲ್ಲಿ ಅಪ್ ಗ್ರೇಡ್ ಮಾಡಿಸಿ.
ಬಾಂಡಿಂಗ್ ಸ್ಟ್ರಾಂಗ್ ಆಗಿರಲಿ
ಡ್ರೆಸ್ಸಿಂಗ್ ಟೇಬಲ್ ಮೇಲೆ ನಿಮ್ಮದೇ ಹಲವು ವಸ್ತು ಹರಡಿದ್ದರೆ, 4-5 ಅವರದೂ ಇರುವಂತೆ ಮಾಡಿ. ಅದು ಅವರ ಕಣ್ಣಿಗೆ ಕಾಣಿಸುವಂತಿದ್ದರೆ ತಾನೇ ಅವರು ಬಳಸುವುದು…..? ಇದಕ್ಕಾಗಿ ಅವರೊಂದಿಗೆ ಹೆಚ್ಚಿನ ವಾದ, ವಿವಾದ ಬೇಡ. ನೀವು ಅವರ ಕೇರ್ ತೆಗೆದುಕೊಂಡಷ್ಟೂ, ಹೆಚ್ಚಾಗಿ ಕಾಳಜಿ ವಹಿಸಿದಷ್ಟೂ, ಸಹಜವಾಗಿಯೇ ಅವರು ನಿಮ್ಮ ಮಾತು ಕೇಳುತ್ತಾರೆ. ಅವರ ಇಷ್ಟಾನಿಷ್ಟ ಗಮನಿಸಿಕೊಂಡು, ನಿಮ್ಮ ಮಾತಿನಂತೆ ನಡೆಯುವಂತೆ ಮಾಡಿ. ಮುಖ್ಯ ಅವರು ಕಂಫರ್ಟೆಬಲ್ ಆಗಿರುವಂತೆ ಮಾಡಿ.
ಅವರ ಶೇವಿಂಗ್ ಕಿಟ್ ಗಲೀಜಾಗಿದೆ ಎನಿಸಿದರೆ, ಅದನ್ನು ನೀಟ್‌ಕ್ಲೀನ್‌ಮಾಡಿ, ಅವರಿಗೆ ಸರ್ ಪ್ರೈಸ್ ನೀಡಿ. ಅದರಲ್ಲಿನ ಮಿಸ್ಸಿಂಗ್ ವಸ್ತು ಆ್ಯಡ್ ಮಾಡುತ್ತಿರಿ. ಅವರು ಅದನ್ನು ತೆರೆದು ನೋಡಿದಾಗ, ಅವರ ಮೂಡ್ ಆಟೋಮೆಟಿಕಲಿ ಕೂಲ್ ಆಗುತ್ತದೆ, ನಿಮ್ಮ ಸಲಹೆಗಳನ್ನು ಅಗತ್ಯ ಫಾಲೋ ಮಾಡುತ್ತಾರೆ.
ನಿಯಮಿತ ವ್ಯಾಯಾಮಕ್ಕೆ ಪ್ರೇರೇಪಿಸಿ
ನೀವು ಗಮನಿಸಿರುವಂತೆ, ನಿಮ್ಮ ಪರಿಚಯದವರು ನಿಮ್ಮನ್ನು ಅಕ್ಕಾ ಎಂದೇ ಮಾತನಾಡಿಸಿದರೂ, ಅವರನ್ನು ಅಂಕಲ್ ಎನ್ನವುದೇ ಇರಲಾರರು. ಗಂಡಸರು ಸಾಮಾನ್ಯವಾಗಿ ಈ ಬಗ್ಗೆ ಚಕಾರ ಎತ್ತಲು ಆಕ್ಷೇಪಿಸಲು ಹೋಗುವುದಿಲ್ಲ. ಆದರೆ ಒಳಗೊಳಗೇ ಅವರು ಮುಜುಗರ ಪಡುತ್ತಾ, ಹರ್ಟ್ ಆಗುತ್ತಾರೆ. ಹೀಗಾಗಿ ಮಾತಿನ ಮಧ್ಯೆ ನೀವು ವ್ಯಂಗ್ಯವಾಗಿ ಅವರ ಬೊಜ್ಜಿನ ಬಗ್ಗೆ ಹೇಳಿದರೆ, ನಾನಿರುವುದು ಹೀಗೆ ಎಂದು ಸಿಡುಕಬಹುದು. ಬದಲಿಗೆ, ಅವರು ನಿಯಮಿತವಾಗಿ ಜಿಮ್ ಗೆ ಹೋಗಲು, ಬೆಳಗಿನ ಹೊತ್ತು ಯೋಗ, ಜಾಗಿಂಗ್, ಲಾಂಗ್ ವಾಕ್ ಮಾಡಲು ಪ್ರೇರೇಪಿಸಿರಿ, ನೀವು ಅವರ ಜೊತೆ ಜೊತೆಯಲ್ಲೇ ಇದನ್ನೆಲ್ಲಾ ಮಾಡಿ. ಆಗ ಖಂಡಿತಾ ಹೆಂಡತಿಯನ್ನು ಇಂಪ್ರೆಸ್ ಮಾಡಲು ಇದನ್ನು ಅವರು ಪಾಲಿಸಿ, ಟ್ರಿಮ್ ಪರ್ಸನಾಲ್ಟಿ ಹೊಂದುತ್ತಾರೆ. ಹೆಂಗಸರು ರಾತ್ರಿ ಮಲಗುವ ಮುನ್ನ ಕ್ರೀಂ ಅಥವಾ ಲೋಶನ್ ಹಚ್ಚಿಕೊಳ್ಳುವ ಅಭ್ಯಾಸ ರೂಢಿಸಿಕೊಂಡಿರುತ್ತಾರೆ. ನಿಯಮಿತವಾಗಿ ಇವನ್ನು ಹಚ್ಚಿ ಮಸಾಜ್ ಸಹ ಮಾಡುತ್ತಿರಬಹುದು. ಇದೇ ತರಹ ಅವರನ್ನೂ ಮಾಡಿಕೊಳ್ಳುವಂತೆ ಪ್ರೇರೇಪಿಸಿ, ಉತ್ಸಾಹ ತುಂಬಿರಿ. ಇದರಿಂದ ಅವರ ಇಡೀ ದೇಹ ನರಿಶ್ ಆಗುತ್ತದೆ. ನೀವು ಬೆಳಗಿನ ಹೊತ್ತು ತಲೆಗೆ ಎಣ್ಣೆ ಹಚ್ಚಿಕೊಳ್ಳುವಾಗ, ಅವರಿಗೂ ಅದೇ ಎಣ್ಣೆ ಒತ್ತಿಕೊಳ್ಳಲು ಅಥವಾ ಬ್ರಿಲ್ ಕ್ರೀಂ ಬಳಸಲು ಸಲಹೆ ನೀಡಿ.
ಹೀಗೆ ಕಾಳಜಿ ವಹಿಸಿರಿ
ನೀವು ಬಾತ್ ರೂಮಿನಲ್ಲಿ ನಿಮಗಾಗಿ ಶ್ಯಾಂಪೂ, ಕಂಡೀಶನರ್ ಇರಿಸಿಕೊಂಡಿರುವಂತೆ, ಅವರಿಗೂ ಅದನ್ನು ನಿಯಮಿತವಾಗಿ ಬಳಸಲು ಹೇಳಿ. ಅಕಸ್ಮಾತ್ ಕಂಡೀಶನರ್ ಬಳಸುತ್ತಿಲ್ಲವಾದರೆ, ಅವರ ಶ್ಯಾಂಪೂ ಬಾಟಲಿಗೇ ಕಂಡೀಶನರ್ ಬೆರೆಸಿಟ್ಟುಬಿಡಿ. ಇದು 2 ಇನ್ 1 ಕೆಲಸ ಮಾಡುತ್ತದೆ.
ಬೇಸಿಗೆಯಲ್ಲಿ ಗಂಡಸರು ಬೆವರುವುದು ಹೆಚ್ಚು. ಅವರನ್ನು ಆ ಬಗ್ಗೆ ವ್ಯಂಗ್ಯವಾಡದೆ, ಕಾಲಕಾಲಕ್ಕೆ ಕಂಕುಳಕ್ಕೆ ಡಿಯೋ ಬಳಸಲು ಕೈಗೇ ಕೊಡಿ. ತಮ್ಮ ಬಾಡಿ ಓಡರ್ ಸರಿ ಇಲ್ಲವೆಂದು ಆಗ ಅವರೇ ತಿಳಿಯುತ್ತಾರೆ. ಮುಂದೆ ಹೊರಗೆ ಹೋಗುವಾಗೆಲ್ಲ ಅವರೇ ಈ ಮುನ್ನೆಚ್ಚರಿಕೆ ವಹಿಸುವಂತೆ ಆಗುತ್ತದೆ.
ನೀವು ಮನೆಯಲ್ಲಿ ಬಳಸುವ ಶವರ್ ಜೆಲ್, ಸೋಪ್, ಶ್ಯಾಂಪೂ, ಆಫ್ಟರ್ ಶೇವ್ ಇತ್ಯಾದಿಗಳೆಲ್ಲ ಸುವಾಸನೆಯಿಂದ ಕೂಡಿರಲಿ. ಉಗುರು ಕತ್ತರಿಸಿದ ನಂತರ ಹತ್ತಿಯಿಂದ ಕೋಲ್ಡ್ ಕ್ರೀಂ ಅದ್ದಿಕೊಂಡು, ಆ ಭಾಗ ಸವರಿಡಿ. ಇದರಿಂದ ಡ್ರೈನೆಸ್ ಇರುವುದಿಲ್ಲ. ವಯಸ್ಸಾಗುತ್ತಿದ್ದಂತೆ ಉಗುರು ದಪ್ಪಗಾಗಿ ಡ್ರೈ ಆಗುವ ಕಾಟ ತಪ್ಪುತ್ತದೆ. ಕಾಲುಗಳಿಗೂ ಅದೇ ಅಭ್ಯಾಸ ಮಾಡಿಸಿ.
– ಪ್ರತಿನಿಧಿ
ನೀವು ಮಾಡರ್ನ್‌ಗ್ಲಾಮರಸ್ ಆಗಿದ್ದರೆ ಸಾಲದು, ಅವರನ್ನೂ ನಿಮ್ಮಂತೆಯೇ ತಯಾರು ಮಾಡಿ. ಅವರು ಹಳೆಯ ಕಾಲದವರಂತೆ ಇದ್ದುಬಿಟ್ಟರೆ, ನಿಮ್ಮ ಜೋಡಿ ಮಿಂಚುವುದಿಲ್ಲ. ಇದರಿಂದ ನಿಮ್ಮ ಸ್ಟಾಂಡರ್ಡ್ ಸರಿಹೋಗದು, ಅವರು ತಮ್ಮಲ್ಲೂ ಚೇಂಜ್ ತಂದುಕೊಂಡರೆ ನಿಮ್ಮ ಸ್ಟಾಂಡರ್ಡ್ ಸರಿಹೋದೀತು. ಅವರು ಸೋಮಾರಿ ಸ್ವಭಾವದವರಾಗಿದ್ದರೆ, ಅವರ ಬೊಜ್ಜಿನ ಬಗ್ಗೆ ವ್ಯಂಗ್ಯವಾಡುವ ಬದಲು, ಪ್ರತಿದಿನ ಅವರು ವಾಕಿಂಗ್, ಜಾಗಿಂಗ್, ಜಿಮ್ ಗೆ ಹೋಗುವಂತೆ ಮಾಡಿ. ನೀವು ಅವರೊಂದಿಗೆ ಇದೆಲ್ಲ ಪ್ರತಿದಿನ ಮಾಡುತ್ತಾ ಅವರಲ್ಲಿ ಉತ್ಸಾಹ ಹೆಚ್ಚಿಸಿ, ಪ್ರೇರಣೆ ನೀಡಿ!