ಬೆಂಗಳೂರಿನ ಎನ್.ಆರ್. ಕಾಲೋನಿಯ 32 ವರ್ಷದ ವರ್ಷಾ ಕಂಪ್ಯೂಟರ್ ಎಂಜಿನಿಯರ್ ಮುಕುಂದ್ ರನ್ನು ಲವ್ ಮ್ಯಾರೇಜ್ ಆಗಿದ್ದಾರೆ. ಮದುವೆಯಾಗಿ 4 ವರ್ಷ ಕಳೆದಿವೆ. ಕಳೆದ ನವರಾತ್ರಿ ಬಗ್ಗೆ ಅವರು ಹೇಳುತ್ತಾ ಅಂದು ನಾನು ಬಹಳ ಉದಾಸಳಾಗಿದ್ದೆ. ಬೆಳಗ್ಗೆ ಒಂದು ಸಣ್ಣ ವಿಷಯಕ್ಕೆ ಗಂಡನೊಡನೆ ಜಗಳ ಆಗಿತ್ತು. ಅವರು ಕೋಪಿಸಿಕೊಂಡು ಹೊರಟಿದ್ದರು. ನನ್ನಿಂದ ತಪ್ಪು ಎಲ್ಲಾಯಿತು, ನಮ್ಮ ಸಂಬಂಧಗಳಲ್ಲಿ ಯಾಕಿಷ್ಟು ಅಂತರ ಉಂಟಾಯಿತು ಎಂದು ನಾನು ಯೋಚಿಸುತ್ತಿದ್ದೆ. ಸಣ್ಣ ಸಣ್ಣ ವಿಷಯಕ್ಕೆ ಮುಕುಂದ್ ಇರಿಟೇಟ್ ಆಗುವುದು, ಜೋರು ಧ್ವನಿಯಲ್ಲಿ ನನಗೆ ಉತ್ತರಿಸುವುದು ನೋಡಿದರೆ ಪ್ರೀತಿ ಎಲ್ಲೋ ಕಳೆದುಹೋದಂತಿದೆ.
ಏನು ಮಾಡಲಿ? ಹಿಂದಿನ ಪ್ರೀತಿಭರಿತ ಕ್ಷಣಗಳನ್ನು ಹೇಗೆ ವಾಪಸ್ ತರಲಿ? ನಾವಿಬ್ಬರೂ ಪರಸ್ಪರ ಬಹಳ ಪ್ರೀತಿಸುತ್ತೇವೆಂದು ನಮಗೆ ಗೊತ್ತು. ಆದರೆ ಆ ಪ್ರೀತಿಯ ವ್ಯವಹಾರದಲ್ಲೇಕೆ ಕಂಡುಬರುವುದಿಲ್ಲ? ಹಬ್ಬದ ಈ ದಿನ ಎಷ್ಟು ಬೇಸರದಿಂದ ಕಳೆಯುತ್ತಿದೆ? ಹೀಗೆ ಯೋಚಿಸುತ್ತಾ ನಾನು ಮಗುವಿಗೆ ಸ್ನಾನ ಮಾಡಿಸಿ ಮಲಗಿಸಿದೆ. ಮುಕುಂದ್ ಗೆ ಇಷ್ಟವಾದ ಬೇಸನ್ ಲಾಡು ತಯಾರಿಸತೊಡಗಿದೆ. ಲಾಡು ತಿಂದ ಬಳಿಕ ಅವರ ಕೋಪ ದೂರವಾಗುತ್ತದೆಂಬ ನಂಬಿಕೆ ಇತ್ತು. ಆದರೆ ಸಂಜೆ ಮುಕುಂದ್ ಬಂದು ರೂಮಿಗೆ ಹೋಗಿ ಬಾಗಿಲು ಹಾಕಿಕೊಂಡರು. ನಾನು ಇನ್ನಷ್ಟು ಉದಾಸಳಾದೆ. ಸ್ವಲ್ಪ ಹೊತ್ತಿನ ನಂತರ ಧೈರ್ಯ ಮಾಡಿ ಬಾಗಿಲು ತಟ್ಟಿದೆ. ಬಾಗಿಲು ತೆರೆದಿತ್ತು. ಒಳಗೆ ಕತ್ತಲಿತ್ತು. ನಾನು ಕೂಗಿದೆ. ಮುಕುಂದ್ ಉತ್ತರಿಸಲಿಲ್ಲ. ಆಗಲೇ ಇದ್ದಕ್ಕಿದ್ದಂತೆ ಅನೇಕ ಕ್ಯಾಂಡಲ್ ಗಳು ಉರಿಯತೊಡಗಿದವು. ಗೋಡೆಯ ಮೇಲೆ ಕೆಂಪು ಗುಲಾಬಿ ದಳಗಳಲ್ಲಿ ಬರೆದಿದ್ದ `ಐ ಲವ್ ಯೂ' ಹೊಳೆಯತೊಡಗಿತು. ನನಗೆ ಸಂತೋಷ ಹಾಗೂ ಆಶ್ಚರ್ಯವಾಯಿತು. ಸ್ವಲ್ಪ ಮುಂದೆ ಹೋದಾಗ ಫ್ಯಾನ್ ನಿಂದ ಹೂಗಳು ಬೀಳತೊಡಗಿದವು. ನಾನು ರೋಮಾಂಚಿತಳಾದೆ. ಆಗಲೇ ಹಿಂದಿನಿಂದ ಮುಕುಂದ್ ನನ್ನನ್ನು ಬಾಹುಗಳಲ್ಲಿ ಸೆಳೆದುಕೊಂಡರು. ಕಿವಿಯ ಬಳಿ ತುಟಿ ತಂದು ನಿಧಾನವಾಗಿ `ಐ ಲವ್ ಯೂ' ಎಂದು ಉಸುರಿದರು.
ಪ್ರೀತಿ ಮತ್ತು ಸಂತೋಷದ ಉದ್ವೇಗದಲ್ಲಿ ನಾನು ಅವರ ಎದೆಗೊರಗಿ ಅಳತೊಡಗಿದೆ. ನಂತರ ಅವರಿಗೆ ಲಾಡು ತಿನ್ನಿಸುತ್ತಾ ನಾನು ನಿಮ್ಮನ್ನು ಬಹಳ ಪ್ರೀತಿಸುತ್ತೇನೆ ಎಂದೆ.
ನಮ್ಮಿಬ್ಬರ ಕಣ್ಣುಗಳಲ್ಲಿ ಪ್ರೀತಿ ಮತ್ತು ಸಂತಸಗಳ ಸಾವಿರಾರು ದೀಪಗಳು ಹೊತ್ತಿಕೊಂಡವು. ನವರಾತ್ರಿಯ ಆ ಸಂಜೆ ನನ್ನ ಬದುಕಿನ ಅತ್ಯಂತ ಸ್ಮರಣೀಯ ಸಂಜೆಯಾಯಿತು.
ಹಬ್ಬಗಳು ನಮ್ಮ ಬದುಕಿನಲ್ಲಿ ಖುಷಿಯ ಕ್ಷಣಗಳನ್ನು ತರುತ್ತವೆ. ಆದರೆ ಈ ಕ್ಷಣಗಳು ನಮ್ಮ ಜೀವನ ಪ್ರೀತಿಯ ರಂಗಿನಿಂದ ತುಂಬಿದ್ದರೇನೇ ಪರಿಪೂರ್ಣವೆನಿಸುತ್ತವೆ.
ಸಾಮಾನ್ಯವಾಗಿ ಧಾವಂತದ ಈ ಬದುಕಿನಲ್ಲಿ ನಮ್ಮವರಿಗೆ, ಅದರಲ್ಲೂ ವಿಶೇಷವಾಗಿ ನಮ್ಮ ಸಂಗಾತಿಗೆ ನಮ್ಮ ಆಕರ್ಷಣೆಗಳ ಅನುಭವ ಮೂಡಿಸಲು ಸಮಯವೇ ಸಿಗುವುದಿಲ್ಲ. ಇದರಿಂದ ಸಂಬಂಧಗಳಲ್ಲಿ ಉದಾಸೀನತೆ ಮತ್ತು ಅಂತರ ಏರ್ಪಡುತ್ತದೆ. ಈ ಅಂತರವನ್ನು ಅಳಿಸಲು ಒಂದು ಉತ್ತಮ ಅವಕಾಶವನ್ನು ಹಬ್ಬಗಳ ಸಂತಸಮಯ ಕ್ಷಣಗಳು ಕೊಡುತ್ತವೆ. ನೀವು ಅವರಿಗಾಗಿ ಕೆಲವು ಕ್ಷಣಗಳನ್ನು ಮೀಸಲಿಟ್ಟು ಪ್ರೀತಿಯ ಬಣ್ಣಗಳೊಂದಿಗೆ ಸಂಬಂಧದ ರಂಗೋಲಿಯನ್ನು ಹೀಗೆ ಸಿಂಗರಿಸಿ.