ಪ್ರತಿಯೊಬ್ಬ ಗೃಹಿಣಿಯ ಮನಸ್ಸಿನಲ್ಲಿ ತನ್ನ ಮನೆಯ ಕುರಿತಾದ ಒಂದು ಕನಸು ಇದ್ದೇ ಇರುತ್ತದೆ. ಅದನ್ನು ತನ್ನ ಆಸಕ್ತಿ ಹಾಗೂ ಬಜೆಟ್ ಗೆ ಅನುಸಾರ ಅಲಂಕರಿಸುವ ಅಭಿಲಾಷೆ ಇರುತ್ತದೆ. ಈಗ ಈ ಕನಸನ್ನು ನನಸು ಮಾಡಿಕೊಳ್ಳುವುದು ಕಷ್ಟಕರವೇನಲ್ಲ. ಏಕೆಂದರೆ ಮಾರುಕಟ್ಟೆಯಲ್ಲಿ ಎಷ್ಟೊಂದು ಪರ್ಯಾಯಗಳಿವೆಯೆಂದರೆ, ನಿಮಗೆ ಬೇಕಾದುದನ್ನೇ ಖರೀದಿಸಬಹುದು.
ಮಾರುಕಟ್ಟೆಯಲ್ಲಿ ಸರ್ವೀಸ್ ಪ್ರೊವೈಡರ್ ಗಳು, ಡೆಕೋರೇಶನ್ ಹಾಗೂ ಇತರೆ ಅಲಂಕಾರಿಕ ಆ್ಯಕ್ಸೆಸರೀಸ್ ಗಳನ್ನು ಗ್ರಾಹಕರ ಇಚ್ಛೆ ಹಾಗೂ ಅಗತ್ಯವನ್ನು ಗಮನದಲ್ಲಿಟ್ಟುಕೊಂಡು ತಯಾರಿಸಿಕೊಡುತ್ತಾರೆ. ಇಂತಹದರಲ್ಲಿ ಮನೆಯ ಒಳಾಲಂಕಾರಕ್ಕೆ ನಿಮ್ಮದೇ ಆದ ಛಾಪು ಮೂಡಿಸಲು ಯಾರಾದರೂ ಇಂಟೀರಿಯರ್ ಡಿಸೈನರ್ ನ ನೆರವು ಪಡೆದುಕೊಳ್ಳಲೇಬೇಕು ಎಂದೇನಿಲ್ಲ.
ಒಂದುವೇಳೆ ನೀವು ಬಜೆಟ್ ನಲ್ಲಿ ಇಂಟೀರಿಯರ್ ಡೆಕೋರೇಟರ್ ಮೇಲೆ ಹಣ ಸುರಿಯಲು ಸಿದ್ಧರಿರದೇ ಇದ್ದಲ್ಲಿ, ನಿಮಗೆ ಇಷ್ಟವಾದ ಇಂಟೀರಿಯರ್ ನ್ನು ಆಯ್ದುಕೊಂಡು ಕಡಿಮೆ ಹಣದಲ್ಲಿಯೇ ಇಂದು ಡಿಸೈನರ್ ಮನೆ ಮಾಡಬಹುದು.
ಇದಕ್ಕಾಗಿ ಎಲ್ಲಕ್ಕೂ ಮುಂಚೆ ನಿಮಗೆ ಟ್ರೆಡಿಶನಲ್ ಅಥವಾ ಫ್ಯೂಷನ್ ಎಂತಹ ಇಂಟೀರಿಯರ್ ಬೇಕು ಎನ್ನುವುದನ್ನು ನಿರ್ಧರಿಸಿ. ಆ ಬಳಿಕ ಬೆಳಕಿನ ವ್ಯವಸ್ಥೆ, ಪೀಠೋಪಕರಣಗಳು, ಫ್ಲೋರಿಂಗ್ ಮತ್ತು ಪೇಂಟ್ ನ ದರಗಳ ಬಗ್ಗೆ ತಿಳಿದುಕೊಳ್ಳಿ. ಯಾವುದು ನಿಮ್ಮ ಬಜೆಟ್ ಗೆ ಸೂಕ್ತ ಎನಿಸುತ್ತದೋ ಅವಕ್ಕೆ ನಿಮ್ಮ ಇಂಟೀರಿಯರ್ ನಲ್ಲಿ ಸ್ಥಾನ ಕೊಡಿ.
ಕಸ್ಟಮೈಸ್ಡ್ ಇಂಟೀರಿಯರ್ ನ ಬಹೂಪಯೋಗ
ಹೋಮ್ ಡೆಕೋರ್ ನಲ್ಲಿ ಕಸ್ಟಮೈಸ್ಡ್ ಇಂಟೀರಿಯರ್ ನ್ನು ಅನುಸರಿಸುವುದರಿಂದ ನಮಗಾಗುವ ಲಾಭವೆಂದರೆ, ಪ್ರತಿಯೊಬ್ಬ ಗ್ರಾಹಕ ತನ್ನ ವೈಯಕ್ತಿಕ ಆಸಕ್ತಿಗನುಗುಣವಾಗಿ ಪ್ರತ್ಯೇಕ ಡಿಸೈನ್ ಹಾಗೂ ಸ್ಟೈಲ್ ನ್ನು ರೂಪಿಸಿಕೊಳ್ಳಬಹುದು.
ಮೊದಲು ಒಂದು ಸೋಫಾದ ಡಿಸೈನ್ ಅಥವಾ ಪರದೆಯ ಸ್ಟೈಲ್ ನೋಡಿ ಬೇರೆಯವರಿಗೂ ತಮ್ಮ ಮನೆಗೂ ಅಂಥದೇ ಡಿಸೈನ್ ಬೇಕೆಂದು ಅನಿಸುತ್ತಿತ್ತು. ಇದೇ ಕಾರಣದಿಂದ ಪ್ರತಿಯೊಬ್ಬರ ಮನೆಯಲ್ಲಿ ಒಂದೇ ರೀತಿ ಬೆತ್ತದ ಕುರ್ಚಿಗಳು, ಬಿಳಿ ವರ್ಣದ ಗ್ಲಾಸಿನ ಮೇಜುಗಳು ಹಾಗೂ ಒಂದೇ ಆಕಾರದ ಸೋಫಾಗಳು ಮತ್ತು ವಾಶ್ ಬೇಸಿನ್ ಗಳು ನೋಡಲು ಸಿಗುತ್ತಿದ್ದವು. ಯಾವುದೇ ಒಂದು ವಸ್ತುವಿನಲ್ಲಿ ತನ್ನದೇ ಆದ ಒಂದು ವೈಶಿಷ್ಟ್ಯವೆನ್ನುವುದು ಇರುತ್ತಿರಲಿಲ್ಲ. ಇಂದು ಪ್ರತಿಯೊಬ್ಬರು ತಮ್ಮ ಮನೆಯಲ್ಲಿರುವ ಒಂದು ವಸ್ತು ಇತರರಿಗಿಂತ ಭಿನ್ನವಾಗಿರಬೇಕು ಎಂದು ಬಯಸುತ್ತಾರೆ. ಹೀಗಾಗಿ ಬಹಳ ಅಳೆದೂ ತೂಗಿ, ಪ್ರತಿಯೊಂದು ಸಂಗತಿಗಳ ಸೂಕ್ಷ್ಮತೆಗಳನ್ನು ಗಮನದಲ್ಲಿಟ್ಟುಕೊಂಡು ಮನೆಯ ಪ್ರತಿಯೊಂದು ಮೂಲೆಯನ್ನೂ ಡಿಸೈನ್ ಮಾಡಲಾಗುತ್ತದೆ.
ಡಿಸೈನರ್ ಲಿಪಿ ಅವರ ಪ್ರಕಾರ, ಉಪಯೋಗಿಸುವ ವ್ಯಕ್ತಿಯ ಅಗತ್ಯ ಹಾಗೂ ಮನೆಯ ಪ್ರತಿಯೊಂದು ಜಾಗ ಅಂದರೆ ಕೋಣೆ, ಅಡುಗೆಮನೆ ಮತ್ತು ಸ್ನಾನದ ಕೋಣೆ ಹಾಗೂ ಬಾಲ್ಕನಿಯನ್ನು ಗಮನದಲ್ಲಿಟ್ಟುಕೊಂಡು ಅಲಂಕಾರ ಮಾಡಲಾಗುತ್ತದೆ. ಅದನ್ನು `ಕಸ್ಟಮೈಸ್ಡ್ ಇಂಟೀರಿಯರ್' ಎಂದು ಕರೆಯಲಾಗುತ್ತದೆ.
ಈ ರೀತಿಯ ಅಲಂಕಾರದಲ್ಲಿ ಪ್ರತಿಯೊಂದು ವಸ್ತುವಿನ ಅಗತ್ಯ, ಬಣ್ಣ, ಆಕಾರ, ಫ್ಯಾಬ್ರಿಕ್, ಮೆಟೇರಿಯಲ್ ಹಾಗೂ ಡಿಸೈನಿಂಗ್ ಮುಂತಾದ ಒಂದಕ್ಕೊಂದು ಅನುರೂಪವಾಗಿರುತ್ತವೆ. ಸೋಫಾ, ಕುಶನ್, ಗೋಡೆ, ಸೀಲಿಂಗ್ ಪರದೆಗಳು ಹಾಗೂ ಅಲ್ಲಿನ ಪರಿಕರಗಳೆಲ್ಲ ಒಂದೇ ವರ್ಣದ್ದಾಗಿರುತ್ತವೆ.