SJ*
ಬಹು ನಿರೀಕ್ಷಿತ ಪ್ಯಾನ್-ಇಂಡಿಯಾ ಚಿತ್ರ ‘ಜೈ ಹನುಮಾನ್’ ಚಿತ್ರದ ಚಿತ್ರೀಕರಣಕ್ಕೆ ಭಾನುವಾರ ಪವಿತ್ರ ತಾಣವಾದ ಹಂಪಿಯ ಸಮೀಪದ ಅಂಜನಾದ್ರಿ ಬೆಟ್ಟದಲ್ಲಿ ಅದ್ಧೂರಿಯಾಗಿ ಚಾಲನೆ ನೀಡಲಾಯಿತು. ಹನುಮಂತನ ಜನ್ಮಸ್ಥಳವೆಂದೇ ಪ್ರಸಿದ್ಧಿಯಾಗಿರುವ ಈ ಪುಣ್ಯಕ್ಷೇತ್ರದಲ್ಲಿ ಚಿತ್ರತಂಡವು ವಿಶೇಷ ಪೂಜೆ ಸಲ್ಲಿಸುವ ಮೂಲಕ ಸಿನಿಮಾ ಪ್ರಕ್ರಿಯೆಗೆ ಚಾಲನೆ ನೀಡಿತು.
ಚಿತ್ರದ ನಾಯಕ ನಟ ರಿಷಬ್ ಶೆಟ್ಟಿ ಮತ್ತು ಪ್ರತಿಭಾವಂತ ನಿರ್ದೇಶಕ ಪ್ರಶಾಂತ್ ವರ್ಮ ಅವರು ದೈವಿಕ ಆಶೀರ್ವಾದವನ್ನು ಕೋರಿ ಶಾಸ್ತ್ರೋಕ್ತವಾಗಿ ಪೂಜೆ ನೆರವೇರಿಸಿದರು. ಈ ಸಂದರ್ಭದಲ್ಲಿ ಚಿತ್ರದ ತಾಂತ್ರಿಕ ವರ್ಗ ಹಾಗೂ ಚಿತ್ರರಂಗದ ಗಣ್ಯರು ಉಪಸ್ಥಿತರಿದ್ದು, ಒಂದು ಆಧ್ಯಾತ್ಮಿಕ ಮತ್ತು ಸಂಭ್ರಮದ ವಾತಾವರಣ ನಿರ್ಮಾಣವಾಗಿತ್ತು.

ಚಿತ್ರದ ಮೊದಲ ದೃಶ್ಯಕ್ಕೆ ಖ್ಯಾತ ನಿರ್ಮಾಪಕ ಭೂಷಣ್ ಕುಮಾರ್ ಅವರು ಕ್ಲಾಪ್ ಮಾಡುವ ಮೂಲಕ ಚಾಲನೆ ನೀಡಿದರೆ, ಹೆಸರಾಂತ ವಿತರಕ ಅನಿಲ್ ತಡಾನಿ ಅವರು ಕ್ಯಾಮೆರಾ ಸ್ವಿಚ್ ಆನ್ ಮಾಡಿದರು. ವಿಶೇಷವಾಗಿ, ‘ಹನುಮಾನ್’ ಚಿತ್ರದ ಯಶಸ್ವಿ ನಟ ತೇಜ ಸಜ್ಜ ಅವರು ಮೊದಲ ದೃಶ್ಯಕ್ಕೆ ಆ್ಯಕ್ಷನ್ ಕಟ್ ಹೇಳುವ ಮೂಲಕ ತಂಡಕ್ಕೆ ಶುಭ ಹಾರೈಸಿದರು.
ಕಾರ್ಯಕ್ರಮದ ಪ್ರಮುಖ ಘಟ್ಟವಾಗಿ ನಿರ್ಮಾಪಕರಾದ ನವೀನ್ ಯೆರ್ನೇನಿ, ರವಿಶಂಕರ್ ಯಲಮಂಚಿಲಿ, ಅನಿಲ್ ತಡಾನಿ ಮತ್ತು ಭೂಷಣ್ ಕುಮಾರ್ ಅವರು ಚಿತ್ರದ ಸ್ಕ್ರಿಪ್ಟ್ ಅನ್ನು ನಿರ್ದೇಶಕ ಪ್ರಶಾಂತ್ ವರ್ಮ ಅವರಿಗೆ ಹಸ್ತಾಂತರಿಸುವ ಮೂಲಕ ಅಧಿಕೃತವಾಗಿ ಚಿತ್ರದ ಕೆಲಸಗಳಿಗೆ ನಾಂದಿ ಹಾಡಿದರು.
*ಚಿತ್ರದ ತಾಂತ್ರಿಕ ವಿವರ*
ಈ ಪ್ಯಾನ್ ಇಂಡಿಯಾ ಚಿತ್ರದಲ್ಲಿ ರಿಷಬ್ ಶೆಟ್ಟಿ ನಾಯಕನಾಗಿ ನಟಿಸುತ್ತಿದ್ದರೆ, ಪ್ರಶಾಂತ್ ವರ್ಮ ನಿರ್ದೇಶನವಿರಲಿದೆ. ಆಸ್ಕರ್ ವಿಜೇತ ಸಂಯೋಜಕ ಎಂ. ಎಂ. ಕೀರವಾಣಿ ಅವರ ಸಂಗೀತ, ಎಸ್. ತಿರುನಾವಕ್ಕರಸು ಛಾಯಾಗ್ರಹಣವಿರಲಿದೆ.
ಮೈತ್ರಿ ಮೂವಿ ಮೇಕರ್ಸ್ ನಿರ್ಮಿಸುತ್ತಿರುವ ಈ ಚಿತ್ರವು ‘ಪ್ರಶಾಂತ್ ವರ್ಮ ಸಿನಿಮಾಟಿಕ್ ಯುನಿವರ್ಸ್’ (PVCU) ಅಡಿಯಲ್ಲಿ ಅದ್ಧೂರಿ ವೆಚ್ಚದಲ್ಲಿ ಮೂಡಿಬರಲಿದೆ. ಹನುಮಂತನ ಪಾತ್ರದಲ್ಲಿ ರಿಷಬ್ ಶೆಟ್ಟಿ ಅವರನ್ನು ನೋಡಲು ಅಭಿಮಾನಿಗಳು ತುದಿಗಾಲಿನಲ್ಲಿ ಕಾಯುತ್ತಿದ್ದಾರೆ.





