ಬೆಂಗಳೂರು ನಗರದಲ್ಲಿ ಇಂದು ಶಿಕ್ಷಣ, ಕಲೆ, ಸಂಸ್ಕೃತಿ ಮತ್ತು ನಾಗರಿಕ ಮೂಲಸೌಕರ್ಯಗಳ ಸಮನ್ವಯದ ಪ್ರತೀಕವಾಗಿ ಗುರುತಿಸಿಕೊಂಡಿರುವ ಪ್ರದೇಶಗಳಲ್ಲಿ ಶೇಷಾದ್ರಿಪುರ ಪ್ರಮುಖ ಸ್ಥಾನವನ್ನು ಪಡೆದಿದೆ. ಆದರೆ ಈ ಪ್ರದೇಶದ ಇತಿಹಾಸವನ್ನು ಹತ್ತಿರದಿಂದ ಗಮನಿಸಿದರೆ, ಇದು ಕೇವಲ ಒಂದು ಬಡಾವಣೆಯಲ್ಲ; ಮಹಾಮಾರಿಯನ್ನು ಎದುರಿಸಲು ರೂಪುಗೊಂಡ ದೂರದೃಷ್ಟಿಯ ನಗರ ಯೋಜನೆಯ ಜೀವಂತ ಸಾಕ್ಷಿಯಾಗಿದ್ದು ಶೇಷಾದ್ರಿಪುದರ ಸಂಪೂರ್ಣ ವಿವರಗಳನ್ನು ಬೆಂಗಳೂರಿನ ಇತಿಹಾಸ ಮಾಲಿಕೆಯಲ್ಲಿ ತಿಳಿಯೋಣ ಬನ್ನಿ. ಬೆಂಗಳೂರು ಇತಿಹಾಸದ ಹಿಂದಿನ ಮಾಲಿಕೆಗಳನ್ನು ಓದಲು ಈ ಲಿಂಕ್ ಮೇಲೆ ಕ್ಲಿಕ್ ಮಾಡಿ.
1898ರಲ್ಲಿ ಬೆಂಗಳೂರಿನಲ್ಲಿ ಬ್ಯೂಬೋನಿಕ್ ಪ್ಲೇಗ್ ಮಹಾಮಾರಿ ಭೀಕರವಾಗಿ ಹರಡಿತು. ಜನಸಂದಣಿಯಿಂದ ಕೂಡಿದ್ದ ಪೇಟೆ ಪ್ರದೇಶಗಳು ಹಾಗೂ ಕಂಟೋನ್ಮೆಂಟ್ ಭಾಗಗಳಲ್ಲಿ ರೋಗ ವೇಗವಾಗಿ ವ್ಯಾಪಿಸುತ್ತಿದ್ದ ಕಾರಣ, ಅಂದಿನ ಮೈಸೂರು ಸರ್ಕಾರವು ಜನರನ್ನು ಸುರಕ್ಷಿತವಾಗಿ ಸ್ಥಳಾಂತರಿಸಿ ಹೊಸ ವಸತಿ ಪ್ರದೇಶಗಳನ್ನು ನಿರ್ಮಿಸುವ ಅಗತ್ಯವನ್ನು ಮನಗಂಡಿತು.ಈ ಹಿನ್ನೆಲೆಯಲ್ಲಿ ಬಸವನಗುಡಿ, ಮಲ್ಲೇಶ್ವರಂ ಸೇರಿದಂತೆ ಹೊಸ ಬಡಾವಣೆಗಳನ್ನು ಯೋಜಿತವಾಗಿ ಅಭಿವೃದ್ಧಿಪಡಿಸಿ ಅಲ್ಲಿ ವಿಶಾಲ ರಸ್ತೆಗಳು, ಉತ್ತಮ ಗಾಳಿ–ಬೆಳಕು ಮತ್ತು ಆರೋಗ್ಯಕರ ವಾಸಸ್ಥಳಗಳೊಂದಿಗೆ ನಿರ್ಮಿಸಲಾದ ಪ್ರದೇಶವೇ ಇಂದಿನ ಶೇಷಾದ್ರಿಪುರ. ಇದು ಅಂದಿನ ಕಾಲಕ್ಕೆ ಅತ್ಯಾಧುನಿಕ ನಗರ ಯೋಜನೆಗಳ ಮಾದರಿಯಾಗಿತ್ತು ಎನ್ನುವುದು ಗಮನಾರ್ಹವಾಗಿದೆ.
1890ರ ದಶಕದ ಆರಂಭದಲ್ಲಿ ಈ ಪ್ರದೇಶವು ಪೇಟೆ ಮತ್ತು ಕಂಟೋನ್ಮೆಂಟ್ ನಡುವಿನ ಕೃಷಿಭೂಮಿಯಾಗಿತ್ತು. ನಂತರ ಮೈಸೂರು ಸರ್ಕಾರ ಅದನ್ನು ಯೋಜಿತ ವಸತಿ ಬಡಾವಣೆಯಾಗಿ ಅಭಿವೃದ್ಧಿಪಡಿಸಿದ ನಂತರ ಶೇಷಾದ್ರಿಪುರವು ಹಲವು ಆಧುನಿಕ ಸೌಲಭ್ಯಗಳನ್ನು ಮೊದಲಿಗರಾಗಿ ಕಂಡ ಪ್ರದೇಶಗಳಲ್ಲಿ ಒಂದಾಗಿದೆ.
* ಹೆಸರುಘಟ್ಟದಿಂದ ಕೊಳವೆ ಮಾರ್ಗದ ಮೂಲಕ ಕುಡಿಯುವ ನೀರು ಪೂರೈಕೆ.
* ಶಿವನಸಮುದ್ರ ಜಲವಿದ್ಯುತ್ ಯೋಜನೆಯಿಂದ ವಿದ್ಯುತ್ ಪಡೆದ ಬೆಂಗಳೂರಿನ ಆರಂಭಿಕ ಬಡಾವಣೆಗಳಲ್ಲಿ ಒಂದು.
* ಅಗಲವಾದ ರಸ್ತೆಗಳು, ಸಾರ್ವಜನಿಕ ಕಟ್ಟಡಗಳು ಮತ್ತು ಯೋಜಿತ ನಾಗರಿಕ ವಿನ್ಯಾಸ.

ಮೈಸೂರು ಸಂಸ್ಥಾನದ 15ನೇ ಮತ್ತು ಅತಿ ಹೆಚ್ಚು ಕಾಲ ದಿವಾನರಾಗಿದ್ದ(1883–1901) ಹೆಗ್ಗಳಿಯನ್ನು ಪಡೆದಿರುವಂತಹ ಕೆ. ಶೇಷಾದ್ರಿ ಅಯ್ಯರ್ ಅವರ ಸಾರಥ್ಯದಲ್ಲಿಯೇ ಬೆಂಗಳೂರಿನಲ್ಲಿ ಹತ್ತು ಹಲವಾರು ಯೋಜನೆಗಳು ರೂಪುಗೊಂಡ ಪರಿಣಾಮ ಶೇಷಾದ್ರಿ ಐಯ್ಯರ್ ಅವರನ್ನು ಆಧುನಿಕ ಬೆಂಗಳೂರಿನ ನಿರ್ಮಾಪಕ ಎಂದು ವ್ಯಾಪಕವಾಗಿ ಪರಿಗಣಿಸಲಾಗಿದೆ. ಅದೇ ರೀತಿಯಾಗಿ ಈ ಹೊಸಾ ವಸತಿ ಪ್ರದೇಶದ ನೀಲ ನಕ್ಷೆ ತಯಾರಿಸುವ ಆರಂಭದಿಂದಲೂ ಹಿಡಿದು ಅ ಬಡಾವಣೆಯನ್ನು ಅರ್ಹ ನಾಗರೀಕರಿಗೆ ಹಂಚಿಕೆ ಮಾಡುವವರೆಗೂ ಜವಾಬ್ಧಾರಿಯನ್ನು ನಿಭಾಯಿಸಿದ್ದ ಕೆ. ಶೇಷಾದ್ರಿ ಅಯ್ಯರ್ ಅವರ ಸೇವೆಯನ್ನು ಸ್ಮರಿಸಲು ಮತ್ತು ಗೌರವಿಸಲು ಅಂದಿನ ಮಹಾರಾಜರಾಗಿದ್ದಂತಹ ಶ್ರೀ ಚಾಮರಾಜೇಂದ್ರ ಒಡೆಯರ್ ಅವರು ಆ ಪ್ರದೇಶಕ್ಕೆ ಶೇಷಾದ್ರಿಪುರ ಎಂದೇ ಹೆಸರಿಸಿದ ಜನರ ಆಡು ಭಾಷೆಯಲ್ಲಿ ಅದು ಶೇಷಾದ್ರಿಪುರಂ ಆಗಿ ಹೋಗಿರುವುದು ವಿಶೇಷವಾಗಿದೆ.
ಶೇಷಾದ್ರಿಪುರ ಆಧುನಿಕ ಬೆಂಗಳೂರಿನ ಅತ್ಯಂತ ಹಳೆಯ ಯೋಜಿತ ವಿಸ್ತರಣಾ ಬಡಾವಣೆಗಳಲ್ಲಿ ಒಂದಾಗಿದ್ದು, ಆಡಳಿತ ಭವನ ವಿಧಾನಸೌಧದಿಂದ ಕೂಗಳತೆ ದೂರದಲ್ಲಿದ್ದರೂ, ಯಾವುದೇ ರಾಜಕೀಯ ಗಂಧಗಾಳಿಯನ್ನೂ ಸೋಕಿಸಿಕೊಳ್ಳದೇ, ಆರ್ಥಿಕವಾಗಿ ಮತ್ತು ಶೈಕ್ಷಣಿಕವಾಗಿ ಬಹಳ ಮುಂದುವರೆದ ಪ್ರದೇಶವಾಗಿದ್ದು ಅಲ್ಲಿರುವ ವಿವಿಧ ಶಿಕ್ಷಣ ಸಂಸ್ಥೆಗಳಿಂದಾಗಿ ಶಿಕ್ಷಣದ ರಾಜಧಾನಿ ಎಂದೇ ಪ್ರಖ್ಯಾತಿಯನುಪಡೆದಿರುವುದು ಗಮನಾರ್ಹವಾಗಿದೆ.





