ನಾನು 32 ವರ್ಷದ ಯುವತಿ. ನನಗೆ ಎರಡನೇ ಮದುವೆ ಆಗಿದೆ. ಮೊದಲ ವಿವಾಹದ 2 ತಿಂಗಳ ಬಳಿಕ ಗಂಡ ಅಪಘಾತದಲ್ಲಿ ತೀರಿಹೋದ. ನಾನು ಮತ್ತೆ ವಿವಾಹವಾಗಲು ಇಚ್ಛಿಸುತ್ತಿರಲಿಲ್ಲ. ಆದರೆ ಮನೆಯವರ ಆಗ್ರಹದಿಂದ ಮದುವೆಯಾದೆ. ಗಂಡನ ಜೊತೆಗಿನ ಸಮಾಗಮದಿಂದ ನನಗೆ ತೃಪ್ತಿಯಾಗುತ್ತಿಲ್ಲ. ಮೊದಲ ಪತಿಯ ಜೊತೆಗಿನ ಲೈಂಗಿಕ ಜೀವನ ಸುಖಕರವಾಗಿತ್ತು. ಆದರೆ ಇವರಲ್ಲಿ ಯಾವುದೇ ದೋಷವಿಲ್ಲ ಅಂತ ನನಗೆ ಅನಿಸುತ್ತದೆ.
ನೀವೇ ಸೃಷ್ಟಿಸಿಕೊಂಡಿರುವ ಸಮಸ್ಯೆ ಇದು. ನಿಮ್ಮ ಪತಿ ಸಾಮಾನ್ಯವಾಗಿದ್ದಾರೆ. ನಿಮ್ಮ ಅತೃಪ್ತಿಗೆ ಕಾರಣ ಹಿಂದಿನ ಪತಿಯ ಜೊತೆ ಹೋಲಿಕೆ ಮಾಡುವ ದೃಷ್ಟಿಕೋನವಾಗಿದೆ. ಈ ಧೋರಣೆ ಬಿಟ್ಟು ನೀವು ಅವರ ಜೊತೆ ಸಮಾಗಮ ನಡೆಸಿದರೆ ನಿಮ್ಮ ಲೈಂಗಿಕ ಜೀವನ ಸುಖಕರವಾಗಿರುತ್ತದೆ.
ನಾನು 17 ವರ್ಷದ ಯುವತಿ. ನನ್ನ ಅಕ್ಕನಿಗೆ 21 ದಾಟಿದ್ದು, ಆಕೆಗೆ ಇಬ್ಬರು ಹುಡುಗರ ಮದುವೆ ಪ್ರಸ್ತಾಪಗಳು ಬಂದಿದ್ದವು. ಮೊದಲನೆ ಹುಡುಗ ಬಹಳ ಸುಂದರ, ಸ್ಮಾರ್ಟ್ ಹಾಗೂ ಒಳ್ಳೆಯ ಬಿಸ್ ನೆಸ್ ಮ್ಯಾನ್ ಆಗಿದ್ದಾನೆ. ಅವನ ಮನೆತನ ಸಾಕಷ್ಟು ಶ್ರೀಮಂತವಾಗಿದೆ. ಒಟ್ಟಾರೆ ಹೇಳಬೇಕೆಂದರೆ ಆ ಹುಡುಗ ನನ್ನ ಅಕ್ಕನಿಗೆ ಪರ್ಫೆಕ್ಟ್ ಮ್ಯಾಚ್ ಆಗಿದ್ದಾನೆ ಆದರೆ ಜಾತಕ ಮದುವೆಗೆ ಅಡ್ಡಿಯಾಗಿದೆ. ಎರಡನೇ ಹುಡುಗ ಸುಂದರ ಸ್ಮಾರ್ಟ್ ಕೂಡ ಇಲ್ಲ. ಅವನ ಮನೆತನ ಅಷ್ಟಕ್ಕಷ್ಟೆ. ಅವನ ಜಾತಕ ಅಕ್ಕನ ಜಾತಕದೊಂದಿಗೆ ಮ್ಯಾಚ್ ಆಗಿದೆ. ಹೀಗಾಗಿ ನಮ್ಮ ಅಜ್ಜಿ ಎರಡನೇ ಹುಡುಗನ ಜೊತೆಗೆ ಮದುವೆ ಮಾಡಬೇಕೆಂದು ಹೇಳುತ್ತಿದ್ದಾರೆ. ನನ್ನ ಅಕ್ಕನಿಗೆ ಈ ಸಂಬಂಧ ಬಿಲ್ಕುಲ್ ಇಷ್ಟವಿಲ್ಲ. ಆದರೆ ಮನೆಯವರು ಮಾತ್ರ ಗೊಂದಲದಲ್ಲಿದ್ದಾರೆ. ಜಾತಕಕ್ಕೆ ವಿರುದ್ಧವಾಗಿ ಮೊದಲ ಗಂಡಿನ ಜೊತೆಗೆ ಮದುವೆಯಾದರೆ, ಏನಾದರೂ ಘಟಿಸಬಾರದ್ದು ಘಟಿಸಬಹುದೆಂದು ಹೇಳುತ್ತಿದ್ದಾರೆ. ಇದೇ ಭಯದಿಂದ ಒಬ್ಬ ಒಳ್ಳೆಯ ಹುಡುಗನನ್ನು ಒಪ್ಪಿಕೊಳ್ಳಲು ನಿರಾಕರಿಸುತ್ತಿದ್ದಾರೆ. ನಾನು ಅವರಿಗೆ ಹೇಗೆ ಅರ್ಥ ಮಾಡಿಸಲಿ?
ಖೇದದ ಸಂಗತಿಯೆಂದರೆ, ಇಂದಿನ ವೈಜ್ಞಾನಿಕ ಯುಗದಲ್ಲೂ ಜನರು ಮೂಢನಂಬಿಕೆಗೆ ಅದೆಷ್ಟು ಬಲಿಯಾಗಿಬಿಟ್ಟಿದ್ದಾರೆಂದರೆ, ಪೂಜಾರಿ ಪುರೋಹಿತರು ಹಾಗೂ ಜ್ಯೋತಿಷಿಗಳು ಹೇಳಿದ್ದನ್ನು ನಂಬಿ ತಮ್ಮ ಮಕ್ಕಳ ಭವಿಷ್ಯನ್ನು ಹಾಳುಗೆಡವುತ್ತಿದ್ದಾರೆ. ನಿಮ್ಮ ತಂದೆತಾಯಿಗಳು ಅನಕ್ಷರಸ್ಥರೇನಲ್ಲ. ಅವರು ನಿಮ್ಮ ಅಜ್ಜಿಗೆ ಈ ಜಾತಕಗಳ ಮುಖಾಂತರ ಮದುವೆ ಹೊಂದಿಸುವುದು ಮೂಢನಂಬಿಕೆ, ಅದು ಜ್ಯೋತಿಷಿಗಳ ಕುಟಿಲ ಕೈವಾಡ ಎಂದು ಹೇಳಿ ಅವರ ಮನಸ್ಸನ್ನು ಬದಲಿಸಬಹುದಿತ್ತು. ಜಾತಕ ಹೊಂದಿಸಿ ಮಾಡಿದ ಅನೇಕ ಮದುವೆಗಳು ಮುರಿದುಬಿದ್ದಿವೆ. ಅದೇ ರೀತಿ ಇದಾವುದನ್ನು ನಂಬದೆ ಮಾಡಿದ ಮದುವೆಗಳು ಯಶಸ್ವಿಯಾದ ಉದಾಹರಣೆಗಳು ಸಾಕಷ್ಟಿವೆ. ಇವೆಲ್ಲ ಸಂಗತಿಗಳನ್ನು ಅಜ್ಜಿಗೆ ತಾರ್ಕಿಕವಾಗಿ ಅರ್ಥವಾಗುವಂತೆ ಹೇಳಿ ಮೊದಲನೆ ಹುಡುಗನ ಜೊತೆ ನಿಮ್ಮಕ್ಕನ ಮದುವೆ ಮಾಡಲು ಮನವೊಲಿಸಿ.
ನಾನು 51 ವರ್ಷದ ಮಹಿಳೆ. 2 ವರ್ಷದ ಮೊದಲೇ ಮುಟಂತ್ಯ ಆಗಿಬಿಟ್ಟಿದೆ. ಆಗಿನಿಂದ ನನ್ನಲ್ಲಿ ಲೈಂಗಿಕ ಇಚ್ಛೆ ಹೆಚ್ಚಾಗಿದೆ. ಮೊದಲು ನಾವು ಯಾವಾಗಾದರೊಮ್ಮೆ ಸಮಾಗಮ ನಡೆಸುತ್ತಿದ್ದೆವು. ಆದರೆ ಈಗ ದಿನ ಮನಬಯಸುತ್ತದೆ. ನನ್ನಲ್ಲಾದ ಬದಲಾವಣೆಯ ಬಗ್ಗೆ ಪತಿ ಖುಷಿಗೊಂಡಿದ್ದಾರೆ. ಆದರೆ ನನಗೆ ಇದು ಯಾವುದಾದರೂ ರೋಗದ ಲಕ್ಷಣವೇ ಎಂದು ಆತಂಕವಾಗುತ್ತಿದೆ.
ಮುಟ್ಟಂತ್ಯದ ಬಳಿಕ ಗರ್ಭ ನಿಲ್ಲುವ ಸಾಧ್ಯತೆಯೇ ಇರುವುದಿಲ್ಲ. ಹಾಗಾಗಿ ಸ್ತ್ರೀಯರು ನಿಶ್ಚಿಂತರಾಗಿ ಲೈಂಗಿಕ ಬಯಕೆಯನ್ನು ಈಡೇರಿಸಿಕೊಳ್ಳುತ್ತಾರೆ. ನೀವು ಪರಿಪೂರ್ಣವಾಗಿ ಸಾಮಾನ್ಯವಾಗಿರುವಿರಿ. ಹೀಗಾಗಿ ನಿಮ್ಮ ಮನಸ್ಸಿನಿಂದ ಅಪರಿಚಿತ ಕಾಯಿಲೆಯನ್ನು ಹೊರಹಾಕಿ ಸೆಕ್ಸ್ ಲೈಫ್ ನ ಆನಂದ ಅನುಭವಿಸಿ.
ನಾನು 25 ವರ್ಷದ ಯುವತಿ. ನನ್ನ ನಿಶ್ಚಿತಾರ್ಥ ಆಗಿದೆ. ನನ್ನ ಭಾವಿ ಪತಿ ಎಂಜಿನಿಯರ್. ನಾನು ಹೆಚ್ಚು ಮಾತನಾಡುವ ಸ್ವಭಾವದವಳು. ಆದರೆ ನನ್ನ ಭಾವಿ ಪತಿ ಮಿತಭಾಷಿ, ಸಂಕೋಚ ಸ್ವಭಾವದವರು. ನಿಶ್ಚಿತಾರ್ಥ ಸಮಯದಲ್ಲಿ ನಾನು ನನ್ನ ಗೆಳತಿಯರು ಸಾಕಷ್ಟು ಹರಟೆ ಹೊಡೆದೆವು. ಆದರೆ ಅವರು ಮಾತ್ರ ಅಳೆದುತೂಗಿ ಮಾತನಾಡಿದರು. ಅವರು ಬಾಲ್ಯದಿಂದಲೇ ಹಾಗಿದ್ದಾರೆಂದು ಅವರ ಮನೆಯವರು ಹೇಳಿದರು. 1-2 ಸಲ ನಾನು ಮತ್ತು ಅವರು ಹೊರಗಡೆ ಸುತ್ತಾಡಲು ಹೋಗಿದ್ದೆವು. ಅಲ್ಲೂ ಸಹ ಅವರು ಹೆಚ್ಚಿಗೆ ಮಾತನಾಡಲಿಲ್ಲ. ನಾನು ಕೇಳಿದ್ದಕ್ಕಷ್ಟೇ ಉತ್ತರಿಸುತ್ತಿದ್ದರು. ವಿವಾಹದ ಬಳಿಕ ನನ್ನ ಮತ್ತು ಅವರ ನಡುವೆ ಹೊಂದಾಣಿಕೆ ಆಗಬಹುದೇ?
ನಿಮ್ಮ ಭಾವಿ ಪತಿ ಸ್ವಲ್ಪ ಅಂತರ್ಮುಖಿ ಸ್ವಭಾವದವರಾಗಿದ್ದಾರೆ. ಕೆಲವರ ಸ್ವಭಾವವೇ ಹಾಗಿರುತ್ತದೆ. ಅವರಿಗೆ ಹೆಚ್ಚು ಮಾತನಾಡಲು ಇಷ್ಟವಾಗುವುದಿಲ್ಲ. ಅದರಲ್ಲೂ ವಿಶೇಷವಾಗಿ ಮಹಿಳೆಯರಿಗೆ ಹೋಲಿಸಿದಲ್ಲಿ ಪುರುಷರು ಹೆಚ್ಚು ಅಂತರ್ಮುಖಿಗಳು ಆಗಿರುತ್ತಾರೆ. ಹೀಗಾಗಿ ನೀವು ಮದುವೆಯ ಬಳಿಕ ಗಂಡನ ಜೊತೆ ಹೇಗೆ ಹೊಂದಾಣಿಕೆ ಮಾಡಿಕೊಳ್ಳುವುದು ಎಂದು ಈಗಲೇ ಚಿಂತೆಗೀಡಾಗಬೇಡಿ. ಅಂತರ್ಮುಖಿಯಾಗಿದ್ದಾರೆಂಬ ಕಾರಣಕ್ಕೆ ಪತಿಯಿಂದ ನಿಮಗೆ ಪ್ರೀತಿ ಸಿಗುವುದಿಲ್ಲ ಎಂದು ಭಾವಿಸಲೂ ಹೋಗಬೇಡಿ. ನೀವು ನಿಶ್ಚಿಂತರಾಗಿ ಮದುವೆ ಸಿದ್ಧತೆಯಲ್ಲಿ ತೊಡಗಿ.
ನಾನು 20 ವರ್ಷದ ಯುವತಿ. ಮದುವೆಯಾಗಿ 6 ತಿಂಗಳಾಯಿತು. ಈಗ ತವರುಮನೆಯಲ್ಲಿರುವೆ. ಮದುವೆಯ ಬಳಿಕ ಪ್ರಸ್ತದಂದು ನನಗೆ ರಕ್ತಸ್ರಾವವಾಯಿತು. ವಿಪರೀತ ನೋವು ಕೂಡ ಉಂಟಾಯಿತು. ನನ್ನ ಪತಿಗೆ 30 ವರ್ಷ. ಅವರಿಗೆ ಹೆಚ್ಚು ವಯಸ್ಸಾಗಿರುವ ಕಾರಣದಿಂದ ನನಗೆ ಅಷ್ಟೊಂದು ನೋವಾಯಿತೆ? ನಾನು ಬೇರಾರಿಗೂ ಈ ಪ್ರಶ್ನೆ ಕೇಳಲು ಸಾಧ್ಯವಿಲ್ಲ. ಹಾಗಾಗಿ ನಿಮ್ಮ ಬಳಿ ಕೇಳುತ್ತಿರುವೆ. ದಯವಿಟ್ಟು ಈ ನನ್ನ ಸಮಸ್ಯೆಗೆ ಉತ್ತರಿಸಿ.
ಪ್ರಸ್ತದ ದಿನದಂದು ಮೊದಲ ಬಾರಿ ಸಮಾಗಮ ನಡೆಸಿದಾಗ ರಕ್ತಸ್ರಾವ ಹಾಗೂ ನೋವು ಉಂಟಾಗುವುದು ಸಹಜ. ಗಂಡನಿಗೆ ವಯಸ್ಸು ಹೆಚ್ಚಾಗಿರುವುದು ಇದಕ್ಕೆ ಕಾರಣವಲ್ಲ. ಹೀಗಾಗಿ ಮನಸ್ಸನ್ನು ಪೂರ್ವಾಗ್ರಹಪೀಡಿತರಾಗಿಸಿಕೊಳ್ಳಬೇಡಿ. ಸಮಾಗಮ ಪ್ರತಿಸಲ ಕಷ್ಟಕರವಾಗಿರುವುದಿಲ್ಲ. ಗಂಡಹೆಂಡತಿ ತನುಮನದಿಂದ ಸಮಾಗಮ ಪ್ರಕ್ರಿಯೆಯಲ್ಲಿ ಲೀನರಾದರೆ ಸಮಾಗಮ ಖುಷಿದಾಯಕವಾಗಿಯೇ ಇರುತ್ತದೆ. ಮಾರುಕಟ್ಟೆಯಲ್ಲಿ ಈ ಕುರಿತಂತೆ ಡಾ. ಅನುಪಮಾ ನಿರಂಜನ, ಡಾ. ಅನ್ನಪೂರ್ಣಮ್ಮ, ಡಾ. ಲೀಲಾವತಿ ದೇವದಾಸ್ ಮುಂತಾದವರು ಬರೆದ ಅನೇಕ ಪುಸ್ತಕಗಳು ಲಭ್ಯವಿದ್ದು ಉತ್ತಮ ಪುಸ್ತಕ ಕೊಂಡು ನಿಮ್ಮ ಲೈಂಗಿಕ ಜ್ಞಾನ ಹೆಚ್ಚಿಸಿಕೊಳ್ಳಬಹುದು.