ನೀವು ವಿವಾಹಿತರಿರಬಹುದು ಅಥವಾ ವಿವಾಹ ನಿಶ್ಚಿತರಾದವರು, ನಿಮಗೆ ಅತ್ತೆ ಮನೆಯ ಬಗ್ಗೆ ಅಷ್ಟಿಷ್ಟು ಭಯ ಇದ್ದೇ ಇರುತ್ತದೆ. ಎಷ್ಟೋ ಸಲ ಈ ಭಯ ಚಿಂತೆಯ ರೂಪ ಪಡೆದುಕೊಳ್ಳುತ್ತದೆ. ಆದರೆ ಸಮಸ್ಯೆ ಶುರುವಾಗುವುದು ಹುಡುಗಿಯ ಮನಸ್ಸಿನಲ್ಲಿ ಅತ್ತೆಯ ಮನೆಯವರ ಬಗ್ಗೆ ನಕಾರಾತ್ಮಕ ರೂಪ ಪಡೆದುಕೊಂಡ ಬಳಿಕ. ಇಂತಹ ಸ್ಥಿತಿಯಲ್ಲಿ ಆಕೆ ಯಾವುದೇ ಆಧಾರವಿಲ್ಲದೆ ಅತ್ತೆ ಮನೆಯ ಲೋಪದೋಷಗಳನ್ನು ಹುಡುಕತೊಡಗುತ್ತಾಳೆ.
ಮ್ಯಾರೇಜ್ ಕೌನ್ಸಿಲರ್ ಅನುರಾಧಾ ಹೀಗೆ ಹೇಳುತ್ತಾರೆ, ``ಹುಡುಗಿಯರ ಮನಸ್ಸಿನಲ್ಲಿ ಅತ್ತೆ ಮನೆಯ ಕುರಿತು ಭಯ ಇರುವುದು ಸ್ವಾಭಾವಿಕ ಸಂಗತಿ. ಆದರೆ ಒಮ್ಮೊಮ್ಮೆ ಆ ಭಯ ಎಷ್ಟೊಂದು ವಿಕೃತ ರೂಪ ಪಡೆದುಕೊಳ್ಳುತ್ತದೆಂದರೆ, ಹುಡುಗಿ ತನ್ನನ್ನು ತಾನು ಅತ್ಯಂತ ಹೀನಾಯ ಸ್ಥಿತಿಯಲ್ಲಿರುವ ಬಗ್ಗೆ ಯೋಚಿಸಿ ಅತ್ತೆ ಮನೆಯವರು ತನಗೆ ಏನೇನು ಕಷ್ಟ ಕೊಡಬಹುದು, ಏನಾಗಬಹುದು ಎಂದು ಕಲ್ಪಿಸಿಕೊಂಡು ಚಿಂತಿಸುತ್ತಾಳೆ. ಹೆಚ್ಚಿನ ಹುಡುಗಿಯರು ನಕಾರಾತ್ಮಕವಾಗಿಯೇ ಯೋಚಿಸುತ್ತಾರೆ. ಇದಕ್ಕೆ ಈ ಕಾರಣಗಳಿರಬಹುದು. ಮೊದಲನೆಯದು, ಹುಡುಗಿ ಅತ್ತೆ ಮನೆಯವರ ಬಗ್ಗೆ ಸಂಪೂರ್ಣವಾಗಿ ಚೆನ್ನಾಗಿ ತಿಳಿದುಕೊಂಡಿರಬೇಕು. ಎರಡನೆಯದು, ಆಕೆ ತನ್ನ ಅತ್ತೆ ಮನೆಯವರ ಬಗ್ಗೆ ಏನೇನೂ ಗೊತ್ತಿರುವುದಿಲ್ಲ.''
ಎರಡೂ ಸ್ಥಿತಿಗಳಲ್ಲಿ ಬೇರೆ ಬೇರೆ ಬಗೆಯ ಚಿಂತೆಗಳು ಆಕೆಯನ್ನು ಸುತ್ತುವರೆಯಬಹುದು. ಅಂತಹುದೇ ಕೆಲವು ಚಿಂತೆಗಳನ್ನು ನಿವಾರಿಸುವ ವಿಧಾನಗಳನ್ನು ಇಲ್ಲಿ ಕೊಡಲಾಗಿದೆ.
ವ್ಯಕ್ತಪಡಿಸಲಾಗದ ಭಯ
ಅತ್ತೆ ಮನೆ ಅಂದರೆ ಅದು ಹೊಸ ಸ್ಥಳ, ಹೊಸ ಜನರು ಭೇಟಿಯಾಗುವ ಜಾಗ, ಹೀಗಾಗಿ ಆಕೆಗೆ ಗೊತ್ತಿಲ್ಲದಿರುವ ಒಂದು ಭಯ ಇರುತ್ತದೆ. ಆ ಮನೆಯ ಯಾವುದೇ ಒಬ್ಬ ಸದಸ್ಯರ ಮುಂದೆ ತನ್ನ ಮನದ ಬಯಕೆ, ತೊಂದರೆ ಮತ್ತು ಭಾವನೆಗಳನ್ನು ವ್ಯಕ್ತಪಡಿಸಲು ಸಂಕೋಚ ಉಂಟಾಗುತ್ತದೆ. ಉದಾರಹಣೆಗಾಗಿ ನವ ವಧುವನ್ನು ಮನೆ ತುಂಬಿಸಿಕೊಳ್ಳುವ ಶಾಸ್ತ್ರ. ಇಂದರಿಂದ ಅನೇಕ ಲಾಭಗಳು ಇವೆ, ಕೆಲವೊಂದು ತೊಂದರೆಗಳೂ ಇವೆ. ಅದರಿಂದಾಗುವ ಲಾಭವೇನೆಂದರೆ, ಮನೆಯ ಹೊಸ ಸದಸ್ಯಳಾದ ಆಕೆ ಮನೆಯ ಎಲ್ಲ ಸಂಬಂಧಿಕರ ಜೊತೆ ಮಾತನಾಡುವ ಹಾಗೂ ಅವರ ಊರುಗಳಿಗೆಲ್ಲ ಹೋಗುವ ಅವಕಾಶ ಲಭಿಸುತ್ತದೆ. ಇದರಿಂದಾಗುವ ಒಂದು ತೊಂದರೆಯೆಂದರೆ, ಸಿಕ್ಕಾಪಟ್ಟೆ ದಣಿದು ಹೋದ ನವ ವಧು ಜನಸಮೂಹದ ನಡುವೆ ಅಸಹಜತೆಯ ಅನುಭೂತಿ ಮಾಡಿಕೊಳ್ಳಬಹುದು. ಇಂತಹ ಸ್ಥಿತಿಯಲ್ಲಿ ಅವಳು ತನ್ನ ಮನಸ್ಸಿನ ನೋವನ್ನು ಯಾರಿಗೆ ಹೇಳಿಕೊಳ್ಳಬೇಕು?
ಇಂತಹ ಶಾಸ್ತ್ರದ ಹೊರತಾಗಿ ಇನ್ನೂ ಅನೇಕ ವಿಧಿವಿಧಾನಗಳಿದ್ದು, ಅಂತಹ ಸಂದರ್ಭದಲ್ಲಿ ಅತ್ತೆ ಮನೆಯವರ ಎದುರು ತನ್ನ ಭಾವನೆಗಳನ್ನು ಹಂಚಿಕೊಳ್ಳಲು ಆಗುವುದಿಲ್ಲ. ಅವರು ಕೇಳಿದ ಪ್ರಶ್ನೆಗಳಿಗೆ `ಹೌದು' ಅಥವಾ `ಇಲ್ಲ' ಎಂದಷ್ಟೇ ಉತ್ತರ ಹೇಳುತ್ತಾಳೆ.
ಡಾ. ಸಂಧ್ಯಾ ಈ ಕುರಿತಂತೆ ಹೀಗೆ ಹೇಳುತ್ತಾರೆ, ``ಮದುವೆಯ ಆರಂಭದ ದಿನಗಳಲ್ಲಿ ಪ್ರತಿಯೊಬ್ಬ ಯುವತಿ ಈ ಎಲ್ಲ ತೊಂದರೆಗಳನ್ನು ಎದುರಿಸಬೇಕಾಗಿ ಬರುತ್ತದೆ. ಆದರೆ ಇದು ಖಾಯಂ ಸಮಸ್ಯೆಯಲ್ಲ. ಮೊದಲನೆಯದು, ತನ್ನ ಮನಸ್ಸಿನ ಮಾತನ್ನು ಹೇಳಿಕೊಳ್ಳುವುದು ತಪ್ಪೇನೂ ಅಲ್ಲ. ಅದನ್ನು ಹೇಳಬೇಕಾದ ರೀತಿಯಲ್ಲಿ ಹೇಳಿದರೆ, ಯಾರೇ ಆಗಲಿ ಅದನ್ನು ಕೇಳಿಸಿಕೊಳ್ಳುತ್ತಾರೆ. ಆ ಬಳಿಕ ಅತ್ತೆ ಮನೆಯಲ್ಲಿ ಕ್ರಮೇಣ ತನ್ನ ಅಭಿಪ್ರಾಯಗಳನ್ನು ವ್ಯಕ್ತಪಡಿಸುತ್ತ ಹೋಗುವುದು ಸಹಜವಾಗುತ್ತದೆ. ತನ್ನ ಮಾತನ್ನು ಯಾರೂ ಒಪ್ಪಲಿಕ್ಕಿಲ್ಲ ಎಂದು ಅಂದುಕೊಳ್ಳುವುದು ತಪ್ಪು.''