ಇತ್ತೀಚಿನ ದಿನಗಳಲ್ಲಿ `ಸೆಲೆಬ್ರಿಟಿ ಬ್ರೇಕ್‌ಅಪ್‌’ ಹೆಚ್ಚು ಸುದ್ದಿ ಮಾಡುತ್ತಿವೆ. ಸಲ್ಮಾನ್‌ ಕತ್ರೀನಾ ಕೈಫ್‌, ಬಿಪಾಶಾ ಜಾನ್‌ಅಬ್ರಹಾಂ ಆಕಸ್ಮಿಕ ಎಂಬಂತೆ ಬೇರೆ ಬೇರೆಯಾದರು. ಮಲೈಕಾ ಹಾಗೂ ಅರ್ಬಾಜ್ ಕೂಡ ಬೇರೆ ಬೇರೆಯಾಗಿ ಬಹು ದೊಡ್ಡ ಅಚ್ಚರಿ ಮೂಡಿಸಿದರು. ಕಿರುತೆರೆಯ ಹೆಸರಾಂತ ನಟ ಕರಣ್‌ ಗ್ರೋವರ್‌ ಮೊದಲ ಪತ್ನಿಗೆ ವಿಚ್ಛೇದನ ಕೊಟ್ಟ. ಬಳಿಕ ಜೆನಿಫರ್‌ಳೊಂದಿಗೆ ಮದುವೆ, ನಂತರ ವಿಚ್ಛೇದನ ಪಡೆದ. ಬಳಿಕ ಬಿಪಾಶಾ ಬಸು ಜೊತೆ ಮದುವೆ. ಅದಾದರೂ ಎಷ್ಟು ದಿನ? ನಾವು ಯಾರಾದರೂ ಸೆಲೆಬ್ರಿಟಿಗಳನ್ನು ನೋಡಿದಾಗ ಎಂತಹ ಅದ್ಭುತ ಜೋಡಿ ಅನಿಸುತ್ತದೆ. ಕೆಲವೇ ದಿನಗಳ ಬಳಿಕ ಆ ಜೋಡಿ ಈಗ ಜೊತೆಗಿಲ್ಲ ಎಂಬ ಸುದ್ದಿ ಬರುತ್ತದೆ. ಹೀಗಾಗಿ ಆಧುನಿಕ ಸಂಬಂಧಗಳ ಬಗೆಗಿನ ನಂಬಿಕೆಯೇ ಹೊರಟು ಹೋಗುತ್ತಿದೆ. ಹೃತಿಕ್‌ ರೋಶನ್‌ ಸುಜೈನಾ ಜೊತೆ ವಿವಾಹವಾದಾಗ ಹಲವರ ಹೃದಯ ಚೂರು ಚೂರಾಗಿತ್ತು. ಈಗ ಅವರು ಪ್ರತ್ಯೇಕಗೊಂಡಿದ್ದಾರೆ.

ಹಾಲಿವುಡ್‌ನ ಬ್ರಾಡ್‌ಫಿಟ್‌ ಮತ್ತು ಜೆನಿಫರ್‌ ಜೋಡಿ ಒಂದು ರೀತಿಯಲ್ಲಿ ಮಾದರಿಯಂತಿತ್ತು. ಆದರೆ ಏಂಜಲಿನಾ ಜೊತೆ ಬ್ರಾಡ್‌ಫಿಟ್‌ ಸಂಬಂಧ ಶುರುವಾದಾಗ ಅವರಿಬ್ಬರ ಬ್ರೇಕ್‌ಅಪ್‌ ಆಯಿತು. ಬೆನ್‌ಹಿಜಿನ್‌ ಸಾರೆನ್‌ ಬುಶ್‌ನೆ್‌, ಕೆಟೊಪೆರೊಓ್ಯಾಂಡೊ ಬ್ಲೂವ್‌, ರಿಚಡ್‌ ಪ್ಯಾರಿಜೆನ್‌ಘೇಂಡಾ, ನಿಕಿಮಿನಾಜ್‌ ಮಾಕ್‌ಮಿ್‌ ಇವರ ಬ್ರೇಕ್‌ಅಪ್ಸ್ ಎಲ್ಲರನ್ನೂ ಚಕಿತಗೊಳಿಸಿದವು.

ಟಿವಿಯ ಹೆಸರಾಂತಾ ನಟಿ ದಿವ್ಯಾಂಕಾ ತ್ರಿಪಾಠಿ ಮತ್ತು ಶರದ್‌ ಮಲ್ಹೋತ್ರಾ `ಬನೂ ಮೈ ತೇರಿ ದುಲ್ಹನ್‌’ ಧಾರಾವಾಹಿಯ ಸೆಟ್‌ನಲ್ಲಿ ಭೇಟಿ ಆಗಿದ್ದರು. ಅವರ ಸಂಬಂಧ 7 ವರ್ಷಗಳ ಕಾಲ ಮುಂದುವರಿಯಿತು. ಆದರೆ ಒಂದು ದಿನ ಆ ಸಂಬಂಧ ತುಂಡರಿಸಿಯೇ ಹೋಯಿತು. ಕರಣ್‌ ಪಟೇಲ್ ಹಾಗೂ ಕಾಮ್ಯಾ ಪಂಜಾಬಿಯ ಸಂಬಂಧ ಕೂಡ ಸಾಕಷ್ಟು ಚರ್ಚೆಯಲ್ಲಿತ್ತು. ಆದರೆ ಸಂಬಂಧದಲ್ಲಿ ಆಕಸ್ಮಿಕವಾಗಿ ಬಂದ ಮನಸ್ತಾಪದಿಂದಾಗಿ ಆ ಸಂಬಂಧ ಮುರಿದು ಬಿತ್ತು. ಬಳಿಕ ಕರಣ್‌, ಅಂಕಿತಾ ಭಾರ್ಗವ್ ಜೊತೆಗೆ ವಿಜೃಂಭಣೆಯಿಂದ ಮದುವೆಯಾದ.

ಸಾಮಾನ್ಯರಲ್ಲೂ ಹೆಚ್ಚುತ್ತಿರುವ ಬ್ರೇಕ್‌ಅಪ್‌

ಹೆಸರಾಂತ ವ್ಯಕ್ತಿಗಳ ಮದುವೆ ಮುರಿದುಬೀಳುವ ಸುದ್ದಿಗಳು ಆಗಾಗ ಕೇಳಿ ಬರುತ್ತಿರುತ್ತವೆ. ಇಂತಹದರಲ್ಲಿ ಜನಸಾಮಾನ್ಯರು ಹೇಗೆ ಎಂದು ಯೋಚನೆ ಮಾಡಿದರೆ, ಅವರ ಜೀವನದಲ್ಲೂ ಬ್ರೇಕ್‌ಅಪ್‌ ಘಟನೆಗಳು ನಡೆಯುತ್ತಿರುವುದು ಗಮನಕ್ಕೆ ಬರುತ್ತದೆ.  ಎಷ್ಟು ವೇಗವಾಗಿ ಲವ್ ಮಾಡುತ್ತಾರೋ, ಅಷ್ಟೇ ವೇಗವಾಗಿ ಅವರ ಪ್ರೀತಿ ಮುರಿದು ಬೀಳುತ್ತಿದೆ.

ಮೈಸೂರಿನ ಜಯಾ ಮತ್ತು ಪ್ರಶಾಂತ್‌  4 ವರ್ಷದಿಂದ ಪ್ರೀತಿಸುತ್ತಿದ್ದರು. ಇಬ್ಬರ ಮದುವೆಯ ಬಗೆಗೂ ಚರ್ಚೆ ನಡೆದಿತ್ತು. ಇಬ್ಬರ ಜಾತಿ ಬೇರೆ ಬೇರೆ. ಇಬ್ಬರ ಕುಟುಂಬಗಳು ಆಧುನಿಕ ಮನೋಭಾದವರು ಆಗಿದ್ದರಿಂದ ಮದುವೆ ನಡೆಯಬಹುದೆಂಬ ತರ್ಕ ಮಾಡಲಾಗಿತ್ತು. ಆದರೆ ಜಯಾಳ ಕುಟುಂಬದವರು ಇದಕ್ಕೆ ಒಪ್ಪಲಿಲ್ಲ. ಹೀಗಾಗಿ ಜಯಾ ಪ್ರಶಾಂತ್‌ನಿಂದ ದೂರ ಇರಲಾರಂಭಿಸಿದಳು. ಜಯಾಳ ನಿರ್ಧಾರ ಎಲ್ಲರಿಗೂ ಆಶ್ಚರ್ಯವನ್ನುಂಟು ಮಾಡಿತ್ತು. ಕುಟುಂಬದವರ  ವಿರೋಧ ಕಟ್ಟಿಕೊಂಡು ನಾವ್ಯಾಕೆ ಮದುವೆಯಾಗಬೇಕು? ಎಂಬ ತರ್ಕವನ್ನು ಜಯಾ ಮುಂದಿಟ್ಟಳು.

ಕೇಳಲು ಇದು ಒಂದು ಸಾಮಾನ್ಯ ಘಟನೆ ಎಂಬಂತೆ ಅನಿಸುತ್ತದೆ. ಜಯಾಳ ವ್ಯಾವಹಾರಿಕ ದೃಷ್ಟಿಕೋನ ಪ್ರಶಾಂತನ ಹೃದಯವನ್ನು ಚೂರು ಚೂರು ಮಾಡಿತು. ಅವನು ಹಲವು ದಿನಗಳ ಕಾಲ ಅದೇ ನೋವಿನಲ್ಲಿದ್ದ. ಆರು ತಿಂಗಳ ಬಳಿಕ ಅವಳು ಬೇರೆ ಹುಡುಗನ ಜೊತೆ ಮದುವೆಯಾದಳು. ಜೀವನದಲ್ಲಿ ಮುಂದೆ ಸಾಗುವುದು ತಪ್ಪಲ್ಲ. ಆದರೆ ಇಂದಿನ  ಆಧುನಿಕ ಯುಗದಲ್ಲಿ ಸಂಬಂಧದ ಎಳೆಗಳು ಅಷ್ಟೇಕೆ ದುರ್ಬಲವಾಗಿವೆ?

ಸಂಬಂಧ ನಿಭಾಯಿಸುವುದು ಇತ್ತೀಚಿನ ದಿನಗಳಲ್ಲಿ ಏಕೆ ಕಷ್ಟವಾಗುತ್ತಿದೆ? ನಾವು ಪ್ರೀತಿಸುವುದನ್ನು ಮರೆತೇಬಿಟ್ಟಿದ್ದೇವಾ? ಅದಕ್ಕಿಂತಲೂ ವಿಷಾದದ ಸಂಗತಿಯೇನೆಂದರೆ ಪ್ರೇಮ ಎಂದರೇನು ಎಂಬುದನ್ನು ತಿಳಿದುಕೊಳ್ಳುವುದನ್ನೇ ಮರೆತುಬಿಟ್ಟಿದ್ದೇವೆ. ಇತ್ತೀಚಿನ ವರ್ಷಗಳಲ್ಲಿ ಸಂಬಂಧಗಳು ಏಕೆ ತುಂಡರಿಸುತ್ತಿವೆ? ಅದರ ಕಾರಣಗಳ ಮೇಲೊಮ್ಮೆ ಕಣ್ಣು ಹರಿಸಿ :

ನಾವು ತ್ಯಾಗಕ್ಕಾಗಿ, ಹೊಂದಾಣಿಕೆಗಾಗಿ, ಯಾವುದೇ ಷರತ್ತಿಲ್ಲದೆ ಪ್ರೀತಿ ಮಾಡಲು ಸಿದ್ಧರಿಲ್ಲ. ಎಲ್ಲ ಸಂಗತಿಗಳು ಸುಲಭವಾಗಿ ಆಗಬೇಕೆನ್ನುವವರು ನಾವು. ಒಂಥರಾ ನಾವು ಪಲಾಯನ ವಾದಿಗಳು. ಪ್ರೀತಿ ಚಿಗುರಲು ಅವಕಾಶವನ್ನೇ ಕೊಡೋದಿಲ್ಲ. ಅವಧಿಗೆ ಮುನ್ನವೇ ಎಲ್ಲವನ್ನು ಪಡೆದುಕೊಳ್ಳಲು ಇಚ್ಛಿಸುತ್ತೇವೆ. ಇಲ್ಲವೇ ಹಾಗೆಯೇ ಬಿಟ್ಟುಬಿಡುತ್ತೇವೆ.

ನಾವು ಯಾವ ಪ್ರೀತಿಯನ್ನು ಹುಡುಕಾಡುತ್ತಿರುತ್ತೇವೆ, ಅದು ವಾಸ್ತವದಲ್ಲಿ ಇಲ್ಲವೇ ಇಲ್ಲ. ನಾವು ಜೀವನದಲ್ಲಿ ಉತ್ತೇಜನ ಮತ್ತು ರೋಮಾಂಚನದ ಅಪೇಕ್ಷೆಯಲ್ಲಿದ್ದೇವೆ. ನಮಗೆ ಸಿನಿಮಾ ನೋಡಲು, ಪಾರ್ಟಿಗೆ ಹೋಗಲು ಜೊತೆಗೊಬ್ಬರು ಬೇಕು ಅಷ್ಟೇ. ನಮ್ಮ ಮೌನದ ಅರ್ಥವನ್ನು ಯಾರಾದರೂ ತಿಳಿದುಕೊಳ್ಳಬೇಕು ಎಂದು ನಾವು ಬಯಸುವುದೇ ಇಲ್ಲ. ನಾವು ಜೊತೆ ಜೊತೆಗೆ ಸಮಯ ಕಳೆಯುತ್ತೇವೆ. ಆದರೆ ನೆನಪುಗಳನ್ನು ಮೆಲುಕು ಹಾಕುವುದಿಲ್ಲ. ನಮಗೆ ಬೋರಿಂಗ್‌ ಲೈಫ್‌ ಬೇಕಿಲ್ಲ. ನಾವು ಯಾವುದೇ ರಹಸ್ಯದ ಬಗ್ಗೆ ನಂಬುವುದಿಲ್ಲ. ಏಕೆಂದರೆ ನಮಗೆ ರೋಮಾಂಚನವೇ ಎಲ್ಲ ಆಗಿದೆ.

ನಮಗೆ ಪ್ರೀತಿಸಲು ಸಮಯವೇ ಇಲ್ಲ. ಸಂಬಂಧಗಳನ್ನು ನಿಭಾಯಿಸುವ ಧೈರ್ಯವೇ ಉಡುಗಿ ಹೋಗಿದೆ. ನಾವು ಭೌತಿಕತೆಯ ಕನಸು ಕಾಣುವವರೇ ಆಗಿಬಿಟ್ಟಿದ್ದೇವೆ. ಸಂಬಂಧ ಎನ್ನುವುದು ಒಂದು ಸೌಲಭ್ಯ ಎಂಬಂತಾಗಿಬಿಟ್ಟಿದೆ.

ನಮಗೆ ಪ್ರತಿಯೊಂದು ಸಂಗತಿಯಲ್ಲೂ ತಕ್ಷಣವೇ ಖುಷಿ ಸಿಗಬೇಕು. ಅದು ಆನ್‌ಲೈನ್‌ ಹಾಕಿರುವ ಸಂದೇಶವೇ ಆಗಿರಬಹುದು ಅಥವಾ ಕೆರಿಯರ್‌ ವಿಷಯವೇ ಆಗಿರಬಹುದು ಅಥವಾ ನಾವು ಯಾರನ್ನಾದರೂ ಪ್ರೀತಿಸುತ್ತಿರಬಹುದು. ಸಂಬಂಧದಲ್ಲಿ ಗಾಂಭೀರ್ಯ ಕಾಲಕ್ರಮೇಣ ಬರುತ್ತೆ.

ಇನ್ನೊಬ್ಬ ವ್ಯಕ್ತಿಯ ಜೊತೆ ಹೊಂದಿಕೊಳ್ಳಲು ಸಾಕಷ್ಟು ಸಮಯ ತಗುಲುತ್ತದೆ. ಈಗ ಪ್ರೀತಿಗಾಗಿ ಸಮಯ ಹಾಗೂ ಧೈರ್ಯದ ಕೊರತೆ ಇದೆ.

ನಾವು ಪರ್ಯಾಯಗಳಲ್ಲಿ ವಿಶ್ವಾಸ ಉಳ್ಳವರಾಗಿದ್ದೇವೆ. ನಾವು ಸೋಶಿಯಲ್ ಜನ. ನಾವು ಅವರನ್ನು ತಿಳಿದುಕೊಳ್ಳುವ ಬದಲು ಅವರನ್ನು ಭೇಟಿಯಾಗಲು ಬಯಸುತ್ತೇವೆ.

ನಮ್ಮದು ದುರಾಸೆಯ ಪ್ರವೃತ್ತಿ. ನಮ್ಮನ್ನು ಆಕರ್ಷಿತಗೊಳಿಸುವವರು ಸಿಕ್ಕಿಬಿಟ್ರೆ ಸಂಬಂಧಕ್ಕೆ ಹಸಿರು ನಿಶಾನೆ ತೋರಿಸುತ್ತೇವೆ. ಮೊದಲಿಗಿಂತ ಸ್ವಲ್ಪ ಒಳ್ಳೆಯವರು ಸಿಕ್ಕರೆ ಹಳಬರನ್ನು ಮರೆತುಬಿಡುತ್ತೇವೆ.

ತಂತ್ರಜ್ಞಾನ ನಮ್ಮನ್ನು ಬಹಳ ಹತ್ತಿರ ತಂದಿದೆ. ಅದೆಷ್ಟು ಹತ್ತಿರವೆಂದರೆ ನಾವು ಉಸಿರು ತೆಗೆದುಕೊಳ್ಳುವುದು ಕೂಡ ಕಷ್ಟವಾಗಿದೆ. ಶಬ್ದಗಳ ವಿನಿಮಯ, ವಾಯ್ಸ್ ಕಾಲ್‌, ವಿಡಿಯೋ ಕಾಲ್‌ಗಳ ಮೂಲಕ ನಾವು ಸಂಪರ್ಕದಲ್ಲಿರುತ್ತೇವೆ. ಆದರೆ ಪರಸ್ಪರ ಭೇಟಿಯಾಗಲು ಅಪೇಕ್ಷೆಪಡುವುದಿಲ್ಲ. ನಮಗೆ ಪರಸ್ಪರರ ಬಗ್ಗೆ ಮೊದಲೇ ಸಾಕಷ್ಟು ಮಾಹಿತಿ ಇರುತ್ತದೆ. ಹೀಗಾಗಿ ಮಾತನಾಡಲು ಏನೂ ವಿಷಯವೇ ಇರುವುದಿಲ್ಲ.

ಪ್ರೀತಿ ಹಾಗೂ ಸೆಕ್ಸ್ ಎರಡನ್ನೂ ಬೇರೆ ಬೇರೆ ಎಂದು ಪರಿಗಣಿಸಲಾಗುತ್ತದೆ. ಸೆಕ್ಸ್ ಈಗ ಸುಲಭ, ಆದರೆ ನಿಷ್ಠೆಯಿಂದಿರುವುದು ಕಠಿಣ ಎಂಬಂತಾಗಿದೆ. ಸಂಬಂಧದ ಹೊರತಾಗಿ ಸೆಕ್ಸ್ ಈಗ ದೊಡ್ಡ ವಿಷಯವೇನಲ್ಲ. ಪ್ರೀತಿ ಮಾತ್ರ ನಮ್ಮ ಜೀವನದಲ್ಲಿ ಸೀಮಿತವಾಗಿ ಉಳಿದುಬಿಟ್ಟಿದೆ.

ಇದು ವ್ಯಾವಹಾರಿಕ ಪೀಳಿಗೆ. ಅದಕ್ಕೆ ತರ್ಕ ಗೊತ್ತು. ನಮಗೆ ಹುಚ್ಚುತನ ಎನ್ನುವಷ್ಟರ ಮಟ್ಟಿಗೆ ಪ್ರೀತಿಸಲು ಬರುವುದಿಲ್ಲ. ನಾವು ನಮ್ಮ ಹಿತಾಸಕ್ತಿಗಳನ್ನು ಗಮನಿಸಿಕೊಂಡೇ ಯಾವುದಾದರೂ ಹೆಜ್ಜೆ ಇಡುತ್ತೇವೆ. ಪ್ರೀತಿಯ ಹುಚ್ಚಿನಲ್ಲಿ ಯಾರ ಹಿಂದಾದರೂ ಹೋಗಲು ಈಗ ಯಾರ ಬಳಿಯೂ ಸಮಯವಿಲ್ಲ.

ನಾವು ಪ್ರೀತಿಯಲ್ಲಿ ಕಮಿಟ್‌ಮೆಂಟ್‌ ಮತ್ತು ಬ್ರೇಕ್‌ಅಪ್‌ ಆಗುವ ಬಗ್ಗೆ ಹೆದರುತ್ತೇವೆ. ನಾವು ಯಾರದೊ ಪ್ರೀತಿಯಲ್ಲಿ ಮುಳುಗಿ ನಮ್ಮ ಜೀವನವನ್ನು ಹಾಳು ಮಾಡಿಕೊಳ್ಳಲು ಇಷ್ಟಪಡುವುದಿಲ್ಲ.

ಮನುಷ್ಯನ ಅತ್ಯವಶ್ಯ ಗುಣ ಪ್ರೀತಿ. ನಾವು ಕ್ರಮೇಣ ಆ ಶಬ್ದದ ಮಹತ್ವವನ್ನು ಮರೆಯುತ್ತ ಸಾಗಿದ್ದೇವೆ. ಇಂದಿನ ಆಧುನಿಕ ಯುಗದಲ್ಲಿ ಪ್ರೀತಿಯ ಅಸ್ತಿತ್ವ, ಮಹತ್ವವನ್ನೇ ಮರೆಯುತ್ತಿರುವುದು ವಿಚಾರ ಮಾಡಬೇಕಾದ ಸಂಗತಿ. ಸಂಬಂಧದಲ್ಲಿ ಪ್ರೀತಿ, ಸಹಕಾರ, ಸಮರ್ಪಣೆ ಕಳೆದುಹೋಗದಂತೆ ಎಚ್ಚರವಹಿಸಬೇಕು. ಜೀವನ ಯಾಂತ್ರಿಕವಾಗಬಾರದು. ಜೀವನ ಎಂಬ ಸಸಿಗೆ ಪ್ರೀತಿ ಎಂಬ ಆಧಾರ ದೊರಕಬೇಕು. 

– ಪೂರ್ಣಿಮಾ ಆನಂದ್‌

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ