ನಾವೆಲ್ಲರೂ ಚಿಕ್ಕವಯಸ್ಸಿನಿಂದಲೂ ಕುಲವಧು ಚಿತ್ರದಲ್ಲಿ, ಪ್ರಬುದ್ಧ ನಟಿ ಲೀಲಾವತಿಯವರ ಅಭಿನಯಿಸಿರುವ ದ. ರಾ. ಬೇಂದ್ರೆಯವರ ಈ ಕವನವನ್ನು ಕೇಳಿಯೇ ದೊಡ್ಡವರಾಗಿದ್ದೇವೆ.
ಯುಗ ಯುಗಾದಿ ಕಳೆದರೂ, ಯುಗಾದಿ ಮರಳಿ ಬರುತಿದೆ |
ಹೊಸ ವರುಷಕೆ ಹೊಸ ಹರುಷವ ಹೊಸತು ಹೊಸತು ತರುತಿದೆ. ||
ವರುಷಕೊಂದು ಹೊಸತು ಜನ್ಮ ಹರುಷಕೊಂದು ಹೊಸತು ನೆಲೆಯು ಅಖಿಲ ಜೀವಜಾತಕೆ
ಒಂದೇ ಒಂದು ಜನ್ಮದಲಿ ಒಂದೇ ಬಾಲ್ಯ, ಒಂದೇ ಹರೆಯ ನಮಗದಷ್ಟೇ ಏತಕೋ. ||
ಈ ಕವನದಲ್ಲಿ ಕವಿಗಳು ಪ್ರತೀ ಫಾಲ್ಗುಣ ಮಾಸದಲ್ಲಿ ಪ್ರಕೃತಿಯಲ್ಲಿ ಗಿಡಮರಗಳ ಎಲೆಗಳೆಲ್ಲಾ ಉದುರಿ ಹೋಗಿ, ಮತ್ತೆ ಚೈತ್ರ ಮಾಸದಲ್ಲಿ ಚಿಗುರುವ ಮೂಲಕ ನಿರಂತರವಾಗಿ ಹೊಸಾ ಜನ್ಮವನ್ನು ಪಡೆಯುತ್ತಲೇ ಇರುತ್ತದೆ. ಆದರೆ ಮನುಷ್ಯರಿಗೆ ಮಾತ್ರ ಒಂದೇ ಜನ್ಮ, ಒಂದೇ ಬಾಲ್ಯ, ಒಂದೇ ಹರೆಯ ಎಂದು ಬೇಸರ ವ್ಯಕ್ತ ಪಡಿಸುತ್ತಾರೆ. ಹಾಗಾಗಿ ನಮ್ಮ ಜೀವನದಲ್ಲಿ ಗತಿಸಿ ಹೋದ ಪ್ರತೀ ಕ್ಷಣಗಳೂ ಅಮೂಲ್ಯವೇ ಆಗಿರುವ ಕಾರಣ ಪ್ರತಿಯೊಂದು ಸುಂದರ ಕ್ಷಣಗಳನ್ನೂ ಆಹ್ವಾದಿಸಬೇಕು ಎನ್ನುವುದೇ ಕವಿಗಳ ಆಶಯವಾಗಿದೆ.

ಅದರಲ್ಲೂ ನಮ್ಮ ಬಾಲ್ಯದ ದಿನಗಳಂತೂ ನಮ್ಮ ಜೀವನದಲ್ಲಿ ಅತ್ಯಮೂಲ್ಯವೇ ಹೌದು. ಒಮ್ಮೆ ಬಾಲ್ಯ ಕಳೆದು ಪ್ರೌಢಾವಸ್ಥೆಗೆ ಬರುತ್ತಿದ್ದಂತೆಯೇ ಆ ಬಾಲ್ಯದ ಮುಗ್ಧ ಮನಸ್ಸು, ಭಾವನೆಗಳು ಎಲ್ಲವೂ ಬದಲಾಗಿ ಎಲ್ಲವೂ ವ್ಯಾವಹಾರಿಕವಾಗಿ ಬಿಡುತ್ತಿರುವುದು ನಿಜಕ್ಕೂ ವಿಪರ್ಯಾಸವೇ ಸರಿ. ಹಾಗಾಗಿ ಬಾಲ್ಯದಲ್ಲಿ ಆದಷ್ಟೂ ಮನೆಯಲ್ಲಿಯೇ ಇದ್ದು ಅಪ್ಪಾ, ಅಮ್ಮಾ, ಅಣ್ಣಾ, ತಂಗಿ, ಅಜ್ಜ, ಅಜ್ಜಿ ಚಿಕ್ಕಪ್ಪ, ಚಿಕ್ಕಮ್ಮ, ಅತ್ತೆ ಮಾವ, ನೆರೆ ಹೊರೆಯವರೊಂದಿಗೆ ಆಟವಾಡುತ್ತಾ, ನೋಡಿದ್ದನ್ನು ಕೇಳಿದ್ದನ್ನು ಅನುಕರಿಸುತ್ತಾ, ಮುದ್ದು ಮುದ್ದಾಗಿ ಮಾತನಾಡುತ್ತಾ, ಲೋಕ ಜ್ಞಾನವನ್ನು ಗ್ರಹಿಸುತ್ತಾ ಹೋಗುವುದು ನಿಜಕ್ಕೂ ಅನನ್ಯ ಮತ್ತು ಅದ್ಭುತವೇ ಸರಿ.

ಚಿಕ್ಕಮಕ್ಕಳ ಗ್ರಹಿಕೆ ಬಹಳ ಚೆನ್ನಾಗಿ ಇರುತ್ತದೆ ಮತ್ತು ಚಿಕ್ಕವಯಸ್ಸಿನಲ್ಲಿ ಕಲಿತದ್ದು ಎಷ್ಟು ವರ್ಷಗಳ ಕಾಲವೂ ಮರೆಯುವುದಿಲ್ಲ. ಅದೇ ರೀತಿ ಸಣ್ಣ ವಯಸ್ಸಿನಲ್ಲಿ ಮಕ್ಕಳು ಹೆಚ್ಚು ಹೆಚ್ಚು ವಿಷಯಗಳನ್ನು ಅತ್ಯಂತ ಕಡಿಮೆ ಸಮಯದಲ್ಲಿ ಕಲಿಯುತ್ತಾರೆ ಎನ್ನುವುದಕ್ಕಾಗಿಯೇ ಸಾಮಾನ್ಯವಾಗಿ ಬಹುತೇಕ ಮನೆಗಳಲ್ಲಿ ಸಣ್ಣ ಸಣ್ಣ ಮಕ್ಕಳಿಗೆ ಶ್ಲೋಕಗಳು, ದೇವರ ನಾಮಗಳು, ಭಗವದ್ಗೀತೆ, ವಿವಿಧ ದೇವರುಗಳ ಸುಪ್ರಭಾತಗಳ ಜೊತೆಗೆ ರಾಮಾಯಣ ಮಹಾಭಾರತ, ಶ್ರೀ ಕೃಷ್ಣ, ಬಾಲ ಹನುಮಾನ್, ಗಣೇಶನ ಕತೆಗಳನ್ನು ಮಕ್ಕಳಿಗೆ ತಿಳಿಸಿ ಕೊಡುವುದು ರೂಢಿಯಲ್ಲಿದೆ. . ಆಷ್ಟು ಸಣ್ಣ ವಯಸ್ಸಿನಲ್ಲಿ ತೊದಲು ನುಡಿಗಳಲ್ಲಿ ಅ ಪುಟ್ಟ ಪುಟ್ಟ ಮಕ್ಕಳು ಹಾಡು, ಸಂಗೀತ, ಶ್ಲೋಕಗಳನ್ನು ಹೇಳುವುದನ್ನು ಅದಕ್ಕೆ ಸರಿಯಾಗಿ ನೃತ್ಯ ಇಲ್ಲವೇ ಅಭಿನಯಿಸುವುದನ್ನು ವರ್ಣಿಸುವುದಕ್ಕಿಂತಲೂ ನೋಡುವುದಕ್ಕೇ ಮಹದಾನಂದ. ಹಾಗಾಗಿಯೇ ಹಿಂದಿನ ಕಾಲದಲ್ಲಿ ಮಕ್ಕಳು ಏಳೆಂಟು ವರ್ಷಗಳ ಕಾಲ ಅಮ್ಮನ ಎದೆ ಹಾಲನ್ನೇ ಕುಡಿಯುತ್ತಾ ಅಮ್ಮನ ಸೆರಗನ್ನು ಹಿಡಿದುಕೊಂಡು ಅಮ್ಮನ ಸುತ್ತಮುತ್ತಲೇ ಗಿರಕಿ ಹೊಡೆಯುತ್ತಲೇ ಬಹಳಷ್ಟು ವಿಷಯಗಳನ್ನು ಕಲಿಯುತ್ತಿದ್ದರಿಂದಲೇ, ಮನೆಯೇ ಮೊದಲ ಪಾಠ ಶಾಲೆ, ತಾಯಿ ತಂದೆಯರೇ ಮೊದಲ ಗುರುಗಳು ಎಂಬ ಗಾದೆ ಮಾತು ರೂಢಿಗೆ ಬಂದಿತು.
ಆದರೆ ಇತ್ತೀಚಿನ ದಿನಗಳಲ್ಲಿ ಬಹುತೇಕ ಕುಟುಂಬಗಳು ವಿಭಕ್ತ ಕುಟುಂಬಗಳಾಗಿ ಇಂದಿನ ದುಬಾರಿ ಜೀವನವನ್ನು ಸರಿದೂಗಿಸಲು ತಂದೆ ಮತ್ತು ತಾಯಿ ಇಬ್ಬರೂ ಕೆಲಸಕ್ಕೆ ಹೋಗುವ ಕಾರಣ, ಮಕ್ಕಳಿಗೆ 2 ವರ್ಷ ತುಂಬುತ್ತಿದ್ದಂತೆಯೇ ಹತ್ತಿರದ ಪ್ಲೇಹೋಮ್ ಇಲ್ಲವೇ ಶಿಶುವಿಹಾರ (ನರ್ಸರಿ)ಕ್ಕೆ ಸೇರಿಸಿ ಮಕ್ಕಳ ಕಲಿಕೆಯ ಜವಾಬ್ಧಾರಿಯೆಲ್ಲಾ ಆ ಶಾಲೆಯ ಶಿಕ್ಷಕ/ಶಿಕ್ಷಕಿಯರದ್ದೇ ಆಗಿದೆ ಎಂದು ಭಾವಿಸಿರುವವರೇ ಹೆಚ್ಚಾಗಿದ್ದಾರೆ. ಅತ್ಯಂತ ಸಣ್ಣ ವಯಸ್ಸಿನಲ್ಲಿಯೇ ತಾಯಿಯ ಆಶ್ರಯದಿಂದ ವಂಚಿತವಾದ ಆ ಮಕ್ಕಳು ಸರಿಯಾದ ರೀತಿಯಲ್ಲಿ ಬಾಲ್ಯವನ್ನು ಸವಿಯಲಾಗದೇ 2-3 ವಯಸ್ಸಿನಲ್ಲೇ ಕನ್ನಡ, ಇಂಗ್ಲೀಷ್ ಹಿಂದಿ ಹೀಗೆ ಹತ್ತು ಹಲವಾರು ಭಾಷೆಗಳನ್ನು ಓದಲು ಬರೆಯಲು ಕಲಿಯುವುದರ ಜೊತೆಗೆ ಗಣಿತ, ವಿಜ್ಞಾನ ಮತ್ತು ಸಮಾಜ ಶಾಸ್ತ್ರಗಳ ಪರಿಚಯವನ್ನು ಮಾಡಿಕೊಳ್ಳುವ ಮೂಲಕ ಅನಗತ್ಯವಾಗಿ ತಮ್ಮ ಬಾಲ್ಯದ ಸವಿಯನ್ನೇ ಅನುಭವಿಸದೇ ಹೋಗುವುದು ನಿಜಕ್ಕೂ ಬೇಸರದ ಸಂಗತಿಯಾಗಿದೆ. ಇನ್ನು ಮೊಬೈಲ್ ಮತ್ತು ಕಂಪ್ಯೂಟರ್ ಗೇಮ್ ಗಳಿಂದಾಗಿ ಮಕ್ಕಳು ಸ್ವಚ್ಚಂದವಾಗಿ ಆಟದ ಮೈದಾನಗಳಲ್ಲಿ ಆಡುವುದೇ ಇಲ್ಲದ ಕಾರಣ ಸಣ್ಣ ಸಣ್ಣ ವಯಸ್ಸಿಗೇ ನಾನಾ ಮಕ್ಕಳು ಸ್ಥೂಲಕಾಯರಾಗಿ ಕಣ್ಣಿನ ವಿವಿಧ ರೀತಿಯ ತೊಂದರೆಗಳನ್ನು ಅನುಭವಿಸಬೇಕಾಗಿರುವುದು ನಿಜಕ್ಕೂ ಕಳವಳಕಾರಿಯಾಗಿದೆ.





