ದೀರ್ಘಕಾಲದಿಂದ ಡೇಟಿಂಗ್‌ ಮಾಡುತ್ತಿದ್ದ ದೀಪಿಕಾ ಪಡುಕೋಣೆ ಮತ್ತು ರಣವೀರ್‌ಸಿಂಗ್‌ ಕಡೆಗೆ ವಿವಾಹ ಬಂಧನದಿಂದ ಒಂದಾದರು. ವಿನಯ ಮತ್ತು ಸೌಮ್ಯ ಸ್ವಭಾವದ ನಟಿ ದೀಪಿಕಾ ಹಾಗೂ ಚಂಚಲ ಮತ್ತು ನೇರನುಡಿಯ ನಟ ರಣವೀರ್‌ ಸಿಂಗ್‌ರ ಜೋಡಿ ಪ್ರತಿಯೊಬ್ಬರ ಕಣ್ಸೆಳೆಯುವಂತಿದೆ. ಅಲ್ಲದೆ ಮತ್ತೇನು, ಇವರಿಬ್ಬರ ಜೋಡಿಯನ್ನು ರೀಲ್‌ ಲೈಫ್‌ನಲ್ಲಲ್ಲದೆ ರಿಯಲ್ ಲೈಫ್‌ನಲ್ಲಿಯೂ ಒಟ್ಟಿಗೆ ನೋಡಲು ಜನರು ಇಷ್ಟಪಡುತ್ತಾರೆ.

ಇವರಿಬ್ಬರು ತಮ್ಮ ವಿವಾಹದ ತಾರೀಖನ್ನು ಕಳೆದ ವರ್ಷದ ನವೆಂಬರ್‌ 14 ಮತ್ತು 15ಕ್ಕೆ ನಿಗದಿಪಡಿಸಿದಾಗ, ಅದರಿಂದ ಯಾರಿಗೂ ಆಶ್ಚರ್ಯವಾಗಲಿಲ್ಲ. ಕಳೆದ  5-6 ವರ್ಷಗಳಿಂದ ಡೇಟಿಂಗ್‌ ನಡೆಸುತ್ತಿದ್ದ ಇವರ ರಿಲೇಶನ್‌ಶಿಪ್‌ ಹೊಸ ಹೆಸರನ್ನು ಪಡೆಯಲಿತ್ತು. ಎಲ್ಲರ ನಿರೀಕ್ಷೆಯಂತೆ ದಕ್ಷಿಣ ಕರಾವಳಿಯ ಕನ್ನಡತಿ ದೀಪಿಕಾ ಕೊಂಕಣಿ ಸಂಪ್ರದಾಯದಂತೆಯೂ ಮತ್ತು ಸಿಂಧಿ ಪಂಜಾಬಿಯವರಾದ ರಣವೀರ್‌ ಸಿಂಗ್‌ ಸಿಂಧಿ ಸಂಪ್ರದಾಯದಂತೆಯೂ ವಿವಾಹ ಬಂಧನದಲ್ಲಿ ಒಂದಾದರು.

ರೋಮಾಂಚಕ ಪ್ರೀತಿಯ ಕಥೆ 2013ರಲ್ಲಿ ಬಿಡುಗಡೆಯಾದ ದೀಪಿಕಾ ರಣವೀರ್‌ ಅಭಿನಯದ `ರಾಮ್ ಲೀಲಾ’ ಚಿತ್ರದ ರೊಮ್ಯಾನ್ಸ್ ಫಿಲ್ಮಂ ಶೂಟಿಂಗ್‌ನೊಂದಿಗೆ ಅವರ ರಿಯಲ್ ಲೈಫ್‌ನ ಪ್ರೀತಿ ಪ್ರಾರಂಭವಾಯಿತೆಂದು ಹೇಳಬಹುದು.

ಇದು ಇವರಿಬ್ಬರು ಜೊತೆಯಾಗಿ ನಟಿಸಿದ ಮೊದಲ ಚಿತ್ರ. ಈ ಚಿತ್ರದ ನಂತರ ಈ ಜೋಡಿಯ ತೆರೆಯ ಮೇಲೆ ಮತ್ತು ತೆರೆಯ ಹೊರಗೂ ಕಾಣಿಸಿಕೊಳ್ಳತೊಡಗಿತು.

ಈ ಜೋಡಿಯನ್ನು ಸಿನಿಪ್ರಿಯರು ಬಹಳವಾಗಿ ಮೆಚ್ಚಿದರು. ಫಿಲ್ಮಂ ಮೇಕರ್‌ ಸಂಜಯ್‌ ಲೀಲಾ ಬನ್ಸಾಲಿ ಇದರ ಲಾಭ ಪಡೆಯುವಲ್ಲಿ ಯಶಸ್ವಿಯಾದರು. ಈ ತಾರಾ ಜೋಡಿಯನ್ನು ಹಾಕಿಕೊಂಡು 3 ಹಿಟ್‌ ಫಿಲ್ಮಂಗಳಾದ `ರಾಮ್ ಲೀಲಾ, ಬಾಜಿರಾವ್‌ ಮಸ್ತಾನಿ, ಪದ್ಮಾವತ್‌’ ಚಿತ್ರಗಳನ್ನು ನಿರ್ಮಿಸಿದರು. ಪ್ರೆಸ್‌ ಕಾನ್ಛರೆನ್ಸ್ ಒಂದರಲ್ಲಿ ಪತ್ರಕರ್ತರ ಪ್ರಶ್ನೆಗೆ ಅವರು ಉತ್ತರಿಸುತ್ತಾ, “ಅವರಿಬ್ಬರ ಮಧ್ಯೆ ಏನು ನಡೆಯುತ್ತಿದೆ ಎಂದು ನನಗೆ ಗೊತ್ತಿಲ್ಲ. ಆದರೆ ಅವರ ಕೆಮಿಸ್ಟ್ರಿ ತೆರೆಯ ಮೇಲೆ ಅದ್ಭುತವಾಗಿ ತೋರುತ್ತದೆ. ಅದನ್ನು ಶೂಟಿಂಗ್‌ ಮಾಡಲು ಬಹಳ ಚೆನ್ನಾಗಿರುತ್ತದೆ,” ಎಂದು ಹೇಳಿದರು.

ಲವ್ ಅಟ್‌ ಫಸ್ಟ್ ಸೈಟ್‌

ತಮ್ಮ ಪ್ರೀತಿಯ ಬಗ್ಗೆ ರಣವೀರ್‌ ಸಿಂಗ್‌ ಒಂದು ಇಂಟರ್‌ವ್ಯೂನಲ್ಲಿ ಹೇಳಿಕೊಂಡದ್ದು ಹೀಗೆ. ಅವನು ದೀಪಿಕಾಳನ್ನು ತನ್ನ ಜನ್ಮದಿನದ ಸಂದರ್ಭದಲ್ಲಿ ಒಂದು ಸಿಲ್ವರ್‌ ಕಲರ್‌ ಗೌನ್‌ನಲ್ಲಿ ಮೊದಲ ಬಾರಿಗೆ ನೋಡಿದ್ದ. ಆ ಮೊದಲ ನೋಟದಲ್ಲಿಯೇ ಅವನಿಗೆ ಪ್ರೀತಿ ಹುಟ್ಟಿತು. ಆ ಗೌನ್‌ನಲ್ಲಿ  ದೀಪಿಕಾ ಅತ್ಯಂತ ಸುಂದರವಾಗಿ ಕಾಣುತ್ತಿದ್ದಳು. ದೀಪಿಕಾ ತನ್ನ ಜೀವನದಲ್ಲಿ ಬಂದುದು ದೊಡ್ಡ ವಿಷಯ ಎಂದೂ ಅವನು ಹೇಳಿದ.

ದೀಪಿಕಾ ಸಹ ಹಲವಾರು ಇಂಟರ್‌ವ್ಯೂಗಳಲ್ಲಿ ರಣವೀರ್‌ನ ಪ್ರಶಂಸೆ ಮಾಡಿರುವುದುಂಟು. `ಫೈಂಡಿಂಗ್‌ ಫ್ಯಾನಿ’ ಚಿತ್ರದಲ್ಲಿ ಅವರಿಬ್ಬರೂ ಪತಿ ಪತ್ನಿಯರ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದರು. `ದಿಲ್‌ ಧಡಕ್‌ನೇ ದೋ` ಮತ್ತು `ಬೇಫಿಕ್ರೆ’ ಚಿತ್ರದ ಸೆಟ್‌ಗಳಿಗೆ ದೀಪಿಕಾ ಇದ್ದಕ್ಕಿದ್ದಂತೆ ಬಂದು ರಣವೀರ್‌ಗೆ ಸರ್‌ಪ್ರೈಸ್‌ ಸಹ ನೀಡಿದ್ದಳು.

ವಿಶಿಷ್ಟ ವಿವಾಹ

ವಿವಾಹ ದಿನಾಂಕವನ್ನು ನಿಗದಿಗೊಳಿದವನು ರಣವೀರ್‌ ಅಲ್ಲ, ಬದಲಾಗಿ ದೀಪಿಕಾ. ಈ ಬಗ್ಗೆ ರಣವೀರ್‌ ದೀಪಿಕಾಗೆ ಸಂಪೂರ್ಣ ಸ್ವಾತಂತ್ರ್ಯ ನೀಡಿದ್ದ. ದೀಪಿಕಾ ಯಾವಾಗ ಮದುವೆ ಎಂದು ಹೇಳಿದರೆ ತಾನು ಅದಕ್ಕೆ ಸಿದ್ಧ ಎಂದು ರಣವೀರ್‌ ಮೊದಲೇ ಹೇಳಿಬಿಟ್ಟಿದ್ದ. ಇಬ್ಬರೂ ತಮ್ಮ ವಿವಾಹವನ್ನು ಅತ್ಯಂತ ಖಾಸಗಿಯಾಗಿ ಕೆಲವೇ ಆಯ್ದ ಬಂಧುಮಿತ್ರರೊಂದಿಗೆ ಇಟಲಿಯಲ್ಲಿ ಏರ್ಪಡಿಸಿದರು.

ಇವರ ವಿವಾಹ ಕಳೆದ ವರ್ಷ ನವೆಂಬರ್‌ 14ರಂದು ಕೊಂಕಣಿ ಸಂಪ್ರದಾಯದಂತೆಯೂ ಮತ್ತು ನವೆಂಬರ್‌ 15 ರಂದು ಸಿಂಧಿ ಸಂಪ್ರದಾಯದಂತೆಯೂ ಜರುಗಿತು. ಇದರ ಮತ್ತೊಂದು ವೈಶಿಷ್ಟ್ಯವೆಂದರೆ ಉಡುಗೊರೆ ನೀಡುವುದನ್ನು ನಿಷೇಧಿಸಲಾಗಿತ್ತು. ಆಹ್ವಾನಿತರು ಏನಾದರೂ ಕೊಡಬೇಕೆಂದಿದ್ದರೆ ಅದನ್ನು ದೀಪಿಕಾ ಸ್ಥಾಪಿಸಿರುವ ಸಂಸ್ಥೆಗೆ ನೀಡಬಹುದೆಂದು ಸೂಚಿಸಲಾಗಿತ್ತು.

ದೀಪಿಕಾ ಮಾನಸಿಕ ಒತ್ತಡಕ್ಕೆ ತುತ್ತಾಗಿದ್ದ ಸಂದರ್ಭದಲ್ಲಿ ಈ ಸಂಸ್ಥೆಯನ್ನು ಸ್ಥಾಪಿಸಿದ್ದಳೆಂಬುದು ನಿಮಗೆ ನೆನಪಿರಬಹುದು. ಇದು ಸ್ತ್ರೀ ಮತ್ತು ಪುರುಷರ ಮಾನಸಿಕ ಸಮಸ್ಯೆಗಳನ್ನು ಪರಿಹರಿಸುವಲ್ಲಿ ಕಾರ್ಯನಿರತವಾಗಿದೆ.

ಸಾಂಪ್ರದಾಯಿಕ ಶೈಲಿಯ ವಿವಾಹ

ಇಟಲಿಯ ಲೇಕ್‌ ಕೋವೋನಲ್ಲಿರುವ ದೀಪ್‌ವೀರ್‌ರ ವಿವಾಹವನ್ನು ಆಯೋಜಿಸಲಾಗಿತ್ತು. ಇಡೀ ಪರಿಸರ ಸುಂದರವಾಗಿ ಅಲಂಕೃತಗೊಂಡಿತ್ತು. ವಿವೋದಲ್ಲಿ 7 ದಿನಗಳ ಕಾಲ ಇತರೆ ಜನರಿಗೆ ಪ್ರವೇಶವಿರಲಿಲ್ಲ.

ವಿವಾಹ ಸಮಾರಂಭದ ಪ್ರಾರಂಭದಲ್ಲಿ ದೀಪಿಕಾಳ ತಂದೆ ಪ್ರಕಾಶ್‌ ಪಡುಕೋಣೆ ರಣವೀರ್‌ನ ಕಾಲುಗಳನ್ನು ಎಳನೀರಿನಿಂದ ತೊಳೆದು ಮದುಮಗನನ್ನು ಸ್ವಾಗತಿಸಿದರು. ಅದಾದ ನಂತರ ವಧೂವರರು ಪರಸ್ಪರರಿಗೆ ಉಂಗುರಗಳನ್ನು ತೊಡಿಸಿದರು. ಆಮೇಲೆ ದೀಪಿಕಾ ಪ್ರಿಯತಮ ರಣವೀರ್‌ನ ಹೆಸರಿನ ಮೆಹಂದಿ ಹಾಕಿಸಿಕೊಂಡಳು. ಸಂಗೀತ ಸಮಾರಂಭದಲ್ಲಿ ಸೂಫಿ ಗಾಯಕಿ ಹರ್ಷದೀಪ್‌ ಕೌರ್‌ ಗಾಯನ ಕಾರ್ಯಕ್ರಮ ನಡೆಸಿಕೊಟ್ಟರು.

ಡಿಸೈನರ್‌ ಡ್ರೆಸ್‌

ದೀಪ್‌ವೀರ್‌ರ ವಿವಾಹಕ್ಕಾಗಿ ಡಿಸೈನರ್‌ ಸವ್ಯಸಾಚಿ ಮುಖರ್ಜಿ ಉಡುಗೆಗಳನ್ನು ಸಿದ್ಧಪಡಿಸಿದರು. ಅವರು ದೀಪಿಕಾ ಪಡುಕೋಣೆಗಾಗಿ ಹೊಂಬಣ್ಣದ ಜರ್ದೋಜಿ ವರ್ಕ್‌ ಮಾಡಲಾಗಿದ್ದ ಕೆಂಪು ಬಣ್ಣದ ಸಿಗ್ನೇಚರ್‌ ಲಂಹಗಾ ಮತ್ತು ರಣವೀರ್‌ ಸಿಂಗ್‌ಗಾಗಿ ಕಾಂಜೀವರಂ ಶೇರ್ವಾನಿಯನ್ನೂ ರೆಡಿ ಮಾಡಿದ್ದರು. ಆ ಉಡುಗೆಗಳಲ್ಲಿ ಅವರಿಬ್ಬರೂ ಬಹಳ ಚೆಂದವಾಗಿ ಕಾಣುತ್ತಿದ್ದರು. ದೆಹಲಿಯ ಪ್ರಸಿದ್ಧ ವೆಡ್ಡಿಂಗ್‌ ಪ್ಲಾನರ್‌ ನಂದನಾ ಮೋಹನ್‌ ವೆಡ್ಡಿಂಗ್‌ ಪ್ಲಾನ್‌ ಮಾಡಿದ್ದರು. ಅವರು ಇನ್ವಿಟೇಶನ್‌ ಕಾರ್ಡ್‌, ಔಟ್‌ಫಿಟ್‌, ಜ್ಯೂವೆಲರಿ ಇತ್ಯಾದಿಗಳನ್ನೆಲ್ಲಾ ಬಹಳ ವೈಭವಪೂರಿತವಾಗಿ ಸಿದ್ಧಪಡಿಸಿದ್ದರು. ವೆಡ್ಡಿಂಗ್‌ ಕೇಕ್‌ ಸಹ ವಿಶಿಷ್ಟ ರೀತಿಯದಾಗಿತ್ತು. ಅದನ್ನು ಸ್ವಿಡ್ಜರ್ಲೆಂಡ್‌ನ ಶೆಫ್‌ ಒಬ್ಬರಿಂದ ತಯಾರಿಸಲಾಗಿತ್ತು. ಕೋಟಿ ಬೆಲೆಯ ಆಭರಣಗಳ ವಿಮೆ

ಕಳೆದ ನವೆಂಬರ್‌ 14ರ ಕೊಂಕಣಿ ಶೈಲಿಯ ವಿವಾಹ ಕಾರ್ಯಕ್ರಮದಲ್ಲಿ ದೀಪಿಕಾ ಸಾಂಪ್ರದಾಯಿಕ ಸೀರೆ ಮತ್ತು ಒಡವೆ ತೊಟ್ಟು ಅತ್ಯಂತ ಸುಂದರವಾಗಿ ಕಾಣುತ್ತಿದ್ದಳು. ನವೆಂಬರ್‌ 15ರ ವಿವಾಹ ಫಿಲ್ಮೀ ಸ್ಟೈಲ್‌ನಲ್ಲಿದ್ದು, ರಣವೀರ್‌ ಹೈಡ್ರೊಪ್ಲೇನ್‌ನಲ್ಲಿ ವಿವಾಹ ಸಮಾರಂಭಕ್ಕೆ ಆಗಮಿಸಿದ. ನೆಂಟರಿಷ್ಟರು ಮತ್ತು ಇತರೆ ಅತಿಥಿಗಳು ವೈಭವಯುಕ್ತವಾದ ದೋಣಿಗಳಲ್ಲಿ ತಲುಪಿದರು. ಆ ದಿನ ದೀಪಿಕಾ ಕೆಂಪು ಲಹಂಗಾ ಮತ್ತು ಬೆಲೆ ಬಾಳುವ ನೆಕ್ಲೇಸ್‌ ಧರಿಸಿದ್ದಳು. ವಿವಾಹ ಸಂದರ್ಭದಲ್ಲಿ ಯಾವುದೇ ದುರ್ಘಟನೆ ಅಥವಾ ಕಳ್ಳತನದಿಂದ ತೊಂದರೆಯಾಗದಿರಲು ದೀಪಿಕಾಳ ಕೋಟಿ ಬೆಲೆ ಬಾಳುವ ಆಭರಣಗಳನ್ನು ವಿಮೆ ಮಾಡಲಾಗಿತ್ತೆಂದು ತಿಳಿದುಬಂದಿದೆ.

ವಿವಾಹ ಸಮಾರಂಭದ ನಂತರ ದೀಪ್‌ವೀರ್‌ ಬೆಂಗಳೂರು ಮತ್ತು ಮುಂಬೈ ನಗರಗಳಲ್ಲಿ ಗ್ರ್ಯಾಂಡ್‌ ಪಾರ್ಟಿ ಏರ್ಪಡಿಸಿದ್ದರು. ವಿವಾಹ ಸಮಾರಂಭದ ದಿನಗಳಲ್ಲಿ ದೀಪ್‌ವೀರ್‌ ತಮ್ಮ ತಮ್ಮ ಚಿತ್ರಗಳ ಕೆಲಸಗಳಲ್ಲಿ ವ್ಯಸ್ತರಾಗಿದ್ದುದರಿಂದ ಅವರಿಗೆ ಆ ಕೂಡಲೇ ಹನಿಮೂನ್‌ಗೆ ಹೋಗಲು ಸಾಧ್ಯವಾಗಲಿಲ್ಲ.

– ಜಿ. ಸುಮಾ ರಾವ್

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ