ಮದುವೆಯ ಮಂಟಪಕ್ಕೆ ಡೇಟಿಂಗ್‌ ವ್ಯಕ್ತಿ ಬಂದುಬಿಟ್ಟರೆ ಏನು ಮಾಡುವುದು? ಇತ್ತ ವಧು ಮದುವೆ ಸಿದ್ಧತೆಯಲ್ಲಿ ಮಗ್ನಳಾಗಿದ್ದಾಳೆ. ಅತ್ತ ಹಳೆಯ ಪ್ರೇಮಿ ಮದುವೆಯಲ್ಲಿ ಅಡ್ಡಿಯನ್ನುಂಟು ಮಾಡಲು ಬಂದುಬಿಟ್ಟ. ಈ ಸ್ಥಿತಿ ಹುಡುಗರ ಮದುವೆ ಸಮಯದಲ್ಲೂ ಘಟಿಸಬಹುದು. ಹುಡುಗ ಮದುವೆ ಪೇಟಾ, ಸೂಟ್‌, ಸಫಾರಿ ಹಾಕಿಕೊಂಡು ಗತ್ತಿನಿಂದ ವಧುವಿನ ಪಕ್ಕದಲ್ಲಿ ನಿಲ್ಲಬೇಕು ಎಂದುಕೊಂಡಿರುವಾಗ ಮಾಜಿ ಪ್ರೇಯಸಿ ಕಲ್ಯಾಣ ಮಂಟಪದಲ್ಲಿ ಕಾಲಿಟ್ಟರೆ ಯಾರಿಗಾದರೂ ಆತಂಕ ಆಗುವುದು ಸಹಜವೇ.

ಇಂತಹ ಸ್ಥಿತಿಯಲ್ಲಿ ಸಂಬಂಧಿಕರ ಪ್ರತಿಕ್ರಿಯೆ ವಿಭಿನ್ನವಾಗಿರುತ್ತದೆ. ಕೆಲವರಿಗೆ ಅದು ತಮಾಷೆಯಾಗಿ ಕಂಡುಬರಬಹುದು. ಮತ್ತೆ ಕೆಲವರಿಗೆ ಗಾಬರಿ ಆಗಬಹುದು. ಮದುವೆ ಆಗುತ್ತಿರುವ ಹುಡುಗಿ ಅಥವಾ ಹುಡುಗನಿಗೆ ಮುಜುಗರ ಉಂಟಾಗಬಹುದು.

ಮಾಜಿಯನ್ನು ಹೊರ ಹಾಕುವುದು ಹೇಗೆ?

ಇಂತಹದೇ ಒಂದು ಸ್ವಾರಸ್ಯಕರ ಪ್ರಸಂಗವನ್ನು ಚಂದ್ರಿಕಾ ಹೇಳುತ್ತಾರೆ, “ನನ್ನ ಮದುವೆ ಸಂದರ್ಭದಲ್ಲಿ ಕಾಲೇಜಿನ ಬಾಯ್‌ಫ್ರೆಂಡ್‌ ಬಂದುಬಿಟ್ಟ. ನನ್ನ ಮದುವೆ ನಡೆಯುತ್ತಿರುವುದು ಅವನಿಗೆ ಹೇಗೆ ತಿಳಿಯಿತೊ ಗೊತ್ತಿಲ್ಲ. ಏಕೆಂದರೆ ಅವನ ಜೊತೆ ನನ್ನ ಪ್ರೀತಿ ಮುರಿದುಬಿದ್ದು 3 ವರ್ಷಗಳೇ ಆಗಿತ್ತು. ಆದರೆ ಅವನಿಗೆ ಸಮಾಧಾನ ತಂದಿದ್ದ ಒಂದು ವಿಷಯವೇನೆಂದರೆ, ಅವಳು ನನ್ನವಳಾಗದಿದ್ದರೂ ಇನ್ನೂ ಬೇರೆಯವರ ಹೆಂಡತಿ ಆಗಿಲ್ಲ ಎನ್ನುವುದು. ಅವನು ಸ್ವಲ್ಪ ಜಿಗುಟು ಸ್ವಭಾವದವನು. ನನ್ನ ಬಗ್ಗೆ ಆಗಾಗ ಕೇಳುತ್ತಲೇ ಇರುತ್ತಿದ್ದನಂತೆ. ಮನೆಯವರಿಗೆ ಅವನ ಬಗ್ಗೆ ಏನೊಂದೂ ಗೊತ್ತಿರಲಿಲ್ಲ. ನನ್ನ ಪರಿಸ್ಥಿತಿ ಏನಾಯ್ತು ಕೇಳಬೇಡಿ.”

ಆ ಬಳಿಕ ಚಂದ್ರಿಕಾ ತನ್ನ ಪ್ರೀತಿಯ ಗೆಳತಿ ಶಶಿಕಲಾಳ ಸಹಾಯ ಪಡೆದಳು. ಈ ಕುರಿತು ಚಂದ್ರಿಕಾ ಹೀಗೆ ಹೇಳುತ್ತಾರೆ, “ನನ್ನನ್ನು ರಕ್ಷಿಸಲು ಶಶಿಕಲಾ ಅವನ ಪ್ರೇಮಿಯಂತೆ ನಟಿಸಲು ಸಿದ್ಧಳಾದಳು. ಆ ಮೂರ್ಖ ವ್ಯಕ್ತಿ ನನ್ನ ಹೊಟ್ಟೆ ಉರಿಸುವುದೇ ಸರಿ ಎಂದು ನಿರ್ಧರಿಸಿ ಶಶಿಕಲಾಳ ಹಿಂದೆ ಹಿಂದೆ ಸುತ್ತತೊಡಗಿದ. ಅವರಿಬ್ಬರ ಪ್ರೀತಿಯ ವಿಷಯ ಪ್ರಪೋಸ್‌ತನಕ ಬರುವ ಹೊತ್ತಿಗೆ ನಾನು ಗಂಡನ ಮನೆಗೆ ಹೊರಟು ಬಿಟ್ಟಿದ್ದೆ. ಆ ಬಳಿಕ ಶಶಿಕಲಾ ಕೂಡ ಅವನಿಗೆ ಕೈಕೊಟ್ಟು ವಿದೇಶಕ್ಕೆ ಹೊರಟುಹೋದಳು.”

ಹೆಂಡತಿಯ ತಿಳಿವಳಿಕೆ

ನನ್ನ ಮಾಜಿ ಗರ್ಲ್ ಫ್ರೆಂಡ್‌ ನನ್ನನ್ನು ಮದುವೆಯಾಗಲಿರುವ ಹುಡುಗಿಯ ಮನಸ್ಸಿನಲ್ಲಿ ಸಂದೇಹದ ಬೀಜ ಬಿತ್ತಿಯೇ ತೀರುವುದಾಗಿ ನಿರ್ಧರಿಸಿದ್ದಳು. ಅವಳು ಒಂದು ರೀತಿಯ ಹುಡುಗಾಟದ ಹುಡುಗಿ. ಮದುವೆ ದಿನ ಬಂದು ರಂಪ ಮಾಡಬಹುದು ಎಂದು ನನಗನ್ನಿಸಿತ್ತು. ನನ್ನ ಊಹೆ ಸರಿಯಾಗಿಯೇ ಇತ್ತು. ಅವಳು ಮದುವೆ ಮಂಟಪದಲ್ಲಿ ಸದಾ ನನ್ನ ಹಿಂದೆ ಹಿಂದೆಯೇ ಸುತ್ತುತ್ತಿದ್ದಳು. ಎಲ್ಲರಿಗೂ ಸಂದೇಹ ಬರಲೆಂದು ಅವಳು ಈ ರೀತಿ ಮಾಡುತ್ತಿದ್ದಳು. ನನ್ನ ಹೆಂಡತಿ ತಿಳಿವಳಿಕೆ ಸ್ವಭಾದವಳಾದ್ದರಿಂದ ಯಾವುದೇ ಸಂದೇಹ ಉಂಟಾಗಲಿಲ್ಲ. ನಾನು ಅವಳನ್ನು ಎಲ್ಲರಿಗೂ ಪರಿಚಯಿಸಿದೆ. ಅಷ್ಟಕ್ಕೆ ಸುಮ್ಮನಾದ ಅವಳು ನಂತರ ಅಲ್ಲಿಂದ ಕಾಣೆಯಾದಳು. ಈ ರೀತಿ ನನ್ನ ಮದುವೆ ನಿರಾಳವಾಗಿ ನೆರವೇರಿತು.

ಅಮ್ಮ ಕಾಪಾಡಿದಳು

ಸ್ನೇಹಾಳ ತಾಯಿಗೆ ಆಕೆಯ ಭಾವಿ ಪ್ರಿಯಕರನ ಬಗ್ಗೆ ಗೊತ್ತಿತ್ತು. ಅವನು ಮದುವೆಯ ಸಂದರ್ಭದಲ್ಲಿಯೇ ಒಂದು ಬೊಕೆ ಹಿಡಿದುಕೊಂಡು ಅಲ್ಲಿಗೆ ಬಂದ. ಸಮಯ ಸಂದರ್ಭ ಅರಿತು ಅಮ್ಮ ಅವನ ಕೈಯಿಂದ ಹೂಗುಚ್ಛ ತೆಗೆದುಕೊಂಡು ಕೈ ಹಿಡಿದೆಳೆಯುತ್ತ ಸ್ಟೇಜಿಗೆ ಕರೆತಂದು ಹೊಸ ಜೋಡಿಯ ಜೊತೆಗೆ ಫೋಟೋ ತೆಗೆಯಿಸಿಬಿಟ್ಟಳು. ಬಳಿಕ ಅವನನ್ನು ಹೊರಗೆ ಸಾಗಹಾಕಿದಳು. ಒಂದು ವೇಳೆ ಅಮ್ಮ ಜಾಗೃತಳಾಗಿ ಅವನನ್ನು ಸಾಗಹಾಕದೆ ಹೋಗಿದ್ದರೆ ಅವನು ಏನೇನು ರಾದ್ಧಾಂತ ಮಾಡುತ್ತಿದ್ದನೊ ಏನೋ?

ಇದೆಲ್ಲ ಹೀಗೇಕೆ?

ಮನೋಚಿಕಿತ್ಸಕ ಶಾಮ್ ಭಟ್‌ ಹೀಗೆ ಹೇಳುತ್ತಾರೆ, “ಡೇಟಿಂಗ್‌ ಎನ್ನುವುದು ವಿದೇಶಿ ಕಲ್ಚರ್‌. ಇತ್ತೀಚಿನ ವರ್ಷಗಳಲ್ಲಿ ಇದು ಭಾರತದಲ್ಲೂ ವ್ಯಾಪಕವಾಗಿ ಪಸರಿಸುತ್ತಿದೆ. 15-20 ವರ್ಷಗಳ ಹಿಂದೆ ಇದು ಅಷ್ಟಾಗಿ ಇರಲಿಲ್ಲ. ಬ್ರೇಕ್‌ಅಪ್‌ಗೆ ಹಲವು ಕಾರಣಗಳಿರಬಹುದು. ಜಾತಿಯ ಗೋಡೆ, ಆರ್ಥಿಕ ಸ್ಥಿತಿ, ಮನಸ್ತಾಪ, ಕುಟುಂಬದವರ ಒಪ್ಪಿಗೆ ಇಲ್ಲದಿರುವುದು, ಇಬ್ಬರಲ್ಲಿ ಒಬ್ಬರು ಮೋಸ ಮಾಡುವುದು, ದೀರ್ಘಾವಧಿ ಸಂಬಂಧ, ಮದುವೆಯ ಬಗ್ಗೆ ಆಸಕ್ತಿ ಇಲ್ಲದಿರುವುದು, ವ್ಯಕ್ತಿತ್ವದಲ್ಲಿ ಅಸಮಾನತೆ, ಮತ್ತೊಬ್ಬರ ಜೊತೆ ಪ್ರೀತಿ ಹೀಗೆ ಬೇರೆ ಕಾರಣಗಳನ್ನು ಪಟ್ಟಿ ಮಾಡಬಹುದು.”

ಮನೋತಜ್ಞೆ ವರ್ಷಾರ ಪ್ರಕಾರ, ಎಷ್ಟೋ ಸಲ ಬಾಲ್ಯದ ಪ್ರೀತಿ ದೊಡ್ಡವರಾದ ಬಳಿಕ ಸ್ನೇಹ ಅಥವಾ ಕಾಳಜಿ ತೆಗೆದುಕೊಳ್ಳುವುದಕ್ಕಷ್ಟೇ ಸೀಮಿತವಾಗಬಹುದು. ಒಂದು ಸಲ ಬ್ರೇಕ್‌ಅಪ್‌ ಆದ ಬಳಿಕ ಮೂವ್‌ ಆನ್‌ ಆಗುವುದೇ ಎರಡೂ ಕಡೆಯವರಿಗೆ ಒಳ್ಳೆಯದು.

ಗೊಂದಲದಿಂದ ಹೊರಗೆ ಬನ್ನಿ

ಬ್ರೇಕ್‌ಅಪ್‌ ಸಮಯದಲ್ಲಿ ಭಾವನಾತ್ಮಕ ಜಗಳ ಬೇಡ. ಸರಿಯಾದ ತರ್ಕದ ಜೊತೆಗೆ ಬೇರೆ ಬೇರೆ ಆಗಿ. ಭವಿಷ್ಯದಲ್ಲಿ ಮತ್ತೆ ಎಂದಾದರೂ ಭೇಟಿಯಾದರೂ ಎದುರಿಸುವುದು ಸುಲಭವಾಗಿರಬೇಕು. ಮಾಜಿ ಪ್ರೇಮಿ ಅಥವಾ ಪ್ರೇಯಸಿ ಮದುವೆಗೆ ಬರುವುದರಿಂದ ಏನೇನಾಗಬಹುದು ಎಂಬುದನ್ನೊಮ್ಮೆ ನೋಡಿ.

ಮಾಜಿ ಪ್ರೇಮಿ ಮೊದಲಿಗಿಂತ ಆಕರ್ಷಕವಾಗಿ ಕಂಡುಬರುವುದು : ಈಗ ನೀವು ಹೊಸ ದಾರಿಯಲ್ಲಿ ಸಾಗುತ್ತಿರುವಿರಿ. ಹೀಗಾಗಿ ಹಿಂದೆ ತಿರುಗಿ ನಿಮ್ಮ ಮನಸ್ಸನ್ನು ತಡೆಹಿಡಿಯುವುದು ಅಗತ್ಯ. ಹಳೆಯ ಪ್ರೇಮಿಯನ್ನು ಕಂಡು ನೆನಪು ಮರುಕಳಿಸುವುದು. ನಿಮ್ಮ ಕಣ್ಣು ಹಾಗೂ ಮುಖವನ್ನು ಸಾಮಾನ್ಯವಾಗಿಟ್ಟುಕೊಳ್ಳಲು ಪ್ರಯತ್ನಿಸಿ. ನಿಮ್ಮ ಮನಸ್ಸಿನಲ್ಲಿ ಏನು ನಡೆಯುತ್ತಿದೆ ಎಂಬುದು ಯಾರಿಗೂ ಗೊತ್ತಾಗಬಾರದು.

ಸಂಬಂಧಿಕರಲ್ಲಿ ಗುಸುಗುಸು: ನಿಮ್ಮೊಳಗಿನ ಆತ್ಮವಿಶ್ವಾಸವನ್ನು ಕಾಯ್ದುಕೊಳ್ಳಿ. ನಿಮ್ಮ ಆತ್ಮವಿಶ್ವಾಸ ಕಂಡು ಸಂಬಂಧಿಕರು ಅವರಿವರ ಕಿವಿಯಲ್ಲಿ ಏನನ್ನಾದರೂ ಊದಬಹುದು. ಆದರೆ ಮದುವೆ ವಾತಾವರಣ ಹಾಳು ಮಾಡುವ ಧೈರ್ಯ ಯಾರಿಗೂ ಇರಬಾರದು.

ಮಾಜಿಯನ್ನು ತಡೆಹಿಡಿಯುವುದು : ನಿಮ್ಮ ಯಾರಾದರೂ ನಿಕಟವರ್ತಿಗಳ ಸಹಾಯ ಪಡೆದು ಮಾಜಿ ಪ್ರೇಮಿ ನಿಮ್ಮತನಕ ಬರುವುದನ್ನು ತಡೆಯಬೇಕು.

ಮ್ಯಾರೇಜ್‌ ಕೌನ್ಸೆಲರ್‌ ರಾಬರ್ಟ್‌ರ ಪ್ರಕಾರ, ಮದುವೆಗೆ ಡೇಟಿಂಗ್‌ಗಿಂತಲೂ ಹೆಚ್ಚಿನ ಮಹತ್ವವಿದೆ. ಡೇಟಿಂಗ್‌ ವ್ಯಕ್ತಿಯ ಸುಳಿಗೆ ಸಿಲುಕಿ ಸದ್ಯದ ಮದುವೆಯನ್ನು ಹಾಳುಗೆಡವಬಾರದು.

ಕೌನ್ಸೆಲಿಂಗ್‌ ಸೈಕಾಜಿಸ್ಟ್ ರೂಪಾ ಜೋಶಿ ಹೇಳುವುದೇನೆಂದರೆ, “ಬ್ರೇಕ್‌ಅಪ್‌ ಬಳಿಕ ಹೃದಯ ಒಡೆದು ಚೂರಾಗುವ ನೋವು ಎಷ್ಟು ಆಳವಾಗಿರುತ್ತದೆಂದರೆ, ಆತ್ಮೀಯ ಸಂಬಂಧಿಕರೊಬ್ಬರು ತೀರಿಹೋದಾಗ ನೋವಾಗುವಂತೆ, ಇಂತಹ ಸಂದರ್ಭದಲ್ಲಿ ನೀವಿಡುವ ಹೆಜ್ಜೆ ತಿಳಿವಳಿಕೆಯಿಂದ ಕೂಡಿರಬೇಕು. ಯಾರೊಂದಿಗೆ ನೀವು ಡೇಟಿಂಗ್‌ ಮಾಡುತ್ತಿದ್ದೀರೊ, ಅವರೊಂದಿಗೇ ಮದುವೆ ಆಗಬೇಕೆಂದೇನಿಲ್ಲ. ಈ ವಿಷಯವನ್ನು ಮೊದಲೇ ಸ್ಪಷ್ಟಪಡಿಸಿ. ನಿಮ್ಮ ಅಪೇಕ್ಷೆಗಳನ್ನು ಅರುಹಿ ಮುಂದೆ ಸಾಗಿ. ಏಕೆಂದರೆ ಸಂಬಂಧ ಮುರಿದುಕೊಳ್ಳುವಾಗ ಎದುರಿನ ವ್ಯಕ್ತಿಗೆ ಆಘಾತ ಉಂಟಾಗಬಾರದು. ಹೀಗೆ ಮಾಡಿದಾಗ ಡೇಟಿಂಗ್‌ ವ್ಯಕ್ತಿ ಮದುವೆಯ ದಿನ ಬಂದು ನಿಮಗೆ ತೊಂದರೆ ಕೊಡುವುದು ತಪ್ಪುತ್ತದೆ.

– ಕೆ. ನೀರಜಾ

Tags:
COMMENT