ಯಾವುದೋ ಕಾರಣದಿಂದಾಗಿ ಯುವ ಜನತೆ ತಮ್ಮ ಭಾವಿ ಸಂಗಾತಿಯನ್ನು ಸ್ವತಃ ಆರಿಸಿಕೊಳ್ಳಲಾಗದಿದ್ದರೆ ಅಥವಾ ಹುಡುಕಲು ಯತ್ನಿಸದಿದ್ದರೆ ಆಗ ಪಾಲಕರೇ ಮುಂದೆ ನಿಂತು ಆ ಕೆಲಸ ಮಾಡಬೇಕಾಗುತ್ತದೆ. ಇಂದಿನ ಕಾಲದಲ್ಲಿ ಪೇರೆಂಟ್ಸ್ ತಮ್ಮ ಮಕ್ಕಳಿಗಾಗಿ ವಧೂವರರನ್ನು ಹುಡುಕುವುದು ಪೇಚಾಟದ ಸಂಗತಿಯೇ ಸರಿ.
ಪೇರೆಂಟ್ಸ್ ಹಾಗೂ ಮಕ್ಕಳು ಹೀಗೆ ಹೊಸ ಸಂಬಂಧ ಹುಡುಕಿದಾಗ, ಒಂದು ವಿಷಯಕ್ಕೆ ಇಬ್ಬರೂ ಹೊಂದಾಣಿಕೆ ಮಾಡಿಕೊಂಡು ಒಮ್ಮತಕ್ಕೆ ಬರುವುದು ಸುಲಭದ ಮಾತಲ್ಲ. ಇಲ್ಲಿ ಜನರೇಶನ್ ಗ್ಯಾಪ್ ಸ್ಪಷ್ಟ ಕಾಣಿಸುತ್ತದೆ. ಈಗಂತೂ ಬಹುತೇಕ ಯುವಜನತೆ ಪ್ರೇಮ ವಿವಾಹದತ್ತಲೇ ಮನಸ್ಸು ಮಾಡುತ್ತಿರುವಾಗ, ಅರೇಂಜ್ಡ್ ಮ್ಯಾರೇಜ್‌ಗಾಗಿ ವಧೂವರರ ಅನ್ವೇಷಣೆ ಬಲು ಕಷ್ಟದ ಕೆಲಸವಾಗುತ್ತಿದೆ. ಅದರಲ್ಲೂ ಮಕ್ಕಳು ಪೇರೆಂಟ್ಸ್ ಜೊತೆಗಿಲ್ಲದೆ ದೂರದ ಊರು, ದೇಶದಲ್ಲಿ ದುಡಿಯುತ್ತಿದ್ದರೆ, ವೈವಾಹಿಕ ಸಂಬಂಧಗಳ ಕುರಿತಾಗಿ ಚರ್ಚಿಸಿ ಒಮ್ಮತಕ್ಕೆ ಬರುವುದು ಕಷ್ಟಕರ ಮಾತ್ರವಲ್ಲ ಅಸಂಭವ ಎಂದರೂ ಅತಿಶಯೋಕ್ತಿಯಲ್ಲ.
ಒಂದು ಉಚ್ಚ ಕುಟುಂಬದ ಸುಶಿಕ್ಷಿತ ಗೃಹಿಣಿ ಸುಧಾ ರಾವ್ ಹೇಳುತ್ತಾರೆ, ಮಗಳ ಮದುವೆಗಾಗಿ ವರಗಳೇನೋ ಬರುತ್ತಿವೆ. ಆದರೆ ಆ ಬಗ್ಗೆ ನಿಧಾನವಾಗಿ ಅವಳೊಂದಿಗೆ ಚರ್ಚಿಸೋಣವೆಂದರೆ ದುಡಿಯುವ ಹೆಣ್ಣಾದ ಅವಳು ಬೆಳಗ್ಗೆ ಹೊತ್ತು ಆಫೀಸಿಗೆ ದೌಡಾಯಿಸುವ ಧಾವಂತದಲ್ಲಿರುತ್ತಾಳೆ, ರಾತ್ರಿ ಬರುವುದೇ ಸುಸ್ತಾಗಿ 9 ಗಂಟೆ ನಂತರ, ಇನ್ನು ಭಾನುವಾರ ಮಾತನಾಡೋಣ ಎಂದರೆ ಅಂದು ರಜೆಯ ಮೂಡ್‌ನಲ್ಲಿ ತನ್ನದೇ ಲೋಕದಲ್ಲಿರುತ್ತಾಳೆ. ಮದುವೆ ಕುರಿತಾಗಿ ಅವಳೊಂದಿಗೆ ಚರ್ಚಿಸುವುದು ಯಾವಾಗ?
ಮತ್ತೊಬ್ಬ ಗೃಹಿಣಿ ಸವಿತಾ ಶರ್ಮ ಬೇರೆ ರೀತಿಯಲ್ಲಿ ಹೇಳುತ್ತಾರೆ, ನಾನು ಮಗನ ಅರೇಂಜ್ಡ್ ಮ್ಯಾರೇಜ್ ಮಾಡಿಸಿದೆ. ಆದರೆ ಅದರಲ್ಲಿ ಇಷ್ಟೊಂದು ಕಾಂಪ್ಲಿಕೇಶನ್ಸ್ ಬರಲಿಲ್ಲ. ಏಕೆಂದರೆ ಮಗ ಹೆಣ್ಣು ಹುಡುಕುವ ಪೂರ್ತಿ ಜವಾಬ್ದಾರಿ ನನಗೇ ಬಿಟ್ಟಿದ್ದ. ಸದಾ ಐಟಿ ಬಿಟಿ ಆಫೀಸ್‌ಗಳಲ್ಲಿ ಅವನು ಬಿಝಿ. ಬೆಳಗ್ಗೆ 7ಕ್ಕೆ ಹೊರಟರೆ ಬರುವುದು ರಾತ್ರಿ 10ಕ್ಕೇ! ಯಾವ ಸಂಬಂಧಗಳು ನನಗೆ ಸಂಪೂರ್ಣ ಒಪ್ಪಿಗೆ ಎನಿಸಿತೋ ಅದರಲ್ಲಿ 3ನ್ನು ಅವನಿಗೆ ತೋರಿಸಲಾಗಿ, ಮೊದಲನೆಯದೇ ಫೈನಲ್ ಆಯಿತು, ಎನ್ನುತ್ತಾರೆ.
ಪೇರೆಂಟ್ಸ್ ಕಷ್ವವನ್ನು ಯುವಜನತೆ ಅರಿಯಬೇಕು : ಅರೇಂಜ್ಡ್ ಮ್ಯಾರೇಜ್‌ಗಳಲ್ಲಿ ಪೇರೆಂಟ್ಸ್ ನ ಅತಿ ದೊಡ್ಡ ಕಷ್ಟವೆಂದರೆ, ಮದುವೆ ಕುರಿತಾಗಿ ಗಾಳಿ ಗೋಪುರ ಕಟ್ಟಿಕೊಂಡು ಆಕಾಶದಲ್ಲೇ ವಿಹರಿಸುವ ಯುವಜನತೆಯನ್ನು ಭೂಮಿಗಿಳಿಸುವುದು. ಎಷ್ಟೋ ಮಕ್ಕಳು ತಮ್ಮ ಸಮಾನರಿಲ್ಲ ಎಂದೇ ಭಾವಿಸುತ್ತಾರೆ, ಅವರಿಗೆ ವಾಸ್ತವ ಅರ್ಥ ಮಾಡಿಸುವುದೇ ಕಷ್ಟ. ಜೊತೆಗೆ ಕೌಟುಂಬಿಕ, ಸಾಮಾಜಿಕ, ಧಾರ್ಮಿಕ ಹಿನ್ನೆಲೆಗಳನ್ನು ಗಮನಿಸಿಕೊಂಡು ಒಂದು ಹುಡುಗನಿಗೆ ಒಂದು ಹುಡುಗಿ ಎಂದು ಹುಡುಕುವಷ್ಟರಲ್ಲಿ ಅವರಿಬ್ಬರಿಗೂ ಇನ್ನೊಂದು ವರ್ಷ ವಯಸ್ಸು ಹೆಚ್ಚಾಗಿರುತ್ತದೆ.
ಹೆಚ್ಚಾಗಿ ನಮ್ಮ ಯುವಜನತೆ ತಲೆಯಲ್ಲಿ ತಮ್ಮದೇ ಆದ 108 ವಿಚಾರಗಳನ್ನು ತುಂಬಿಕೊಂಡಿರುತ್ತಾರೆ, ಎಷ್ಟೋ ಸಲ ಹೆತ್ತವರ ಬಳಿ ಅದನ್ನು ಸ್ಪಷ್ಟವಾಗಿ ಹೇಳಿಕೊಳ್ಳಲಾರರು. ಎಷ್ಟೋ ಸಲ ಪೇರೆಂಟ್ಸ್ ಕೂಡ ತಮ್ಮ ಮಕ್ಕಳು ಹಾಗೆ ಹೀಗೆ ಎಂದು ದಂತಗೋಪುರದಲ್ಲೇ ನಿಂತು ಯೋಚಿಸುತ್ತಾರೆ, ವಾಸ್ತವಕ್ಕೆ ಬಂದಾಗ ಮಾತ್ರ ಮದುವೆ ಮಾರುಕಟ್ಟೆಯ ಆಳದ ಅರಿವಾಗುವುದು. ಈ ನಿಟ್ಟಿನಲ್ಲಿ ಅವರು ತಮ್ಮ ಮಕ್ಕಳನ್ನು ಮೊದಲೇ ಸೂಕ್ತವಾಗಿ ಎಚ್ಚರಿಸುವುದೇ ಸರಿ. ಯುವಜನತೆ ಕೂಡ ತಾವು ಬಯಸುವ 108 ಅಪೇಕ್ಷೆಗಳಲ್ಲಿ ಇಂದಿನ ಕಾಲದಲ್ಲಿ 100 ಈಡೇರದು, ಉಳಿದ 8ರಲ್ಲೇ ತೃಪ್ತಿಪಟ್ಟುಕೊಳ್ಳಬೇಕು ಎಂಬ ಅರಿವಿರಬೇಕು.