- ರಾಘವೇಂದ್ರ ಅಡಿಗ ಎಚ್ಚೆನ್.
ಬೆಂಗಳೂರು, ಅ. 27: ನವೆಂಬರ್ 1 ರಿಂದ ಆರಂಭಿಸಿ 37 ದಿನಗಳ ಕಾಲ ನಡೆಯಲಿರುವ ರಾಷ್ಟ್ರೋತ್ಥಾನ ಸಾಹಿತ್ಯದ 5ನೇ ಕನ್ನಡ ಪುಸ್ತಕ ಹಬ್ಬದ ಪತ್ರಿಕಾಗೋಷ್ಠಿಯನ್ನು ಇಲ್ಲಿನ ಕೇಶವಶಿಲ್ಪ, ಕೆಂಪೇಗೌಡನಗರದಲ್ಲಿ ಆಯೋಜಿಲಾಗಿತ್ತು. ರಾಷ್ಟ್ರೋತ್ಥಾನ ಸಾಹಿತ್ಯದ ವಿಶ್ವಸ್ಥರಾದ ಶ್ರೀ ಕೆ ಎಸ್ ನಾರಾಯಣ, ಮುಖ್ಯಸ್ಥರಾದ ಶ್ರೀ ಸುಬ್ರಹ್ಮಣ್ಯ ಬಿ ಎ ಹಾಗೂ ಪ್ರಧಾನ ಸಂಪಾದಕರಾದ ಶ್ರೀ ವಿಘ್ನೇಶ್ವರ ಭಟ್ಟರು ಪುಸ್ತಕ ಹಬ್ಬದ ಬಗೆಗೆ ಮಾಹಿತಿ ನೀಡಿದರು.
1965ರಲ್ಲಿ ಪ್ರಾರಂಭವಾದ ರಾಷ್ಟ್ರೋತ್ಥಾನ ಪರಿಷತ್ತಿನ ಮೊದಲ ಚಟುವಟಿಕೆಯಾದ ’ರಾಷ್ಟ್ರೋತ್ಥಾನ ಸಾಹಿತ್ಯ’ ಕಳೆದ 60 ವರ್ಷಗಳ ನಿರಂತರ ಕಾರ್ಯನಿರ್ವಹಣೆಯಲ್ಲಿ ಇದುವರೆಗೂ 306 ಪುಸ್ತಕಗಳನ್ನು ಪ್ರಕಟಿಸಿದೆ. ಇತಿಹಾಸ, ರಾಷ್ಟ್ರೀಯತೆ, ಸಂಸ್ಕೃತಿ, ವ್ಯಕ್ತಿತ್ವವಿಕಾಸ, ಜೀವನಚರಿತ್ರೆಗಳು, ವ್ಯಕ್ತಿಚಿತ್ರಗಳು, ಪರಿಸರ, ಯೋಗ, ಆರೋಗ್ಯ, ಗ್ರಾಮೀಣಾಭಿವೃದ್ಧಿ, ಆರ್ಥಿಕತೆ - ಹೀಗೆ ಹಲವು ವಿಷಯ-ಕ್ಷೇತ್ರಗಳಿಗೆ ಸಂಬಂಧಿಸಿ ಈ ಪ್ರಕಟನೆಗಳನ್ನು ತರಲಾಗಿದೆ. ಇವುಗಳಲ್ಲದೆ, ಭಾರತದ ಇತಿಹಾಸ-ಪರಂಪರೆ-ಮಹಾಕಾವ್ಯಗಳು-ಪುರಾಣಗಳು-ಕಲೆ-ಸಾಹಿತ್ಯ ಸೇರಿದಂತೆ ಎಲ್ಲ ಜೀವನಕ್ಷೇತ್ರಗಳಿಗೆ ಸಂಬಂಧಿಸಿದ ಮಹಾಪುರುಷರನ್ನು ಮಕ್ಕಳಿಗೆ ಪರಿಚಯಿಸುವುದಕ್ಕಾಗಿ ರೂಪಿಸಲಾದ ’ಭಾರತ-ಭಾರತಿ ಪುಸ್ತಕ ಸಂಪದ’ ಯೋಜನೆಯಲ್ಲಿ, ಮೊದಲ ಹಂತದಲ್ಲಿ, ಪ್ರೊ|| ಎಲ್. ಎಸ್. ಶೇಷಗಿರಿರಾಯರ ಸಂಪಾದಕತ್ವದಲ್ಲಿ 510 ಪುಸ್ತಕಗಳನ್ನು ಪ್ರಕಟಿಸಲಾಗಿತ್ತು. ಹತ್ತು ವರ್ಷಗಳ ಹಿಂದೆ, ಹಿರಿಯ ಪತ್ರಕರ್ತ ಶ್ರೀ ಚಿರಂಜೀವಿ ಅವರ ಸಂಪಾದಕತ್ವದಲ್ಲಿ ಮತ್ತೆ 100 ಪುಸ್ತಕಗಳನ್ನು ಈ ಸರಣಿಗೆ ಸೇರಿಸಲಾಗಿದೆ. ಈ 610 ಪುಸ್ತಕಗಳಲ್ಲಿ 225 ಪುಸ್ತಕಗಳು ಇಂಗ್ಲಿಷಿಗೂ ಅನುವಾದಗೊಂಡಿವೆ.

ಮೊದಲ ಪುಸ್ತಕ ’ರಣವೀಳ್ಯ’ವೂ ಸೇರಿದಂತೆ ನಮ್ಮ ಹಲವು ಪ್ರಕಟನೆಗಳು ಕಳೆದ ಐದಾರು ದಶಕಗಳಿಂದ ನಿರಂತರ ಬೇಡಿಕೆಯಲ್ಲಿವೆ. ’ಅಜೇಯ’, ’ಅದಮ್ಯ’, ’ಕೋಲ್ಮಿಂಚು’, ’ಮನಸ್ಸೇ ರಿಲ್ಯಾಕ್ಸ್ ಪ್ಲೀಸ್’, ’ಭಾರತದರ್ಶನ’, ’ಭಾರತೀಯ ಕ್ಷಾತ್ರಪರಂಪರೆ’, ’ಸ್ವಾತಂತ್ರ್ಯವೀರ ಸಾವರಕರ್’, ’ಕೃತಿರೂಪ ಸಂಘದರ್ಶನ’ - ಹೀಗೆ ನಮ್ಮ ಹಲವು ಪ್ರಕಟನೆಗಳು ನಿರಂತರವಾಗಿ ಓದುಗರನ್ನು ತಲಪುತ್ತಿವೆ. ಪ್ರಸಿದ್ಧ ಗಾಂಧಿವಾದಿ, ಚಿಂತಕ ಧರ್ಮಪಾಲ್ ಅವರ ಮಹತ್ತ್ವದ ಕೃತಿಗಳನ್ನು ನಾವು ಪ್ರಕಟಿಸುತ್ತಿದ್ದು, ವ್ಯಾಪಕ ಮೆಚ್ಚುಗೆ ಪಡೆದಿವೆ. ಈ ವರ್ಷ ಪ್ರೊ|| ಎಸ್. ಕೆ. ರಾಮಚಂದ್ರರಾಯರ ಶತಮಾನೋತ್ಸವ ಸಂಸ್ಮರಣಗ್ರಂಥ ’ವಿದ್ಯಾಲಂಕಾರ’ ಪ್ರಕಟಿಸಿದ್ದು, ರಾಯರ ಸಾರ್ಥಕಜೀವನವನ್ನೂ ಪ್ರೇರಕ ಕೆಲಸಗಳನ್ನೂ ಪರಿಚಯಿಸುವ ಪ್ರಯತ್ನ ಆಗಿದೆ. ರಾಷ್ಟ್ರೀಯ ಸ್ವಯಂಸೇವಕ ಸಂಘದ ಶತಮಾನೋತ್ಸವ ಸಂದರ್ಭದಲ್ಲಿ ಸಂಘವು ಕೈಗೆತ್ತಿಕೊಂಡಿರುವ ’ಪಂಚ ಪರಿವರ್ತನೆ’ ಎಂಬ ಜನಜಾಗೃತಿ ಅಭಿಯಾನಕ್ಕೆ ಪೂರಕವಾಗಿ ’ಚರಿತಪಂಚಕ’ ಕೃತಿಯನ್ನು ಹೊರತರಲಾಗಿದೆ.

ನಮ್ಮ ಹಲವು ಪ್ರಕಟನೆಗಳು ವಿವಿಧ ಅಕಾಡೆಮಿ-ಸಂಘಸಂಸ್ಥೆಗಳ ಬಹುಮಾನ-ಪ್ರಶಸ್ತಿಗಳಿಗೂ ಪಾತ್ರವಾಗಿವೆ. ’ತೋರ್‌ಬೆರಳು’, ’ಅಜೇಯ’, ’ಅದಮ್ಯ’, ’ಶತಮಾನದ ತಿರುವಿನಲ್ಲಿ ಭಾರತ’, ’ಗಾಂಧೀಯ ಅರ್ಥಶಾಸ್ತ್ರ’, ’ಸಾಮಾಜಿಕ ಕ್ರಾಂತಿಸೂರ್ಯ ಡಾ. ಬಾಬಾಸಾಹೇಬ ಅಂಬೇಡ್ಕರ್’ - ಮೊದಲಾದ ಕೃತಿಗಳನ್ನು ಕರ್ನಾಟಕ ಸಾಹಿತ್ಯ ಅಕಾಡೆಮಿ, ಕುವೆಂಪು ಭಾಷಾಭಾರತಿ ಪ್ರಾಧಿಕಾರಗಳು ಗೌರವಿಸಿವೆ. ಕನ್ನಡ ಸಾಹಿತ್ಯ ಪರಿಷತ್ತಿನ ’ಅಂಕಿತ ದತ್ತಿ ಪ್ರಶಸ್ತಿ’ಯೂ ರಾಷ್ಟ್ರೋತ್ಥಾನ ಸಾಹಿತ್ಯಕ್ಕೆ ಲಭಿಸಿದೆ. ಕನ್ನಡ ಪುಸ್ತಕ ಪ್ರಾಧಿಕಾರವು ಕೊಡಮಡುವ ’2021ರ ಅತ್ಯುತ್ತಮ ಪ್ರಕಾಶನ’ ವಾರ್ಷಿಕ ಪ್ರಶಸ್ತಿಯೂ ಲಭಿಸಿದೆ.





