ಸಕಾಲಕ್ಕೆ ಮದುವೆಯಾಗದಿರುವುದು, ಜೀವನವೆಂಬ ಪಯಣದಲ್ಲಿ ಸಂಗಾತಿ ನಡುವೆಯೇ ಹೊರಟು ಹೋಗಿರುವುದು ಅಥವಾ ಗಂಡಹೆಂಡತಿ ನಡುವೆ ಪರಸ್ಪರ ಹೊಂದಾಣಿಕೆ ಇಲ್ಲದಿದ್ದಾಗ ವಿಚ್ಛೇದನ ತೆಗೆದುಕೊಳ್ಳಬೇಕಾಗಿ ಬರುತ್ತದೆ. ಅಂತಹ ಸ್ಥಿತಿಯಲ್ಲಿ ಮಹಿಳೆಯೊಬ್ಬಳು ಏಕಾಂಗಿಯಾಗಿ ಜೀವನ ನಡೆಸಬೇಕಾಗಿ ಬರುತ್ತದೆ. ಸುಮಾರು 10 ವರ್ಷಗಳ ಹಿಂದೆ ಈ ರೀತಿ ಏಕಾಂಗಿ ಜೀವನ ನಡೆಸುವ ಮಹಿಳೆಯರನ್ನು ಸಮಾಜ ಒಳ್ಳೆಯ ದೃಷ್ಟಿಯಿಂದ ಕಾಣುತ್ತಿರಲಿಲ್ಲ. ಸಾಮಾನ್ಯವಾಗಿ ಆಕೆ ತಂದೆ, ಅಣ್ಣ ಅಥವಾ ಅತ್ತೆಮನೆಯವರನ್ನು ಅವಲಂಬಿಸಿ ಇರಬೇಕಾಗುತ್ತಿತ್ತು. ಆದರೆ ಈಗಿನ ಸ್ಥಿತಿ ಅದಕ್ಕೆ ತದ್ವಿರುದ್ಧವಾಗಿದೆ. ಈಗ ಏಕಾಂಗಿಯಾಗಿರುವ ಮಹಿಳೆ ಸ್ವತಂತ್ರ ಪ್ರವೃತ್ತಿಯವಳು, ಸ್ವಾವಲಂಬಿ ಹಾಗೂ ಜೀವನದಲ್ಲಿ ಬರುವ ಪ್ರತಿಯೊಂದು ಪರಿಸ್ಥಿತಿಯನ್ನೂ ತನ್ನದೇ ಆದ ಬಲದಿಂದ ಎದುರಿಸುವವಳಾಗಿರುತ್ತಾಳೆ.

“ಪ್ರತಿಯೊಂದು ಸಂಬಂಧದ ಹಾಗೆ ಗಂಡಹೆಂಡತಿಯ ಸಂಬಂಧಕ್ಕೂ ತನ್ನದೇ ಆದ ಮಹತ್ವವಿದೆ. ಆದರೆ ಆ ಸಂಬಂಧವೇ ಇಲ್ಲದ ಮೇಲೆ ಇಡೀ ಜೀವನ ನೀವು ಚಿಂತೆ ಮಾಡುತ್ತ ಒತ್ತಡಗ್ರಸ್ತರಾಗಿರುವುದು ಎಷ್ಟರಮಟ್ಟಿಗೆ ಸರಿ? ಈ ಏಕಾಂಗಿತನ ಎನ್ನುವುದು ಕೇವಲ ಮನಸ್ಸಿನ ಭ್ರಮೆ ಹೊರತು ಬೇರೇನೂ ಅಲ್ಲ,” ಇದು ಕಂಪನಿಯೊಂದರಲ್ಲಿ ಮ್ಯಾನೇಜರ್‌ ಹುದ್ದೆಯಲ್ಲಿರುವ 41 ವರ್ಷದ ಸ್ನೇಹಾರ ಅಭಿಪ್ರಾಯ.

ಅವರು ಮುಂದುವರಿದು ಹೀಗೆ ಹೇಳುತ್ತಾರೆ, “ನಾನು ಸ್ವಾವಲಂಬಿ. ನನಗೆ ಇಷ್ಟವಾದದ್ದನ್ನು ತಿನ್ನುತ್ತೇನೆ. ಇಷ್ಟವಾದ ಡ್ರೆಸ್‌ ಧರಿಸುತ್ತೇನೆ. ನಮ್ಮ ಮನೆ ಪರಿಸ್ಥಿತಿ ಹೇಗಿತ್ತೆಂದರೆ ಮದುವೆ ಆಗಲು ಸಾಧ್ಯವೇ ಇರಲಿಲ್ಲ. ಆದರೆ ನನಗೆ ಸಂಗಾತಿಯ ಕೊರತೆ ಅನಿಸಲೇ ಇಲ್ಲ. ಒಂದು ವೇಳೆ ನಾನು ಮದುವೆ ಆಗಿದ್ದರೆ, ಇಷ್ಟರಮಟ್ಟಿಗೆ ಸ್ವತಂತ್ರವಾಗಿ ಜೀವಿಸುತ್ತಿದ್ದೆ ಎಂದು ಹೇಳಲು ಆಗುವುದಿಲ್ಲ. ನನ್ನ ಬೆಳವಣಿಗೆಗೆ ನನ್ನ ಜವಾಬ್ದಾರಿಗಳೇ ಅಡ್ಡಿ ಬರುತ್ತಿದ್ದವೇನೋ…. ನಾನು ಈವರೆಗೆ 8 ಪ್ರಮೋಶನ್‌ಗಳನ್ನು ಪಡೆದಿರುವೆ. ಕುಟುಂಬ ಜೀವನ ನಡೆಸುತ್ತಿದ್ದರೆ ಬಹುಶಃ ಅದು ಸಾಧ್ಯವಾಗುತ್ತಿರಲಿಲ್ಲವೇನೊ?”

ಕೇಂದ್ರೀಯ ವಿದ್ಯಾಲಯದ ಪ್ರಿನ್ಸಿಪಾಲ್ ಹುದ್ದೆಯಿಂದ ನಿವೃತ್ತರಾದ ಅನಿತಾ ತಮ್ಮ 45ನೇ ವಯಸ್ಸಿನಲ್ಲಿ ಗಂಡನಿಂದ ವಿಚ್ಛೇದನ ಪಡೆದರು. ಆಗ ಅವರ ಮಗನ ವಯಸ್ಸು 15. ಈ ಕುರಿತಂತೆ ಅವರು ಹೇಳುತ್ತಾರೆ, “ಎಂತಹ ಏಕಾಂಗಿತನ? ನಾನು ಸ್ವಾವಲಂಬಿಯಾಗಿದ್ದೆ. ಆದಾಯ ಚೆನ್ನಾಗಿತ್ತು. ಹೀಗಾಗಿ ಮಗನನ್ನು ಓದಿಸಿ ಡಾಕ್ಟರ್‌ ಮಾಡಿದೆ. ನನಗೆ ಎಲ್ಲೆಲ್ಲಿ ಹೋಗಬೇಕೆನಿಸುತ್ತೋ, ಅಲ್ಲೆಲ್ಲ ಪ್ರವಾಸ ಹೋಗಿ ಬಂದೆ. ನಾನು ಏಕಾಂಗಿಯಾಗಿದ್ದೇನೆ ಎಂದು ಒಂದೇ ಒಂದು ಸಲ ಕೂಡ ಯೋಚನೆ ಬರಲಿಲ್ಲ. ಯಾರು ನಮ್ಮ ಜೊತೆಗೆ ಇಲ್ಲವೋ, ನಮ್ಮನ್ನು ಬಿಟ್ಟು ಹೋಗಿದ್ದಾರೊ ಅವರ ಬಗ್ಗೆ ಯೋಚಿಸಿ ಸಮಯ ಹಾಳು ಮಾಡಿಕೊಳ್ಳುವುದು ಸರಿಯಲ್ಲ.”

ಶಶಿರೇಖಾ ಮಗನಿಗೆ 10 ವರ್ಷ, ಮಗಳಿಗೆ 8 ವರ್ಷ ಇದ್ದಾಗ ಗಂಡ ಹೃದಯಾಘಾತದಿಂದ ತೀರಿಹೊದರು. ಆಗ ಅವರ ವಯಸ್ಸು 48 ಆಗಿತ್ತು. ಗಂಡ ಪೊಲೀಸ್‌ ಇಲಾಖೆಯಲ್ಲಿ ಉನ್ನತ ಹುದ್ದೆಯಲ್ಲಿದ್ದರು. ಆ ದಿನಗಳನ್ನು ನೆನಪಿಸಿಕೊಂಡ ಶಶಿರೇಖಾ ಹೀಗೆ ಹೇಳುತ್ತಾರೆ, “ನಿಜ ಹೇಳಬೇಕೆಂದರೆ ಆ ದಿನಗಳು ಬಹಳ ಕಷ್ಟಕರವಾಗಿದ್ದವು. ನನಗೆ ಆ ಸ್ಥಿತಿಯಿಂದ ಹೊರಬರಲು ಬಹಳ ದಿನಗಳೇ ಹಿಡಿದವು. ಆದರೆ ನಾನು ನನ್ನದೇ ಆದ ರೀತಿಯಲ್ಲಿ ಜೀವಿಸಲು ಆರಂಭಿಸಿದೆ. ಈಗ ನನ್ನ ಮಗ ಶಾಲೆಯೊಂದರ ಮಾಲೀಕ, ಮಗಳು ಅಮೆರಿಕದಲ್ಲಿದ್ದಾಳೆ. ಗಂಡನೊಂದಿಗೆ ಕಳೆದ ನೆನಪುಗಳು ಬರದೇ ಇರುವುದಿಲ್ಲ. ಆದರೆ ಆ ಬಳಿಕ ನನಗೆಂದೂ ಪುರುಷನ ಕೊರತೆ ಅನಿಸಲೇ ಇಲ್ಲ. ನಾನು ನನ್ನ ಜೀವನದಲ್ಲಿ ಬಹಳ ಖುಷಿಯಾಗಿದ್ದೆ. ಈಗಲೂ ಹಾಗೆಯೇ ಇದ್ದೇನೆ.”

ಮಾನಸಿಕ ಸಲಹೆಗಾರರಾಗಿರುವ ನಿಧಿ ಹೀಗೆ ಹೇಳುತ್ತಾರೆ, “ಏಕಾಂಗಿತನ ಎನ್ನುವುದು ಮನಸ್ಸಿನ ಭ್ರಮೆ ಹೊರತು ಬೇರೇನೂ ಅಲ್ಲ. ಅದೆಷ್ಟೊ ಮಹಿಳೆಯರು ಸಂಗಾತಿಯಿದ್ದೂ, ಕುಟುಂಬದ ಬೇರೆ ಸದಸ್ಯರಿದ್ದೂ ಕೂಡ ಏಕಾಂಗಿಯಂತೆ ಜೀವನ ನಡೆಸುತ್ತಿರುತ್ತಾರೆ. ಸಂತಾನ ಬೆಳೆಸಲು ಹಾಗೂ ದೈಹಿಕ ಅಗತ್ಯಗಳನ್ನು ಪೂರೈಸಲು ಗಂಡನ ಅವಶ್ಯಕತೆ ಉಂಟಾಗುತ್ತದೆ. ಆದರೆ ಗಂಡನೊಂದಿಗೆ ವಿಚಾರ, ಮನಸ್ಸು ಹೊಂದಾಣಿಕೆ ಆಗದಿದ್ದರೆ ಆಕೆ ಏಕಾಂಗಿಯಂತೆಯೇ ಅಲ್ಲವೇ? ಹಾಗಾಗಿ ಏಕಾಂಗಿತನದ ಭಾವನೆಯನ್ನು ಮನಸ್ಸಿನಲ್ಲಿ ಬರದಂತೆ ನೋಡಿಕೊಳ್ಳಬೇಕು.”

ಏಕಾಂಗಿ ಮಹಿಳೆಯರೇ ಹೆಚ್ಚು ಯಶಸ್ವಿ

ಏಕಾಂಗಿಯಾಗಿ ವಾಸಿಸುವ ಶೇ.93ರಷ್ಟು ಮಹಿಳೆಯರು ಭಾವಿಸುವುದೇನೆಂದರೆ, ಗೃಹಿಣಿಯರಿಗೆ ಹೋಲಿಸಿದರೆ ತಾವು ಎಲ್ಲ ಕ್ಷೇತ್ರಗಳಲ್ಲಿ ಯಶಸ್ಸು ಸಾಧಿಸಲು ಏಕಾಂಗಿತನ ನೆರವಾಯಿತು. ಇದರಿಂದ ಅವರಿಗೆ ಸ್ವತಂತ್ರವಾಗಿ ಜೀವನ ನಡೆಸಲು ಹಕ್ಕು ದೊರತಿದೆ.

ಶೇ.65ರಷ್ಟು ಮಹಿಳೆಯರು ಜೀವನದಲ್ಲಿ ಗಂಡನ ಅವಶ್ಯಕತೆಯನ್ನು ವ್ಯರ್ಥ ಎಂದು ಭಾವಿಸುತ್ತಾರೆ. ಅವರು ಮದುವೆಗೆ ಖಂಡಿತವಾಗಿಯೂ ಸಿದ್ಧರಿಲ್ಲ.

ಅವಶ್ಯಕತೆ ಬಿದ್ದಾಗ ಅವರು ಮದುವೆ ಮಾಡಿಕೊಳ್ಳುವ ಬದಲು ಯಾವುದಾದರೂ ಒಂದು ಅನಾಥ ಮಗುವನ್ನು ದತ್ತು ತೆಗೆದುಕೊಳ್ಳುವುದು ಹೆಚ್ಚು ಉತ್ತಮ ಎಂದು ಭಾವಿಸಿದರು.

ಅವರಿಗೆ ಎಂದೂ ಏಕಾಂಗಿತನದ ಅನುಭವ ಆಗುವುದೇ ಇಲ್ಲ. ತಮ್ಮ ಹವ್ಯಾಸಕ್ಕನುಗುಣವಾಗಿ ಸಾಮಾಜಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಭಾಗಹಿಸುತ್ತಾರೆ. ಆಧುನಿಕ ಮನರಂಜನಾ ಸಾಧನಗಳ ಲಾಭವನ್ನು ಪಡೆಯುತ್ತಾರೆ. ಚಿಂತಾರಹಿತರಾಗಿ ಮನಸಾರೆ ನಿದ್ರಿಸುತ್ತಾರೆ.     ಈ ಸಮೀಕ್ಷೆಯ ಪ್ರಕಾರ, ಮಹಿಳೆಯರಿಗೆ ಹೋಲಿಸಿದಲ್ಲಿ ಏಕಾಂಗಿ ಜೀವನ ನಡೆಸುವ ಪುರುಷರ ಸಂಖ್ಯೆ ಬಹಳ ಕಡಿಮೆ.

ಹೆಚ್ಚುತ್ತಿರುವ ಸಿಂಗಲ್ ವುಮನ್‌ ಟ್ರೆಂಡ್‌

ಕಳೆದ ದಶಕಕ್ಕೆ ಹೋಲಿಸಿದರೆ ಏಕಾಂಗಿಯಾಗಿ ವಾಸಿಸುವ ಮಹಿಳೆಯರ ಸಂಖ್ಯೆ ಶೇ.39ರಷ್ಟು ಹೆಚ್ಚಿದೆ. ವಿದೇಶದಲ್ಲಿ ಏಕಾಂಗಿಯಾಗಿ ವಾಸಿಸುವ ಮಹಿಳೆಯರ ಪರಂಪರೆ ಸಮಾಜದಲ್ಲಿ ಬಹಳ ಮುಂಚೆಯಿಂದಲೇ ಇದೆ. ಅವರು ಅಲ್ಲಿ ಅವಗಣನೆಗೆ, ದೌರ್ಜನ್ಯಕ್ಕೆ ತುತ್ತಾಗುವುದಿಲ್ಲ. ಭಾರತೀಯ ಸಮಾಜದಲ್ಲೂ ಕಳೆದ 1 ದಶಕದಿಂದ ಸಾಕಷ್ಟು ಸುಧಾರಣೆ ಕಂಡುಬಂದಿದೆ.

ಕಳೆದ ವರ್ಷ ಬಿಡುಗಡೆಯಾದ `ಆಲ್ ದಿ ಸಿಂಗಲ್ ಲೇಡಿಸ್‌ ಅನ್‌ಮ್ಯಾರೀಡ್‌ ವುಮನ್‌ ಅಂಡ್‌ ದಿ ರೈಜ್‌ ಆಫ್‌ ಆ್ಯನ್‌ ಇಂಡಿಪೆಂಡೆಂಟ್‌ ನೇಶನ್‌’ನ ಲೇಖಕಿ ರೆಬೆಕಾ ಟೆಸ್ಟರ್‌ರ ಪ್ರಕಾರ, 2009ಕ್ಕೆ ಹೋಲಿಸಿದರೆ, ಈ ದಶಕದಲ್ಲಿ ಸಿಂಗಲ್ ಮಹಿಳೆಯರ ಹೆಚ್ಚುತ್ತಿರುವ ಸಂಖ್ಯೆ ಸಮಾಜದಲ್ಲಿ ಅವರ ಮಹತ್ವವನ್ನು ದಾಖಲಿಸುತ್ತದೆ.

ಪ್ರತಿಯೊಂದು ಸಂಬಂಧಕ್ಕೂ ತನ್ನದೇ ಆದ ಮಹತ್ವ ಇರುತ್ತದೆ ಎನ್ನುವುದು ಸತ್ಯ. ಏಕಾಂಗಿತನ ಮನಸ್ಸಿನ ಭ್ರಮೆ. ಆದರೆ ಅದಕ್ಕಾಗಿ ಬೇಕಾಗಿರುವ ಷರತ್ತು ಏನೆಂದರೆ, ಮಹಿಳೆಯರ ಸ್ವಾವಲಂಬಿತನ ಹಾಗೂ ಆತ್ಮಶಕ್ತಿ ಬಲಿಷ್ಠವಾಗಿರಬೇಕು. ಏಕೆಂದರೆ ಸ್ವಾವಲಂಬಿ ಆಗಿರದಿದ್ದರೆ, ತನ್ನ ಅವಶ್ಯಕತೆಗಳಿಗಾಗಿ ಆಕೆ ಇನ್ನೊಬ್ಬರನ್ನು ಅವಲಂಬಿಸಬೇಕಾಗುತ್ತದೆ. ಅದು ಅತ್ಯಂತ ಕಷ್ಟಕರ ಸಂಗತಿ. ಸ್ವಾವಲಂಬಿ ಆಗಿದ್ದರೆ ಯಾರೊಬ್ಬರ ಒತ್ತಡ ಇರದು, ತನ್ನ ವಿರುದ್ಧ ಮಾತನಾಡುವವರ ವಿರುದ್ಧ ಧ್ವನಿ ಹೊರಡಿಸುವ ಸಾಮರ್ಥ್ಯ ಇರುತ್ತದೆ.

“ಏಕಾಂಗಿಯಾಗಿರುವ ಮಹಿಳೆಯರು ತಮ್ಮ ಆತ್ಮಶಕ್ತಿಯನ್ನು ಬಲಿಷ್ಠವಾಗಿಟ್ಟುಕೊಳ್ಳಬೇಕು. ಈ ಜೀವನವನ್ನು ನೀವಾಗಿಯೇ ಆಯ್ದುಕೊಂಡಿರುವಿರಿ. ಅದರಲ್ಲಿಯೇ ನೀವು ಖುಷಿಯಿಂದಿರಬೇಕು. ಯಾರನ್ನೋ ನಿಮ್ಮ ಪತಿಯ ಜೊತೆ ಕಂಡು ಮನಸ್ಸನ್ನು ದುರ್ಬಲಗೊಳಿಸಿಕೊಳ್ಳುವ ವಿಚಾರ ನಿಮಗೆ ಬರಬಾರದು,” ಇದು ನೀಲಾ ಅವರ ಮಾತು.

ಜೀವನ ಎಂದರೆ ಲವಲವಿಕೆ. ಇಲ್ಲಿ ಯಾರೊಬ್ಬರು ಹೇಳಿದಂತೆ, ಆಡಿಸಿದಂತೆ ನಡೆಯುವುದಲ್ಲ. ನಿಮ್ಮನ್ನು ನೀವು ಆಂತರಿಕವಾಗಿ ಗಟ್ಟಿಗೊಳಿಸಿಕೊಂಡು ನಿಮ್ಮ ಶಕ್ತಿಯನ್ನು ಸಾಮಾಜಿಕ ಹಾಗೂ ಸೃಜನಶೀಲ ಕೆಲಸಗಳಲ್ಲಿ  ತೊಡಗಿಸಿಕೊಳ್ಳಬೇಕು. ನಿಮ್ಮನ್ನು ನೀವು ವ್ಯಸ್ತವಾಗಿಡುವ ಸಂಪನ್ಮೂಲಗಳನ್ನು ಶೋಧಿಸಬೇಕು.

– ಪ್ರತಿಭಾ

Tags:
COMMENT