ನಗರದ ಕಾಲೇಜೊಂದರಲ್ಲಿ ಲೆಕ್ಚರರ್ ಆಗಿರುವ ಮಲ್ಲಿಕಾ ನ್ಯಾಯಾಲಯದಲ್ಲಿ ಕುಳಿತು ತನ್ನ ಕೇಸಿನ ಸರದಿಗಾಗಿ ಕಾಯುತ್ತಿದ್ದಳು. ಕಳೆದ ಎರಡು ವರ್ಷಗಳಿಂದ ತನ್ನ ಕೇಸಿನ ಹಿಯರಿಂಗ್‌ಗಾಗಿ ನ್ಯಾಯಾಲಯಕ್ಕೆ ಭೇಟಿ ಕೊಡುತ್ತಿರುವ ಮಲ್ಲಿಕಾ, ಈಗ 13ನೇ ಸಲ ಇಲ್ಲಿಗೆ ಬಂದಿದ್ದಾಳೆ. ಅವಳು ತನ್ನ ಪತಿಯಿಂದ ವಿಚ್ಛೇದನ, ಮಾಸಿಕ ವೆಚ್ಚ ಮತ್ತು ತನ್ನ ಮಗಳ ಕಸ್ಟಡಿಗಾಗಿ ಕೇಸ್ ದಾಖಲಿಸಿದ್ದಾಳೆ.
ಕೇಸಿನ ಅಂತಿಮ ತೀರ್ಪು ಹೊರಬರಲು ವರ್ಷವೇ ಆಗಬಹುದು ಎಂಬುದು ಮಲ್ಲಿಕಾಳಿಗೆ ಗೊತ್ತು. ಕೇಸ್‌ಗಾಗಿ ಕಾಲೇಜಿನ ರಜೆ, ಸಮಯ ಮತ್ತು ಹಣ ಎಲ್ಲ ವ್ಯಯವಾಗುತ್ತಿವೆ. ಕೇಸ್ ತೀರ್ಮಾನವಾಗಲು ಇಷ್ಟು ದೀರ್ಘಕಾಲ ಬೇಕಿರಲಿಲ್ಲ. ಆದರೆ ಕೆಲವು ಸಲ ನ್ಯಾಯಾಧೀಶರು ಬರುತ್ತಿರಲಿಲ್ಲ. ಮತ್ತೆ ಕೆಲವು ಸಲ ಅವಳ ಪತಿ ಗೈರುಹಾಜರಿಯಾಗುತ್ತಿದ್ದನು.
ನ್ಯಾಯಾಲಯ ಮತ್ತು ವಕೀಲರ ಧೋರಣೆಯ ಬಗ್ಗೆ ಮಲ್ಲಿಕಾ ಹೀಗೆ ಹೇಳುತ್ತಾಳೆ, ``ನ್ಯಾಯಾಲಯದಲ್ಲಿ ಕೇಸ್ ದಾಖಲಿಸಿದಾಗ ಸಹನೆಯಿಂದ ನಡೆದುಕೊಳ್ಳುವಂತೆ ನನಗೆ ಹೇಳಿದರು. ನಂತರ ನಮ್ಮನ್ನು ಕೌನ್ಸೆಲಿಂಗ್‌ಗೆ ಕಳುಹಿಸಲಾಯಿತು. ನಾನು ಮಂಗಳ ಸೂತ್ರವನ್ನು ಧರಿಸಿಲ್ಲದಿರುವುದನ್ನು ಕಂಡು ಕೌನ್ಸೆಲರ್ ನನಗೆ `ನೀವಿನ್ನು ವಿವಾಹಿತರು, ಮಂಗಳಸೂತ್ರ ಧರಿಸದೆ ಭಾರತೀಯ ಸಂಸ್ಕೃತಿಯನ್ನು ಅನಾದರ ಮಾಡುತ್ತಿರುವಿರಿ,' ಎಂದು ದೂಷಿಸಿದರು. ಮತ್ತೆ `ನಿಮಗೇನು ಬೇಕು?' ಎಂದು ಕೇಳಿದರು. ನನಗೆ ಗೌರವ ಬೇಕು ಎಂದು ಹೇಳಿದೆ. ನಾನು ಗೌರವದ ವಿಷಯ ಹೇಳಿದರೆ ಯಾರೂ ಅದನ್ನು ಅನುಮೋದಿಸುವುದಿಲ್ಲ. ಎಲ್ಲರೂ ಪಕ್ಷಪಾತಿಗಳು.''
ನಗರದ ಮತ್ತೊಬ್ಬ ನಿವಾಸಿ 40 ವರ್ಷ ವಯಸ್ಸಿನ ಸುಜಾತಾ 2011ರಲ್ಲಿ ಫ್ಯಾಮಿಲಿ ಕೋರ್ಟ್‌ನಲ್ಲಿ ಕೇಸ್ ಹಾಕಿದ್ದಾರೆ. ಅವರು ತಮ್ಮ ಪತಿಯಿಂದ ವಿಚ್ಛೇದನ ಮತ್ತು ತಮ್ಮ ಹೆಣ್ಣುಮಕ್ಕಳ ಕಸ್ಟಡಿ ಬಯಸುತ್ತಾರೆ. ಅಲ್ಲಿನ ನ್ಯಾಯಾಧೀಶರೂ ಸಹ ಪುರುಷಪ್ರಧಾನ ಮನೋಭಾವನೆಯಿಂದ ಕೂಡಿದ ಸಲಹೆಯಿತ್ತರು. ``ನೀವು ನಿಮ್ಮ ಪತಿಯೊಂದಿಗೆ ಯಾವುದಾದರೂ ಹೋಟೆಲ್‌ನಲ್ಲಿ ಕುಳಿತು ಊಟ ಮಾಡಬೇಕು. ಆ ಸಮಯದಲ್ಲಿ ಮಾತುಕತೆಯ ಮೂಲಕ ನಿಮ್ಮ ಸಮಸ್ಯೆಗೆ ಪರಿಹಾರ ಹುಡುಕಿ. ನಿಮ್ಮ ಮಕ್ಕಳ ಭವಿಷ್ಯಕ್ಕಾಗಿ ಹೀಗೆ ಮಾಡುವುದು ಒಳ್ಳೆಯದು.''
ಸೆಪ್ಟೆಂಬರ್ 2017ರಲ್ಲಿ ಉಚ್ಚ ನ್ಯಾಯಾಲಯ ಹೊರಡಿಸಿರುವ ಆದೇಶವೆಂದರೆ, ಯಾವುದೇ ದಂಪತಿಗೆ ವಿಚ್ಛೇದನ ಅನಿವಾರ್ಯವಾಗಿದ್ದು, ಪತಿ ಪತ್ನಿಯರಿಬ್ಬರೂ ಅದಕ್ಕೆ ಸಿದ್ಧವಾಗಿದ್ದರೆ ಅವರಿಗೆ 6 ತಿಂಗಳ ನಿರೀಕ್ಷಣಾ ಕಾಲ ಅಗತ್ಯವಿಲ್ಲ. ನಮ್ಮ ದೇಶದ ನ್ಯಾಯ ಪ್ರಣಾಳಿಕೆಯಲ್ಲಿ ಈ ಆದೇಶವನ್ನು ಒಂದು ಪ್ರಗತಿಪರ ಅಂಶವೆಂದು ತಿಳಿಯಲಾಗಿದೆ. ಏಕೆಂದರೆ ವಿಚ್ಛೇದನ ಪಡೆಯಲು 2 ರಿಂದ 12 ವರ್ಷ ಹಿಡಿಯಬಹುದಾಗಿದ್ದು, ಸಂಬಂಧಿತ ವ್ಯಕ್ತಿಗಳಿಗೆ ಅದೊಂದು ದುಃಸ್ವಪ್ನದಂತೆ ಭಾಸವಾಗುತ್ತದೆ. 3 ದಶಕಗಳಿಗೆ ಹಿಂದೆ ವೈವಾಹಿಕ ವಿವಾದಗಳನ್ನು ಸಿವಿಲ್ ಕೋರ್ಟ್‌ನಿಂದ ಬೇರ್ಪಡಿಸಿ ಫ್ಯಾಮಿಲಿ ಕೋರ್ಟ್‌ಗೆ ಸ್ಥಾನಾಂತರಗೊಳಿಸಲಾಗಿತ್ತು. ಇದರಿಂದ ಮಧ್ಯಸ್ಥಿಕೆ ಮತ್ತು ಸಲಹೆಗಳ ಮೂಲಕ ಸಮಸ್ಯೆಗಳನ್ನು ಬಗೆಹರಿಸಲು ಅನುಕೂಲವಾಯಿತು. ಆದರೆ ಫ್ಯಾಮಿಲಿ ಕೋರ್ಟ್‌ನ ಕಾರ್ಯವಿಧಾನ ವಿಳಂಬಗತಿಯಲ್ಲಿ ಸಾಗುತ್ತದೆ. ಇದಕ್ಕೆ ಮುಖ್ಯ ಕಾರಣವೆಂದರೆ ನ್ಯಾಯಾಧೀಶರಿಂದ ಹಿಡಿದು ಉಳಿದೆಲ್ಲ ಸಿಬ್ಬಂದಿ ವರ್ಗದ ಕೊರತೆ. ಇದರಿಂದಾಗಿ ಕೇಸ್‌ಗಳನ್ನು ಬೇರೊಂದು ತಾರೀಖಿಗೆ ಮುಂದೂಡಲಾಗುತ್ತದೆ. ನ್ಯಾಯಾಲಯಗಳಲ್ಲಿ ದಿನಕ್ಕೆ ಸುಮಾರು 70-80 ಕೇಸ್‌ಗಳು ಹಿಯರಿಂಗ್‌ಗೆ ಪಟ್ಟಿ ಮಾಡಲ್ಪಟ್ಟಿರುತ್ತವೆ. ಆದರೆ ಕೆಲವನ್ನು ಮಾತ್ರ ಕೈಗೆತ್ತಿಕೊಳ್ಳಲು ಸಾಧ್ಯವಾಗುತ್ತದೆ ಉಳಿದಕ್ಕೆ ಮುಂದಿನ ತಾರೀಖುಗಳನ್ನು ಸೂಚಿಸಲಾಗುತ್ತದೆ.