ರಾತ್ರಿ ಮೇಘನಾ ಮನೆಗೆ ಬರುತ್ತಿದ್ದಂತೆಯೇ ರಾಜೇಶ್ ಅವಳ ಬಳಿ ಸಿಟ್ಟಿನ ಮುಖದಲ್ಲಿಯೇ ಬಂದು ನಿಂತ. ಆಕೆ ಡ್ರೈವರ್‌ಗೆ ನಾಳೆ ಮುಂಜಾನೆ ಸರಿಯಾದ ಸಮಯಕ್ಕೆ ಬರಬೇಕೆಂದು ಸೂಚನೆ ಕೊಡುವಲ್ಲಿ ಮಗ್ನಳಾಗಿದ್ದಳು. ಅಷ್ಟು ಹೊತ್ತೂ ರಾಜೇಶ್ ಅವಳನ್ನು ನುಂಗಿಬಿಡುವಂತೆ ನೋಡುತ್ತಿದ್ದ.
ಡ್ರೈವರ್ ಹೋದ ಬಳಿಕ ಮೇಘನಾ ರಾಜೇಶ್ ಕಡೆ ಗಮನ ಕೊಡದೆಯೇ ತನ್ನ ರೂಮಿಗೆ ಹೊರಟುಹೋದಳು. ಅವಳಿಗೂ ಸಾಕಷ್ಟು ಕೋಪ ಬರುತ್ತಿತ್ತು. ಆದರೂ ಅವಳು ಮೌನವಾದಳು. ಮತ್ತೊಂದು ಸಂಗತಿಯೆಂದರೆ, ಅವಳು ಸಾಕಷ್ಟು ದಣಿದಿದ್ದಳು. ಮೂವರು ದಿನಗಳ ಬಳಿಕ ಒಂದು ಕಾನ್‌ಫರೆನ್ಸ್ ಗೆಂದು ಅವಳು ಸಿಂಗಾಪುರಕ್ಕೆ ಹೋಗಬೇಕಿತ್ತು. ಅದಕ್ಕೂ ಮುಂಚೆ ಅವಳು ಅಲ್ಲಿ ಪ್ರೆಸೆಂಟ್ ಮಾಡಲು ಪೇಪರ್ಸ್ ಸಿದ್ಧ ಮಾಡಿಕೊಳ್ಳಬೇಕಿತ್ತು. ಇದರ ಹೊರತಾಗಿ ಬೇರೆ ಸಿದ್ಧತೆಗಳನ್ನು ಮಾಡಿಕೊಳ್ಳಬೇಕಿತ್ತು. ಹೀಗಾಗಿ ಅವಳು ರಾಜೇಶ್ ಜೊತೆ ಮಾತಿಗೆ ಮಾತು ಬೆರೆಸುವ ಮೂಡ್‌ನಲ್ಲಿರಲಿಲ್ಲ. ಇತ್ತೀಚೆಗೆ ರಾಜೇಶನ ಈ ತೆರನಾದ ವರ್ತನೆ ಸಾಮಾನ್ಯ ಎಂಬಂತಾಗಿಬಿಟ್ಟಿತ್ತು. ಅವಳು ಯಾವಾಗ ಅವನಿಗಿಂತ ಉನ್ನತ ಹುದ್ದೆಗೇರಿದ್ದಳೋ ಆಗಿನಿಂದ ಅವನು ಅವಳ ಬಗ್ಗೆ ಸದಾ ತುಚ್ಛವಾಗಿ ಮಾತನಾಡುತ್ತಿದ್ದ.
ದುರ್ವರ್ತನೆ
``ನಿನ್ನನ್ನು ನೀನು ಏನೆಂದು ತಿಳಿದುಕೊಂಡಿರುವೆ? ನೌಕರಿ ಮಾಡುವವಳು ನೀನೊಬ್ಬಳೇನಾ ಅಥವಾ ನಿನ್ನ ಅಹಂ ಪ್ರಮಾಣ ಮಿತಿ ಮೀರುತ್ತಿದೆಯಾ?'' ಎಂದು ಹೇಳುತ್ತಲೇ ರಾಜೇಶ್ ಒಳಗೆ ಬಂದ. ಆದರೂ ಮೇಘನಾ ಸುಮ್ಮನೇ ಇದ್ದಳು. ಅವಳು ಏನಾದರೂ ಹೇಳಿದ್ದರೂ ಏನಾಗುತಿತ್ತು? ಮಾತು ಇನ್ನಷ್ಟು ಮುಂದುವರಿಯುತ್ತಿತ್ತು.
``ನಾನು ನಿನ್ನೊಂದಿಗೇ ಮಾತಾಡ್ತಿರೋದು. ನನಗೆ ಉತ್ತರ ಕೊಡು, ಇಂದು ಏಕೆ ಇಷ್ಟೊಂದು ತಡ ಆಯ್ತು?''
ರಾಜೇಶನ ಮಾತುಗಳನ್ನು ಕೇಳಿಯೂ ಕೇಳದವಳಂತೆ ಟವೆಲ್ ಎತ್ತಿಕೊಂಡು ಆಕೆ ಬಾಥ್ ರೂಮ್ ಕಡೆ ನಡೆದಳು. ರಾಜೇಶ್ ಬಹಳ ಹೊತ್ತಿನ ತನಕ ಬಡಬಡಿಸುತ್ತ ಅಲ್ಲಿಯೇ ನಿಂತಿದ್ದ. ನಂತರ ದಿಂಬು ಎತ್ತಿಕೊಂಡು ಬೇರೆ ರೂಮಿಗೆ ಮಲಗಲು ಹೋದ. ಮರುದಿನ ಮೇಘನಾ ಈ ಸಂಗತಿಯನ್ನು ತನ್ನ ಅಕ್ಕನಿಗೆ ಹೇಳಿದಾಗ ಆಕೆ, ``ನೀನು ಅವನಿಗೆ ಆ ತಕ್ಷಣವೇ ಸ್ಪಷ್ಟ ಉತ್ತರ ಕೊಡಬೇಕಿತ್ತು. ಅವನು ತನ್ನನ್ನು ತಾನು ಏನೆಂದು ತಿಳಿದುಕೊಂಡಿದ್ದಾನೆ? ಯಾವಾಗ ಬೇಕೆಂದಾಗ ನಿನ್ನ ಮೇಲೆ ಹಕ್ಕು ಚಲಾಯಿಸಲು ನೀನೇನು ಅವನ ಗುಲಾಮಳಲ್ಲ, ಈಗಂತೂ ಅವನ ವರ್ತನೆ ಬಹಳ ಕಠೋರವಾಗುತ್ತ ಹೊರಟಿದೆ,'' ಎಂದು ಸ್ವಲ್ಪ ಕೋಪದಿಂದ ಹೇಳಿದಳು.
``ಅಕ್ಕಾ, ಅವರಿಗೆ ಉತ್ತರ ಕೊಟ್ಟು ಏನು ಪ್ರಯೋಜನ? ಅದರಿಂದ ವಾದ ವಿವಾದ ಬೆಳೆಯುತ್ತದೆಯೇ ವಿನಾ ಮತ್ತೇನೂ ಆಗದು. ನನಗನಿಸುತ್ತೆ ಅವರು ಯಾವಾಗ್ಯಾವಾಗ ಕೂಗಾಡುತ್ತಾರೋ, ಆಗ ಅವರನ್ನು ನಿರ್ಲಕ್ಷ್ಯ ಮಾಡುವುದು ಒಳ್ಳೆಯದು. ನಮ್ಮ ಸಮಾಜದಲ್ಲಿ ಗಂಡಿನ ಯಶಸ್ಸಿನ ಬಗ್ಗೆ ಪ್ರಶಂಸೆಯ ಸುರಿಮಳೆಯನ್ನೇ ಸುರಿಸಲಾಗುತ್ತದೆ. ಆದರೆ ಹೆಂಡತಿಯ ಯಶಸ್ಸು ಗಂಡನಿಗೆ ಕಣ್ಣಲ್ಲಿ ಚುಚ್ಚಲಾರಂಭಿಸುತ್ತದೆ. ಆಕೆ ಗಳಿಸುವ ಹಣ ಮನೆಗೆ ಬರುವುದು ಮಾತ್ರ ಅವರಿಗೆ ಖೇದ ಎನಿಸುವುದಿಲ್ಲ,'' ಮೇಘನಾ ದುಃಖದಿಂದಲೇ ಹೇಳಿದಳು.
ರಾಜೇಶನ ವರ್ತನೆ ವ್ಯವಹಾರದಿಂದ ಆಕೆ ತೀರಾ ನೊಂದಿದ್ದಳು. ರಾಜೇಶ್ ಅವಳನ್ನು ಯಾವಾಗಲೂ ಕೆಣಕುವುದು, ಟೀಕಿಸುವುದು ಮಾಡುತ್ತಲೇ ಇದ್ದರೂ ಆಕೆ ಮಾತ್ರ ಅದನ್ನು ನಿರ್ಲಕ್ಷಿಸುವುದೇ ಉತ್ತಮ ಎಂದು ಭಾವಿಸುತ್ತಿದ್ದಳು. ತಾನೂ ಕೂಡ ವಾದಕ್ಕೆ ಪ್ರತಿವಾದ ಮಾಡುತ್ತಿದ್ದರೆ, ಮನೆ ರಣರಂಗವಾಗಿ ಬಿಡುತ್ತಿತ್ತು. ಹಾಗಾಗುವುದು ಆಕೆಗೆ ಬೇಕಿರಲಿಲ್ಲ.