ಮೈಸೂರಿನ ಗಾಯತ್ರಿ ತಮ್ಮ ಮಗನ ಮದುವೆಯನ್ನು ಬೆಂಗಳೂರಿನ ಪ್ರಭಾವತಿಯವರ ಮಗಳ ಜೊತೆ ಮುಗಿಸಿದರು. ಬೆಂಗಳೂರಿನಲ್ಲಿ ಮದುವೆ ಮುಗಿದು ಮಗಳನ್ನು ಅತ್ತೆಮನೆಗೆ ಬೀಳ್ಕೊಡುವಾಗ ತಾಯಿ ಪ್ರಭಾವತಿ ಮಗಳನ್ನು ಸಂತೈಸುತ್ತಾ, “ನೋಡಮ್ಮ ಪ್ರಿಯಾ, ಇಷ್ಟು ದಿನಗಳು ನಿನ್ನ ತಾಯಿ ಬೇರೆ. ಇನ್ನು ಮುಂದೆ ಇವರೇ ನಿನ್ನ ತಾಯಿ! ಇನ್ನು ಮುಂದೆ ನೀನು ಸೊಸೆಗೆ ಬದಲಾಗಿ ಅವರ ಮನೆ ಮಗಳಾಗಿ ಇರ್ತೀಯಾ,” ಎಂದು ಕಣ್ಣೊರೆಸಿಕೊಂಡರು.

ಆಗ ಗಾಯತ್ರಿ ಆ ಮಾತು ಒಪ್ಪದೆ, “ಇಲ್ಲ….. ಇಲ್ಲ…. ನಾನು ನಿಮ್ಮಿಂದ ಆ ತಾಯಿಯ ಹಕ್ಕನ್ನು ಕಿತ್ತುಕೊಳ್ಳಲು ಬಯಸುವುದಿಲ್ಲ. ಪ್ರಿಯಾಳಿಗೆ ಮುಂದೆಯೂ ನೀವೇ ಅಮ್ಮ ಆಗಿರುತ್ತೀರಿ, ತಾಯಿಯ ಸ್ಥಾನ ಯಾರೂ ತುಂಬಲಾಗದು. ಇದುವರೆಗೂ ನಾನು ನನ್ನ ಮಗಳ ಪ್ರೀತಿ ಪಡೆದಿದ್ದೇನೆ. ಅಮ್ಮನಾಗಿರುವುದರ ಜೊತೆ ಅತ್ತೆಯೂ ಆಗಬೇಕಿದೆ. ಅತ್ತೆ ಸೊಸೆ ಹೇಗೆ ಹೊಂದಿಕೊಂಡು ಸುಖವಾಗಿರಬಹುದು ಎಂದು ಅರಿಯುವ ಕಾಲ ಬಂದಿದೆ. ನಾನೇಕೆ ಅಮ್ಮನಾಗಿ ಅತ್ತೆಯ ಆ ಸುಖ ಕಳೆದುಕೊಳ್ಳಲಿ?”

ಇಲ್ಲಿ ಏಳುವ ಪ್ರಶ್ನೆ ಎಂದರೆ ಸಂಬಂಧದ ಹೆಸರು ಬದಲಿಸಿ ಅದನ್ನು ಬಿಂಬಿಸುವ ಪ್ರಯತ್ನವೇಕೆ? ಅದನ್ನು ಬೇರೆ ಸಂಬಂಧದೊಂದಿಗೆ ಹೋಲಿಸಿ ಈ ಸಂಬಂಧ ಪೊಳ್ಳು ಎನಿಸುವುದೇಕೆ? `ಅತ್ತೆ’  ಎಂದಾಕ್ಷಣ ಅದೊಂದು ಭಯಂಕರ ಶಬ್ದ ಎಂದೇಕೆ ಅನಿಸಬೇಕು? ಅಮ್ಮ ಎಂದೊಡನೆ ಮಮತಾಮಯಿ ಸ್ತ್ರೀ ನೆನಪಾಗುವಂತೆ ಅತ್ತೆ ಎಂದೊಡನೆ ಅದು ಭಯಂಕರ ಶಬ್ದ ಎಂದೇಕೆ ಅಂದುಕೊಳ್ಳಬೇಕು? ಒಬ್ಬ ಕ್ರೂರ, ಸದಾ ಸಿಡಿಗುಟ್ಟುವ, ಕಣ್ಣಲ್ಲಿ ಕೆಂಡಕಾರುವ ಪ್ರೌಢ ಮಹಿಳೆಯ ಚಿತ್ರ ನೆನಪಾಗುವುದೇಕೆ? ಸೊಸೆ ಎಂದಾಕ್ಷಣ ಅದೇಕೆ ಅಪರಿಚಿತ ಪದ ಎಂದೆನಿಸಬೇಕು? ಆ ಪದವನ್ನು ನಮ್ಮದೇ ಆಗಿಸಿಕೊಳ್ಳಲು `ಮಗಳ ಸಮಾನ’ ಎಂಬ ಅಡ್ಜಸ್ಟ್ ಮೆಂಟ್‌ ಯಾಕೆ? ಇದರ ಹಿಂದಿನ ಕಾರಣವಿಷ್ಟೆ, ಕೆಲವು ಸಂಬಂಧಗಳು ತಮ್ಮ ಹೆಸರಿನ ಅರ್ಥವನ್ನೇ ಕಳೆದುಕೊಂಡಿವೆ.

ಅಹಂ ಮತ್ತು ಸ್ವಾರ್ಥದ ಸುಳಿಗೆ ಸಿಲುಕಿ ಪರಸ್ಪರರ ಕುರಿತು ವ್ಯವಹಾರ ಎಷ್ಟು ಒರಟಾಗಿದೆ ಎಂದರೆ, ಸಂಬಂಧದ ಒಂದು ಪಕ್ಷದ ಬಗ್ಗೆ ಮಾತ್ರವೇ ಮಾತು ಕೇಳಿ ಬರುವಂತಾಗಿದೆ. ಆ ಸಂಬಂಧಗಳ ಸುಖಾನುಭೂತಿ ದರ್ಶಿಸಲು, ಬೇರೆ ಅನ್ಯ ಸಂಬಂಧದ ಹೆಸರಿನ ಸಹಾಯ ಪಡೆಯಲಾಗುತ್ತಿದೆ. ಆದರೆ ಕೇವಲ ಹೆಸರು ಬದಲಾಯಿಸಿದ ಮಾತ್ರಕ್ಕೆ ಯಾವ ಸಂಬಂಧ ಗ್ರೇಟ್‌ ಎನಿಸುವುದಿಲ್ಲ. ಇದಕ್ಕಾಗಿ ವ್ಯವಹಾರ ಹಾಗೂ ಯೋಚನಾಧಾಟಿಯಲ್ಲಿ ಬದಲಾವಣೆ ಅತ್ಯಗತ್ಯ.

ಅತ್ತೆ ಸೊಸೆ ಎಣ್ಣೆ ಸೀಗೇಕಾಯಲ್ಲ

ಅತ್ತೆ ಸೊಸೆ ಎಂದಾಕ್ಷಣ ಅವರ ಸಂಬಂಧ ಮಧುರವಾಗಿರಲು ಸಾಧ್ಯವೇ ಇಲ್ಲ ಎಂಬಂತಾಗಿಬಿಟ್ಟಿದೆ. ಇದನ್ನು ಸುಂದರಗೊಳಿಸಲು ಕಾಲಕ್ಕೆ ತಕ್ಕಂತೆ ಇದರಲ್ಲಿ ಬದಲಾವಣೆ ತರಬೇಕಿದೆ. ಸದ್ಯದ ಪರಿಸ್ಥಿತಿಯಲ್ಲಿ ಬಹುತೇಕ ಸೊಸೆಯರು ವರ್ಕಿಂಗ್‌ ವಿಮೆನ್‌ ಆಗಿರುತ್ತಾರೆ. ಅತ್ತೆಯೂ ಸಹ ಸದಾ ಮನೆಗೆ ಅಂಟಿ ಕೂರುವವರಲ್ಲ. ಹೀಗಾಗಿ ಈ ಸಂಬಂಧದಲ್ಲಿ ಈಗ ತಾಯಿ ಮಗಳ ಅನ್ಯೋನ್ಯತೆಗಿಂತ ಹೆಚ್ಚಾಗಿ ಪರಸ್ಪರ ಮೈತ್ರಿಯ ಅನಿವಾರ್ಯತೆಯನ್ನು ಗಮನಿಸಲಾಗುತ್ತಿದೆ. ಎರಡೂ ಪಕ್ಷಗಳು ಕೆಲವು ವಿಷಯಗಳನ್ನು ಗಮನದಲ್ಲಿಟ್ಟುಕೊಂಡು ಪರಸ್ಪರ ಉತ್ತಮ ವ್ಯವಹಾರ ತೋರಿದರೆ ಈ ಸಂಬಂಧಕ್ಕೆ ಹೊಸ ಹೆಸರು ಕೊಡುವ ಅಗತ್ಯವಿಲ್ಲ.

ಅತ್ತೆ ಎಂದೊಡನೆ ಅಲರ್ಜಿ ಏಕೆ?

`ಅತ್ತೆ’ ಎಂದೊಡನೆ ಎಲ್ಲರಿಗೂ ಇಷ್ಟವಾಗುವ ಮಾತಾಗಬೇಕು. ಅತ್ತೆ ಸೊಸೆ ಸಂಬಂಧ ಪ್ರೀತಿ ವಾತ್ಸಲ್ಯಗಳಿಂದ ಕೂಡಿದಾಗ ಮಾತ್ರ ಎಲ್ಲ ಚೆನ್ನ! ಇದಕ್ಕಾಗಿ ಅತ್ತೆ ಗಮನಿಸತಕ್ಕ ಅಂಶಗಳು :

ಸೊಸೆಗೆ ಧಾರಾಳ ಪ್ರೀತಿ ವಾತ್ಸಲ್ಯ ತೋರುತ್ತಾ, ಅವಳನ್ನು ಗೆಳತಿಯಾಗಿ ಕಾಣಬೇಕು.

ಒಬ್ಬ ಹೆಣ್ಣಾಗಿ ಸೊಸೆಯ ಭಾವನೆಗಳನ್ನು ಗೌರವಾದರಗಳಿಂದ ಕಾಣಿರಿ.

ಸಂಪ್ರದಾಯದ ಹೆಸರಿನಲ್ಲಿ ಮತ್ತೆ ಮತ್ತೆ ವ್ರತ, ನೇಮ ಎಂದು ಕಂದಾಚಾರದ ದಬ್ಬಾಳಿಕೆ ನಡೆಸದಿರಿ.

ಪ್ರಸ್ತುತ ಕಾಲದಲ್ಲಿ ಉಡುಗೆಗಳ ವರ್ಗೀಕರಣ ವಿವಾಹಿತೆ, ಅವಿವಾಹಿತೆ ಎಂಬ ಆಧಾರದ ಮೇಲೆ ಮಾಡುವುದಿಲ್ಲ. ಹೀಗಾಗಿ ಡ್ರೆಸ್‌ ವಿಷಯದಲ್ಲಿ ಅವಳನ್ನು ಇಂಥದ್ದೇ ಹಾಕಿಕೊಳ್ಳಬೇಕು, ಇದು ಕೂಡದು ಎಂದು ಶಾಸನ ವಿಧಿಸಬೇಡಿ.

ನಿಮ್ಮ ಮನೆ ಬೆಳಗಲು ಬಂದಿರುವ ಸೊಸೆ ಒಂದು ಯಂತ್ರವಲ್ಲ ಸಂವೇದನೆ ತುಂಬಿರುವ ಒಬ್ಬ ವ್ಯಕ್ತಿ ಎಂದು ಪ್ರೀತಿಸಿ.

ಪ್ರತಿಯೊಬ್ಬ ವ್ಯಕ್ತಿಗೂ ತಮ್ಮದೇ ಆದ ಅಭಿಪ್ರಾಯಗಳಿರುತ್ತವೆ. ಯಾವುದೇ ವಿಷಯದಲ್ಲಿ ಭಿನ್ನಾಭಿಪ್ರಾಯ ಬಂದಾಗ, ಪ್ರೀತಿಯಿಂದ ನಿಮ್ಮ ವಿಚಾರವನ್ನು ಅವಳಿಗೆ ತಿಳಿಸಿ ಹೇಳಿ. ಸೊಸೆ ಹೇಳುವ ಮಾತುಗಳನ್ನು ತಾಳ್ಮೆಯಿಂದ ಕೇಳಿಸಿಕೊಳ್ಳಿ. ಆಗ ಇಬ್ಬರ ಮಧ್ಯೆ ತಕರಾರಿನ ಪ್ರಶ್ನೆಯೇ ಇರುವುದಿಲ್ಲ.

ಸೊಸೆ ಬಳಿ ಸಾಂಸಾರಿಕ ವಿಷಯಗಳನ್ನು ಗುಟ್ಟು ಮಾಡಬೇಡಿ.

ಸೊಸೆ ಜೊತೆ ಆಗಾಗ ಹೊರಗಿನ ಶಾಪಿಂಗ್‌, ಓಡಾಟ ಎಂದು ಸುತ್ತಾಡುತ್ತಿರಿ. ಇದು ನಿಮ್ಮಿಬ್ಬರ ಸ್ನೇಹ ಬಲಪಡಿಸುತ್ತದೆ.

ಸೊಸೆ ಎಂದರೆ ಅಪ್ರಿಯವೇಕೆ?

ಸೊಸೆ ಆದ ತಕ್ಷಣ ಹುಡುಗಿಯ ಪ್ರಪಂಚ ಎಷ್ಟೋ ಬದಲಾಗುತ್ತದೆ. ಅವಳು ನಿರ್ವಹಿಸಬೇಕಾದ ಕರ್ತವ್ಯ, ಜವಾಬ್ದಾರಿಗಳ ಲಿಸ್ಟ್ ಒಪ್ಪಡಿಸಲಾಗುತ್ತದೆ. ಹೊಸ ವಾತಾವರಣದಲ್ಲಿ ತನ್ನ ಸ್ಥಾನ ಭದ್ರಪಡಿಸಿಕೊಳ್ಳುವ ಸವಾಲು ಸ್ವೀಕರಿಸುತ್ತಾ, ಅವಳಿಗೆ ಈ ಹೊಸ ಜೀವನದಲ್ಲಿ ತನ್ನತನ ಹುಡುಕಿಕೊಳ್ಳಬೇಕಿದೆ. ಸೊಸೆ ಎಂದರೆ ಅಪ್ರಿಯ ಶಬ್ದವಲ್ಲ ಎಂದು ನಿರೂಪಿಸಲು ಅವಳು ಈ ಕೆಳಗಿನ ಅಂಶ ಗಮನಿಸತಕ್ಕದ್ದು.

ಅತ್ತೆಮನೆಯೇ ತನ್ನ ಮನೆ ಎಂಬ ಭಾವನೆಯಿಂದ ಈ ಮನೆಗೆ ಪ್ರವೇಶ ಪಡೆಯಬೇಕು.

ಅಲ್ಲಿನ ವಾತಾವರಣಕ್ಕೆ ಆದಷ್ಟು ಬೇಗ ಹೊಂದಿಕೊಳ್ಳಲು ಪ್ರಯತ್ನಿಸಿ. ಪ್ರತಿ ಸಣ್ಣ ಸಣ್ಣ ವಿಷಯಕ್ಕೂ ಅತ್ತೆ ಮನೆಯ ಸಂಗತಿಗಳನ್ನು ತವರಿಗೆ ಹೋಲಿಸುತ್ತಾ ಅದುವೇ ಚೆನ್ನಾಗಿತ್ತು ಎಂದು ಗೊಣಗುತ್ತಿದ್ದರೆ, ನಿರಾಸೆ ಕಟ್ಟಿಟ್ಟ ಬುತ್ತಿ.

ಇಂದಿನ ವಿದ್ಯಾವಂತ ಸೊಸೆಯರು ಪರಿಸ್ಥಿತಿ ಅರ್ಥ ಮಾಡಿಕೊಳ್ಳುತ್ತಾ, ತಮ್ಮ ವೈಯಕ್ತಿಕ ಜೀವನಕ್ಕೆ ಸಂಬಂಧಿಸಿದ ನಿರ್ಧಾರ ತಾವೇ ತೆಗೆದುಕೊಳ್ಳಲು ಮುಂದಾಗುತ್ತಾರೆ. ಒಬ್ಬ ಸೊಸೆಯಾದ ಕಾರಣ, ಅತ್ತೆಯ ಬಳಿ ಚರ್ಚಿಸುತ್ತಾ ತನ್ನ ಮಾತು ಅರ್ಧ ಜಯಿಸಿಕೊಂಡು, ಅವರು ಹೇಳಿದಂತೆಯೂ ನಡೆದುಕೊಂಡರೆ, ಪ್ರತಿ ಸಂದರ್ಭವನ್ನೂ ಸುಲಭವಾಗಿ ನಿಭಾಯಿಸಬಹುದು.

ಸೊಸೆ ನೆನಪಿಡಬೇಕಾದ ಮತ್ತೊಂದು ಮುಖ್ಯ ವಿಷಯ, ಅವಳ ಗಂಡ ಮೊದಲು ಆ ಮನೆಯ ಮಗ. ಹಾಗಾಗಿ ಅವನಿಗೆ ಅಲ್ಲಿನವರೆಲ್ಲರ ನಿಕಟ ಸಂಬಂಧವಿರುತ್ತದೆ. ಆದ್ದರಿಂದ `ನನ್ನ ಗಂಡ ನನಗೆ ಮಾತ್ರ ಸ್ವಂತ’ ಎಂದು ಭಾವಿಸದೆ, ಮನೆಯ ನಂದಾದೀಪವಾಗಿ ಮುನ್ನಡೆಯಿರಿ.

ಸೋಶಿಯಲ್ ಮೀಡಿಯಾದ ಇಂದಿನ ಯುಗದಲ್ಲಿ ಮೊಬೈಲ್‌ ಯಾ ವಾಟ್ಸ್ಆ್ಯಪ್‌ ಮಾಧ್ಯಮದಿಂದ ಸೊಸೆ ತನ್ನ ತವರಿನವರು, ನೆಂಟರಿಷ್ಟರೊಂದಿಗೆ ಸಂಪರ್ಕದಲ್ಲಿರುತ್ತಾಳೆ. ಹಾಗಾಗಿ ಅತ್ತೆಮನೆಯಲ್ಲಿ ನಡೆಯುವ ಪ್ರತಿ ವರದಿಯನ್ನೂ ತವರಿನವರಿಗೆ ಬಿತ್ತರಿಸುವ ಅಗತ್ಯವಿಲ್ಲ. ಪರಿಸ್ಥಿತಿಗೆ ತಕ್ಕಂತೆ ವಿವೇಕದಿಂದ ವರ್ತಿಸಿ.

– ಮಧು ಶರ್ಮ

ಮಧುರ ಸಂಬಂಧಗಳಿಗಾಗಿ

ಹಿರಿ/ಕಿರಿ ನಾದಿನಿ, ವಾರಗಿತ್ತಿಯರ ಸಂಬಂಧವನ್ನು ಸೊಸೆಯ ಅಕ್ಕತಂಗಿಯರ ಜೊತೆಗೆ ಹೋಲಿಸುತ್ತಾ ಅಲ್ಲಿನ ಹಾಗೆಯೇ ಇಲ್ಲಿಯೂ ನಡೆದುಕೊಳ್ಳಬೇಕೆಂದು ಹೇಳಲಾಗುತ್ತದೆ. ಅಕ್ಕ ತಂಗಿಯರ ಹಾಗೆ ಎಂದು ಹೇಳಿದ ಮಾತ್ರಕ್ಕೆ ಯಾವ ಸಂಬಂಧ ಮಧುರವಾಗಲಾರದು. ಈ ಸಂಬಂಧಗಳನ್ನು ಮಧುರವಾಗಿ ಉಳಿಸಿಕೊಳ್ಳಲು ಸಂಯಮದಿಂದ ನಡೆದುಕೊಳ್ಳಬೇಕು. ಪರಸ್ಪರರ ಲೋಪದೋಷಗಳನ್ನು ದೊಡ್ಡದಾಗಿಸದೆ ನಿರ್ಲಕ್ಷಿಸುತ್ತಾ, ತನ್ನ ಕುಂದುಕೊರತೆಗಳನ್ನು ಸರಿಪಡಿಸಿಕೊಂಡಾಗ ಮಾತ್ರವೇ ನಿಜ ಅರ್ಥದಲ್ಲಿ ಈ ಸಂಬಂಧಗಳು ಮಧುರವಾಗಬಲ್ಲವು. ಎಲ್ಲರೊಂದಿಗೆ ಸ್ನೇಹದಿಂದ ವರ್ತಿಸಿದಾಗ ಬಾಂಧವ್ಯ ಸುಧಾರಿಸುತ್ತದೆ.

ಹೊಸ ಸಂಬಂಧದ ಕಂಪು ತುಂಬಿರಲಿ

ರಕ್ತ ಸಂಬಂಧ ಅಥವಾ ತಾವಾಗಿ ಮಾಡಿಕೊಂಡ ಸಂಬಂಧದಲ್ಲಿ ಯಾವ ಬಂಧ ಹೃದಯಕ್ಕೆ ಹತ್ತಿರವಾಗುತ್ತದೆ ಎಂಬುದು ವ್ಯಕ್ತಿಯ ವ್ಯವಹಾರವನ್ನು ಅವಲಂಬಿಸಿದೆ. ತಾಯಿ ಮಗಳು, ಅಕ್ಕ ತಂಗಿಯರ ನಡುವೆಯೂ ಇತ್ತೀಚೆಗೆ ಟೆನ್ಶನ್‌ ಹೆಚ್ಚುತ್ತಿರುವುದು ಗೊತ್ತಿರುವ ಸಂಗತಿ. ಹೀಗಾಗಿ ಈ ಮನೆಯ ಸಂಬಂಧಗಳನ್ನು ಆ ಮನೆಗೆ ಹೋಲಿಸುತ್ತಾ ವಾದ ಮಾಡುವುದು ತಾರ್ಕಿಕವಲ್ಲ. ಯಾವುದೇ ಸಂಬಂಧವನ್ನು ಅದರ ಹೊಸ ಹೆಸರಿನಿಂದಲೇ ಗುರುತಿಸುವುದು, ಆ ವ್ಯಕ್ತಿಗೆ ಹೆಚ್ಚಿನ ಘನತೆ ತಂದುಕೊಡುತ್ತದೆ. ಸದ್ಭಾವನೆ ಮತ್ತು ಪ್ರೀತಿ ವಾತ್ಸಲ್ಯಗಳಿಂದ ತುಂಬಿದ ಸಂಬಂಧ ಎಲ್ಲೆಡೆ ಸುಗಂಧದ ಘಮಲು ಹರಡಬಲ್ಲದು. ಇದಕ್ಕೆ ಬದಲಾಗಿ ಕಾಟಾಚಾರಕ್ಕೆ ನಾದಿನಿ ಅಕ್ಕನ ತರಹ ಎಂದು ಹೇಳುತ್ತಾ, ಮನಸ್ಸಿನಲ್ಲಿ ಕಿಡಿ ಕಾರುತ್ತಿದ್ದರೆ ಯಾವುದೂ ಎಂದಿಗೂ ನೆಟ್ಟಗಾಗದು.

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ