ಪ್ರೀತಿಯಲ್ಲಿ ಸಾಮಾನ್ಯವಾಗಿ ಹೃದಯ ಬಡಿತ ತೀವ್ರವಾಗುತ್ತದೆ. ಉಸಿರಾಟ ಏರು ಮುಖವಾಗುತ್ತದೆ. ಮನಸ್ಸಿನಾಳದಲ್ಲಿ ಯಾರೋ ಕುಳಿತುಬಿಡುತ್ತಾರೆ. ಆದರೆ ನಿಮ್ಮ ಹೃದಯ ಬೇರೊಬ್ಬರ ಅಧೀನವಾದಾಗ ಪ್ರೀತಿಯ ಈ ಉತ್ಕಟ ಸ್ಥಿತಿಗೆ ಕಂಟಕ ಬರುತ್ತದೆ.
ದೆಹಲಿಯ ಕೋರ್ಟಿಗೆ ಪತಿಯೊಬ್ಬ ನ್ಯಾಯ ಕೇಳಿದ್ದು ಹೀಗೆ, ``ನಾನು ನನ್ನ ಪತ್ನಿಯಿಂದ ತೊಂದರೆಗೆ ಸಿಲುಕಿರುವೆ. ಪೊಲೀಸರು ಕೂಡ ನನ್ನ ನೆರವಿಗೆ ಬರುತ್ತಿಲ್ಲ. ನೀವೇ ನನಗೆ ನ್ಯಾಯ ಕೊಡಿಸಿ.''
ಅಂದಹಾಗೆ ರವಿ ಎಂಬ ವ್ಯಕ್ತಿ ಸರಿತಾ (ಹೆಸರು ಬದಲಿಸಲಾಗಿದೆ) ಜೊತೆಗೆ ಮದುವೆಯಾದಾಗ ಅವನ ಖುಷಿಗೆ ಯಾವುದೇ ಮೇರೆ ಇರಲಿಲ್ಲ. ಅವಳು ಮಹಾ ಸುಂದರಿ. ಅವಳ ಸೌಂದರ್ಯದ ಬಗ್ಗೆ ತನ್ನ ಸ್ನೇಹಿತರ ಮುಂದೆ ಬಡಾಯಿ ಕೊಚ್ಚಿಕೊಂಡಿದ್ದ.
ಆದರೆ ಅವನ ಖುಷಿ ಬಹಳ ದಿನ ಉಳಿಯಲಿಲ್ಲ. ಹೆಂಡತಿಯ ವಾಸ್ತವ ಕಾದಂಬರಿಯ ಪುಟಗಳು ಹಾಗೇ ಹಲವು ದಿನಗಳಲ್ಲಿಯೇ ಬಯಲಾಗಿಬಿಟ್ಟಿತು. ಸರಿತಾ ಬೇರೊಬ್ಬ ಪುರುಷನ ಜೊತೆ ಪ್ರೀತಿಗೆ ಬಿದ್ದಿದ್ದಳು. 1-2 ಸಲ ಅದು ಪತಿಯ ಗಮನಕ್ಕೆ ಬಂತು. ಆ ಬಳಿಕ ಅವಳು ಗಂಡನ ಜೊತೆಗೆ ಮನೆಯವರಿಗೂ ಕೂಡ ತೊಂದರೆ ಕೊಡಲಾರಂಭಿಸಿದಳು. ನಿಮ್ಮನ್ನೆಲ್ಲ ವರದಕ್ಷಿಣೆ ಕೇಸಿನಲ್ಲಿ ಒಳಗೆ ಹಾಕಿಸುವುದಾಗಿ ಅವರಿಗೆ ಬೆದರಿಕೆ ಹಾಕತೊಡಗಿದಳು. ನಾನು ನನ್ನ ಕೈ ನರಗಳನ್ನು ಕತ್ತರಿಸಿಕೊಂಡು ಬಿಡುತ್ತೇನೆ ಎಂದು ಕೂಡ ಹೇಳತೊಡಗಿದಳು.
ರವಿ ಹಾಗೂ ಅವನ ಕುಟುಂಬದವರು ಈ ಮುಂಚೆ ಎಂದೂ ಪೊಲೀಸ್ ಠಾಣೆಗೆ ಹೋದವರಲ್ಲ. ಸಮಾಜದಲ್ಲಿ ತಮ್ಮ ಹೆಸರು ಕೆಟ್ಟು ಹೋದರೇನು ಗತಿ ಎಂದು ಅವರು ಅವಳಿಗೆ ತಿಳಿ ಹೇಳಲು ಪ್ರಯತ್ನಿಸಿದರು. ಆದರೆ ಅವಳು ಮಾತ್ರ ಅವರಿಗೆ ಬೆದರಿಕೆ ಹಾಕಲು ಶುರು ಮಾಡಿದಳು. ಬೇಸತ್ತು ಹೋದ ಗಂಡ ಪೊಲೀಸರಿಗೆ ಹೇಳಿದ. ಆದರೆ ಇದನ್ನು ನೀವೇ ಬಗೆಹರಿಸಿಕೊಳ್ಳಿ ಎಂದು ಅವರು ಹೇಳಿದರು. ಆಗ ಅವನು ನ್ಯಾಯಾಲಯದ ಮೊರೆಹೋದ.
ಏನು ಹೇಳುತ್ತದೆ ಕಾನೂನು?
ಅಡ್ವೋಕೇಟ್ ದೀಪ್ತಿ ಹೀಗೆ ಹೇಳುತ್ತಾರೆ, ``ಈ ತೆರನಾದ ಪ್ರಕರಣಗಳು ಇತ್ತೀಚೆಗೆ ಕೋರ್ಟಿಗೆ ಹೆಚ್ಚಾಗಿ ಬರುತ್ತಿವೆ. ಅಕ್ರಮ ಸಂಬಂಧದ ರಹಸ್ಯ ಬಯಲಾದಾಗ ಏಕಕಾಲಕ್ಕೆ ಅನೇಕ ಜನರ ಜೀವನ ಪಣಕ್ಕೊಡುತ್ತದೆ. ಸಂಬಂಧ ಮುರಿದು ಬೀಳುತ್ತದೆ. ವಿಚ್ಛೇದನಕ್ಕಾಗಿ ನ್ಯಾಯಾಲಯದ ಮೊರೆ ಹೋಗುತ್ತಾರೆ. ಕಾನೂನಿನನ್ವಯ ಪುರುಷನ ತಪ್ಪು ಇದ್ದಾಗ ಅವನಿಗೆ ಶಿಕ್ಷೆ ವಿಧಿಸಲು ಅವಕಾಶವಿದೆ. ಆದರೆ ಮಹಿಳೆಯರ ಮೇಲೆ ಕ್ರಮ ತೆಗೆದುಕೊಳ್ಳಲು ಬರುವುದಿಲ್ಲ. ಇದು ಐಪಿಸಿ 497ರ ಪ್ರಕಾರ ಬರುತ್ತದೆ. ಅಂದಹಾಗೆ ಇದು ಹಳೆಯ ಕಾನೂನು ಇದರ ತಿದ್ದುಪಡಿಗೆ ಆಗ್ರಹ ಕೇಳಿ ಬರುತ್ತಿರುತ್ತದೆ.
497ನೇ ಪರಿಚ್ಛೇದದ ಕ್ಲಿಷ್ಟತೆ
ಸಾಮಾನ್ಯವಾಗಿ ಕ್ರಿಮಿನಲ್ ಲಾನಲ್ಲಿ ಜೆಂಡರ್ ಸಮಾನತೆ ಕಂಡುಬರುತ್ತದೆ. ಆದರೆ 497ನೇ ವಿಧಿಯಲ್ಲಿ ಇದು ಇಲ್ಲ. ಈ ವಿಧಿಯನ್ವಯ ಕೇವಲ ಪುರುಷರನ್ನು ಮಾತ್ರ ಅಪರಾಧಿಗಳೆಂದು ಪರಿಗಣಿಸಲಾಗುತ್ತದೆ. ಆದರೆ ಮಹಿಳೆಯರು ಕೇವಲ ಬಲಿಪಶು ಅಂದರೆ `ವಿಕ್ಟಿಮ್' ಎಂದಷ್ಟೇ ಭಾವಿಸಲಾಗುತ್ತದೆ. ಅಂದರೆ ಯಾವುದೇ ವಿವಾಹಿತ ಪುರುಷ, ವಿವಾಹಿತ ಮಹಿಳೆಯ ಜೊತೆ ಒಪ್ಪಿಗೆಯ ಮೇರೆಗೆ ಸಂಬಂಧ ಬೆಳೆಸಿದರೆ, ಪುರುಷನ ವಿರುದ್ಧ ಕಾನೂನು ಕ್ರಮ ಜರುಗಿಸಬಹುದು. ಆದರೆ ಮಹಿಳೆಯ ವಿರುದ್ಧ ಕ್ರಮ ಜರುಗಿಸಲು ವ್ಯವಸ್ಥೆ ಇಲ್ಲ.