ಸಿಂಗಲ್ ಪೇರೆಂಟಿಂಗ್‌ಗಾಗಿ ಇಲ್ಲಿವೆ ಕೆಲವು ಸಲಹೆಗಳು :

ಮಗುವನ್ನು ಎತ್ತಿಕೊಳ್ಳುವುದು : ನವಜಾತ ಶಿಶು ಬಹಳ ಸೂಕ್ಷ್ಮ. ಆದರೆ ಅದನ್ನು ಮುಟ್ಟಲು, ಎತ್ತಿ ಕೊಳ್ಳಲು ಗಾಬರಿ ಆಗಬೇಡಿ. ಅದರ ಕತ್ತಿನ ಸ್ನಾಯುಗಳು ಬಹಳ ದುರ್ಬಲವಾಗಿರತ್ತವೆ. ಹೀಗಾಗಿ ಅದನ್ನು ಎತ್ತಿಕೊಳ್ಳುವಾಗ ಅದರ ಕುತ್ತಿಗೆಗೆ ಆಧಾರ ಕೊಡಿ.

ಹಾಲು ಕುಡಿಸುವುದು : ಮಗುವಿಗೆ ಹಾಲು ಕುಡಿಸುವುದರಿಂದ ಅದರ ಬೆಳವಣಿಗೆಯಾಗುತ್ತದೆ. ಇನ್ನೊಂದೆಡೆ, ತಾಯಿ ಹಾಗೂ ಮಗುವಿನ ನಡುವಿನ ಅನುಬಂಧ ಹೆಚ್ಚಾಗುತ್ತದೆ. ಈ ನಿಟ್ಟಿನಲ್ಲಿ ನರ್ಸಿಂಗ್‌ನಲ್ಲಿ ಅನುಭವ ಇರುವವರ ನೆರವು ಪಡೆದುಕೊಳ್ಳಬಹುದು. ನೀವು ಸಿಂಗಲ್ ಫಾದರ್‌ ಆಗಿದ್ದರೆ, ಶಿಶು ತಜ್ಞರ ನೆರವು ಪಡೆದುಕೊಳ್ಳಿ. ಲ್ಯಾಕ್ಟೇಶನ್‌ನ ಇತರೆ ಉಪಾಯಗಳ ಬಗ್ಗೆ ಅವರಿಂದ ಮಾಹಿತಿ ತಿಳಿಯಿರಿ.

ಮಗುವಿನ ಮಸಾಜ್‌ : ಮಗುವಿನ ಮಸಾಜ್‌ ಮಾಡುವುದರಿಂದ ಅದಕ್ಕೆ ಹಿತಕರ ಅನುಭವ ಉಂಟಾಗುತ್ತದೆ, ಒಳ್ಳೆಯ ನಿದ್ರೆ ಲಭಿಸುತ್ತದೆ. ಅದು ಶಾಂತಗೊಳ್ಳುತ್ತದೆ. ಮಗುವನ್ನು ಏಕಾಂಗಿಯಾಗಿ ಮಂಚದಲ್ಲಿ ಮಲಗಿಸಿ ಹೋಗಬೇಡಿ. ಏಕೆಂದರೆ ಮಗು ಕೆಳಗೆ ನೋಡಿ ಬೀಳುವ ಸಾಧ್ಯತೆ ಇರುತ್ತದೆ.

ಮಗುವಿಗೆ ಎಂತಹ ಬಟ್ಟೆ : 6 ತಿಂಗಳವರೆಗಿನ ಮಗುವಿಗೆ ತನ್ನ ದೇಹದ ತಾಪಮಾನವನ್ನು ನಿಯಂತ್ರಣದಲ್ಲಿಟ್ಟುಕೊಳ್ಳಲು ಆಗದು. ಹೀಗಾಗಿ ಬಟ್ಟೆ ತೊಡಿಸುವಾಗ ಬಹಳ ಹುಷಾರಾಗಿರಬೇಕು. ಅದಕ್ಕೆ ಎಷ್ಟು ಬಟ್ಟೆ ಬೇಕೊ, ಅಷ್ಟೇ ಬಟ್ಟೆ ತೊಡಿಸಿ. ಹೆಚ್ಚು ಬಟ್ಟೆ ತೊಡಿಸುವುದರಿಂದ ಅದಕ್ಕೆ ಬೆವರು ಬಂದು ದೇಹ ತಂಪಾದೀತು.

ಮಗುವಿನ ಆರೋಗ್ಯಕ್ಕೆ ಸಲಹೆ ಮಗುವಿನ ಆರೋಗ್ಯದ ಬಗ್ಗೆ ಗಮನ ಕೊಡುವುದು ಅತ್ಯವಶ್ಯ. ಅದಕ್ಕಾಗಿ ಈ ಸಂಗತಿಗಳನ್ನು ಗಮನಿಸಿ :

ಹುಟ್ಟಿದ 3-5 ದಿನಗಳೊಳಗೆ ಶಿಶುತಜ್ಞರಿಗೆ ತೋರಿಸಿ. ಬಳಿಕ 2 ವಾರಗಳ ಬಳಿಕ ಮತ್ತೊಮ್ಮೆ ತೋರಿಸಿ.

ಮಗುವಿನ ತೂಕ ಮೊದಲ ವಾರದಲ್ಲಿ ಶೇ.5-10ರಷ್ಟು ಕಡಿಮೆಯಾಗುತ್ತದೆ. ಆದರೆ 2 ವಾರಗಳ ಬಳಿಕ ಅದರ ತೂಕ ಹೆಚ್ಚುತ್ತದೆ.

ಮಗುವನ್ನು ನಿರಂತರವಾಗಿ ಒಂದೇ ಸ್ಥಿತಿಯಲ್ಲಿ ಮಲಗಿಸಬೇಡಿ. ಅದರ ಭಂಗಿಯನ್ನು ಆಗಾಗ ಬದಲಿಸುತ್ತಾ ಇರಿ. ಇಲ್ಲದಿದ್ದರೆ ಅದರ ಬೆನ್ನು ಹಾಗೂ ತಲೆ ಚಪ್ಪಟೆ ಆಕಾರ ಪಡೆದುಕೊಳ್ಳಬಹುದು.

ಮಗುವನ್ನು ಹೊಗೆಯಿಂದ ದೂರ ಇಡಿ.

ಮಗು ಎಲ್ಲಿಯವರೆಗೆ ರೋಗ ನಿರೋಧಕ ಸಾಮರ್ಥ್ಯ ಪಡೆದುಕೊಳ್ಳುದಿಲ್ಲವೋ, ಅಲ್ಲಿಯವರೆಗೆ ಮಗುವನ್ನು ಜನದಟ್ಟಣೆಯ ಸ್ಥಳಕ್ಕೆ ಕರೆದುಕೊಂಡು ಹೋಗಬೇಡಿ. ಸೋಂಕಿಗೆ ತುತ್ತಾದ ಮಗುವಿನ ಸಂಪರ್ಕಕ್ಕೂ ಬರದಂತೆ ನೋಡಿಕೊಳ್ಳಿ.

ರೋಗದ ಲಕ್ಷಣಗಳನ್ನು ಗುರುತಿಸಿ. ಒಂದು ವೇಳೆ ಮಗುವಿನ ತಾಪಮಾನ 100.40 ಗಿಂತ ಹೆಚ್ಚಿಗೆ ಇದ್ದಲ್ಲಿ ತಕ್ಷಣವೇ ಅದನ್ನು ವೈದ್ಯರ ಬಳಿ ಕರೆದುಕೊಂಡು ಹೋಗಿ. ಇದರ ಹೊರತಾಗಿ ಕಡಿಮೆ ಹಸಿ, ವಾಂತಿ, ಭೇದಿ, ಸುಸ್ತು ಇಂತಹ ಲಕ್ಷಣ ಕಂಡುಬಂದರೆ ಶಿಶುತಜ್ಞರ ಬಳಿ ಕರೆದುಕೊಂಡು ಹೋಗಿ.

ಮಗುವಿಗೆ ಕೊಡುವ ಎಲ್ಲ ಚುಚ್ಚುಮದ್ದುಗಳ ಬಗ್ಗೆ ಸರಿಯಾದ ದಾಖಲೆ ಇಡಿ.

ನಿಮ್ಮ ಬಗ್ಗೆ ಕಾಳಜಿ ವಹಿಸಿ

ನೀವು ಕೋಪದಲ್ಲಿರಬಹುದು, ಬೇಸರದಲ್ಲಿರಬಹುದು ಅಂತಹ ಸಂದರ್ಭದಲ್ಲಿ ಥೆರಪಿಸ್ಟ್ ರ ಜೊತೆ ಮಾತನಾಡಿ. ನಿಮ್ಮ ಹತಾಶೆ, ಖಿನ್ನತೆ ಅಥವಾ ಚಿಂತೆಯ ಬಗ್ಗೆ ಮುಕ್ತವಾಗಿ ಮಾತನಾಡಿ. ನಿಮ್ಮ ದಿನಚರಿಯಲ್ಲಿ ದೈಹಿಕ ವ್ಯಾಯಾಮವನ್ನು ಸೇರಿಸಿಕೊಳ್ಳಿ. ಸಮತೋಲನ ಆಹಾರ ಸೇವಿಸಿ ಹಾಗೂ ಸಾಕಷ್ಟು ನಿದ್ರೆ ಮಾಡಿ. ವಾರದಲ್ಲಿ ಒಂದಿಷ್ಟು ಗಂಟೆಯಾದರೂ ನಿಮಗಾಗಿ ಮೀಸಲಿಟ್ಟುಕೊಳ್ಳಿ. ಸ್ವಲ್ಪ ಹೊತ್ತು ಮಗುವನ್ನು ಕೇರ್‌ ಟೇಕರ್‌ ಬಳಿ ಬಿಡಬಹುದು.

ನಿಮ್ಮ ಮನಸ್ಸನ್ನು ಸದಾ ಶಾಂತಾಗಿರಿಸಿಕೊಳ್ಳಿ : ಎಷ್ಟೋ ಸಲ ಸಂಗಾತಿಯಿಂದ ನಾನು ಬೇರಾಗಿಬಿಟ್ಟೆನಲ್ಲ ಎಂದು ನೀವು ಕೊರಗುತ್ತಿರಬಹುದು. ಅದು ನಿಮ್ಮದೇ ಅಂತಿಮ ನಿರ್ಧಾರ ಆಗಿರಲಾರದು ಅಥವಾ ನೀವಾಗಿ ತೆಗೆದುಕೊಂಡಿದ್ದ ಆ ನಿರ್ಧಾರ ಸರಿಯಲ್ಲ ಎಂದು ಈಗ ಮತ್ತೆ ಮತ್ತೆ ಅನಿಸಬಹುದು, ಆದರೆ ಈಗ ಅದನ್ನು ಬದಲಿಸಲಾಗದು ಎಂಬುದೇ ಕಠೋರ ಸತ್ಯ. ಈ ಎಲ್ಲಾ  ವಿಷಯಗಳಿಂದ ಈಗ ನೀವು ನಿಮ್ಮ ಮನಸ್ಸನ್ನು ಸದಾ ಶಾಂತವಾಗಿರಿಸಿಕೊಳ್ಳಿ. ನಿಮ್ಮ ಮಗುವಿನ ಜೊತೆ ಹೆಚ್ಚು ಹೆಚ್ಚು ಸಮಯ ಕಳೆಯಿರಿ. ನಿಮ್ಮ ಮನೋಬಲ ಹೆಚ್ಚಿಸುವಂಥ ಗೆಳತಿಯರೊಂದಿಗೆ ಹೆಚ್ಚು ಒಡನಾಟವಿರಲಿ. ಸಕಾರಾತ್ಮಕ ಯೋಚನಾಧಾಟಿಯುಳ್ಳ ಗೆಳತಿಯರು ನಿಮಗೆ ಸಶಕ್ತರಾಗಿ ಪರಿಸ್ಥಿತಿ ಎದುರಿಸಲು ಹಾಗೂ ಜೀವನವನ್ನು ಉತ್ತಮ ರೀತಿ ನಿಭಾಯಿಸಲು ನಿಮಗೆ ಅಗತ್ಯ ನೆರವು ನೀಡಬಲ್ಲರು.

ನಿಮಗಾಗಿ ಒಂದಿಷ್ಟು ಟೈಂ ಇಟ್ಟುಕೊಳ್ಳಿ : ನಿಮ್ಮ ಮಗು ಮಲಗಿರುವಾಗ, ಶಾಲೆಗೆ ಹೋಗಿದ್ದರೆ, ನಿಮಗಾಗಿ ನೀವು ಟೈಂ ಮಾಡಿಕೊಳ್ಳಿ. ಈ ಬಿಡುವಿನ ಸಮಯದಲ್ಲಿ ನೀವು ನಿಮ್ಮ ಗೆಳತಿಯರೊಂದಿಗೆ ಹರಟಬಹುದು ಅಥವಾ ನಿಮ್ಮ ಇಷ್ಟದ ಹವ್ಯಾಸದಲ್ಲಿ ತೊಡಗಿಕೊಳ್ಳಬಹುದು. ನಿಮ್ಮ ತೀರಾ ನೆಂಟರಿಷ್ಟರು, ಆಪ್ತರ ಬಳಿ ಮಗುವನ್ನು 1-2 ಗಂಟೆ ಕಾಲ ಬಿಟ್ಟು ಸಹ, ನೀವು ನಿಮಗಾಗಿ ಟೈಂ ಮಾಡಿಕೊಳ್ಳಬಹುದು. ಇದರಿಂದ ನಿಮ್ಮ ದಣಿದ ಮನಸ್ಸಿಗೆ ಎಷ್ಟೋ ಸಂತೃಪ್ತಿ ಸಿಗುತ್ತದೆ. ನಿಮ್ಮಲ್ಲಿ ಎನರ್ಜಿ ತುಂಬಿಕೊಳ್ಳುತ್ತದೆ, ಜೊತೆಗೆ ಮಗುವನ್ನು ಇನ್ನಷ್ಟು ಚೆನ್ನಾಗಿ ಗಮನಿಸುವಿರಿ.

ಯಾವುದು ನಿಮ್ಮ ಕೈವಶದಲ್ಲಿಲ್ಲವೋ ಅದನ್ನು ಮರೆತುಬಿಡಿ : ನೀವು ಮಗುವನ್ನು ಸಾಕುವ ವಿಧಾನ ಬೇರೆಯವರಿಗಿಂತ ತುಸು ಭಿನ್ನವಾಗಿರಬಹುದು. ಎಲ್ಲಾ ಪರಿಸ್ಥಿತಿಯೂ ಸದಾ ಸರ್ವದಾ ಒಂದೇ ಆಗಿರುವುದಿಲ್ಲ. ಎಲ್ಲಾ ವಿಷಯಗಳ ಜವಾಬ್ದಾರಿಯನ್ನೂ ನಿಮ್ಮ ತಲೆಯ ಮೇಲೆ ಎಳೆದುಕೊಳ್ಳಬೇಡಿ. ಪ್ರತಿಯೊಬ್ಬರೂ ತಂತಮ್ಮ ಸಮಸ್ಯೆಗಳನ್ನು ತಮ್ಮದೇ ಆದ ರೀತಿಯಲ್ಲಿ ಪರಿಹರಿಸಿಕೊಳ್ಳುತ್ತಾರೆ. ಇಬ್ಬರು ವ್ಯಕ್ತಿಗಳ ಜೀವನ ಎಂದೂ ಒಂದೇ ತರಹ ಇರುವುದಿಲ್ಲ.

ಫಿಟ್ನೆಸ್ಕಡೆ ಹೆಚ್ಚಿನ ಗಮನವಿರಲಿ :  ನೀವೀಗ ನಿಮ್ಮ ಬಾಲ್ಯದ ದಿನಗಳಿಗೆ ಮರಳಬಹುದು, ನಿಮ್ಮ ಮಗು ಜೊತೆ ಮಗುವಾಗಿ ನಲಿದಾಡಿ. ಅದರೊಂದಿಗೆ ಹಾಡಿ, ಕುಣಿದು, ಸ್ಕಿಪ್ಪಿಂಗ್‌ ಆಡುತ್ತಾ ಎಂಜಾಯ್‌ ಮಾಡಿ. ಇಂತಹ ಕ್ರಿಯೆಗಳಿಂದ ನಿಮ್ಮ ಮಾನಸಿಕ ಆರೋಗ್ಯ ಸದೃಢಗೊಳ್ಳುತ್ತಾ, ನಿಮ್ಮ ದೈಹಿಕ ಫಿಟ್‌ನೆಸ್‌ ಕೂಡ ಪರ್ಫೆಕ್ಟ್ ಆಗುತ್ತದೆ. ನಿಮ್ಮ ಖುಷಿಯ ಮೂಡ್‌ ಎಲ್ಲಾ ಸಮಸ್ಯೆಗೂ ಬೈಬೈ ಹೇಳುತ್ತದೆ.

ವಿಶ್ರಾಂತಿ ಪಡೆಯಿರಿ : ನಿದ್ದೆ ಪೂರ್ತಿ ಆಗದಿದ್ದರೆ ಎಷ್ಟೋ ಸಮಸ್ಯೆಗಳು ತಲೆದೋರುತ್ತವೆ. ಹೀಗಾಗಿ ನಿಮ್ಮ ನಿದ್ದೆಯ ಗಡುವನ್ನು ಫಿಕ್ಸ್ ಮಾಡಿಕೊಳ್ಳಿ. ಆ ಸಮಯದಲ್ಲಿ ಬೇರಾವುದೇ ಟೆನ್ಶನ್‌ ಕಾಟ ಕೊಡದಂತೆ ನೆಮ್ಮದಿಯಾಗಿ ನಿದ್ರಿಸಿ. ನಿಮ್ಮ ಮಗುವನ್ನು ಮಲಗಿಸುತ್ತಾ ನೀವು ಬೇಗ ನಿದ್ರಿಸಿ.

ಸದಾ ಸಕಾರಾತ್ಮಕವಾಗಿ ಇರಿ : ನೀವು ಬಲು ಕಷ್ಟದ ದಿನಗಳನ್ನು ಎದುರಿಸುತ್ತಿದ್ದರೆ, ಮಗುವಿನ ಜೊತೆ ಸದಾ ಪ್ರಾಮಾಣಿಕವಾಗಿ ನಡೆದುಕೊಳ್ಳುತ್ತಾ ಚಿಂತೆಯಿಂದ ಹೊರಬರಲು ಯತ್ನಿಸಿ. ಮಗುವಿಗೂ ಸಹ ಮುಂದೆ ಎಲ್ಲ ಸರಿಹೋಗುತ್ತದೆ ಎಂದು ಆಶ್ವಾಸನೆ ತುಂಬುತ್ತಿರಿ. ಪ್ರತಿದಿನದ ಸಮಸ್ಯೆಗಳನ್ನು ಸರಿಪಡಿಸಿಕೊಳ್ಳುತ್ತಾ ಮುಖದ ಮೇಲೆ ಸದಾ ಮಂದಹಾಸ ಉಳಿಸಿಕೊಳ್ಳಿ. ನೀವು, ನಿಮ್ಮ ಮಗು ಎರಡೇ ಪ್ರಪಂಚಾಗಿರುವಾಗ ಅದರೊಡನೆ ಹೊಸ ಜೀವನದ ಸಾರ್ಥಕತೆ ಕಂಡುಕೊಳ್ಳಿ.

ಸದಾ ಸಶಕ್ತರಾಗಿರಿ : ಸಂಗಾತಿಯಿಂದ ಬೇರೆ ಆದ ನಂತರ ನೀವು ಸದಾ ಭಾವನಾತ್ಮಕ ಒತ್ತಡಕ್ಕೆ ಒಳಗಾಗುವಿರಿ. ಇದು ಅಸಾಮಾನ್ಯವೇನಲ್ಲ. ನಿಮ್ಮ ನೆಂಟರಿಷ್ಟರು, ಹಿತೈಷಿಗಳಿಂದ ಸಹಾಯ ಪಡೆಯಲು ಹಿಂಜರಿಯದಿರಿ. ಇಂಥ ಸಮಯದಲ್ಲಿ ಧೃತಿಗೆಡದೆ ಸಕಾರಾತ್ಮಕ ವಿಚಾರಗಳಿಂದ ಭವಿಷ್ಯ ರೂಪಿಸಿಕೊಳ್ಳಿ.

ನಿಮ್ಮ ಜೀವನ ವ್ಯವಸ್ಥಿತವಾಗಿರಲಿ : ಸದ್ಯಕ್ಕಂತೂ ನಿಮ್ಮ ಜೀವನದಲ್ಲಿ ಒಬ್ಬ ವ್ಯಕ್ತಿ ಕಡಿಮೆ ಇರುವುದರಿಂದ, ನಿಮ್ಮ ಜೀವನ ರೂಪಿಸಿಕೊಳ್ಳುವುದು ನಿಮ್ಮ ಕೈಯಲ್ಲೇ ಇದೆ. ಎಲ್ಲಾ ಕೆಲಸಗಳನ್ನೂ ಒಬ್ಬಂಟಿಯಾಗಿ ನೀವೇ ಎದುರಿಸಬೇಕು. ಮನೆ, ಮಗು, ನಿಮ್ಮನ್ನೂ ಸಂಭಾಳಿಸಿಕೊಳ್ಳಿ. ಮಗು ದೊಡ್ಡದಾದಂತೆ ನಿಮಗೆ ಮನೆಗೆಲಸದಲ್ಲೂ ನೆರವು ಸಿಗುತ್ತದೆ. ಈ ರೀತಿ ಮಗುವಿಗೂ ಕ್ರಮೇಣ ಜವಾಬ್ದಾರಿ ಕಲಿಸುತ್ತಾ ನಿಮ್ಮ ಭವಿಷ್ಯ ರೂಪಿಸಿಕೊಳ್ಳಿ.

ಜಿ. ರೀನಾ

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ