ಭಾರತದಲ್ಲಿ ಸಿಂಗಲ್ ಮದರ್‌ ಆಗುವುದು ಸುಲಭವಲ್ಲ.  ಧೈರ್ಯ ತೆಗೆದುಕೊಂಡು ಮಹಿಳೆಯರು ಸಿಂಗಲ್ ಮದರ್‌ ಆಗಿಬಿಟ್ಟರಂತೂ ಚುಚ್ಚು ಪ್ರಶ್ನೆಗಳನ್ನು ಎದುರಿಸಬೇಕಾಗುತ್ತದೆ. ಉದಾಹರಣೆಗೆ ಮಗುವಿನ ತಂದೆ ಯಾರು?  ಗಂಡ-ಹೆಂಡತಿ ಯಾಕೆ ಜೊತೆಯಾಗಿಲ್ಲ? ಏಕಾಂಗಿಯಾಗಿ ಮಗುವನ್ನು ಪೋಷಿಸುವುದು ಬಹಳ ಕಷ್ಟ. ಅದರ ಮೇಲೆ ತಂದೆಯ ನೆರಳಿರುವುದು ಅಗತ್ಯ. ಇದಲ್ಲದೆ ಮಗುವನ್ನು ಸ್ಕೂಲಿಗೆ ಸೇರಿಸುವಾಗ ಅಥವಾ ಯಾವುದಾದರೂ ಸರ್ಕಾರಿ ಅಥವಾ ಖಾಸಗಿ ಫಾರಂ ಭರ್ತಿ ಮಾಡುವಾಗಲೂ ತಂದೆಯ ಹೆಸರನ್ನೇ ಕೇಳಲಾಗುತ್ತದೆ. ಭಾರತದಲ್ಲಿ ಒಬ್ಬ ಹುಡುಗಿ ಮದುವೆಯಾಗದೆ ತಾಯಿಯಾಗುವುದು ಅಪರಾಧವೆಂದು ತಿಳಿಯಲಾಗುತ್ತದೆ.

ಮಗುವನ್ನು ಒಬ್ಬರೇ ಪಾಲಿಸುವುದು ಸುಲಭವಲ್ಲ. ಅಮ್ಮ ಅಪ್ಪ ಇಬ್ಬರ ಪಾತ್ರಗಳನ್ನೂ ನಿಭಾಯಿಸಬೇಕಾಗುತ್ತದೆ. ಮಗುವಿನ ಸಂಪೂರ್ಣ ಜವಾಬ್ದಾರಿ ತಾಯಿಯ ಹೆಗಲಿನ ಮೇಲೆಯೇ ಬೀಳುತ್ತದೆ. ಮನೆಯ ನಿರ್ವಹಣೆಯಿಂದ ಹಿಡಿದು ಮಗುವಿನ ಅಭಿವೃದ್ಧಿ ಬಗ್ಗೆಯೂ ಅವಳೇ ತೀರ್ಮಾನ ತೆಗೆದುಕೊಳ್ಳಬೇಕಾಗುತ್ತದೆ. ಇಂತಹ ಸ್ಥಿತಿಗಳೊಂದಿಗೆ ಏಗೀ ಏಗೀ ಆಕೆ ಓವರ್‌ ಸ್ಟ್ರೆಸ್ಡ್ ಆಗುತ್ತಾಳೆ. ಅಂತಹ ಸ್ಥಿತಿ ಹುಟ್ಟಲು ಅವಕಾಶವನ್ನೇ ಕೊಡಬಾರದು. ಇದು ನಿಮಗೆ, ನಿಮ್ಮ ಮಗುವಿನ ಪೋಷಣೆಗೆ, ನಿಮ್ಮ ಕುಟುಂಬಕ್ಕೆ ಬಹಳ ಅಗತ್ಯವಾಗಿದೆ. ಇಲ್ಲದಿದ್ದರೆ ಒತ್ತಡ ಆರೋಗ್ಯಕರ ಸ್ಥಿತಿಯನ್ನು ಕಿತ್ತುಕೊಳ್ಳುತ್ತದೆ. ಸಿಂಗಲ್ ಮದರ್‌ ಆಗಿದ್ದಕ್ಕಾಗಿ ನಿಮಗೆ ವಿಷಾದವುಂಟಾಗುತ್ತದೆ.

ಫೈನಾನ್ಸ್ ಮೇಲೆ ನಿಯಂತ್ರಣ ಕಡಿಮೆ ಆದಾಯ ಒತ್ತಡಕ್ಕೆ ಮುಖ್ಯ ಕಾರಣವಾಗುತ್ತದೆ. ಸಿಂಗಲ್ ಪೇರೆಂಟಿಂಗ್‌ಗೆ ಮುಖ್ಯವಾದದ್ದು ಅವರ ಆದಾಯವನ್ನು ಸರಿಯಾದ ರೀತಿಯಲ್ಲಿ ಬಜೆಟಿಂಗ್‌ ಮಾಡಬೇಕು. ಏಕೆಂದರೆ ಅವರ ಸಂಪಾದನೆಯೇ ಹಣದ ಏಕಮಾತ್ರ ಸ್ರೋತವಾಗಿದೆ. ಉದಾಹರಣೆಗೆ : ಮನೆ, ಎಲೆಕ್ಟ್ರಿಸಿಟಿ, ಗ್ಯಾಸ್‌ ವಾಟರ್‌ ಬಿಲ್‌ಗಳು, ಮಗುವಿನ ಟ್ಯೂಶನ್‌ ಫೀಸ್‌  ಇತ್ಯಾದಿ. ಒಂದು ವೇಳೆ ಬಜೆಟಿಂಗ್‌ ಮಾಡಿದ ನಂತರ ನಿಮ್ಮ ಆದಾಯ ಕಡಿಮೆ ಅನ್ನಿಸಿದರೆ, ಆದಾಯದ ಸ್ರೋತವನ್ನು ಹೆಚ್ಚಿಸಿಕೊಳ್ಳಲು ಯೋಚಿಸಿ. ನಿಶ್ಚಿತ ಆದಾಯವಲ್ಲದೆ, ಪಾರ್ಟ್‌ಟೈಮ್ ಜಾಬ್‌, ಯಾವುದಾದರೂ ಕಂಪನಿಗೆ ಫ್ರೀಲಾನ್ಸ್ ಇತ್ಯಾದಿ ಕೆಲಸ ಮಾಡಿ. ಅದರಿಂದ ನಿಮ್ಮ ಮಕ್ಕಳಿಗೆ ಉತ್ತಮ ಪೋಷಣೆ ನೀಡಬಹುದು. ಆಗ ನೀವು ಮನೆಯ ಹಾಗೂ ಮಗುವಿನ ಎಲ್ಲ ಅಗತ್ಯಗಳನ್ನೂ ಪೂರೈಸಲು ಚಿಂತಿಸಬೇಕಾಗಿಲ್ಲ.

ಎಲ್ಲ ವಿಷಯ ಹೇಳಿ

ನಿಮ್ಮ ಮನೆಯಲ್ಲಿ, ಕುಟುಂಬದಲ್ಲಿ ಯಾವುದೇ ಬದಲಾವಣೆ ಮಾಡುವುದಿದ್ದರೆ ಮಕ್ಕಳಿಗೆ ಎಲ್ಲವನ್ನೂ ಹೇಳಿ. ಬದಲಾವಣೆಯ ಬಗ್ಗೆ ಮಕ್ಕಳ ಪ್ರತಿಕ್ರಿಯೆ ಕೇಳಲು ಮರೆಯದಿರಿ. ಇಲ್ಲದಿದ್ದರೆ ಅವರಿಗೆ ಗೊಂದಲವಾಗುತ್ತದೆ.

ಸಹಕಾರ ಮನೋಭಾವ

ಸಿಂಗಲ್ ಮದರ್‌ ಆಗಿದ್ದು ಮಕ್ಕಳನ್ನು ಪಾಲಿಸುವುದು ಸುಲಭವಲ್ಲ. ಎಲ್ಲ ಜವಾಬ್ದಾರಿಗಳೂ ನಿಮ್ಮ ಹೆಗಲ ಮೇಲೆ ಬಿದ್ದಾಗ ನಿಮಗೆ ಒತ್ತಡ ಉಂಟಾಗುವುದು ಸಹಜ. ಹೀಗಿರುವಾಗ ನಿಮ್ಮ ಕುಟುಂಬದವರು ಮತ್ತು ಫ್ರೆಂಡ್ಸ್ ನಿಂದ ಅವರು ನಿಮಗೆ ಹೇಗೆ ಸಹಾಯ ಮಾಡಬಹುದು ಎನ್ನುವುದನ್ನು ತಿಳಿದುಕೊಳ್ಳಿ. ಉದಾಹರಣೆಗೆ ಸ್ಕೂಲ್‌ ನಿಂದ ಮಗುವನ್ನು ಕರೆದುಕೊಂಡು ಬರುವುದು ದಿನನಿತ್ಯದ ಟ್ಯೂಷನ್‌ ಅಥವಾ ಡ್ಯಾನ್ಸ್ ಕ್ಲಾಸ್‌ಗೆ ಬಿಟ್ಟು ಹೋಗುವುದು ಇತ್ಯಾದಿ. ಉದ್ಯೋಗ ಮಾಡಿಕೊಂಡು ಮಗುವನ್ನು ಎಲ್ಲಿಯಾದರೂ ಬಿಡುವುದು, ಕರೆದುಕೊಂಡು ಹೋಗುವುದು ಇತ್ಯಾದಿ ಜವಾಬ್ದಾರಿಗಳನ್ನು ನೀವು ನಿಭಾಯಿಸಬಹುದು. ಆದರೆ ಕೆಲಸಕ್ಕೆ ಹಾನಿಯುಂಟಾದರೆ ಯಾವ ಕಂಪನಿಯೂ ಸಹಿಸಿಕೊಳ್ಳುವುದಿಲ್ಲ.

ಒಳ್ಳೆಯ ನೆರೆಮನೆಯವರಾಗಲು ಕಿವಿಮಾತು

ಮಗುವಿಗೆ ಸಮಯ ಕೊಡಿ

ಮಗುವಿಗೆ ನೀವೇ ಅಮ್ಮ ಹಾಗೂ ಅಪ್ಪ ಕೂಡ. ಅಪ್ಪನ ಪ್ರೀತಿಯ ಕೊರತೆಯಾಗದಂತೆ ನೋಡಿಕೊಳ್ಳಿ. ಮಗುವಿಗೆ ಹೆಚ್ಚು ಸಮಯ ಕೊಡಿ. ಅದರೊಂದಿಗೆ ಆಟವಾಡಿ, ಹಾಡುಗಳನ್ನು ಕೇಳಿ, ಅದರ ಮಾತುಗಳನ್ನು ಕೇಳಿ ಒಳ್ಳೆಯ ಪೋಷಣೆಗಾಗಿ ಆರ್ಥಿಕ ಸದೃಢತೆಯೊಂದಿಗೆ ಮಗುವಿಗೆ ಸಮಯ ನೀಡುವುದೂ ಅತ್ಯವಶ್ಯವಾಗಿದೆ.

ನಿಮಗಾಗಿ ಸಮಯ ಕೊಡಿ

ಸಿಂಗಲ್ ಮದರ್‌ ಆಗುವುದೆಂದರೆ ನಿಮ್ಮ ಪರ್ಸನಲ್ ಲೈಫ್‌ ಮುಗಿದಂತಲ್ಲ. ವಾರದಲ್ಲಿ 1 ದಿನವಾದರೂ ನಿಮಗಾಗಿ ಬದುಕಿ. ನಿಮಗೆ ಇಷ್ಟವಾದ ಪುಸ್ತಕ ಓದಿ, ಸಿನಿಮಾ ನೋಡಿ, ಗೆಳತಿಯರೊಂದಿಗೆ ಶಾಪಿಂಗ್‌ಗೆ ಹೋಗಿ. ನಿಮ್ಮ ಹವ್ಯಾಸಕ್ಕೆ ಪ್ರಾಮುಖ್ಯತೆ ನೀಡಿ. ಇಲ್ಲದಿದ್ದರೆ ಒಂದೇ ರೀತಿಯ ಬದುಕಿನಿಂದ ಬೇಸರಿಸುತ್ತೀರಿ.

ಸ್ಪೇಸ್‌ ಅಗತ್ಯ

ಸಿಂಗಲ್ ಮದರ್‌ ಆಗಿರುವುದರಿಂದ ನಿಮ್ಮ ಸಂಪೂರ್ಣ ಫೋಕಸ್‌ ಮಗುವಿನ ಮೇಲೆ ಇರುತ್ತದೆ. ಮಗು ಚಿಕ್ಕದಾಗಲಿ ದೊಡ್ಡದಾಗಲಿ ನೀವು ಅದರ ಎಲ್ಲ ಅಗತ್ಯಗಳನ್ನು ಪೂರೈಸಲು ಯಾವಾಗಲೂ ಸಿದ್ಧರಿರುತ್ತೀರಿ. ಪ್ರೀತಿ ಮತ್ತು ಆತ್ಮೀಯತೆಯ ಭಾವನೆ ಹೆಚ್ಚಾದರೆ ಮಗು ಮೊದ್ದಾಗುತ್ತದೆ. ಜೊತೆಗೆ ನೀವು ಮಗುವಿನ ಬಗ್ಗೆ ಓವರ್‌ ಪೊಸೆಸಿವ್‌ ಆಗುತ್ತೀರಿ. ಆದ್ದರಿಂದ ಮಗು ಸ್ವಾವಲಂಬಿಯಾಗುವಂತೆ ಸ್ಪೇಸ್‌ ಕೊಡುವುದು ಬಹಳ ಅಗತ್ಯ.

ನಿಶ್ಚಿತವಾದ ದಿನಚರಿ

ಯಾವ ಸಮಯದಲ್ಲಿ ತಿನ್ನಬೇಕು, ಆಡಬೇಕು, ಮಲಗಬೇಕು, ಓದಬೇಕು, ದಿನ ರಾತ್ರಿ ಸ್ಕೂಲ್ ಯೂನಿಫಾರಂ ಆಲ್ಮೇರಾದಿಂದ ತೆಗೆದಿಡಬೇಕು, ಪುಸ್ತಕಗಳನ್ನು ಜೋಡಿಸಿಕೊಳ್ಳಬೇಕು ಎಂದೆಲ್ಲಾ ಹೇಳಿಕೊಡಿ. ಅದರಿಂದ ನಿಮಗೆ ಕೊಂಚ ನೆಮ್ಮದಿ ಸಿಗುತ್ತದೆ ಮತ್ತು ಮಗುವಿಗೆ ತನ್ನ ಕೆಲಸ ಮಾಡಿಕೊಳ್ಳುವ ಅಭ್ಯಾಸವಾಗುತ್ತದೆ.

ಮಾಹಿತಿ ಅಪ್‌ಡೇಟ್‌ ಮಾಡಿಕೊಳ್ಳಿ : ನೀವು ಡೈವೋರ್ಸಿ ಅಥವಾ ಸಪರೇಟೆಡ್‌ ಪೇರೆಂಟ್‌ ಅಥವಾ ಸಿಂಗಲ್ ಪೇರೆಂಟ್‌ ಆಗಿದ್ದರೆ ನಿಮ್ಮ ಜವಾಬ್ದಾರಿ ಹೆಚ್ಚಾಗುತ್ತದೆ. ಮಕ್ಕಳಿಗೆ ಒಳ್ಳೆಯ ಅಭ್ಯಾಸಗಳನ್ನು ಕಲಿಸಿ ನಿಯಂತ್ರಿಸಬೇಕು. ಅದಕ್ಕಾಗಿ ನೀವು ಸೋಶಿಯಲ್ ಸೈಟ್ಸ್, ವಿವಿಧ ಸರ್ಚ್‌ ಎಂಜಿನ್ಸ್, ಲೈಬ್ರರಿ ಅಥವಾ ಗೆಳತಿಯರಿಂದ ಗುಡ್‌ ಪೇರೆಂಟಿಂಗ್‌ ಬಗ್ಗೆ ಮಾಹಿತಿ ಪಡೆಯಿರಿ. ಅದರಿಂದ ನಿಮಗೆ ಅಥವಾ ನಿಮ್ಮ ಮಕ್ಕಳಿಗೆ ಯಾವುದೇ ರೀತಿಯ ಒತ್ತಡ ಉಂಟಾಗಬಾರದು.

ಮಗುವನ್ನು ಮಗುವೆಂದು ತಿಳಿಯಿರಿ : ಸಿಂಗಲ್ ಪೇರೆಂಟ್‌ ಆಗಿರುವುದರಿಂದ ಒಮ್ಮೊಮ್ಮೆ ನಿಮಗೆ ಏಕಾಂಗಿ ಎಂದು ಅನ್ನಿಸುತ್ತದೆ. ಆದ್ದರಿಂದ ಎಂದಿಗೂ ಮಗುವನ್ನು ಪಾರ್ಟನರ್‌ ಅಥವಾ ಸಬ್‌ಸ್ಟಿಟ್ಯೂಟ್‌ ಎಂದು ತಿಳಿಯಬಾರದು. ನಿಮ್ಮ ಆರಾಮ ಅಥವಾ ಸಹಾನುಭೂತಿಗಾಗಿ ಮಗುವಿನ ಮೇಲೆ ಅವಲಂಬಿತರಾಗಬೇಡಿ. ಇಲ್ಲದಿದ್ದರೆ ಮಗು ಮೆಂಟಲಿ ಡೆವಲಪ್‌ ಆಗುವುದಿಲ್ಲ.

ಸಕಾರಾತ್ಮಕವಾಗಿರಿ : ನೀವು ಯಾವಾಗಲೂ ಸಕಾರಾತ್ಮಕವಾಗಿ ಇರುವುದು ಬಹಳ ಅಗತ್ಯ. ಮಗುವಿನ ಮೂಡ್‌ ನಿಮ್ಮ ಮೂಡ್‌ನಿಂದ ಒಳ್ಳೆಯದು ಅಥವಾ ಕೆಟ್ಟದ್ದಾಗಬಹುದು. ನೀವು ಖುಷಿಯಾಗಿದ್ದರೆ ಮಗು ಕಿಲಕಿಲ ನಗುತ್ತದೆ. ನೀವು ಕೋಪಿಸಿಕೊಂಡರೆ ಮಗು ಕೋಪಿಸಿಕೊಳ್ಳುತ್ತದೆ. ನಿಮ್ಮ ಭಾವನೆಗಳ ಬಗ್ಗೆ ಪ್ರಾಮಾಣಿಕರಾಗಿರುವುದು ಅಗತ್ಯ.

ನಿಮ್ಮ ಬಗ್ಗೆ ನಿರ್ಲಕ್ಷ್ಯ ಬೇಡ : ಮಗುವನ್ನು ಏಕಾಂಗಿಯಾಗಿ ಪಾಲಿಸುವುದು ಸುಲಭವಲ್ಲ. ಅನೇಕ ರೀತಿಯ ತೊಂದರೆಗಳನ್ನು ದಿನ ಎದುರಿಸಬೇಕಾಗುತ್ತದೆ. ಸಮಾಜದ ವ್ಯಂಗ್ಯ ನುಡಿಗಳು ನಿಮ್ಮನ್ನು ಬಾಧಿಸುತ್ತವೆ. ಆಫೀಸಿನಲ್ಲಿದ್ದಾಗ ಮಗುವನ್ನು ಶಾಲೆಯಿಂದ ಮನೆಗೆ ಕರೆತರುವ ಚಿಂತೆಯಿಂದ  ಒತ್ತಡಕೊಳ್ಳಗಾಗುತ್ತೀರಿ.  ಆ ರೀತಿಯ ಚಿಂತೆಯಿಂದ ದೂರವಿರಿ. ನೀವು ಚಿಂತಿಸುತ್ತಿದ್ದರೆ ಮಗುವಿನ ಪೋಷಣೆಯಲ್ಲಿ ದುಷ್ಪರಿಣಾಮ ಉಂಟು ಮಾಡುತ್ತದೆ. ಸ್ಟ್ರೆಸ್‌ನಿಂದ ಪಾರಾಗಲು ಎಕ್ಸರ್‌ಸೈಜ್‌ ಮಾಡಿ, ಸಮತೋಲಿತ ಆಹಾರ ಸೇವಿಸಿ, ವಿಶ್ರಾಂತಿ ಪಡೆಯಿರಿ. ವೈದ್ಯರಲ್ಲಿ ನಿಯಮಿತವಾಗಿ ಪರೀಕ್ಷಿಸಿಕೊಳ್ಳಿ. ನೀವು ಫಿಟ್‌ ಆಗಿದ್ದರೆ ಮಗುವನ್ನು ಉತ್ತಮವಾಗಿ ಕೇರ್‌ ಮಾಡಬಹುದು.

ಉತ್ತಮ ಚೈಲ್ಡ್ ಕೇರ್‌ಟೇಕರ್‌ನ್ನು ಹುಡುಕಿ: ನೀವು ಆಫೀಸ್‌ನಲ್ಲಿ ಇರುತ್ತೀರಿ. ಮಗುವನ್ನು ನೋಡಿಕೊಳ್ಳುವ ಜವಾಬ್ದಾರಿಯನ್ನು ಭರವಸೆ ಇಡಬಹುದಾದಂತಹ ಕೇರ್‌ ಟೇಕರ್‌ ಅಥವಾ ಮೇಡ್‌ಗೆ ಒಪ್ಪಿಸಿ. ಆಗ ನೀವು ನಿಶ್ಚಿಂತರಾಗಿ ಆಫೀಸಿನ ಜವಾಬ್ದಾರಿ ನಿರ್ವಹಿಸಬಹುದು. ಕ್ಷಣಕ್ಷಣಕ್ಕೂ ನೀವು ಮಗು ಊಟ ತಿಂತಾ, ಹೋಂವರ್ಕ್‌ ಮಾಡ್ತಾ, ಮಗು ಹಟ ಮಾಡ್ತಿಲ್ಲ ತಾನೆ? ಮಗು ಮಧ್ನಾಹ್ನ ಸಮಯಕ್ಕೆ ಸರಿಯಾಗಿ ಮಲಗ್ತಾ ಇತ್ಯಾದಿ ಚಿಂತಿಸಬೇಕಾಗಿಲ್ಲ. ಉತ್ತಮ ಚೈಲ್ಡ್ ಕೇರ್‌ಟೇಕರ್‌ ಅಥವಾ ಫುಲ್ ಟೈಮ್ ಮೇಡ್‌ನ್ನು ಹುಡುಕಲು ನಿಮ್ಮ ಫ್ರೆಂಡ್‌ ಸರ್ಕಲ್ ಅಥವಾ ವಿಶ್ವಾಸಪಾತ್ರ ಪ್ಲೇಸ್‌ಮೆಂಟ್‌ ಏಜೆನ್ಸಿಯಿಂದ ಸಹಾಯ ಪಡೆಯಿರಿ. ನೀವು ಕೆಲಸದಲ್ಲಿದ್ದರೆ ಕೇರ್‌ ಟೇಕರ್‌ ಅಥವಾ ಫುಲ್ ಟೈಮ್ ಮೇಡ್‌ ಬಹಳ ಅಗತ್ಯ. ಹಣ ಉಳಿಸೋಣವೆಂದುಕೊಂಡು ಮಗುವನ್ನು ಮನೆಯಲ್ಲಿ ಒಂಟಿಯಾಗಿ ಬಿಡಬೇಡಿ. ಕೇರ್‌ಟೇಕರ್‌ ಅಥವಾ ಮೇಡ್‌ ಚೈಲ್ಡ್ ಕೇರ್‌ನಲ್ಲಿ ಬಹಳ ದಕ್ಷರಾಗಿರಬೇಕು.

ಫ್ರೆಂಡ್ಸ್ ಸಹಾಯ ಪಡೆಯಿರಿ : ನಿಮ್ಮ ಗೆಳತಿಯರು ಒಳ್ಳೆಯವರು, ಉತ್ತಮರೂ ಆಗಿದ್ದರೆ ನಿಮ್ಮ ಅನುಪಸ್ಥಿತಿಯಲ್ಲಿ ಆಗಾಗ್ಗೆ ಮಕ್ಕಳನ್ನು ನೋಡಿಕೊಳ್ಳಿ ಎಂದು ಮನವಿ ಮಾಡಿಕೊಳ್ಳಿ.

ನಿಮ್ಮ ಜವಾಬ್ದಾರಿ : ನೀವು ಮಗುವಿನ ಸಿಂಗಲ್ ಪೇರೆಂಟ್‌ ಎಂಬುದನ್ನು ನೆನಪಿಡಿ. ಮಗುವಿನ ಪೋಷಣೆ ನಿಮ್ಮದೇ ಆಗಿರುತ್ತದೆ. ಮಗುವಿನ ಜವಾಬ್ದಾರಿಯನ್ನು ನಿಮ್ಮ ತಂದೆ ತಾಯಿ ಅಥವಾ ತಮ್ಮ, ತಂಗಿಗೆ ಒಪ್ಪಿಸಬೇಡಿ. ನಿಮ್ಮ ಒಳ್ಳೆಯ ವರ್ತನೆಯಿಂದ ಅವರು ನಿಮ್ಮ ಮಗುವನ್ನು ನೀವಿಲ್ಲದಿದ್ದರೂ ಚೆನ್ನಾಗಿ ನೋಡಿಕೊಳ್ತಾರೆ. ಆದರೂ ನಿಮ್ಮ ಮಗುವಿನ ಪಾಲನೆ ಪೋಷಣೆಯ ಜವಾಬ್ದಾರಿ ನಿಮ್ಮದು. ಅವರದ್ದಲ್ಲ.

ಹೊರಗಿನ ಸಹಾಯ ಪಡೆಯಿರಿ : ಜನರೊಂದಿಗೆ ಒಳ್ಳೆಯ ಸಂಬಂಧ ಇಟ್ಟುಕೊಳ್ಳಿ. ಏಕೆಂದರೆ ಸಮಯ ಬಂದಾಗ ಅವರು ನಿಮಗೆ ಸಹಾಯ ಮಾಡಲು ಹಿಂದೇಟು ಹಾಕಬಾರದು. ಉದಾಹರಣೆಗೆ ನಿಮಗೆ ಆರೋಗ್ಯ ಸರಿ ಇಲ್ಲದೆ ಮಗು ಮತ್ತು ಮನೆಯ ಜವಾಬ್ದಾರಿ ನಿಭಾಯಿಸಲು ಕಷ್ಟವಾದರೆ ಯಾರಿಂದಲಾದರೂ ಸಹಾಯ ಪಡೆಯಿರಿ. ಅದಕ್ಕೆ ನೀವು ವ್ಯವಹಾರ ಕುಶಲರಾಗಿರಬೇಕು.

ಎಲ್ಲರಿಗೂ ಪ್ರಿಯವೆನಿಸುವ ಗೌರವಾದರ

ಎಂದೂ ಸುಳ್ಳು ಹೇಳಬೇಡಿ: ನೀವು ಡೈವೋರ್ಸಿಯಾಗಿದ್ದರೆ ನಿಮ್ಮ ಮಗುವಿಗೆ ಸಂಪೂರ್ಣವಾಗಿ ನಿಜ ಹೇಳಿ. ಆಗ ಮಗು ಸತ್ಯವನ್ನು ತಿಳಿದುಕೊಳ್ಳುತ್ತದೆ. ಹೊರಗಿನವರಿಂದ ಗೊತ್ತಾದರೆ ಅದರ ಎಳೆಯ ಮನಸ್ಸಿಗೆ ಗಾಢವಾದ ಪೆಟ್ಟು ಬೀಳುತ್ತದೆ. ಮಗುವಿನ ಮೇಲೆ ಪ್ರತಿಕೂಲ ಪರಿಣಾಮ ಬೀರಬಹುದು.

ಮಂಜುಳಾ ಕುಮಾರ್‌ 

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ