ಜೀವನದಲ್ಲಿ ಶಾಂತಿ ನೆಮ್ಮದಿ ಅತ್ಯವಶ್ಯ. ಅಕ್ಕಪಕ್ಕದವರೊಂದಿಗೆ ಉತ್ತಮ ಸಂಬಂಧ ಹೊಂದವುದರ ಮೂಲಕ ನೀವು ನೆಮ್ಮದಿಯ ಜೀವನ ಕಾಣಬಹುದು. ಒಳ್ಳೆಯ ನೆರೆಮನೆಯವರಾಗುವ ಕಿವಿಮಾತುಗಳನ್ನು ಗಮನದಲ್ಲಿಟ್ಟುಕೊಂಡು ಸಮಾಜದಲ್ಲಿ ನಿಮ್ಮ ಒಳ್ಳೆಯ ಇಮೇಜ್‌ನ್ನು ಕಾಯ್ದುಕೊಂಡು ಹೋಗಬಹುದು.

– ನೀವು ಬಡಾವಣೆಯಲ್ಲಿ ಹೊಸದಾಗಿ ಬಂದು ವಾಸಿಸುತ್ತಿದ್ದೀರಿ. ಅಲ್ಲಿ ಅಕ್ಕಪಕ್ಕದವರೊಂದಿಗೆ ನಿಮ್ಮ ಒರಟುತನ, ಉದ್ಧಟತನದ ಪ್ರದರ್ಶನ ಮಾಡಲು ಹೋಗಬೇಡಿ. ಹೊಸ ಜಾಗದಲ್ಲಿ ನಿಮ್ಮದೇ ಆದ ಪಡಿಯಚ್ಚು ಮೂಡಿಸಿ. ಅದಕ್ಕಾಗಿ ನೀವೇ ಹೆಜ್ಜೆ ಹಾಕುವುದು ಒಳ್ಳೆಯದು. ನೀವು ಮುಗುಳ್ನಗುತ್ತಾ ಅಕ್ಕಪಕ್ಕದವರನ್ನು ಎದುರುಗೊಂಡರೆ, ಅವರೂ ಕೂಡ ನಿಮ್ಮನ್ನು ಅದೇ ರೀತಿಯಲ್ಲಿ ಸ್ವಾಗತಿಸಬಹುದು.

– ಅಕ್ಕಪಕ್ಕದವರ ಲೈಫ್‌ಸ್ಟೈಲ್ ಅರಿಯಿರಿ. ಹೀಗೆ ಮಾಡುವುದರಿಂದ ಅವರೊಂದಿಗೆ ಜಗಳದ ಸಂದರ್ಭ ತಪ್ಪುತ್ತೆ. ಅಂದಹಾಗೆ, ನಿಮ್ಮ ನೆರೆಮನೆಯವರು ನೈಟ್‌ಶಿಫ್ಟ್ ನಲ್ಲಿ ಕೆಲಸ ಮಾಡುವವರಾಗಿದ್ದಲ್ಲಿ, ಅವರಿಗೆ ಹಗಲು ಹೊತ್ತು ವಿಶ್ರಾಂತಿಯ ಅಗತ್ಯವಿರುತ್ತದೆ. ನಿಮ್ಮ ಮಗು ಶಾಲೆಯಿಂದ ವಾಪಸ್ಸಾದ ಬಳಿಕ ಡ್ಯಾನ್ಸ್, ಮ್ಯೂಸಿಕ್‌ನ ಪ್ರ್ಯಾಕ್ಟೀಸ್‌ ಮಾಡುತ್ತಿದ್ದರೆ, ಆ ಬಗ್ಗೆ ನೆರೆಮನೆಯವರಿಗೆ ಮುಂಚಿತವಾಗಿಯೇ ತಿಳಿಸುವುದು ಒಳ್ಳೆಯದು. ಏಕೆಂದರೆ ಮುಂದೆ ಯಾವುದಾದರೂ ದಿನ ಆಗುವ ಜಗಳವನ್ನು ಮುಂಚೆಯೇ ತಪ್ಪಿಸಿದಂತೆ. ಇಂತಹ ಸ್ಥಿತಿಯಲ್ಲಿ ನೀವಿಬ್ಬರೂ ಸೇರಿ ಒಂದು ಉಪಾಯ ಕಂಡುಕೊಳ್ಳಬಹುದು.

– ನೀವು ಎರಡನೇ ಮಹಡಿಯಲ್ಲಿ ವಾಸಿಸುವವರಾಗಿದ್ದರೆ, ಭಾರಿ ಗಾತ್ರದ ಉಪಕರಣಗಳನ್ನು ಅತ್ತಿತ್ತ ಜರುಗಿಸುವುದರಿಂದ ಉಂಟಾಗುವ ಸದ್ದಿನಿಂದ ಮೊದಲನೇ ಮಹಡಿಯಲ್ಲಿ ವಾಸಿಸುವವರಿಗೆ ಕಿರಿಕಿರಿ ಅನಿಸಬಹುದು. ಆ ಸದ್ದು ಜಗಳಕ್ಕೆ ದಾರಿ ಮಾಡಿಕೊಡಬಹುದು. ಇಂತಹ ಸ್ಥಿತಿಯಲ್ಲಿ ನೀವು ಬೃಹತ್‌ ಗಾತ್ರದ ಗೃಹಬಳಕೆ ಉಪಕರಣಗಳು ಹಾಗೂ ಪೀಠೋಪಕರಣಗಳ ತಳಭಾಗದಲ್ಲಿ ರಬ್ಬರ್‌ ಮ್ಯಾಟ್‌ ಅಳವಡಿಸಿ. ಏಕೆಂದರೆ ನಿಮ್ಮ ಮನೆಯಿಂದ ಬರುವ ಸದ್ದು ಯಾರಿಗೂ ತೊಂದರೆ ಎನಿಸದಂತಿರಲಿ.

– ನೀವು ಆಗಾಗ ಮೆಟ್ಟಿಲು ಹತ್ತುವುದು ಇಳಿಯುವುದು ನಿಮ್ಮ ಕೆಳಮಹಡಿಯವರಿಗೆ ತೊಂದರೆ ಕಿರಿಕಿರಿ ಎನಿಸಬಾರದು. ನೀವು ಹಾಕಿಕೊಳ್ಳುವ ಚಪ್ಪಲಿ, ಶೂಗಳು ಹೆಚ್ಚು ಸದ್ದಾಗದಂತೆ ಓಡಾಡಿ.

– ನೀವು ಮನೆಯಲ್ಲಿ ನಾಯಿ ಸಾಕಿದ್ದರೆ, ಅದನ್ನು ಕಟ್ಟಿಹಾಕಿ. ಹೊರಗೆ ಹೋದಾಗಲೂ ಸಹ ಚೇನ್‌ ಹಿಡಿದುಕೊಂಡು ಹೋಗಿ. ಅದರಿಂದ ನಿಮಗೆ ಹೆದರಿಕೆ ಅನಿಸದಿರಬಹುದು. ಆದರೆ ಬೇರೆಯವರಿಗೆ ಹೆದರಿಕೆ ಆಗಬಹುದು. ಅದು ಬೇರೆಯವರನ್ನು ಕಚ್ಚಲು ಬರಬಹುದು, ಜಗಳಕ್ಕೆ ಕಾರಣ ಆಗಬಹುದು.

– ಪಾರ್ಕಿಂಗ್‌ ಶಿಷ್ಟಾಚಾರದ ಬಗೆಗೂ ಚೆನ್ನಾಗಿ ತಿಳಿದುಕೊಂಡಿರಿ. ನಿಮ್ಮ ದ್ವಿಚಕ್ರ ವಾಹನ ಅಥವಾ ಕಾರನ್ನು ಹೇಗೆ ಪಾರ್ಕ್‌ ಮಾಡಬೇಕೆಂದರೆ, ಅದು ಬೇರೆ ಯಾರ ವಾಹನಗಳಿಗೂ ಅಡಚಣೆ ಎನಿಸದಿರಲಿ. ಬೇರೆಯವರ ಮನೆ ಎದುರು ಪಾರ್ಕ್‌ ಮಾಡಬೇಡಿ. ಪಾರ್ಕಿಂಗ್‌ ಶಿಷ್ಟಾಚಾರಗಳನ್ನು ತಿಳಿದುಕೊಳ್ಳುವುದರಿಂದ ಅಕ್ಕಪಕ್ಕದವರ ಜೊತೆ ಜಗಳದ ಪ್ರಸಂಗಗಳು ತಪ್ಪುತ್ತವೆ.

– ಅಕ್ಕಪಕ್ಕದವರೊಂದಿಗೆ ಹೊಂದಾಣಿಕೆ ಮನೋಭಾವ ಇಟ್ಟುಕೊಳ್ಳಿ. ನೀವೇ ಆಸಕ್ತಿ ವಹಿಸಿ ಪಕ್ಕದ ಮನೆಯವರನ್ನು ಟೀ/ಕಾಫಿಗೆ ಕರೆಯಬಹುದು. ಒಳ್ಳೆಯ ವಾತಾವರಣ ನಿಮಗೆ ಮಾನಸಿಕ ನೆಮ್ಮದಿ ತಂದುಕೊಡುತ್ತದೆ. ಸಂದರ್ಭ ಬಂದಾಗ ಪಕ್ಕದ ಮನೆಯವರು ನಿಮ್ಮ ನೆರವಿಗೆ ಬರುತ್ತಾರೆ.

ಆದರ್ಶ ಪತಿಪತ್ನಿ ನೀವಾಗಬೇಕೇ?

– ಮೆಲ್ಲನೆಯ ಧ್ವನಿಯಲ್ಲಿ ಮಾತನಾಡುವುದು ಅತ್ಯಂತ ಅವಶ್ಯ. ನೀವು ಫೋನ್‌ನಲ್ಲಿ ಮಾತನಾಡುತ್ತಿದ್ದೀರಿ. ಕಾಲೋನಿಯಲ್ಲಿ ಮಹಿಳೆಯರು ಜೋರುಜೋರಾಗಿ ಮಾತನಾಡುತ್ತಿದ್ದರೆ, ಅವರಿಗೆ ನಿಧಾನವಾಗಿ ಮಾತನಾಡಿ ಎಂದು ಹೇಳಿದರೆ ಅವರು ನಿಮ್ಮ ವಿರುದ್ಧ ಜಗಳಕ್ಕೆ ಬರಬಹುದು. ಇಂತಹ ಸ್ಥಿತಿಯಲ್ಲಿ ಮನೆಯ ಸದಸ್ಯರಿಗೆ ಮನೆ, ಟೆರೇಸ್‌, ಹೊರಗಡೆ ಪಾರ್ಕ್‌ ಮತ್ತಿತರ ಕಡೆ ಮೃದುಧ್ವನಿಯಲ್ಲಿ ಮಾತನಾಡಲು ಹೇಳಿ.

– ನೆರೆಮನೆಯವರೊಂದಿಗೆ ಮಾತುಕತೆಯ ಸಂಪರ್ಕ ಕಾಯ್ದುಕೊಳ್ಳಿ. ಅವರ ಪ್ರತಿಯೊಂದು ಕಷ್ಟಸುಖದಲ್ಲಿ ಅವರ ಜೊತೆಗೆ ಇರಿ. ಇಬ್ಬರಿಗೂ ಸಮಯದ ಕೊರತೆ ಎನಿಸಿದರೆ, ವಾಟ್ಸ್ಆ್ಯಪ್‌ ಹಾಗೂ ಮೆಸೆಂಜರ್‌ನಿಂದ ಸಂಪರ್ಕ ಸಾಧಿಸಿ.

– ನೀವು ಪಾರ್ಟಿ ಮಾಡುವವರಿದ್ದರೆ ನೆರೆಮನೆಯವರಿಗೆ, ಈ ಬಗ್ಗೆ ಮುಂಚೆಯೇ ಗಮನಕ್ಕೆ ತನ್ನಿ. ಇಲ್ಲದಿದ್ದರೆ ಪಾರ್ಟಿಯ ಮೂಡ್‌ ಹೊರಟೇಹೋಗುತ್ತದೆ. ನೀವು ಅವರಿಗೆ ಮೊದಲೇ ತಿಳಿಸಿದ್ದರೆ, ಜಾಸ್ತಿ ಗಲಾಟೆಯಾದರೆ, ಅವರು ಸಹಿಸಿಕೊಳ್ಳುವ ಮನಸ್ಥಿತಿ ತೋರಿಸಬಹುದು.

– ಮನೆಯಲ್ಲಿ ಉತ್ಪಾದನೆಯಾಗುವ ಕಸವನ್ನು ನಿರ್ದಿಷ್ಟಪಡಿಸಿದ ಕಸದ ಡಬ್ಬಿಯಲ್ಲಿಯೇ ಹಾಕಿ. ಅಲ್ಲಲ್ಲಿ ಎಸೆಯಬೇಡಿ. ಅದು ಜಗಳಕ್ಕೆ ಕಾರಣವಾಗಬಹುದು. ಅದೇ ರೀತಿ ಕಾಲೋನಿಯಲ್ಲಿ ಅಲ್ಲಿ ಇಲ್ಲಿ ಚೆಲ್ಲಾಪಿಲ್ಲಿಯಾದ ಕಸವನ್ನು ನಿರ್ಲಕ್ಷಿಸಬೇಡಿ. ನೀವು ಹೀಗೆ ಮಾಡಲು ಹೋದರೆ, ಅಸೋಸಿಯೇಶನ್‌ನ ಮುಖ್ಯಸ್ಥರವರೆಗೆ ಈ ವಿಷಯ ತಲುಪಬಹುದು. ನಿಮಗೂ ಸೇರಿ ಎಲ್ಲರಿಗೂ ಎಚ್ಚರಿಕೆ ಕೊಡಬಹುದು.

– ನಿಮ್ಮ ಆಸುಪಾಸಿನ ಭಾಗದಲ್ಲಿ ಯಾವುದಾದರೂ ಅಹಿತಕರ ಘಟನೆ ನಡೆದರೆ, ನಿಮ್ಮ ವೆಲ್‌ಫೇರ್‌ ಅಸೋಸಿಯೇಷನ್‌ನ ಮುಖ್ಯಸ್ಥರ ಗಮನಕ್ಕೆ ತನ್ನಿ. ಇಂತಹ ಘಟನೆ ಮತ್ತೊಮ್ಮೆ ನಡೆಯದಂತೆ ಅವರು ಎಚ್ಚರಿಕೆ ವಹಿಸಬಹುದು.

– ಹಿರಿಯರ ಬಗ್ಗೆ ಕಾಳಜಿ ವಹಿಸಿ. ಕಾಲೋನಿಯ ಹಿರಿಯರ ಬಗ್ಗೆ ಗಮನಹರಿಸಲು ಹಿಂದೇಟು ಹಾಕಬೇಡಿ. ನಿಮ್ಮ ವರ್ತನೆ ಬೇರೆಯವರ ಮೇಲೆ ದುಷ್ಪರಿಣಾಮ ಬೀರದಂತೆ ಎಚ್ಚರಹಿಸಿ.

ಮದುವೆ ನೋಂದಣಿಯ ಮಹತ್ವ

– ನನ್ನಿಂದಾಗಿ ನಿಮಗೆ ಏನಾದರೂ ತೊಂದರೆ ಆಗುತ್ತಿದೆಯೇ ಎಂದು ಪಕ್ಕದ ಮನೆಯವರನ್ನು ಕೇಳಿ. ಇದು ಜಗಳದ ಸಾಧ್ಯತೆಯನ್ನು ಕಡಿಮೆಗೊಳಿಸುತ್ತದೆ.

– ಸುಧಾ ಪ್ರಮೋದ್‌  

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ