ಮದುವೆಯ ನೋಂದಣಿ ಮಾಡಿಸದೆ ಇದ್ದರೆ ಏನೇನು ಹಾನಿ, ತೊಂದರೆ ಅನುಭವಿಸಬೇಕಾಗುತ್ತದೆ ಎಂಬುದನ್ನು ತಿಳಿದುಕೊಳ್ಳುವುದು ಅಗತ್ಯ. ಮುಂದೆ ಬರುವ ತೊಂದರೆ ಎದುರಿಸುವ ಬದಲು ಅದರ ಬಗ್ಗೆ ಸಂಪೂರ್ಣ ವಿವರಗಳನ್ನು ಅರಿಯುವುದು ಒಳ್ಳೆಯದಲ್ಲವೇ……..?

ವಿವಾಹ ನೋಂದಣಿ ಮಾಡಿಸಿಕೊಳ್ಳುವುದು ಕಾನೂನಿನ ಪ್ರಕಾರ ಅಗತ್ಯ ಉಂಟಾದಾಗ ಮಾತ್ರ. ಅದರಲ್ಲೂ ವಿಶೇಷವಾಗಿ ವೀಸಾ ಮುಂತಾದವುಗಳಿಗಾಗಿ ಅರ್ಜಿ ಹಾಕಬೇಕೆಂದಾಗ ನಮಗೆ ಮದುವೆ ರಿಜಿಸ್ಟ್ರೇಷನ್‌ ನೆನಪಾಗುತ್ತದೆ.

ಮದುವೆಯ ಬಳಿಕ ಇತರೆ ಸಂಗತಿಗಳಿಗೆ ಎಷ್ಟು ಆದ್ಯತೆ ಕೊಡುತ್ತೇವೆ, ಅಷ್ಟು ಮಹತ್ವವನ್ನು ಮದುವೆಯ ನೋಂದಣಿ ಪ್ರಕ್ರಿಯೆಗೆ ಕೊಡುವುದಿಲ್ಲ. ಅನಕ್ಷರಸ್ಥರ ಹಾಗೆಯೇ ಸುಶಿಕ್ಷಿತರು ಕೂಡ ಮದುವೆಯ ನೋಂದಣಿಯ ಕುರಿತಂತೆ ನಿರ್ಲಕ್ಷ್ಯ ಧೋರಣೆ ಹೊಂದಿದ್ದಾರೆ.

ಮದುವೆಯ ನೋಂದಣಿ ಮಾಡಿಸುವುದು ಎಷ್ಟು ಅಗತ್ಯ ಅದನ್ನು ಮಾಡಿಸುವ ವಿಧಾನ ಹಾಗೂ ಅದರಿಂದ ಏನೇನು ಉಪಯೋಗ ಎಂಬುದನ್ನು ಮೊದಲು ತಿಳಿದುಕೊಳ್ಳುವುದು ಅಗತ್ಯ. ಮದುವೆ ಪ್ರಮಾಣಪತ್ರ ಎನ್ನುವುದು ಇಬ್ಬರು ವ್ಯಕ್ತಿಗಳು ಮದುವೆಯಾಗಿದ್ದಾರೆ ಎನ್ನುವುದಕ್ಕೆ ಅಧಿಕೃತ ಪುರಾವೆಯಾಗಿರುತ್ತದೆ.

ಜನರು ಜನನ ಪ್ರಮಾಣಪತ್ರಕ್ಕೆ ಎಷ್ಟು ಮಹತ್ವ ಕೊಡುತ್ತಾರೊ, ಮದುವೆ ಪ್ರಮಾಣ ಪತ್ರಕ್ಕೆ ಅಷ್ಟು ಪ್ರಾಮುಖ್ಯತೆ ಕೊಡುವುದಿಲ್ಲ.

ಭಾರತ ಒಂದು ಜಾತ್ಯತೀತ ರಾಷ್ಟ್ರ. ಇಲ್ಲಿ ಎರಡು ಕಾಯ್ದೆಗಳ ಪ್ರಕಾರ, ಮದುವೆ ನೋಂದಣಿ ಮಾಡಿಸಬಹುದು. ಮೊದಲನೆಯದು ಹಿಂದೂ ವಿವಾಹ ಕಾಯ್ದೆ 1955 ಮತ್ತು ಸ್ಪೆಷಲ್ ಮ್ಯಾರೇಜ್‌ ಆ್ಯಕ್ಟ್ 1954ರ ಪ್ರಕಾರ, ಮದುವೆ ನೋಂದಣಿ ಮಾಡಿಸಬಹುದು.

ನಿಮ್ಮ ಮದುವೆಯಾಗಿದೆ. ಇಂತಿಂಥ ದಿನವೇ ಆಗಿದೆ ಎನ್ನುವುದಕ್ಕೆ `ಮ್ಯಾರೇಜ್‌ ಸರ್ಟಿಫಿಕೇಟ್‌’ ಒಂದು ಕಾನೂನುಬದ್ಧ ದಾಖಲೆ. ನಿಮಗೆ ಬ್ಯಾಂಕ್‌ ಖಾತೆ ತೆರೆಯಲು, ಪಾಸ್‌ಪೋರ್ಟ್‌ ಹೊಂದಲು ಅಥವಾ ಮತ್ತೆ ಯಾವುದಾದರೂ ದಾಖಲೆಗೆ ಅರ್ಜಿ ಸಲ್ಲಿಸಲು ಮದುವೆ ಪ್ರಮಾಣ ಪತ್ರ ನೆರವಿಗೆ ಬರುತ್ತದೆ. ದಂಪತಿ ಪ್ರವಾಸಿ ವೀಸಾ ಮಾಡಿಸಿಕೊಳ್ಳಲು ಅಥವಾ ಯಾವುದಾದರೂ ದೇಶದಲ್ಲಿ ಖಾಯಂ ವಾಸಕ್ಕಾಗಿ ಅರ್ಜಿ ಸಲ್ಲಿಸುವುದಕ್ಕಾಗಿ ಮದುವೆ ಪ್ರಮಾಣಪತ್ರ ಬೇಕೇಬೇಕು.

ಭಾರತ ಅಥವಾ ವಿದೇಶದಲ್ಲಿರುವ ರಾಯಭಾರಿ ಕಛೇರಿಗಳು ಪಾರಂಪರಿಕ ವಿವಾಹ ಸಮಾರಂಭಗಳ ಪುರಾವೆಗೆ ಮಾನ್ಯತೆ ಕೊಡುವುದಿಲ್ಲ. ಅವರಿಗೆ ಮದುವೆ ಪ್ರಮಾಣಪತ್ರ ಸಲ್ಲಿಸಲೇಬೇಕಾಗುತ್ತದೆ. ಜೀವವಿಮೆ ಪಡೆದಾಗ, ಗಂಡ ಅಥವಾ ಹೆಂಡತಿ ಯಾರಾದರೂ ನಿಧನ ಹೊಂದಿದಲ್ಲಿ ಆಗ ವಿಮೆ ಹಣ ಪಡೆದುಕೊಳ್ಳಲು ವಿವಾಹ ಪ್ರಮಾಣ ಪತ್ರ ಕೊಡಲೇಬೇಕು.

ನಾಮಿನಿ ತನ್ನ ಅರ್ಜಿಯಲ್ಲಿ ಪುರಾವೆ ಎಂದು ಕಾನೂನುಬದ್ಧ ದಾಖಲೆಯನ್ನು ಪ್ರಸ್ತುತಪಡಿಸದೆ ಇದ್ದರೆ ವಿಮೆ ಕಂಪನಿ ಆ ಅರ್ಜಿಯನ್ನು ಗಂಭೀರವಾಗಿ ಪರಿಗಣಿಸುವುದಿಲ್ಲ. 2006ರಲ್ಲಿ ಸುಪ್ರೀಂ ಕೋರ್ಟ್‌ ಮಹಿಳೆಯರ ಸುರಕ್ಷತೆಗಾಗಿ ಮದುವೆಯ ನೋಂದಣಿ ಮಾಡಿಸುವುದನ್ನು ಕಡ್ಡಾಯಗೊಳಿಸಿದೆ.

ರಿಜಿಸ್ಟ್ರೇಷನ್‌ ಹೇಗೆ ಮಾಡಿಸುವುದು?

ಹಿಂದೂ ಆ್ಯಕ್ಟ್ ಅಥವಾ ಸ್ಪೆಷಲ್ ಮ್ಯಾರೇಜ್‌ ಆ್ಯಕ್ಟ್ ಪ್ರಕಾರ, ಮದುವೆಯ ರಿಜಿಸ್ಟ್ರೇಷನ್‌ ಮಾಡುವುದು ಕಷ್ಟಕರ ಕೆಲಸವೇನಲ್ಲ. ಗಂಡ ಅಥವಾ ಹೆಂಡತಿ ವಾಸಿಸುವ ಕಡೆ ಸಬ್‌ಡಿವಿಜನ್‌ ಮ್ಯಾಜಿಸ್ಟ್ರೇಟ್‌ ಕಛೇರಿಯಲ್ಲಿ ಈ ಕುರಿತಂತೆ ಅರ್ಜಿ ಸಲ್ಲಿಸಬಹುದು. ಆ ಅರ್ಜಿಯ ಮೇಲೆ ಗಂಡ ಹೆಂಡತಿ ಇಬ್ಬರ ಸಹಿ ಇರಬೇಕು. ಆ ಸಮಯದಲ್ಲಿ ಅರ್ಜಿಯ ಜೊತೆ ಲಗತ್ತಿಸಿದ ದಾಖಲೆಗಳ ಪರಿಶೀಲನೆ ಮಾಡಲಾಗುತ್ತದೆ. ಆ ಬಳಿಕ ನಿಗದಿತ ದಿನದಂದು ಬರುವಂತೆ ಗಂಡಹೆಂಡತಿಗೆ ಮಾಹಿತಿ ನೀಡಲಾಗುತ್ತದೆ. ನಿಶ್ಚಿತ ದಿನದಂದು ಸಂಬಂಧಪಟ್ಟ ಕಛೇರಿಗೆ ತೆರಳಿ ಮದುವೆಯ ರಿಜಿಸ್ಟ್ರೇಷನ್‌ ಪ್ರಕ್ರಿಯೆ ಮುಗಿಸಬಹುದು. ರಿಜಿಸ್ಟ್ರೇಷನ್‌ ಮಾಡಿಸುವ ಸಮಯದಲ್ಲಿ ಒಬ್ಬ ಗೆಜೆಟೆಡ್‌ ಆಫೀಸರ್‌ ಕೂಡ ಹಾಜರಿರಬೇಕಾಗುತ್ತದೆ.

ಅರ್ಜಿಯ ಜೊತೆಗಿನ ದಾಖಲೆಗಳು

ಸಂಪೂರ್ಣವಾಗಿ ಭರ್ತಿ ಮಾಡಿದ ಅರ್ಜಿಯಲ್ಲಿ ಗಂಡಹೆಂಡತಿ ಹಾಗೂ ಅವರ ತಂದೆತಾಯಿಗಳ ಸಹಿ ಇರಬೇಕು. ದಂಪತಿಗಳು ವಾಸವಿರುವ ಮನೆಯ ವಿಳಾಸ ಅಂದರೆ ವೋಟರ್‌ ಐಡಿ, ರೇಶನ್‌ ಕಾರ್ಡ್‌/ ಪಾಸ್‌ಪೋರ್ಟ್‌ ಡ್ರೈವಿಂಗ್‌ ಲೈಸೆನ್ಸ್, ಗಂಡ ಹೆಂಡತಿ ಇಬ್ಬರ ಬರ್ತ್‌ ಸರ್ಟಿಫಿಕೇಟ್‌, ತಮ್ಮ 2 ಪಾಸ್‌ಪೋರ್ಟ್‌ ಸೈಜ್‌ ಫೋಟೋ ಹಾಗೂ ಮದುವೆಯ ಒಂದು ಫೋಟೋ ಅದರ ಜೊತೆಗೆ ಲಗತ್ತಿಸಬೇಕು. ಈ ಎಲ್ಲ ದಾಖಲೆಗಳು ಸೆಲ್ಫ್ ಅಟೆಸ್ಟೆಡ್‌ ಆಗಿರಬೇಕು. ಅರ್ಜಿಯ ಜೊತೆಗೆ ಮದುವೆಯ ಒಂದು ಆಮಂತ್ರಣ ಪತ್ರಿಕೆಯನ್ನೂ ಲಗತ್ತಿಸಬೇಕು.

ಅರ್ಹತೆಗಳು : ಯಾವ ರಿಜಿಸ್ಟ್ರಾರ್‌ ಕಛೇರಿಯಲ್ಲಿ ನೀವು ಮದುವೆಯನ್ನು ರಿಜಿಸ್ಟರ್‌ ಮಾಡಲು ಇಚ್ಛಿಸುತ್ತಿದ್ದೀರೊ, ನೀವು ಅದೇ ತಾಲ್ಲೂಕಿನ ನಿವಾಸಿಯಾಗಿರಬೇಕು. ಮದುವೆಯ ಸಂದರ್ಭದಲ್ಲಿ ವಧುವಿಗೆ 18 ವರ್ಷ ಪೂರ್ಣವಾಗಿರಬೇಕು. ವರನ ವಯಸ್ಸು 21 ಆಗಿರಬೇಕು.

ದಂಡ : ಯಾವುದೇ ವ್ಯಕ್ತಿ ನಿಗದಿತ ಸಮಯದಲ್ಲಿ ಮದುವೆ ಪ್ರಮಾಣಪತ್ರ ಹಾಜರುಪಡಿಸದೆ ಇದ್ದಲ್ಲಿ, ಆ ವ್ಯಕ್ತಿಗೆ 10,000 ರೂ. ದಂಡ ವಿಧಿಸಲಾಗುತ್ತದೆ.

ವಿವಾಹ ಪ್ರಮಾಣಪತ್ರಕ್ಕಾಗಿ ಹೆಚ್ಚಿನ ಶುಲ್ಕವೇನೂ ಆಗದು. ಜೊತೆಗೆ ಇದು ಅಷ್ಟೇನೂ ದೀರ್ಘ ಪ್ರಕ್ರಿಯೆಯೂ ಇಲ್ಲ. ಹಿಂದೂ ಮ್ಯಾರೇಜ್‌ ಆ್ಯಕ್ಟ್ ಪ್ರಕಾರ, ಪ್ರಮಾಣ ಪತ್ರ ಪಡೆಯಲು 100 ರೂ. ಹಾಗೂ ಸ್ಪೆಷಲ್ ಮ್ಯಾರೇಜ್‌ ಆ್ಯಕ್ಟ್ ಗೆ 150 ರೂ. ಶುಲ್ಕ ವಿಧಿಸಲಾಗುತ್ತದೆ. ಶುಲ್ಕ ಪಾವತಿ ಮಾಡಿರುವುದನ್ನು ಖಚಿತಪಡಿಸಲು ಅದರ ರಸೀದಿಯನ್ನು ಲಗತ್ತಿಸುವುದು ಅನಿವಾರ್ಯ. ಸರ್ಕಾರ ಆನ್‌ಲೈನ್‌ ರಿಜಿಸ್ಟ್ರೇಷನ್‌ ವ್ಯವಸ್ಥೆ ಕೂಡ ಮಾಡಿದೆ.

ಮದುವೆ ಪ್ರಮಾಣಪತ್ರದ ಲಾಭಗಳು

– ಭಾರತದಲ್ಲಿರುವ ವಿದೇಶಿ ರಾಯಭಾರಿ ಕಛೇರಿಗಳು ಅಥವಾ ವಿದೇಶದಲ್ಲಿರುವ ಯಾರನ್ನೇ ಆಗಲಿ ಗಂಡ ಹೆಂಡತಿ ಎಂದು ಸಾಬೀತುಪಡಿಸಲು ಮದುವೆ ಪ್ರಮಾಣಪತ್ರ ಅತ್ಯಗತ್ಯ.

– ಮದುವೆ ಪ್ರಮಾಣ ಪತ್ರ ಇರುವುದರಿಂದ ಮಹಿಳೆಯರಲ್ಲಿ ನಂಬಿಕೆ ಮತ್ತು ಸುರಕ್ಷತೆಯ ಅನುಭೂತಿ ಮೂಡುತ್ತದೆ. ಗಂಡಹೆಂಡತಿ ನಡುವೆ ಯಾವುದೇ ವಿವಾದದ (ವರದಕ್ಷಿಣೆ, ವಿಚ್ಛೇದನ, ಜೀವನಾಂಶ ಪಡೆಯಲು) ಸಂದರ್ಭದಲ್ಲಿ ಈ ಪ್ರಮಾಣಪತ್ರ ಅಗತ್ಯ.

– ಮದುವೆ ಪ್ರಮಾಣಪತ್ರ ಬಾಲ್ಯ ವಿವಾಹದ ಮೇಲೆ ನಿಯಂತ್ರಣ ಹೇರಲು ಅನುಕೂಲವಾಗುತ್ತದೆ. ಒಂದುವೇಳೆ ನಿಮಗೆ ಮದುವೆ ವಯಸ್ಸು ಆಗದೇ ಇದ್ದಲ್ಲಿ, ನಿಮಗೆ ಮದುವೆ ಪ್ರಮಾಣಪತ್ರ ಕೊಡಲು ಬರುವುದಿಲ್ಲ.

– ವಿವಾಹಿತರಾಗಿರಬಹುದು, ವಿಚ್ಛೇದಿತರಾಗಿರಬಹುದು ಇಬ್ಬರಿಗೂ ಮದುವೆ ಪ್ರಮಾಣಪತ್ರ ಇರಲೇಬೇಕು. ವಿಚ್ಛೇದಿತ ಮಹಿಳೆಯರಿಗೆ ಈ ಪ್ರಮಾಣಪತ್ರ ಹೆಚ್ಚಿಗೆ ಉಪಯೋಗ ಆಗುತ್ತದೆ. ಏಕೆಂದರೆ ವಿಚ್ಛೇದನದ ಬಳಿಕ ಮಹಿಳೆಯರಿಗೆ ಸಾಮಾಜಿಕ ಮತ್ತು ಆರ್ಥಿಕ ಸುರಕ್ಷತೆ ಪುರುಷರಿಗಿಂತ ಹೆಚ್ಚಿಗೆ ಬೇಕಾಗುತ್ತದೆ.

– ಎಂ. ವಿಮಲಾ

– ಸ್ಪೆಷಲ್ ಮ್ಯಾರೇಜ್‌ ಆ್ಯಕ್ಟ್ 1954 ವಿಶೇಷ ವಿವಾಹ ಕಾಯ್ದೆಯ ಪ್ರಕಾರ ನೀವು ಸುಲಭವಾಗಿ ಮದುವೆಯನ್ನು ರಿಜಿಸ್ಟರ್‌ ಮಾಡಿಸಬಹುದು. ಅದಕ್ಕಾಗಿ ಕೆಳಕಂಡ ಸೂಚನೆಗಳನ್ನು ಪಾಲಿಸಿ.

– ನೋಟೀಸ್‌ ನೀಡುವ 1 ತಿಂಗಳ ಮುಂಚೆಯೇ ಆ ಭಾಗದ ವಾಸಿಗಳಾಗಿರಬೇಕು.

– ನೋಟೀಸ್‌ನ್ನು ಎಲ್ಲರಿಗೂ ಕಾಣುವ ರೀತಿಯಲ್ಲಿ ವಿವಾಹ ನೋಂದಣಿ ಅಧಿಕಾರಿಯ ಕಛೇರಿಯಲ್ಲಿ ಅಂಟಿಸಬೇಕು.

– ಗಂಡಹೆಂಡತಿ ಇಬ್ಬರೂ ಬೇರೆ ಭಾಗಗಳಲ್ಲಿ ವಾಸಿಸುವವರಾಗಿದ್ದಲ್ಲಿ, ಬೇರೆ ಕ್ಷೇತ್ರದ ವಿವಾಹ ನೋಂದಣಿ ಅಧಿಕಾರಿಗೂ ಅದರ  ಒಂದು ಪ್ರತಿಯನ್ನು ಕಳಿಸಬೇಕು. ನೋಟೀಸ್‌ ಪ್ರಕಟವಾದ 1 ತಿಂಗಳ ಬಳಿಕವೇ ಮದುವೆಗೆ ಕಾನೂನಿನ ಮ್ಯಾನತೆ ಕೊಡಲಾಗುತ್ತದೆ.

– ಯಾರಿಂದಲಾದರೂ ಯಾವುದಾದರೂ ಆಕ್ಷೇಪ ಬಂದಲ್ಲಿ, ಮದುವೆ ನೋಂದಣಿ ಅಧಿಕಾರಿ ದಂಪತಿಗಳನ್ನು ಸಂಪರ್ಕಿಸಿ ನಿಮ್ಮ ಮದುವೆಗೆ ಕಾನೂನು ಮಾನ್ಯತೆ ಕೊಡಬೇಕೊ, ಬೇಡವೋ ಎಂದು ಪ್ರಶ್ನಿಸುತ್ತಾರೆ.

ವಿವಾಹ ನೋಂದಣಿ ಹೇಗೆ?

ಹಿಂದೂ ವಿವಾಹ ಕಾಯ್ದೆ ಪ್ರಕಾರ, ಯಾವುದೇ ವ್ಯಕ್ತಿ ತನ್ನ ಮದುವೆಯ ರಿಜಿಸ್ಟ್ರೇಷನ್‌ ಮಾಡಿಸಬಹುದು. ಅದಕ್ಕಾಗಿ ಕೆಳಕಂಡ ವಿಧಾನ ಅನುಸರಿಸಿ:

– ದಂಪತಿಗಳು ವಿವಾಹ ನೋಂದಣಿ ಅಧಿಕಾರಿ ಬಳಿ ವಿವಾಹವನ್ನು ರಿಜಿಸ್ಟರ್‌ ಮಾಡಿಸಬೇಕಾಗುತ್ತದೆ. ಮದುವೆ ನಡೆದ ಸ್ಥಳಕ್ಕೆ ಸಂಬಂಧಪಟ್ಟ ನೋಂದಣಿ ಅಧಿಕಾರಿ ಬಳಿ ರಿಜಿಸ್ಟರ್‌ ಮಾಡಿಸಬೇಕು. ಇಲ್ಲವೇ ಯಾವ ಏರಿಯಾದಲ್ಲಿ ಗಂಡಹೆಂಡತಿ ಇಬ್ಬರಲ್ಲಿ ಒಬ್ಬರು ಕಳೆದ ಆರು ತಿಂಗಳಿನಿಂದ ವಾಸಿಸುತ್ತಿದ್ದಾರೊ, ಆ ವಿಭಾಗಕ್ಕೆ ಸಂಬಂಧಪಟ್ಟ ನೋಂದಣಿ ಅಧಿಕಾರಿ ಬಳಿ ವಿವಾಹ ನೋಂದಣಿ ಮಾಡಿಸಬೇಕಾಗುತ್ತದೆ.

– ದಂಪತಿಗಳು 1 ತಿಂಗಳೊಳಗೆ ಸೂಕ್ತ ಸಾಕ್ಷಿಗಳೊಂದಿಗೆ ವಿವಾಹ ನೋಂದಣಿ ಅಧಿಕಾರಿಯ ಮುಂದೆ ಹಾಜರಾಗಬೇಕು. ಸಾಕ್ಷಿಗಳಾಗಿ ತಂದೆತಾಯಿ, ಸ್ನೇಹಿತರು, ಪೋಷಕರು ಯಾರೇ ಆದರೂ ಹಾಜರಿರಬಹುದು.

– ರಿಜಿಸ್ಟ್ರೇಷನ್‌ಗೆ ತಡವಾದಾಗ ಅದನ್ನು 5 ವರ್ಷಗಳ ತನಕ ಮಾಡಿಸಿಕೊಳ್ಳುವ ಬಗ್ಗೆ ಜಿಲ್ಲಾ ನೋಂದಣಿ ಅಧಿಕಾರಿಗಳು ರಿಯಾಯಿತಿ ಕೊಡಬಹುದಾಗಿದೆ.

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ