ಸಮಾಜದಲ್ಲಿ ನಾವು ಆರೋಗ್ಯಕರ ಸಂಬಂಧ ಹೊಂದಿರಲು ಎಲ್ಲರೂ ನಮ್ಮನ್ನು ಗೌರವಾದರದಿಂದ ಕಾಣಬೇಕೆಂದು ಬಯಸುತ್ತೇವೆ. ಇದನ್ನು ಸಾಧಿಸುವುದು ಹೇಗೆ ಎಂದು ತಿಳಿಯೋಣವೇ.

ನಿಮ್ಮೊಂದಿಗೆ ಇತರರು ಆ ರೀತಿ ವರ್ತಿಸುವುದು ನಿಮಗೆ ಇಷ್ಟವಿಲ್ಲದಿದ್ದರೆ ನೀವು ಬೇರೆಯವರೊಂದಿಗೆ ಆ ರೀತಿ ವರ್ತಿಸದಿರಿ ಎಂಬ ಮಾತನ್ನು ನೀವು ಕೇಳಿರಬಹುದು. ಹೇಳಲು ಇದು ಸಾಧಾರಣ ವಿಷಯವಾಗಿರಬಹುದು. ಆದರೆ ಇದು ಸಂಪೂರ್ಣ ಜೀವನಶೈಲಿಯನ್ನು ಪ್ರಭಾವಿತಗೊಳಿಸುವುದಾಗಿದೆ. ನೀವು ಸಮಾಜದಲ್ಲಿ ಗೌರವ, ಆದರ ಪಡೆಯಿರಿ. ಯಾರೂ ನಿಮ್ಮನ್ನು ಕೀಳು ದೃಷ್ಟಿಯಿಂದ ನೋಡದಿರಲಿ. ಇವು ಬಹಳ ಅಗತ್ಯ. ಹಾಗೆಯೇ ಇನ್ನೊಬ್ಬರ ಬಗ್ಗೆಯೂ ನಿಮ್ಮ ವರ್ತನೆ ಸಕಾರಾತ್ಮಕವಾಗಿರಲಿ.

ನೀವು ಬೇರೆಯವರಿಗೆ ಗೌರವ ತೋರಿಸಿದರೆ ನಿಮಗೂ ಗೌರವ ಸಿಗುತ್ತದೆ ಎಂಬುದು ಸ್ವಾಭಾವಿಕ ವಿಷಯವಾಗಿದೆ. ನಮ್ಮ ಇಡೀ ಸೊಸೈಟಿ ಇದೇ ಸಿದ್ಧಾಂತದಲ್ಲಿ ನಡೆಯುತ್ತದೆ. ನೀವು ಅಧಿಕಾರ ಹೊಂದಿರಬಹುದು, ಶ್ರೀಮಂತರಾಗಿರಬಹುದು, ಉನ್ನತ ಪದವಿಯಲ್ಲಿರಬಹುದು. ಆದರೆ ಎಲ್ಲಕ್ಕೂ ಮೊದಲು ನೀವೊಬ್ಬ ಮನುಷ್ಯ, ಮನುಷ್ಯನಾಗಿದ್ದರಿಂದ ಪರಸ್ಪರ ಗೌರವಿಸುವುದು ಅನಿವಾರ್ಯ.

ಒಮ್ಮೆ ಫ್ರಾನ್ಸ್ ಚಕ್ರವರ್ತಿ ಹೆನ್ರಿ ತನ್ನ ಅಧಿಕಾರಿಗಳೊಂದಿಗೆ ಹೊರಟಿದ್ದರು. ದಾರಿಯಲ್ಲಿ ಒಬ್ಬ ಭಿಕ್ಷುಕ ನಿಂತಿರುವುದು ಕಣ್ಣಿಗೆ ಬಿತ್ತು. ಚಕ್ರವರ್ತಿ ಅವನ ಬಳಿ ಹೋದಾಗ ಅವನು ಹ್ಯಾಟ್‌ ತೆಗೆದು ಬಗ್ಗಿ ನಮಸ್ಕರಿಸಿದ. ಚಕ್ರವರ್ತಿ ಅದನ್ನು ಕಂಡು ಕೆಲವು ಸೆಕೆಂಡ್ಸ್ ಎದ್ದು ನಿಂತರು. ನಂತರ ಅವರೂ ತಮ್ಮ ಹ್ಯಾಟ್‌ ತೆಗೆದು ಭಿಕ್ಷುಕನಿಗೆ ನಮಸ್ಕರಿಸಿದರು. ಜೊತೆಯಲ್ಲಿ ಹೋಗುತ್ತಿದ್ದ ಅಧಿಕಾರಿಗಳಲ್ಲಿ ಗುಸುಗುಸು ಶುರುವಾಯಿತು.

ಚಕ್ರವರ್ತಿಗೆ ಅರ್ಥವಾಯಿತು. ಭಿಕ್ಷುಕ ನನಗೆ ನಮಸ್ಕರಿಸಿ ಗೌರವ ಕೊಟ್ಟ. ಅವನಿಗೆ ಗೌರವ ಕೊಡಲು ನನಗೆ ತಿಳಿದಿಲ್ಲವೇ? ಎಂದರು. ಅಂದರೆ ನಾವು ಒಬ್ಬರಿಗೆ ಗೌರವ ಕೊಟ್ಟರೆ ಅವರೂ ನಮಗೆ ಗೌರವ ಕೊಡುತ್ತಾರೆ. ಈ ವಿಷಯ ಜೀವನದ ಪ್ರತಿಯೊಂದು ತಿರುವಿನಲ್ಲೂ ಜ್ಞಾಪಕ ಇಟ್ಟುಕೊಳ್ಳಬೇಕು.

ಮಕ್ಕಳನ್ನೂ ಗೌರವಿಸುವುದು ಅಗತ್ಯ

ಪ್ರಸಿದ್ಧ ಇಂಗ್ಲಿಷ್‌ ಲೇಖಕ ವಿಲಿಯಂ ಹೆಜ್‌ಲಿಟ್‌ ಹೀಗೆ ಹೇಳುತ್ತಾರೆ, ವಿಶ್ವದಲ್ಲಿ ಮಗುವಿನ ಪ್ರಥಮ ಔಪಚಾರಿಕ ಪಾಠಶಾಲೆ ಸ್ಕೂಲ್ ಆಗಿದೆ. ಅದಕ್ಕೆ ಮುಂಚೆ ಮಗು ಮನೆಯಲ್ಲಿರುತ್ತದೆ. ಹೀಗಾಗಿ ಮಗುವಿನಲ್ಲಿ ಒಳ್ಳೆಯ ಸಂಸ್ಕಾರ ಮತ್ತು ಆದರ್ಶ ರೂಪಿಸುವ ಹೊಣೆಗಾರಿಕೆ ಮೊದಲಿಗೆ ತಾಯಿ ತಂದೆಯರದೇ ಆಗಿರುತ್ತದೆ. ಇತರ ಮಕ್ಕಳೊಂದಿಗೆ ನಿಮ್ಮ ಮಕ್ಕಳನ್ನು ಹೋಲಿಸುವುದು, ವ್ಯಂಗ್ಯದ ಬಾಣಗಳನ್ನು ಬಿಡುವುದು ಇತ್ಯಾದಿ ಮಾಡಬೇಡಿ. ಚಿಕ್ಕಮಕ್ಕಳು ಮನೆಯ ಚಿಕ್ಕ ಕೆಲಸ ಮಾಡಿದರೂ ಥ್ಯಾಂಕ್‌ ಯೂ ಪುಟ್ಟ ಎಂದು ಹೇಳಿ. ಅಷ್ಟು ಹೇಳಿದ ಮಾತ್ರದಿಂದಲೇ ಮಗು ತನ್ನನ್ನು ಮಹತ್ವಪೂರ್ಣ ಎಂದು ತಿಳಿಯುತ್ತದೆ.

ಟೀನೇಜರ್‌ಗೂ ಗೌರವ ಬೇಕು

ಇಂದಿನ ಜಾಗೃತ ಯುವ ಪೀಳಿಗೆಯವರನ್ನು ಅರ್ಥ ಮಾಡಿಕೊಳ್ಳುವುದೂ ಒಂದು ಕಲೆ ಎಂದು ಮನೋವಿಜ್ಞಾನಿಗಳು ಹೇಳುತ್ತಾರೆ. ಈ ಕಲೆಯನ್ನು ಕಲಿತಿರುವ ತಂದೆತಾಯಿಯರ ಮಕ್ಕಳು ಎಲ್ಲ ಕ್ಷೇತ್ರಗಳಲ್ಲೂ ಯಶಸ್ವಿಯಾಗುತ್ತಾರೆ. ಕಿಶೋರರಾಗುತ್ತಿರುವ ಮಕ್ಕಳು ದೈನಂದಿನ ಕೆಲಸಗಳನ್ನು ಅತ್ಯಂತ ಯಶಸ್ವಿಯಾಗಿ ಮಾಡುತ್ತಾರೆ. ಅದಕ್ಕಾಗಿ ನಾವು ಅವರನ್ನು ಆದರಿಸಬೇಕಾಗುತ್ತದೆ. ಅನೇಕ ಬಾರಿ ತಂದೆ ತಾಯಿಯರ ಪ್ರೀತಿಭರಿತ ಕೈ ತಲೆಯ ಮೇಲೆ ಇಟ್ಟಾಗ ಅವರ ಮನಸ್ಸು ಸಣ್ಣ ಮಗುವಿನಂತಾಗುತ್ತದೆ. ಅವರ ಪ್ರತಿ ಸಣ್ಣ ಕೆಲಸವನ್ನೂ ಮನದುಂಬಿ ಪ್ರಶಂಸೆ ಮಾಡಿ ಮತ್ತು ಆದರಿಸಿ. ಈ ಸಣ್ಣ ಆದರ ಅವರಲ್ಲಿ ಆತ್ಮವಿಶ್ವಾಸವನ್ನು ತುಂಬಿ ತುಳುಕಿಸುವುದು. ಅವರು ತಮ್ಮ ಪ್ರತಿಯೊಂದು ಹೆಜ್ಜೆಯಲ್ಲೂ ಸ್ಥಿರರಾಗುತ್ತಾರೆ. ತಮ್ಮ  ಪ್ರತಿಯೊಂದು ಸಮಸ್ಯೆಯ ಪರಿಹಾರಕ್ಕೆ ಉತ್ತಮ ಜಾಗವನ್ನೇ ಆರಿಸಿಕೊಳ್ಳುತ್ತಾರೆ.

ಮಹಿಳೆಯರಿಗೂ ಆದರವೇ ಪ್ರೀತಿ

ಅವಳು ತಾಯಿಯಾಗಿರಬಹುದು, ಪತ್ನಿಯಾಗಿರಬಹುದು, ಗೃಹಿಣಿಯಾಗಿರಬಹುದು ಅಥವಾ ಉದ್ಯೋಗಸ್ಥೆ ಇರಬಹುದು. ಅವರೆಲ್ಲರೂ ಗೌರವಕ್ಕೆ ಹಕ್ಕುದಾರರಾಗಿದ್ದಾರೆ. `ಯತ್ರ ನಾರ್ಯಸ್ತು ಪೂಜ್ಯಂತೆ….’ ಎಂಬ ಗಾದೆ ಮೂಡಿದ್ದೇ ಈ ಕಾರಣಕ್ಕೆ. ಒಂದು ಚಿಕ್ಕ ಮಗು ಸಹ ತನ್ನ ಅಮ್ಮನಿಗೆ ಗೌರವ ಕೊಟ್ಟರೆ ಅವರಿಗೆ ಹೆಮ್ಮೆ ಉಂಟಾಗುತ್ತದೆ. ಒಂದುವೇಳೆ ಹೆಂಡತಿ ಮಾಡಿದ ಅಡುಗೆ ಹಾಗೂ ಅವಳು ಇಡೀ ದಿನ ಮಾಡಿದ ಪರಿಶ್ರಮಕ್ಕೆ ಗಂಡ ಗೌರವ ತೋರಿಸಿದರೆ, ಅದು ಅವರನ್ನು ಸದಾ ತಾಜಾ ಆಗಿಡುತ್ತದೆ.

ಪುರುಷರಿಗೂ ಗೌರವ ಬೇಕು

ಸೈಕಾಲಜಿಸ್ಟ್ ವಿಲಿಯಂ ಜೇಮ್ಸ್ ಹೀಗೆ ಹೇಳುತ್ತಾರೆ, ತಮ್ಮ ಒಳ್ಳೆಯ ಕೆಲಸಗಳಿಗಾಗಿ ಬಾಸ್‌ ತಮ್ಮನ್ನು ಆದರಿಸಬೇಕೆಂದು ಪುರುಷರೂ ಬಯಸುತ್ತಾರೆ. ಹಾಗೆ ಗೌರವಿಸಲ್ಪಟ್ಟಾಗ ಅವರಿಗೆ ಕೆಲಸ ಮಾಡಲು ಉತ್ಸಾಹ ಹೆಚ್ಚುತ್ತದೆ. ಗೌರವ ತೋರಿಸಲು ದೊಡ್ಡ ದೊಡ್ಡ ಅವಾರ್ಡ್ಸ್ ಅವಶ್ಯಕತೆ ಇರುವುದಿಲ್ಲ. ಮಾತಿನಲ್ಲೂ ಗೌರವ ಸೂಚಿಸಬಹುದು. ಗೆಳೆತನದಲ್ಲೂ ಗೌರವದ ಭಾವನೆ ಇದ್ದರಂತೂ ಗೆಳೆತನ ಜೀವನಪೂರ್ತಿ ಉಳಿಯುತ್ತದೆ. ಪತ್ನಿಯೂ ತಮ್ಮ ಸರಿಯಾದ ವಿಚಾರಗಳನ್ನು ಗೌರವಿಸಲಿ ಎಂದು ಪುರುಷರೂ ಇಚ್ಛಿಸುತ್ತಾರೆ. ಅನೇಕ ಬಾರಿ ಸಣ್ಣ ಸಣ್ಣ ವಿಷಯಗಳನ್ನೂ ಗೌರವಿಸುವುದರಿಂದ ನಿಮ್ಮ ವೈವಾಹಿಕ ಜೀವನ ಸುಖಮಯವಾಗಿರುತ್ತದೆ.

ವೃದ್ಧರೂ ಗೌರವ ಅಪೇಕ್ಷಿಸುತ್ತಾರೆ

ವೃದ್ಧರ ಬಗ್ಗೆ ನಿಮ್ಮ ವರ್ತನೆ ಯಾವಾಗಲೂ ಉತ್ಸಾಹ ಹೆಚ್ಚಿಸುವಂತಿರಬೇಕು. ಶಾರೀರಿಕವಾಗಿ ದುರ್ಬಲರಾಗಿರುವ ವೃದ್ಧರ ಅನುಭವಕ್ಕೆ ಗೌರವ ಕೊಡಿ. ಅವರ ಸಂಘರ್ಷಕ್ಕಾಗಿ ಪ್ರಶಂಸಿಸಿ. ಇಂತಹ ಗೌರವ ಅವರಿಗೆ ಬದುಕುವ ಸ್ಥೈರ್ಯ ಕೊಡುತ್ತದೆ. ಗೌರವ ಕೊಡುವಾಗ ಪ್ರಾಮಾಣಿಕತೆಯಿಂದ ಕೊಡಿ. ಸುಮ್ಮನೆ ಮುಖಸ್ತುತಿ ಮಾಡಿದರೆ ಚೆನ್ನಾಗಿರುವುದಿಲ್ಲ. ಶಬ್ದಗಳ ಸಾಮರ್ಥ್ಯವೇನೆಂದರೆ ಅವು ಬೇರೆಯವರ ನಡುವೆ ನಮ್ಮನ್ನೂ ತಮ್ಮವರಂತೆ ಮಾಡಿಬಿಡುತ್ತದೆ ಹಾಗೂ ನಮ್ಮವರ ನಡುವೆ ಬೇರೆಯವರಂತೆ ಮಾಡಿಬಿಡುತ್ತದೆ.

ಗೌರವಿಸುವುದು ಎಂತಹ ಕಲೆ ಎಂದರೆ ಅದರಿಂದ ನಾವು ಪರಿಚಿತರ ಆತ್ಮವಿಶ್ವಾಸ ಹೆಚ್ಚಿಸಬಹುದು. ಸಂಬಂಧಗಳಲ್ಲಿ ಗಾಢತೆ ತರುತ್ತದೆ. ನಮ್ಮ ಹಾಗೂ ಇತರರ ಬದುಕಿನಲ್ಲಿ ಸಂತಸಗಳನ್ನು ತುಂಬಬಹುದು.

– ರೇಣುಕಾ ದೇಶಪಾಂಡೆ

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ