- ರಾಘವೇಂದ್ರ ಅಡಿಗ ಎಚ್ಚೆನ್.
2025ನೇ ಸಾಲಿನ ಕರ್ನಾಟಕ ಸಾಹಿತ್ಯ ಅಕಾಡೆಮಿ ವಾರ್ಷಿಕ ಪ್ರಶಸ್ತಿಗಳ ಪಟ್ಟಿ ಪ್ರಕಟಿಸಲಾಗಿದೆ. ಕರ್ನಾಟಕ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷ ಎಲ್.ಎನ್. ಮುಕುಂದರಾಜ್ ಅವರು ಈ ಕುರಿತು ಬುಧವಾರ ಮಾಧ್ಯಮಗೋಷ್ಟಿ ನಡೆಸಿ ಮಾಹಿತಿ ನೀಡಿದರು.
ಕನ್ನಡ ಸಾಹಿತ್ಯ ಕ್ಷೇತ್ರಕ್ಕೆ ನೀಡಿರುವ ಕೊಡುಗೆಯನ್ನ ಪರಿಗಣಿಸಿ ನೀಡಲಾಗುವ 2025ನೇ ಸಾಲಿನ "ಕರ್ನಾಟಕ ಸಾಹಿತ್ಯ ಅಕಾಡೆಮಿ ವರ್ಷದ ಗೌರವ ಪ್ರಶಸ್ತಿ"ಗೆ ಪ್ರೊ.ಶಿವರಾಮಯ್ಯ, ಚಂದ್ರಶೇಖರ ತಾಳ್ಯ, ಡಾ.ಚಂದ್ರಶೇಖರ ಪೋಕಳೆ, ಡಾ.ವಸುಂಧರಾ ಭೂಪತಿ ಹಾಗೂ ಡಾ. ಎಸ್. ತುಕಾರಾಂ ಅವರು ಭಾಜನರಾಗಿದ್ದಾರೆ.
50ರಿಂದ 60 ವರ್ಷ ವಯೋಮಾನದ ಸಾಹಿತಿಗಳಿಗೆ ಕೊಡಮಾಡಲಾಗುವ "ಸಾಹಿತ್ಯ ಶ್ರೀ" ಪ್ರಶಸ್ತಿಗೆ ಕಂಕನಾಡಿ ನಾರಾಯಣ, ಡಾ. ನಿಷ್ಠಿ ರುದ್ರಪ್ಪ, ಡಾ. ವೀರೇಶ ಬಡಿಗೇರ, ಡಾ. ಸಿ.ಜಿ. ಲಕ್ಷ್ಮೀಪತಿ, ರೂಪ ಹಾಸನ, ಜಯರಾಮ್ ರಾಯಪುರ, ಕುಮುದಾ ಸುಶೀಲ್, ಡಾ. ಓ.ನಾಗರಾಜು ಸೇರಿದಂತೆ 10 ಮಂದಿ ಭಾಜನರಾಗಿದ್ದಾರೆ ಎಂದು ಮುಕುಂದರಾಜ್ ಅವರು ತಿಳಿಸಿದರು.
2024ರಲ್ಲಿ ಪ್ರಕಟಗೊಂಡಿರುವ 17 ವಿವಿಧ ಸಾಹಿತ್ಯ ಪ್ರಕಾರದ ಕೃತಿಗಳಿಗೆ "2024ನೇ ಸಾಲಿನ ವರ್ಷದ ಪುಸ್ತಕ ಬಹುಮಾನ" ಗೌರವ ಲಭಿಸಿದೆ.

ಪುಸ್ತಕ ಬಹುಮಾನಕ್ಕೆ ಆಯ್ಕೆಯಾದವರು:
ಭಾರತೀದೇವಿ ಪಿ. ಅವರ 'ಚಲಿಸುತ್ತಿವೆ ಚುಕ್ಕಿಗಳು'
ಶಶಿ ತರೀಕೆರೆ ಅವರ 'ಪ್ಯೂಪಾ'
ವೈ.ಎಸ್.ಹರಗಿ ಅವರ 'ಇಮಾಮ್ ಸಾಹೇಬರ ಕುದುರೆ'
ಅನಿಲ್ ಗುನ್ನಾಪೂರ ಅವರ 'ಸರ್ವೆ ನಂಬರ್-97'
ಡಾ.ಚಂದ್ರು ಕಾಳೇನಹಳ್ಳಿ ಅವರ 'ಗಂಧವತಿ'
ಡಾ.ಶಿವರಾಜ ಬ್ಯಾಡರಹಳ್ಳಿ ಅವರ 'ಒಂದು ತಲೆ ಚವುರದ ಕಥೆ'
ಮಲ್ಲಿಕಾರ್ಜುನ ಹುಲಗಬಾಳಿ ಅವರ 'ತಿರುಗಾಟ'
ಎಂ.ಜಿ.ಹೆಗಡೆ ಅವರ ಆತ್ಮಕಥೆ 'ಚಿಮಣಿ ಬೆಳಕಿನಿಂದ'
ಮಹಾಂತೇಶ ಪಾಟೀಲ ಅವರ 'ಬೆಳಕು ಬೆಳೆಯುವ ಹೊತ್ತು'
ರಾಜಶೇಖರ ಕುಕ್ಕುಂದಾ ಅವರ 'ಬಿಸಿ ಬಿಸಿ ಬಾತು'
ಶ್ರೀಧರ ತುಮರಿ ಅವರ 'ಪಕ್ಷಿಗಳ ವಿಸ್ಮಯ ವಿಶ್ವ'
ಡಾ. ಎನ್.ಎನ್. ಚಿಕ್ಕಮಾದು ಅವರ 'ಪ್ರಜಾಮಾತೆ'
ಡಾ.ಹಂಪನಹಳ್ಳಿ ತಿಮ್ಮೇಗೌಡರ 'ದಾಸೊಕ್ಕಲಿಗರು'
ದು.ಸರಸ್ವತಿ ಅವರ 'ಜಾತಿ ಮತ್ತು ಲಿಂಗತ್ವ' ಕೃತಿ
ಡಾ.ಹುಲಿಕುಂಟೆ ಮೂರ್ತಿ ಅವರ 'ನುಡಿ ಕಂಡಾಯ'
ಲಕ್ಷ್ಮಣ ಶರೆಗಾರ ಅವರ 'ತಿದಿಯ ತುದಿಯ ಬೆಂಕಿಯ ಉಗುಳು'
ಡಾ.ಪ್ರದೀಪ್ ಕೆಂಜಿಗೆ ಅವರ 'ನರವಾನರ' ಕೃತಿ ಆಯ್ಕೆಯಾಗಿವೆ ಎಂದು ಮುಕುಂದರಾಜ್ ತಿಳಿಸಿದರು.
ವರ್ಷದ ಗೌರವ ಪ್ರಶಸ್ತಿ 50 ಸಾವಿರ ರೂ., ಸಾಹಿತ್ಯಶ್ರೀ ಪ್ರಶಸ್ತಿಗೆ 25 ಸಾವಿರ ರೂ., ಪುಸ್ತಕ ಬಹುಮಾನ 25 ಸಾವಿರ ರೂ., ಪುಸ್ತಕ ದತ್ತಿ ಬಹುಮಾನ 10 ಸಾವಿರ ರೂ. ನಗದು ಒಳಗೊಂಡಿರಲಿದೆ.





