ದೆಹಲಿಯಿಂದ ಇಂದೋರ್‌ಗೆ 94 ಪ್ರಯಾಣಿಕರೊಂದಿಗೆ ಹೊರಟಿದ್ದ ಏರ್ ಇಂಡಿಯಾ ವಿಮಾನ ಟೇಕ್ ಆಫ್ ಆದ ಸ್ವಲ್ಪ ಸಮಯದ ನಂತರ ಇಂದಿರಾ ಗಾಂಧಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ(IGIA) ವಾಪಸ್ ಬಂದು ತುರ್ತು ಲ್ಯಾಂಡಿಂಗ್ ಮಾಡಿದೆ.

ಭಾನುವಾರ ಬೆಳಗ್ಗೆ ಈ ಘಟನೆ ಸಂಭವಿಸಿದ್ದು, ವಿಮಾನ ಟೇಕ್ ಆಫ್ ಆದ ಸ್ವಲ್ಪ ಸಮಯದ ನಂತರ ಕಾಕ್‌ಪಿಟ್‌ನಲ್ಲಿ ಬೆಂಕಿಯ ಸೂಚನೆ ತೋರಿಸಿದ್ದು, ಆತಂಕಗೊಂಡ ಪೈಲಟ್‌ಗಳು AI 2913ರ ಬಲ ಎಂಜಿನ್ ಅನ್ನು ಆಫ್ ಮಾಡಿದ್ದಾರೆ ಹಾಗೂ ತಕ್ಷಣ IGIA ನಲ್ಲಿ ಸುರಕ್ಷಿತ ಲ್ಯಾಂಡಿಂಗ್‌ ಮಾಡಿದ್ದಾರೆ.

ಯಾವುದೇ ಸಂಭವನೀಯ ತುರ್ತು ಪರಿಸ್ಥಿತಿ ನಿಭಾಯಿಸಲು, ಅಗ್ನಿಶಾಮಕ ಯಂತ್ರಗಳು, ಆಂಬ್ಯುಲೆನ್ಸ್‌ಗಳು ಮತ್ತು ಭದ್ರತಾ ಸಿಬ್ಬಂದಿ ವಿಮಾನ ನಿಲ್ದಾಣದಲ್ಲಿ ಸನ್ನದ್ಧರಾಗಿದ್ದರು.

A320 ನಿಯೋ ವಿಮಾನವು ಭಾನುವಾರ ಬೆಳಗ್ಗೆ 6.02 ಕ್ಕೆ ಟರ್ಮಿನಲ್ 3 ರಿಂದ ನಿಗದಿತ ಸಮಯಕ್ಕಿಂತ ಅರ್ಧ ಗಂಟೆ ತಡವಾಗಿ ಹೊರಟಿತ್ತು. ಆದರೆ ವಿಮಾನ ಟೇಕ್ ಆಫ್ ಆದ ಸ್ವಲ್ಪ ಸಮಯದ ನಂತರ ಈ ಘಟನೆ ಸಂಭವಿಸಿದೆ ಎಂದು ಏರ್ ಇಂಡಿಯಾ ವಕ್ತಾರರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

“ಆಗಸ್ಟ್ 31 ರಂದು ದೆಹಲಿಯಿಂದ ಇಂದೋರ್‌ಗೆ ತೆರಳುತ್ತಿದ್ದ AI2913 ವಿಮಾನವು ಟೇಕ್ ಆಫ್ ಆದ ಸ್ವಲ್ಪ ಸಮಯದ ನಂತರ ದೆಹಲಿಗೆ ಮರಳಿತು. ಏಕೆಂದರೆ ಕಾಕ್‌ಪಿಟ್ ಸಿಬ್ಬಂದಿಗೆ ಬೆಂಕಿಯ ಸೂಚನೆ ಸಿಕ್ಕಿತು. ಪ್ರಮಾಣಿತ ಕಾರ್ಯವಿಧಾನವನ್ನು ಅನುಸರಿಸಿ, ಕಾಕ್‌ಪಿಟ್ ಸಿಬ್ಬಂದಿ ಎಂಜಿನ್ ಅನ್ನು ಆಫ್ ಮಾಡಿದರು ಮತ್ತು ದೆಹಲಿಗೆ ವಾಪಸ್ ಬಂದು, ಸುರಕ್ಷಿತವಾಗಿ ಲ್ಯಾಂಡ್ ಆಯಿತು” ಎಂದು ಏರ್ ಇಂಡಿಯಾ ವಕ್ತಾರರು ಹೇಳಿದ್ದಾರೆ.

ವಿಮಾನವನ್ನು ತಪಾಸಣೆಗಾಗಿ ನಿಲ್ಲಿಸಲಾಯಿತು ಮತ್ತು ಪ್ರಯಾಣಿಕರನ್ನು ಇಂದೋರ್‌ಗೆ ತೆರಳುವ ಪರ್ಯಾಯ ವಿಮಾನಕ್ಕೆ ವರ್ಗಾಯಿಸಲಾಯಿತು. “ಘಟನೆಯ ಬಗ್ಗೆ ನಿಯಂತ್ರಕಕ್ಕೆ ಸರಿಯಾಗಿ ತಿಳಿಸಲಾಗಿದೆ” ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ